ADVERTISEMENT

ರಾಮಾಯಣ ದರ್ಶನಂ ಪ್ರದರ್ಶನ

ramayana-pavithra

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 19:45 IST
Last Updated 21 ಜನವರಿ 2019, 19:45 IST
ಡಾ.ಕೆ.ಎಸ್.ಪವಿತ್ರ
ಡಾ.ಕೆ.ಎಸ್.ಪವಿತ್ರ   

ಶಿವಮೊಗ್ಗದ ಶ್ರೀವಿಜಯ ಕಲಾನಿಕೇತನ ಸಂಸ್ಥೆಯು ಇದೇ 24 ಮತ್ತು 25ರಂದು ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ ‘ಶ್ರೀವಿಜಯ ನೃತ್ಯೋತ್ಸವ’ (ಶಾಸ್ತ್ರೀಯ ನೃತ್ಯೋತ್ಸವ) ಆಯೋಜಿಸಿದೆ.

24ರಂದು ಸಂಜೆ 6ಕ್ಕೆ ಡಾ.ಕೆ.ಎಸ್.ಚೈತ್ರಾ ಅವರ ಶಿಷ್ಯೆಯರಿಂದ ‘ಶಿಷ್ಯ ಸಂಭ್ರಮ’ ನೃತ್ಯ ಕಾರ್ಯಕ್ರಮ ನಡೆಯಲಿದೆ. ನಂತರ ಡಾ.ಕೆ.ಎಸ್. ಶುಭ್ರತಾ ಮತ್ತು ಡಾ.ಕೆ.ಎಸ್. ಚೈತ್ರಾ ಅವರು ಪುರಂದರ ದಾಸರ ರಚನೆಗಳನ್ನು ಆಧರಿಸಿದ ‘ಪುರಂದರ ವೈವಿಧ್ಯ’ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸುವರು. ಅಂದಿನ ಕಾರ್ಯಕ್ರಮಕ್ಕೆ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ಧರಾಜು ಅತಿಥಿಗಳಾಗಿ ಭಾಗವಹಿಸುವರು. ಡಾ.ಕೆ.ಎಂ. ದಿವಾಕರ್ ಅಧ್ಯಕ್ಷತೆ ವಹಿಸುವರು.

ನೃತ್ಯ ಕಲಾವಿದೆ, ಲೇಖಕಿ ಡಾ.ಕೆ.ಎಸ್.ಪವಿತ್ರ ಇದೇ 25ರಂದು ಸಂಜೆ 6ಕ್ಕೆ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಆಧರಿಸಿದ ಏಕವ್ಯಕ್ತಿ ನೃತ್ಯರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅತಿಥಿಗಳಾಗಿ ಭಾಗವಹಿಸುವರು. ಮನೋವೈದ್ಯ ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸುವರು.

ADVERTISEMENT

ಮನೋವೈಜ್ಞಾನಿಕ ದೃಷ್ಟಿಯಿಂದ ಶ್ರೀರಾಮಾಯಣ ದರ್ಶನಂ ಬಹು ವಿಶಿಷ್ಟ ಕಾವ್ಯ. ವಾಲ್ಮೀಕಿ ರಾಮಾಯಣದ ಮುಖ್ಯ ಧ್ವನಿ ದುಷ್ಟನಿಗ್ರಹ -ಶಿಷ್ಟ ಪರಿಪಾಲನೆ. ಶ್ರೀರಾಮಾಯಣ ದರ್ಶನಂನ ಮುಖ್ಯ ಧ್ವನಿ ದುಷ್ಟ ಪರಿವರ್ತನೆ- ಶಿಷ್ಟ ಸಂವರ್ಧನೆ. ಸಾಮಾನ್ಯವಾಗಿ ನಾವು ‘ಕೆಟ್ಟ’ವರೆಂದುಕೊಳ್ಳುವ ಬೇಡ, ಮಂಥರೆ, ಕೈಕೇಯಿ, ವಾಲಿ, ರಾವಣ, ಕುಂಭಕರ್ಣ, ಶೂರ್ಪನಖಿ ಎಲ್ಲರೂ ಕುವೆಂಪು ದೃಷ್ಟಿಯಲ್ಲಿ ರಾಮ- ಸೀತೆಯರಿಗೆ ಸ್ವಶಕ್ತಿಯ ದರ್ಶನ ಮಾಡಿಸುತ್ತಾರೆ.

ಕ್ರೌಂಚಪಕ್ಷಿಗಳಿಗೆ ಬಾಣ ಹೊಡೆಯುವ ವ್ಯಾಧ ವಾಲ್ಮೀಕಿಯಿಂದ ಶಪಿಸಲ್ಪಡುವ ಬದಲು ಪರಿವರ್ತಿತನಾಗುತ್ತಾನೆ. ಚಂದ್ರ ಬೇಕೆಂದು ಹಠ ಹಿಡಿಯುವ ಬಾಲರಾಮನಿಗೆ ಕುರೂಪಿ- ಕುಬ್ಜೆ- ಮಂಥರೆ ಕನ್ನಡಿಯಲ್ಲಿ ಚಂದ್ರನನ್ನು ತೋರಿ ಸುಮ್ಮನಾಗಿಸುತ್ತಾಳೆ. ಗೌತಮನ ಶಾಪದಿಂದ ಕಲ್ಲಾದದ್ದು ಅಹಲ್ಯೆಯಷ್ಟೇ ಅಲ್ಲ, ಇಡೀ ಪ್ರಕೃತಿ. ಕುವೆಂಪು ಅವರ ಕಲ್ಪನಾ ಪ್ರತಿಭೆಯಲ್ಲಿ ಅಹಲ್ಯೆಯ -ಪ್ರಕೃತಿಯ ಪುನಶ್ಚೇತನ ರಾಮನ ನರ್ತನದಿಂದ! ‘ದಶಾನನ ಸ್ವಪ್ನಸಿದ್ಧಿ’ಯ ರಾವಣ ಹಂತ ಹಂತವಾಗಿ ಉದ್ಧಾರವಾಗಿ ರಾಮನ ಒಂದಂಶವೇ ಆಗುತ್ತಾನೆ. ಸೀತೆಯನ್ನು ಮಾತೃಸ್ವರೂಪಿಯಾಗಿ ಕಾಣುತ್ತಾನೆ. ಕುವೆಂಪು ಕಂಡ ರಾಮ - ಸೀತೆಯಂತೆ ತನ್ನ ಪರಿಶುದ್ಧತೆ ನಿರೂಪಿಸಲು ತಾನೂ ಅಗ್ನಿಪ್ರವೇಶ ಮಾಡುತ್ತಾನೆ!

ಕುವೆಂಪು ಅವರೇ ಹೇಳಿರುವಂತೆ `ರಾಮಾಯಣ ಒಂದು ವ್ಯಕ್ತಿಯ ಕಥೆಯಲ್ಲ. ರಾಮಾಯಣ ಶ್ರೀ ರಾಮಚಂದ್ರನಿಗಿಂತಲೂ ಹಳೆಯದು, ಹಿರಿಯದು’. ‘ದರ್ಶನ’ ಎಂಬುದು ಬುದ್ಧಿ- ಮನಸ್ಸುಗಳನ್ನು ಮೀರಿ ಅರ್ಥವೊಂದನ್ನು ಹೊಳೆಯಿಸುವ, ಪರಿವರ್ತಿಸುವ ಪ್ರಕ್ರಿಯೆ. ವೈಜ್ಞಾನಿಕತೆ- ವೈಚಾರಿಕತೆ- ಅಧ್ಯಾತ್ಮ ಮೂರೂ ಸೇರಿ ಸಂಭವಿಸುವ ‘ದರ್ಶನ’ ವಿರಳವೇ. ‘ರಾಮಂಗೆ ಮೊದಲಲ್ತೆ ರಾಮಾಯಣಂ’ ಆ ಅನುಭವವನ್ನು ಸಾಧ್ಯವಾಗಿಸುವ ಯತ್ನವನ್ನು ಏಕವ್ಯಕ್ತಿ ಪ್ರದರ್ಶನದಲ್ಲಿ ಕೆ.ಎಸ್. ಪವಿತ್ರ ಮಾಡುತ್ತಿದ್ದಾರೆ.

ಸ್ಥಳ: ಸೇವಾಸದನ ರಂಗಮಂದಿರ, 14ನೇ ಅಡ್ಡರಸ್ತೆ, ಮಲ್ಲೇಶ್ವರಂ. ಇದೇ 24, 25 ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.