ADVERTISEMENT

ನೃತ್ಯ ಸಾಗರದಲ್ಲಿ ಭಕ್ತಿ ಸಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಹಬ್ಬದ ದಿನ ಅಬ್ಬರದ ಮಳೆ, ಭಕ್ತಿಯ ಸಾಗರವಾಗುವಂಥ ನೃತ್ಯ ನೋಡುವ ಕಾತರದಲ್ಲಿ ಕಾಯ್ದಿದ್ದವರು ಸಾವಿರಾರು. ಅವರ ಮನದಾಳವನ್ನು ಅರಿತಂತೆ ವರುಣದೇವ ಅಬ್ಬರಿಸಿ ಅಷ್ಟೇ ಬೇಗ ತಣ್ಣಗಾದ.

ಅತ್ತ ನೀರು ಸರಸರ ಇಳಿಜಾರಿನ ಕಡೆಗೆ ಹರಿಯಿತು. ಇತ್ತ ಅಂಬೆಯ ಆರಾಧಕರ ಮನ ಭಕ್ತಿಪೂರ್ಣ ನೃತ್ಯ ಪ್ರದರ್ಶನದ ಕಡೆಗೆ ಹರಿಯಿತು. ಅಲ್ಲಿ ತೆರೆದುಕೊಂಡಿತು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ. ಅವರೆಲ್ಲರೂ ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತರು.

ಅದೆಷ್ಟೋ ಹೊತ್ತು ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಅಲ್ಲಿ ಹರಿಯಿತು.

ಜಗತ್ಪಾಲಿನಿಯ ಮಹಿಮೆ ಹಾಡಿ, ಕೊಂಡಾಡಿ, ನಲಿದಾಡುವಾಗ ಹೊತ್ತು ಕಳೆಯಿತೆಂದು ಯೋಚಿಸಲಾದರೂ ಹೇಗೆ ಸಾಧ್ಯ? ಜಗದಂಬೆಯ ಅವತಾರಗಳು ತೆರೆ ತೆರೆಯಾಗಿ ಹರಿದು ಬಂದು ಹೃದಯ ಕಡಲ ಅಂಚಿಗೆ ಅಪ್ಪಳಿಸುವಾಗ ಬೇರೆ ಯೋಚನೆಯ ಸುಳಿದಾಟವೇ ಇರಲಿಲ್ಲ.

ಇಂತಹದೊಂದು ಭಕ್ತಿಯ ಸಾರವನ್ನು ನೃತ್ಯ ಸಾಗರದ ಮೂಲಕ ಹೊಮ್ಮಿಸಿದ್ದು ಗರುಡ ನಾಟ್ಯ ಸಂಘ ಆಯೋಜಿಸಿದ್ದ ಅಂಬಾಭವಾನಿ ವೈಭವ. ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನಡೆದ ದೇವಿ ವರ್ಣನೆಯ ನೃತ್ಯ ಪ್ರೇಕ್ಷಕರಿಗೆ ಮುದ ನೀಡಿತು.

ಇಲ್ಲಿ ಭರತ ನಾಟ್ಯ ಹಾಗೂ ಸಮಕಾಲೀನ ನೃತ್ಯ ಮೇಳೈಸಿತ್ತು. ಫ್ಯೂಷನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ನೋಡುವುದು ಎಷ್ಟೊಂದು ಸೊಗಸು ಎನ್ನುವ ಅನುಭವ ಉಂಟುಮಾಡಿತು.

`ಗರುಡ ನಾಟ್ಯ ಸಂಘ~ದ ಕಲಾವಿದರಾದ ಶೋಭಾ ಎಂ. ಲೋಲನಾಥ್, ರಘುನಂದನ್. ಎಸ್, ಸಾಕೇತ ಕೃಷ್ಣ, ಲತಾ ಎಸ್. ರಾವ್, ಡಾ.ಅಮ್ಮು, ದಿವ್ಯಾ ರಘುರಾಮ್, ಹಿಮಾ ದೇವೀರಪ್ಪ, ಸುಪ್ರಿಯಾ ದೇವೀರಪ್ಪ, ಖುಶಿ ಪ್ರಶಾಂತ್ ಹಾಗೂ ಹರಿಣಿ ಪುರುಷೋತ್ತಮ್ ಅವರು `ಶ್ರೀ ಅಂಬಾ ಭವಾನಿ ವೈಭವ~ವನ್ನು ರಂಗದ ಮೇಲೆ ಪ್ರದರ್ಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.