ADVERTISEMENT

ಒಳನೋಟ: ನೊಂದ ಮನಗಳಿಗೆ ಸ್ನೇಹಸಿಂಚನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 19:30 IST
Last Updated 5 ಮಾರ್ಚ್ 2022, 19:30 IST
ಉರಿ ಬಾನ ಬೆಳದಿಂಗಳು
ಉರಿ ಬಾನ ಬೆಳದಿಂಗಳು   

ಆರೋಗ್ಯಭಾಗ್ಯದ ಮುಂದೆ ಬೇರೆಲ್ಲವೂ ಗೌಣ ಎಂಬ ಜೀವನಮೌಲ್ಯ ಇನ್ನಿಲ್ಲದಂತೆ ಹರಳುಗಟ್ಟಿರುವ ಕಾಲಘಟ್ಟ ಇದು. ಬದುಕಿನ ನಾಗಾಲೋಟಕ್ಕೆ ಘಕ್ಕನೆ ತಡೆಯೊಡ್ಡಬಲ್ಲ ಛಾತಿ ಇರುವ ಅನಾರೋಗ್ಯಕ್ಕೆ ಮಂಡಿಯೂರುವವರೇ ಹೆಚ್ಚು ಮಂದಿ. ಅದರಲ್ಲೂ ಕ್ಯಾನ್ಸರ್‌‍ಪೀಡಿತರು ರೋಗಬಾಧೆಗಿಂತ ಅದರ ಅಡ್ಡಪರಿಣಾಮಗಳಿಂದಲೇ ಮಾನಸಿಕವಾಗಿ ಕುಸಿದುಹೋಗುವುದು ಸಾಮಾನ್ಯ ಸಂಗತಿ. ಇಂತಲ್ಲಿ ಬಹುಮುಖ್ಯವಾಗಿ ಬೇಕಿರುವುದು ಸಾಂತ್ವನದ ಬೆಳಕಿಂಡಿ, ಆಪ್ತ ಮನದ ಸಾಂಗತ್ಯ. ಸ್ವತಃ ಅಂತಹದ್ದೊಂದು ಕಗ್ಗತ್ತಲ ಪಯಣ ಮುಗಿಸಿ ಬಂದಿರುವ ಪತ್ರಕರ್ತೆ ಕೃಷ್ಣಿ ಶಿರೂರ ಅವರ ‘ಉರಿ ಬಾನ ಬೆಳದಿಂಗಳು’ ನೊಂದ ಮನಗಳಿಗೆ ಅಗತ್ಯ ಸ್ನೇಹಸಿಂಚನದಂತಿದೆ.

ಯಾವುದೇ ಹೆಣ್ಣಿನ ಮನಸ್ಸನ್ನು ಜರ್ಜರಿತಗೊಳಿಸಿಬಿಡಬಹುದಾದ ಸ್ತನ ಕ್ಯಾನ್ಸರ್‌ ಅನ್ನು ಜಯಿಸಲು ಆತ್ಮಬಲವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಕೃಷ್ಣಿ ಅವರ ಅನುಭವ ಕಥನ ಎಂತಹವರನ್ನೂ ದಿಙ್ಮೂಢರನ್ನಾಗಿಸುತ್ತದೆ. ‘ನನಗೆ ಕ್ಯಾನ್ಸರ್‌ ಇರುವುದು ದೃಢವಾದಾಗ ನಾನು ಸತ್ತುಹೋಗಬಹುದು ಎಂಬ ಯೋಚನೆಯೇ ನನ್ನಲ್ಲಿ ಮೊಳಕೆಯೊಡೆಯಲಿಲ್ಲ, ಅದೇ ಕ್ಯಾನ್ಸರ್‌ ಜಯಿಸುವಲ್ಲಿನ ನನ್ನ ಬತ್ತಳಿಕೆಯಲ್ಲಿದ್ದ ಮೊದಲ ಅಸ್ತ್ರ’ ಎಂಬ ಅವರ ಮಾತು ಪವಾಡಸದೃಶ ಫಲಿತಾಂಶಕ್ಕೆ ಕೈಗನ್ನಡಿ.

ತಾನು ಕ್ಯಾನ್ಸರ್‌ ಹಿಡಿತಕ್ಕೆ ಸಿಲುಕಿರುವುದು ಅನುಭವಕ್ಕೆ ಬಂದಾಗ ಉಂಟಾದ ದಿಗಿಲು, ಮಾನಸಿಕ ತಳಮಳ, ಚಿಕಿತ್ಸೆಯ ಒಂದೊಂದು ಹಂತದಲ್ಲೂ ಅನುಭವಿಸಿದ ದೈಹಿಕ, ಮಾನಸಿಕ ವೇದನೆ, ಆರ್ಥಿಕ ಸಂಕಷ್ಟ, ಅದನ್ನೆಲ್ಲ ಯಶಸ್ವಿಯಾಗಿ ಮೆಟ್ಟಿನಿಂತ ಪರಿ, ಅಪಾರವಾಗಿ ನಂಬಿದ ಗಾಯತ್ರಿ ಮಂತ್ರ, ಯೋಗ, ಧ್ಯಾನದೊಟ್ಟಿಗೆ ಹೆತ್ತಮ್ಮ, ಆಪ್ತೇಷ್ಟರ ನೆರವಿನ ಹಸ್ತ, ಚಿಕಿತ್ಸೆಯ ನಂತರ ಕೊಂಚ ಎಚ್ಚರ ತಪ್ಪಿದರೂ ಆಗಬಹುದಾದ ಅನಾಹುತದ ವಿವರ ಶಬ್ದಾಡಂಬರವಿಲ್ಲದೆ, ಸ್ವಮರುಕದ ಗೋಜಿಲ್ಲದೆ ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ನಿರೂಪಿತವಾಗಿದೆ.

ADVERTISEMENT

ಕತೆಯ ಪಯಣದಲ್ಲಿ ಜೊತೆಯಾಗುವ ಓದುಗರ ಕಣ್ಣಾಲಿಗಳು ಕೆಲವೊಮ್ಮೆ ತುಂಬಿ ಬಂದರೆ, ಕಡುಸಂಕಟದ ಸಮಯದಲ್ಲೂ ಹೆಣ್ಣುಮಗಳೊಬ್ಬಳ ಅಸಾಧಾರಣ ಮನೋಬಲವು ಜೀವನಪ್ರೀತಿಯತ್ತ ವಿಮುಖರಾದವರನ್ನು ಆತ್ಮಶೋಧನೆಗೆ ಹಚ್ಚುವಂತಿದೆ. ಕ್ಯಾನ್ಸರ್‌ ರೋಗಿಗಳಷ್ಟೇ ಅಲ್ಲ ಖಿನ್ನತೆಗೆ ಜಾರಿದವರು, ಬದುಕಿನ ಸೌಂದರ್ಯಕ್ಕೆ ಬೆನ್ನು ಹಾಕಿದವರು, ಆತ್ಮವಿಶ್ವಾಸದ ಮಹತ್ವ ಮನಗಾಣಬಯಸುವವರೆಲ್ಲರೂ ಭರವಸೆಯ ಕೈಪಿಡಿಯಂತೆ, ಆಪ್ತಸಮಾಲೋಚಕಿಯೊಬ್ಬಳ ಹಿತನುಡಿಗಳಂತೆ ಇದನ್ನು ಓದಿಕೊಳ್ಳಬಹುದು.

ಕ್ಯಾನ್ಸರ್‌ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳಿವೆ; ಆದರೆ ಅವುಗಳನ್ನು ಪಡೆದುಕೊಳ್ಳುವವರಿಗೆ ಜರೂರಾಗಿ ಬೇಕಾದ ಮಾನಸಿಕ ತಯಾರಿ, ಕಠಿಣಾತಿಕಠಿಣ ಚಿಕಿತ್ಸಾ ಹಂತದಲ್ಲಿ ಬಾರಿಬಾರಿಗೂ ಕುಗ್ಗಿಹೋಗುವ ಮನಸ್ಸನ್ನು ಹಿಡಿದೆತ್ತಿ ನಿಲ್ಲಿಸುವ ಮನೋಚಿಕಿತ್ಸೆಯೂ ಆಸ್ಪತ್ರೆಗಳ ಕಡೆಯಿಂದ ಅಗತ್ಯವಾಗಿ ಆಗಬೇಕು ಎಂಬ ಅವರ ಆಗ್ರಹ, ಪತ್ರಕರ್ತೆಯೊಬ್ಬಳ ಸಾಮಾಜಿಕ ಕಳಕಳಿಯ ಬೇಡಿಕೆಯಂತೆಯೂ ಭಾಸವಾಗುತ್ತದೆ.

‘ನನ್ನ ಎಷ್ಟೋ ಮಂದಿ ಸ್ನೇಹಿತರು, ಹಿತೈಷಿಗಳು ನೀವು ಸುಂದರವಾಗಿದ್ದಿರಿ, ಡೈನಮಿಕ್‌ ಆಗಿದ್ದಿರಿ ಎನ್ನುತ್ತಾರೆ’ ಎನ್ನುವ, ಭೂತಕಾಲದಲ್ಲಿರುವ ಅವರ ಆಪ್ತೇಷ್ಟರ ಮಾತುಗಳನ್ನು (ಬಹುಶಃ ಕಾಗುಣಿತ ದೋಷ ಇರಬಹುದು) ನಿಸ್ಸಂಶಯವಾಗಿಯೂ ವರ್ತಮಾನಕ್ಕೆ ತಿರುಗಿಸಿ ಹೀಗೆ ಹೇಳಬಹುದು: ‘ನೀವು ನಿಜಕ್ಕೂ ಸುಂದರವಾಗಿದ್ದೀರಿ, ಡೈನಮಿಕ್‌ ಆಗಿದ್ದೀರಿ...’

ಕೃತಿ: ಉರಿ ಬಾನ ಬೆಳದಿಂಗಳು
ಲೇ: ಕೃಷ್ಣಿ ಶಿರೂರ
ಪ್ರ: ದಿಗಂತ ಪ್ರಕಾಶನ
ಸಂ: 9482558576

ಬೆಲೆ: 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.