ಅಶ್ವತ್ಥಾಮ ನಾಟೌಟ್ ನಾಟಕದಲ್ಲಿ ಅಶ್ವತ್ಥಾಮನ ರೋಷಾವೇಶ ಚಿತ್ರಗಳು ಅರವಿಂದ ಕುಡ್ಲ
ಧೃತರಾಷ್ಟ್ರನ ನೂರೊಂದು ಮಕ್ಕಳ ಜನನಕ್ಕೆ ಕಾರಣ ಗಾಂಧಾರಿಯ ಗರ್ಭದಲ್ಲಿ ಜೀವ ತಳೆದ ಭ್ರೂಣ ಮತ್ತು ಜಾಡಿಯಲ್ಲಿ ಮೂಡಿದ ಶಿಶುಗಳು ಅಲ್ಲವೇ...? ಅವರೆಲ್ಲರೂ ಅಂತಃಪುರದ ದಾಸಿಯರ ನೂರೊಂದು ಉದರದಲ್ಲಿ ಜನಿಸಿದವರೇ...?
ಪಾಂಚಾಲಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಆಕೆಯ ಮಾನ ಉಳಿಸಿದ ಅಕ್ಷಯ ವಸನವನ್ನು ಕರುಣಿಸಿದ್ದು ಕೃಷ್ಣನಲ್ಲವೇ...? ಅದು ಅಂತಃಪುರದ ವನಿತೆಯರ ಸೌಜನ್ಯವೇ...? ಕೃಷ್ಣ ಮತ್ತು ಆತನ ಯಾದವ ಕುಲ ಕ್ಷೀರಲಾಬಿಯಲ್ಲಿ ಮುಳುಗಿತ್ತೇ..?
ಮಹಾಭಾರತದ ಪ್ರಚಲಿತ ಕಥೆಯ ಮೇಲೆ ಭಿನ್ನ ಬೆಳಕು ಚೆಲ್ಲಿ ಇಂಥ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಈಚೆಗೆ ಪ್ರದರ್ಶನಗೊಂಡ ‘ಅಶ್ವತ್ಥಾಮ ನಾಟೌಟ್’ ನಾಟಕ. ಮಂಗಳೂರಿನ ಅಯನ ‘ನಾಟಕದ ಮನೆ’ ಪ್ರಸ್ತುತಪಡಿಸಿರುವ ಈ ನಾಟಕವು ಅಶ್ವತ್ಥಾಮನ ಉನ್ಮಾದ, ಚಿರಂಜೀವಿಯಾಗುವ ವರವೇ ಶಾಪವಾದಂತೆ ತೋರಿ ಅನುಭವಿಸುವ ಸಂಕಟ, ಸಾವಿಗಾಗಿ ಹಪಹಪಿಸುವ ವೈಚಿತ್ರ್ಯ ಇತ್ಯಾದಿಗಳನ್ನು ಸದ್ಯದ ಸಮಾಜದೊಂದಿಗೆ ಮಿಳಿತಗೊಳಿಸುವ ಪ್ರಯತ್ನದೊಂದಿಗೆ ‘ಅಶ್ವತ್ಥಾಮ ಸಿಂಡ್ರೋಮ್’ ಎಂಬ ಮನೋವ್ಯಾಧಿಯ ಚಿಕಿತ್ಸೆಯ ವರೆಗೂ ವಿಸ್ತರಿಸುತ್ತದೆ. ವಾದ–ಸಂವಾದ, ಪ್ರತಿವಾದ ಆರಂಭದಿಂದ ಕೊನೆಯ ವರೆಗೂ ನಾಟಕದ ಜೀವಾಳವಾಗಿ ಸಾಗುತ್ತದೆ.
ಒಂದೇ ಎಳೆಯನ್ನು ವಿಸ್ತರಿಸಿಕೊಂಡು ಸಾಗದ, ಒಟ್ಟಾರೆಯಾಗಿ ಅಸಂಗತ ನಾಟಕದಂತೆ ಕಂಡರೂ ‘ಅಶ್ವತ್ಥಾಮ ನಾಟೌಟ್’ ಸಾಮಾಜಿಕ ಮತ್ತು ರಾಜಕೀಯ ವಿಡಂಬನೆಯ ಸೂಕ್ಷ್ಮಗಳ ಜೊತೆಯಲ್ಲಿ ಮಹಾಭಾರತದ ಪ್ರಸಂಗಗಳ ಹೊಸ ವ್ಯಾಖ್ಯಾನದೊಂದಿಗೆ ಚಿಂತನೆಗೆ ಹಚ್ಚುತ್ತದೆ. ಮೂರು ಭಾಗಗಳಲ್ಲಿ ಸಾಗುವ ನಾಟಕದ ಕುತೂಹಲಕಾರಿ ಅಂಶವೂ ಇದುವೇ.
ಮನೋರೋಗ ಚಿಕಿತ್ಸಾಲಯಕ್ಕೆ ಬರುವ ಪಂಡಿತ, ವೇದ ಶಾಸ್ತ್ರ ಪಾರಂಗತ ಅಶ್ವತ್ಥಾಮ ತನ್ನ ಮಾತು–ದೇಹಭಾಷೆಯ ಮೂಲಕ ಪುರಾಣದ ಚಿರಂಜೀವಿ ಅಶ್ವತ್ಥಾಮನೇ ಇವನು ಎಂಬ ಸಂದೇಹ ಮೂಡುವಂತೆ ಮಾಡುತ್ತಾನೆ. ಭ್ರಮೆಯಲ್ಲಿ ಮುಳುಗಿರುವ ಆತ ಮನೋವೈದ್ಯನನ್ನು ಶ್ರೀಕೃಷ್ಣನೆಂದೂ ಸಹಾಯಕ, ಕಾವಲುಗಾರನನ್ನು ಶಕುನಿ ಎಂದೂ ಭಾವಿಸುತ್ತಾನೆ. ಹೀಗೆ ಆರಂಭವಾಗುವ ನಾಟಕದಲ್ಲಿ ಮೊದಲು ‘ಹಾರವರ ರಾಜಕೀಯ’ದಂಥ ಸಾಮಾಜಿಕ, ಜಾಗಟೆ ಬಡಿದು ವ್ಯಾಧಿ ಇಲ್ಲದಾಗಿಸುವಂಥ ಭ್ರಾಂತು ಹರಡಿ ಜಗದ್ಗುರು ಆಗುವ ಪ್ರಯತ್ನದ ರಾಜಕೀಯ, ವಾರಕ್ಕೆ 70 ತಾಸು ದುಡಿಸುವ ಕಾರ್ಪೊರೇಟ್ ರಾಜಕಾರಣದ ವಿಷಯಗಳು ಮುನ್ನೆಲೆಗೆ ಬರುತ್ತವೆ. ನಟರ ಅಭಿನಯ ಚಾತುರ್ಯ, ಬೆಳಕು, ಬಣ್ಣ ಮತ್ತು ರಂಗಪರಿಕರಗಳ ಬಳಕೆಯಲ್ಲೂ ಈ ಸೂಕ್ಷ್ಮಗಳು ನಾಟಕದಲ್ಲಿ ಬಿಂಬಿಸಿವೆ.
ನಿಜವಾಗಿಯೂ ತಾವು ಕೃಷ್ಣ ಮತ್ತು ಶಕುನಿ ಎಂದೇ ರೋಗಿಯನ್ನು ನಂಬಿಸಿ ಆತನ ಮಾನಸಿಕ ಸಮಸ್ಯೆ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸುವ ‘ಚಿಕಿತ್ಸಾ ವಿಧಾನ’ದ ಹೊಳಹು ವೈದ್ಯರಲ್ಲಿ ಮೂಡಿಸುವುದು ಕಾವಲುಗಾರ. ಈ ಚಿಕಿತ್ಸೆಯ ಭಾಗವಾಗಿ ನಡೆಯುವ ಸಂಭಾಷಣೆಯ ತುಂಬ ಮಹಾಭಾರತದ ತಂತ್ರ–ಕುತಂತ್ರ, ವಂಚನೆ, ಅನಾಚಾರಗಳ ವಿಷಯಗಳೇ ಮೇಳೈಸಿವೆ. ಇಲ್ಲಿ ಶಕುನಿ, ಕೃಷ್ಣ ಮತ್ತು ಅಶ್ವತ್ಥಾಮ ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಮುಂದಿಡುವ ವಾದ ಸರಣಿ ಪ್ರೇಕ್ಷಕರನ್ನು ನಾಟಕದ ಓಘದಲ್ಲಿ ಮುಳುಗುವಂತೆ ಮಾಡುತ್ತದೆ. ಅಪ್ಪ ಮತ್ತು ತಮ್ಮನನ್ನು ಕೊಂದ ಸಿಟ್ಟನ್ನು ಶಕುನಿ ಹೊರಹಾಕಿದರೆ, ‘ನಿನಗೆ ಯುದ್ಧ ಬೇಕಾಗಿತ್ತು, ನನಗಲ್ಲ’ ಎಂದು ಅಶ್ವತ್ಥಾಮನಿಗೆ ಕೃಷ್ಣ ಹೇಳುತ್ತಾನೆ. ನಿಮ್ಮಿಬ್ಬರ ಹುನ್ನಾರದಿಂದ ನಾವು ಮಹಾಯೋಧರನ್ನೇ ಕಳೆದುಕೊಂಡೆವಲ್ಲ ಎಂದು ಅಶ್ವತ್ಥಾಮ ಪರಿತಪಿಸುತ್ತಾನೆ. ದ್ರುಪದನ ಸಂತತಿ ನಾಶ ಮಾಡಿದ್ದನ್ನು ಮತ್ತು ಉಪಪಾಂಡವರನ್ನು ಕೊಂದದ್ದನ್ನು ಒಪ್ಪಿಕೊಳ್ಳುತ್ತಾನೆ. ವಿಧವೆಯೆಂಬ ಕಾರಣದಿಂದ ಗಾಂಧಾರಿಯನ್ನು ಮುಟ್ಟದೆ, ದಾಸಿಯರನ್ನೆಲ್ಲ ಗಾಂಧಾರಿ ಎಂದೇ ಭಾವಿಸಿದ ಕುರುಡ ಧೃತರಾಷ್ಟ್ರನ ಪ್ರಸಂಗ ಈ ವಾದದ ಪ್ರಮುಖ ಅಂಶ.
ನಾಟಕದ ಕೊನೆಯ ಘಟ್ಟ, ಅಶ್ವತ್ಥಾಮನ ವಿಚಾರಣೆ. ಹಾಸ್ಯದ ಹೊನಲು ತುಂಬಿರುವ ಇಲ್ಲಿ ಒಂದು ಹಂತದಲ್ಲಿ ಕ್ಷೋಭೆಗೊಳ್ಳುವ ಅಶ್ವತ್ಥಾಮ ತಪ್ಪೊಪ್ಪಿಕೊಳ್ಳುತ್ತಾನೆ. ಆದರೆ ತನ್ನನ್ನು ಕೆಲವರು ಲಾಭಕ್ಕಾಗಿ ಬಳಸಿಕೊಂಡರು ಎಂದು ಹೇಳಿ ಆಕ್ರೋಶ ಹೊರಹಾಕುತ್ತಾನೆ. ಪ್ರಭುತ್ವದ ವಿರುದ್ಧ ಧ್ವನಿ ಎತ್ತುವವರು ಕಡಿಮೆ ಎಂಬ ಬೇಸರವೂ ಆತನನ್ನು ಕಾಡುತ್ತದೆ. ತನ್ನನ್ನು ಶಾಪಗ್ರಸ್ಥನನ್ನಾಗಿಸಿದ ಸಮಾಜಕ್ಕೆ ಮರುಶಾಪ ಕೊಡಲು ಮುಂದಾಗುತ್ತಾನೆ.
ಮೂವರೇ ನಟರು (ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ದಿನೇಶ್ ನಾಯಕ್), ಸರಳ ರಂಗಪರಿಕರಗಳು, ಮಿತ ಸಂಗೀತ ನಾಟಕವನ್ನು ಹಿತಗೊಳಿಸಲು ನೆರವಾಗಿದೆ. ತರ್ಕವನ್ನೇ ಒಳಗೊಂಡ ಮತ್ತು ವಾಚಿಕಾಭಿನಯ ಪ್ರಧಾನವಾಗಿರುವ ಯಕ್ಷಗಾನದ ಛಾಯೆಯೂ ಇರುವ ‘ಅಶ್ವತ್ಥಾಮ ನಾಟೌಟ್’ ನಾಟಕದ ತಂತ್ರವಿನ್ಯಾಸ ಕರಾವಳಿಯನ್ನು ದಾಟಿ ರಾಜಧಾನಿ ಮತ್ತು ಮಲೆನಾಡಿನತ್ತ ಪಯಣಿಸಲು ಈಗ ಸಜ್ಜಾಗಿದೆ.
'ವಾಸ್ತವದಲ್ಲಿ ಇದೊಂದು ರಂಗಪಠ್ಯ. ನಾಟಕವಾಗಿ ಪರಿವರ್ತಿಸಿರುವ ಇದರಲ್ಲಿ ಇನ್ನಷ್ಟು ಪ್ರಯೋಗಗಳು ಮಾಡುವುದು ಉಳಿದಿದೆ. ಮಹಾಭಾರತವನ್ನು ಇದಮಿತ್ಥಂ ಎಂದು ಹೇಳುವಂತಿಲ್ಲ. ಅದರ ಕಥಾನಕವನ್ನು ವಿಸ್ತರಿಸಲು ಸಾಧ್ಯತೆಗಳು ಸಾಕಷ್ಟು ಇವೆ ಎಂಬುದನ್ನು ನಾಟಕದಲ್ಲಿ ಬಿಂಬಿಸಲಾಗಿದೆ’ ಎನ್ನುತ್ತಾರೆ ನಾಟಕ ರಚನೆಕಾರ ಮತ್ತು ನಿರ್ದೇಶಕ ಮೋಹನಚಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.