ADVERTISEMENT

ಉಸಿರೇ ಗಾಳಿಯಾದಾಗ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:30 IST
Last Updated 29 ಡಿಸೆಂಬರ್ 2018, 19:30 IST
ಉಸಿರೇ ಗಾಳಿಯಾದಾಗ..
ಉಸಿರೇ ಗಾಳಿಯಾದಾಗ..   

ಉಸಿರು ನಮ್ಮನ್ನು ಜೀವಂತವಾಗಿರಿಸುತ್ತದೆ. ಅದೇ ಉಸಿರು ಕೇವಲ ಗಾಳಿಯಾದರೆ! ಅಲ್ಲಿ ಜೀವವಿಲ್ಲ; ಜೀವನವಿಲ್ಲ. ಈ ಹಿನ್ನೆಲೆಯಲ್ಲಿ ಡಾ.ಪೌಲ್ ಕಲಾನಿಧಿ ಅವರು ಬರೆದ ‘When breath becomes air’ ಕೃತಿ ಬಹಳ ವಿಶಿಷ್ಟವಾದುದು.

ಪೌಲ್ ಅವರ ತಂದೆ- ತಾಯಿ ಭಾರತದವರಾದರೂ, ಅವರ ವಾಸ ಅಮೆರಿಕ. ಸಾಹಿತ್ಯದ ವಿದ್ಯಾರ್ಥಿಯಾಗಿ ನಂತರ ವೈದ್ಯನಾಗುವ ಪೌಲ್, ಮುಂದೊಂದು ದಿನ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಾರೆ.

ಒಬ್ಬ ವೈದ್ಯನಾಗಿ ಹುಟ್ಟು ಮತ್ತು ಸಾವನ್ನು ಬಹಳ ಹತ್ತಿರದಿಂದ ಕಂಡ ಅವರಿಗೆ ತಮಗೇ ಸಾವು ಎದುರಾದಾಗ ಜೀವನದ ಬಗೆಗಿನ ಅವರ ಜಿಜ್ಞಾಸೆಯೇ ಇಡೀ ಕೃತಿ ಎಂದರೆ ತಪ್ಪಾಗಲಾರದು.

ADVERTISEMENT

36ನೇ ವಯಸ್ಸಿಗೆ ಪೌಲ್ ಅವರಿಗೆ ಕೊನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ. ಪತ್ನಿ ಸಹ ವೈದ್ಯೆ. ಪೌಲ್ ಅವರು ನರರೋಗ ತಜ್ಞನಾಗುವ ಕೊನೇ ವರ್ಷದ ತರಬೇತಿ ಮುಗಿಯುತ್ತಿರುವ ಹೊತ್ತಿನಲ್ಲೇ ಸಾವು ಅವರನ್ನು ನಿಧಾನವಾಗಿ ಆಲಂಗಿಸಲು ಪ್ರಾರಂಭಿಸಿರುತ್ತದೆ.

ಇಷ್ಟು ವರ್ಷ ಅವರು ಮಾಡಿದ ಸಂಶೋಧನೆ, ಓದು, ಅವರ ಕನಸು ಎಲ್ಲವೂ ಕೈಸೇರಿತು ಎನ್ನುವಷ್ಟರಲ್ಲಿ ಬರುವ ಸಾವು ಅವರನ್ನು ವಿವಶರನ್ನಾಗಿ ಮಾಡುತ್ತದೆ.

ಸಾವು ಹತ್ತಿರದಲ್ಲಿದೆ ಎಂದು ತಿಳಿದಾಗ ನಾವು ಹಲವರು ಖಿನ್ನತೆಗೆ ಒಳಗಾಗುತ್ತೇವೆ. ಆದರೆ, ಪೌಲ್‌ಗೆ ಹಾಗೆ ಆಗಲಿಲ್ಲ. ಇರುವಷ್ಟು ಸಮಯವನ್ನು ಅರ್ಥಪೂರ್ಣವಾಗಿ ಬದುಕಬೇಕೆಂದು ತೀರ್ಮಾನ ಮಾಡಿದರು. ಹೆಚ್ಚು ಹೆಚ್ಚು ಲೇಖನಗಳನ್ನು ಬರೆದರು. ಓದಿದರು. ಹೆಚ್ಚು ಧನಾತ್ಮಕವಾಗಿ ಇದ್ದರು.

ಸಾವಿನ ಸನ್ನಿಹಿತದಲ್ಲೂ ಆತ್ಮಬಲದೊಂದಿಗೆ ಬದುಕುವುದು; ಇದು ಈ ಕೃತಿಯಲ್ಲಿ ಇಂದು ನಮಗೆ ಸಿಗುವ ಮೂಲ ಪಾಠ.

ವಿಚ್ಛೇದನ ಪಡೆಯಬೇಕು ಎಂದು ಪರಸ್ಪರ ಒಪ್ಪಿದ್ದ ಪೌಲ್ ದಂಪತಿ, ಈ ಕ್ಯಾನ್ಸರ್‌ನಿಂದ ಒಂದಾಗುತ್ತಾರೆ. ಹೆಣ್ಣು ಮಗುವಿನ ಜನನವೂ ಆಗುತ್ತದೆ. ಆದರೆ, ಬಹಳ ದಿನ ತನ್ನ ಮಗುವನ್ನು ನೋಡುವ ಭಾಗ್ಯ ಪೌಲ್ ಅವರಿಗೆ ಇರಲಿಲ್ಲ.

ಹೀಗೆ ಪೌಲ್ ಅವರ ಸಾವಿನ ಕೊನೆಯವರೆಗೂ ಅರ್ಧಪೂರ್ಣವಾಗಿ ಬದುಕುವ ಛಲ ನಮ್ಮನ್ನು ಕಾಡುತ್ತದೆ.

ಮೂಲ ಇಂಗ್ಲಿಷ್ ನಲ್ಲಿರುವ ಈ ಕೃತಿಯನ್ನು ‘ಉಸಿರೇ ಗಾಳಿಯಾದಾಗ...’ ಎಂದು ಡಿ.ಸಿ. ನಂಜುಂಡ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಅನುವಾದ ಓದುವಾಗ ಇದೊಂದು ಯಾಂತ್ರಿಕ ಕ್ರಿಯೆ ಎಂದು ನಮಗೆ ಅನ್ನಿಸುತ್ತದೆ. ಮೂಲ ಕೃತಿಯಲ್ಲಿರುವ ಗಾಢ ಭಾವ ನಮಗೆ ದಾಟುವುದಿಲ್ಲ. ಕನ್ನಡ ಆವೃತ್ತಿಗೆ ಬಿ.ಎಸ್. ಶೃತಿ ಮುನ್ನುಡಿ ಬರೆದಿದ್ದಾರೆ.

ಈಕೆ ಸಹ ಕ್ಯಾನ್ಸರ್ ರೋಗವನ್ನು ಎದುರಿಸಿ ಗೆದ್ದವರು. ಇದನ್ನು ಹೊರತುಪಡಿಸಿ ಇದೊಂದು ಬದುಕಿಗೆ ಪ್ರೇರಣೆಯಾಗಬಲ್ಲ ಪುಸ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.