ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಯಕ್ಷಾನುಭವ ಕಥನ ‘ಯಕ್ಷಚಂದ್ರ’. ಅವರ ಯಕ್ಷಗಾನ ಕಲಾ ಜೀವನದ ಜೊತೆಗೆ, ಇದರಲ್ಲಿ ವಿವರಣೆಯಿರುವ ಯಕ್ಷಗಾನ ಕಲಾವಿದರ ಜೊತೆಗಿನ ಸಂಬಂಧಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಹುಚರ್ಚಿತ ವಿಷಯವಾಗಿಬಿಟ್ಟಿದೆ. ಕಥನ ನಿರೂಪಣೆಯ ಆರಂಭದಲ್ಲಿ ಅವರೇ ಹೇಳಿರುವಂತೆ, ‘ಹೀಗಾಗಲಿ ಎಂದು ಬಯಸಿ ನಾನು ಯಾವುದೇ ಕೆಲಸ ಮಾಡುವುದಿಲ್ಲ. ಬಯಕೆಯೇ ಇಲ್ಲವೆಂದಾದಾಗ ನಿರಾಶೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಪಾತ್ರವಾಗಲೀ, ಬದುಕಾಗಲೀ ಯಾವುದನ್ನೂ ಬಯಸಿ ಪಡೆದದ್ದಲ್ಲ, ಎಲ್ಲವೂ ಆಕಸ್ಮಿಕ’ ಎಂಬ ಮಾತುಗಳು ಈ ಗ್ರಂಥದ ಒಳನೋಟವನ್ನು ನೀಡುತ್ತದೆ.
ಇದರ ಹೊರತಾಗಿ, ವ್ಯಕ್ತಿಯೊಬ್ಬ ಯಕ್ಷಗಾನ ಕಲಾವಿದನಾಗಬೇಕೆಂದರೆ ಆ ಕಾಲದಲ್ಲಿದ್ದ ತುಡಿತ, ಕಷ್ಟ, ಶ್ರಮ, ನಿಷ್ಠೆ, ಕಲಿಕೆಯ ಆಸಕ್ತಿ ಹೇಗಿತ್ತು ಎಂಬುದನ್ನು ವಿವರಿಸುತ್ತದೆ ಈ ಕೃತಿ. ಇಷ್ಟಲ್ಲದೆ, ಯಕ್ಷಗಾನವೆಂಬ ಏಕಮಾತ್ರ ವೃತ್ತಿಯಿಂದ ಬದುಕಿಗೆ ಬೇಕಾದುದೆಲ್ಲವನ್ನೂ ಸಂಪಾದಿಸುವಷ್ಟರ ಮಟ್ಟಿಗೆ ಈ ಕಲೆಗೆ ಋಣಿಯಾಗಿರುವುದಾಗಿಯೂ ಕೊಂಡದಕುಳಿ ಹೇಳಿಕೊಂಡಿದ್ದಾರೆ. ಒಡನಾಡಿ ಕಲಾವಿದರು, ಅವರಿಂದ ಕಲಿತ ಪಾಠಗಳು, ಆ ಕಾಲದಲ್ಲಿ ಮೇಳ ತಿರುಗಾಟದ ಕಷ್ಟ ನಷ್ಟಗಳು ಎಲ್ಲವನ್ನೂ ವಿವರಿಸುವ ಅವರು, ನನಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ, ಧೈರ್ಯದಿಂದ ಹೇಳಿದ್ದೇನೆ. ತಪ್ಪಿದ್ದರೆ ಒಪ್ಪಿಕೊಳ್ಳುವುದಕ್ಕೆ ಸದಾ ಸಿದ್ಧನಿದ್ದೇನೆ. ಯಾವುದೂ ವಿಮರ್ಶೆಯಲ್ಲ, ನನ್ನ ಅನಿಸಿಕೆಯಷ್ಟೇ ಎಂಬ ಮಾತನ್ನೂ ಸೇರಿಸಿದ್ದಾರೆ.
ಪತ್ನಿ ವಿಯೋಗದ ನಂತರದ ದಿನಗಳಲ್ಲಿ ಮೇಳಕ್ಕೆ ಹೋಗುವುದು ಅನಿವಾರ್ಯವಾದಾಗ, ಪುಟ್ಟ ಮಗಳನ್ನು ಬೇರೊಬ್ಬರ ಮನೆಯಲ್ಲಿ ಬಿಟ್ಟು ಶಾಲೆಗೆ ಹೋಗುವಂತೆ ಮಾಡಿ, ಅವಳು ಶಾಲೆಯಿಂದ ಬರುವವರೆಗೂ ಊಟ-ತಿಂಡಿಯಿಲ್ಲದೆ ಕಳೆದ ದಿನಗಳು, ರಾತ್ರಿ ನಿದ್ದೆಗೆಡುವ ಕಲಾವಿದನೊಬ್ಬನ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ವೇಷ ಭೂಷಣಗಳು, ರಂಗನಿರ್ದೇಶನದ ಅವಶ್ಯಕತೆ ಮತ್ತು ಅದಕ್ಕಿರುವ ತೊಡಕುಗಳ ಕುರಿತಾಗಿಯೂ ಈ ಕೃತಿಯಲ್ಲಿ ಒಳನೋಟವಿದೆ. ನಿರೂಪಕ ರಾಘವೇಂದ್ರ ಭಟ್ ಅವರು ‘ಎಲ್ಲವನ್ನೂ ಹೇಳಲಾಗಿಲ್ಲ, ಕೆಲವು ರಂಗ ಸತ್ಯಗಳನ್ನು ಹೇಳುವಂತೆಯೇ ಇಲ್ಲ, ಸತ್ಯವು ಅಪ್ರಿಯವಾಗಬಹುದು’ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಯಕ್ಷಚಂದ್ರ
ನಿರೂಪಣೆ: ರಾಘವೇಂದ್ರ ಭಟ್ಪ್ರ: ಕೊಂಡದಕುಳಿ ಬಳಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.