ಪ್ರಧಾನಿ ನಿವಾಸ, ನವದೆಹಲಿ:ಬುಧವಾರ ಮಧ್ಯರಾತ್ರಿ 12ಪ್ರಧಾನಿ ಮೋದಿಯವರು ತಮ್ಮ ಗೃಹ ಕಚೇರಿ ಹೊರಭಾಗದಲ್ಲಿ ಚೌಕಿದರಾರು ಅತ್ತಿಂದಿತ್ತ ಗಸ್ತು ತಿರುಗುತ್ತಿದ್ದ ರೀತಿಯಲ್ಲೇ ಒಳಗೆ ಒಂದೇಸಮನೆ ಶತಪಥ ಹಾಕುತ್ತಿದ್ದರು. ಅದೇ ವೇಳೆಗೆ ಅಮಿತ್ ಶಾ, ರಾಮ್ ಮಾಧವ್ ಹಾಗೂ ಅಜಿತ್ ಡೋಭಾಲ್ ಒಳ ಪ್ರವೇಶಿಸಿದರು.
‘ಆಯಿಯೇ, ಆಯಿಯೇ’ ಎನ್ನುತ್ತಾ, ಅವರನ್ನೆಲ್ಲ ಬರಮಾಡಿಕೊಂಡ ಮೋದಿ ನೇರವಾಗಿ ಮಾತಿಗೆ ಕುಳಿತರು.
ಮೋದಿ: ಡೋಭಾಲ್‌ಜಿ, ರಫೇಲ್ ಡೀಲ್‌ನ ಎಲ್ಲ ಡಾಕ್ಯುಮೆಂಟ್‌ಗಳು ಸಿಕ್ರೀಟ್ ಜಾಗದಲ್ಲಿ ಸೆಕ್ಯೂರ್ ಆಗಿವೆಯಲ್ಲವೇ? ನಾವಲ್ಲಿ ಚೌಕಿದಾರ್‌ಗಳನ್ನೂ ಹಾಕಿದ್ದೆವಲ್ಲವೇ?
ಡೋಭಾಲ್: ಹೌದು, ಸಾರ್ ಡಾಕ್ಯುಮೆಂಟ್‌ಗಳೆಲ್ಲ ಸೆಕ್ಯೂರ್ ಆಗಿವೆ. ನಮ್ಮ ಚೌಕಿದಾರ್‌ಗಳೇನೂ ಚೋರ್‌ಗಳಲ್ಲ. ಲೀಕ್ ಆಗಿದ್ದು ಅವುಗಳ ಝೆರಾಕ್ಸ್ ಪ್ರತಿಗಳಷ್ಟೆ. ಅವುಗಳನ್ನೂ ರಕ್ಷಣಾ ಇಲಾಖೆಯ ಕಡತಗಳಲ್ಲಿ ಉಳಿಸಬಾರದಿತ್ತು.
ಮೋದಿ: ಝೆರಾಕ್ಸ್ ಪ್ರತಿಗಳು ಕಳುವಾದರೂ ಮಾಹಿತಿ ಸೋರಿಕೆ ಆಗುತ್ತೆ ಅಂತ ಗೊತ್ತಾಗಲಿಲ್ವೇನ್ರೀ? ರಕ್ಷಣಾ ಇಲಾಖೆಯ ಚೌಕಿದಾರರು ಚೋರ್‌ಗಳಲ್ಲ ಅಂತ ಹೇಗೆ ನಂಬಿದ್ರೀ?
ಡೋಭಾಲ್: .....
ಮೋದಿ: ಝೆರಾಕ್ಸ್ ಪ್ರತಿಗಳು ರಕ್ಷಣಾ ಇಲಾಖೆಯಲ್ಲೂ ಇರಬೇಕಾಗುತ್ತದೆ ಎಂದು ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್‌ನಲ್ಲಿ ಒತ್ತಾಯಿಸಿದ್ದು ಯಾರು ಅಮಿತ್‌ಜಿ?
ಶಾ: ನಿತಿನ್ ಗಡ್ಕರಿ ಹಾಗೂ ಶಿವರಾಜ್ ಸಿಂಗ್ ಸಾರ್. ಸುಷ್ಮಾಜಿ ಮತ್ತು ತಾವರ್‌ಚಂದ್ ಸಪೋರ್ಟ್ ಮಾಡಿದ್ರು.
(ಡೋಭಾಲ್, ರಾಮ್ ಮಾಧವ್ ಅವರ ಕಿವಿಯಲ್ಲಿ: ಗಡ್ಕರಿ, ಶಿವರಾಜ್ ಸಿಂಗ್ ಅವರೆಲ್ಲ ನಿಮ್ಮ ಪಾರ್ಟಿ ಲೀಡರ್‌ಗಳೇ ಅಲ್ವಾ?
ರಾಮ್ ಮಾಧವ್, ಪಿಸು ಮಾತಿನಲ್ಲಿ: ಹೌದು, ಆದರೆ, ಅವ್ರೂ ಪಿಎಂ ಕ್ಯಾಂಡಿಡೇಟ್ಸ್ ಕಣ್ರೀ)
ಮೋದಿ: ಡಾಕ್ಯುಮೆಂಟ್‌ಗಳು ಸೋರಿಕೆಯಾಗಿದ್ದು ಹೇಗೆ ಎನ್ನುವುದನ್ನು ಪತ್ತೆ ಮಾಡಿಸಿದ್ದೀರಾ?
ಡೋಭಾಲ್: ರಾಹುಲ್ ಗಾಂಧಿ ಪ್ರೆಸ್‌ಮೀಟ್‌ನಲ್ಲಿ ಮಾತನಾಡುವಾಗ ಐದು ತಿಂಗಳಲ್ಲಿ ನಾಲ್ಕು ಸಲ ರಫೇಲ್ ಯುದ್ಧ ವಿಮಾನಗಳ ಪ್ರೈಸ್ ಬದಲಿಸಿದ್ದಾರೆ ಸಾರ್. ಅದನ್ನೇ ಇಟ್ಕೊಂಡು ಅವ್ರು ಹೇಳ್ತಿರೋದೆಲ್ಲ ಸುಳ್ಳೇ ಸುಳ್ಳು ಅಂತ ಅಟ್ಯಾಕ್ ಮಾಡಬಹುದಲ್ಲ?
ಮೋದಿ: ದಿಕ್ಕು ತಪ್ಪಿಸಬೇಡಿ. ನಾನು ಕೇಳಿದ್ದೇನು, ನೀವು ಹೇಳ್ತಿರೋದೇನು?
ಡೋಭಾಲ್: ಸಾರ್, ನಾನೇ ಪತ್ರಿಕೆಗಳಲ್ಲಿ ಓದಿದೆ. ನೀವು ದಿನದ 23 ಗಂಟೆಗಳ ಕೆಲಸದ ಬಳಿಕ 10 ನಿಮಿಷ ನಿದ್ದೆ ಹೋದಾಗ ನೆಹರೂ ಬಂದು ಡಾಕ್ಯುಮೆಂಟ್ ಕದ್ದೊಯ್ದರಂತೆ?
(ಮೋದಿಯವರು ಸಿಟ್ಟಿನಿಂದ ಸಿಡಿಮಿಡಿಗೊಳ್ಳುತ್ತಾ ಏಳಲು ಅನುವಾದರು. ಅವರನ್ನು ರಾಮ್ ಮಾಧವ್ ಸಮಾಧಾನಪಡಿಸಿದರು)
ರಾಮ್ ಮಾಧವ್: ಸಾರ್, ನಮ್ ಚೌಕಿದಾರರ ಪ್ರಕಾರ, ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಅವರು ಸೌತ್ ಬ್ಲಾಕ್ ಸುತ್ತಮುತ್ತ ಹಲವು ಸಲ ಓಡಾಡಿದ್ದಾರೆ. ಹಾಗೆ ಓಡಾಡುವಾಗ ಅವರು ‘ಮೈ ಭೀ ಚೌಕಿದಾರ್’ ಟೀ–ಶರ್ಟ್ ಧರಿಸಿದ್ದರಿಂದ ಸುಲಭವಾಗಿ ಗುರುತಿಸಲು ಆಗಿಲ್ಲ. ಈಗ ಅವರೇನೇನು ಒಯ್ದಿದ್ದಾರೆ ಎನ್ನುವುದರ ತನಿಖೆಗೆ ಹೇಳಿದ್ದೇನೆ ಸಾರ್.
ಮೋದಿ: ಡ್ಯಾಮೇಜ್ ಕಂಟ್ರೋಲ್ ಮಾಡೋದು ಹೇಗೆ ಹೇಳ್ರಿ?
ರಾಮ್ ಮಾಧವ್: ಬಾಲಾಕೋಟ್ ದಾಳಿ ಚೆನ್ನಾಗಿ ವರ್ಕೌಟ್ ಆಗಿತ್ತು. ಆ ಯಡ್ಯೂರಪ್ಪ...
ಮೋದಿ: ಅವ್ರ ಹೆಸರು ನನ್ಮುಂದೆ ಎತ್‌ಬ್ಯಾಡ್ರೀ. ಬುದ್ಧಿ ಇದೆಯೇನ್ರೀ ಅವ್ರಿಗೆ? ನಮ್ಮ ಕಡೆ ತಿರುಗಿದ್ದ 3–4 % ಓಟನ್ನು ಅರೆಕ್ಷಣದಲ್ಲಿ ಎದುರಾಳಿಗಳ ಬುಟ್ಟಿಗೆ ಸುರಿದುಬಿಟ್ರಲ್ರೀ ಅವ್ರು. ಅಮಿತ್‌ಜಿ, ಡಿನಾಯ್ ದಿ ಟಿಕೆಟ್ ಟು ಹಿಮ್ ಆ್ಯಂಡ್ ಟೀಚ್ ಹಿಮ್ ಎ ಲೆಸನ್.
ಶಾ: ಸಾರ್, ಅವ್ರೀಗ ಅಸೆಂಬ್ಲಿ ಮೆಂಬರ್ರು. ಅಪೋಜಿಷನ್ ಲೀಡರ್ರು. ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಅವರ ಮಗ ಎಂ.ಪಿ. ಆಗಿದ್ದಾರೆ. ಯಡ್ಯೂರಪ್ಪ ಅವರಿಗೆ ಸರಿಯಾಗಿ ವಾರ್ನ್ ಮಾಡಿದ್ದೀನಿ ಸಾರ್.
ಮೋದಿ: ಏನ್ ವಾರ್ನಿಂಗ್‌ರೀ ಡ್ಯಾಮೇಜ್ ಎಲ್ಲಾ ಆದ್ಮೇಲೆ? ಹೋಗ್ಲಿ ಬೇರೆ ಯಾವ್ಯಾವ ಪಾರ್ಟಿ ಜತೆ ಮಾತನಾಡಿದ್ದೀರಿ?
ರಾಮ್ ಮಾಧವ್: ನಿನ್ನೆ ತೆಲಂಗಾಣದ ಕೆಸಿಆರ್ ಸಿಕ್ಕಿದ್ರು. ಹಂಗ್ ಪಾರ್ಲಿಮೆಂಟ್ ಆದ್ರೆ ನಮ್ಮ ಸಪೋರ್ಟ್ ಹೆಂಗಿದ್ರೂ ನಿಮ್ಗೆ ಅಂದಿದ್ದಾರೆ. ನವೀನ್ ಪಟ್ನಾಯಕ್ ಕೂಡ ಒಪ್ಪುವಂತೆ ಕಾಣ್ತಾರೆ. 2–3 ಸೀಟು ಕಡಿಮೆ ಬಿದ್ರೆ ಸಪೋರ್ಟ್ ಕೊಡೋಕೆ ನಾನೂ ರೆಡಿ ಅಂದಿದ್ದಾರೆ ಕರ್ನಾಟಕದ ಗೌಡ್ರು. ಅವ್ರು, ಅವ್ರ ಇಬ್ಬರು ಮೊಮ್ಮಕ್ಕಳು ಎಂ.ಪಿ ಆಗ್ತಿರೋದ್ರಿಂದ ಅವರ ಪಾರ್ಟಿಯನ್ನೂ ನಂಬಭೌದು.
ಶಾ: ಕೆಸಿಆರ್ ಹಾಗೂ ಗೌಡರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ನಿಮಗಿಂತಲೂ ಗಡ್ಕರಿ ಮೇಲೇ ಅವರಿಗೆ ಒಲವು ಹೆಚ್ಚು ಇದ್ದಂಗಿದೆ.
ಮೋದಿ: ಹೈವೇ ಯೋಜನೆಯಲ್ಲಿ ಕರ್ನಾಟಕಕ್ಕೆ ಏಕೆ ಹೆಚ್ಚಿನ ದುಡ್ಡು ಅಂತ ನಾನು ಆಗ್ಲೇ ಕೇಳಿದೆ. ಇಲ್ಲದ ಕಥೆ ಹೇಳಿದ್ರು ಗಡ್ಕರಿ. ಗೌಡರ ಮಗ ರೇವಣ್ಣನವರೇ ಅಲ್ವೇ ಅಲ್ಲಿಯ ಪಿಡಬ್ಲ್ಯುಡಿ ಮಿನಿಸ್ಟರು?
ರಾಮ್ ಮಾಧವ್: ಹೌದು ಸಾರ್... ಗಂಡ ಸತ್ತು ಎರಡು ತಿಂಗಳಲ್ಲಿ ಏಕೆ ಬೇಕಿತ್ತು ರಾಜಕೀಯ ಅಂತ ಅಂಬರೀಷ್ ಅವರ ಪತ್ನಿ ಸುಮಲತಾ ಅವರನ್ನು ಇತ್ತೀಚೆಗೆ ಕೇಳಿದ್ರಲ್ಲ, ಅದೇ ರೇವಣ್ಣ ಅಲ್ಲಿನ ಪಿಡಬ್ಲ್ಯುಡಿ ಮಿನಿಸ್ಟರು.
ಮೋದಿ: ನಮಗೆ ತಿಳಿಯದಂತೆ ಸುತ್ತಲೂ ಏನೇನೋ ನಡೆಯುತ್ತಿದೆ ಅಮಿತ್‌ಜಿ. ನೀವೇನೋ ಎಲ್ಲಾ ಕಡೆ ನಮ್ಮ ಚೌಕಿದಾರರು ಇದ್ದಾರೆ ಎನ್ನುತ್ತೀರಿ. ನೋಡಿ, ಎಷ್ಟೋ ವಿಷಯ ನಮಗೆ ಗೊತ್ತಿಲ್ಲ. ಈಗೇನು ಮಾಡುತ್ತೀರಿ?
ಶಾ: ಸಾರ್, ಭೂಸಾರಿಗೆ ಇಲಾಖೆಯ ಹಗರಣಗಳನ್ನು ಒಂದಿಷ್ಟು ಹೊರಗೆ ಬಿಡೋಣವೇ?
ಮೋದಿ: ಯಾಕ್ರೀ ಅಮಿತ್‌ಜಿ ಹಿಂಗಾದ್ರಿ? ರಫೇಲ್ ದಾಳಿ ಸಾಕಾಗಿಲ್ವೆ? ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎನ್ನುವಂತೆ ಇದನ್ನೇನಾದ್ರೂ ಮೈಮೇಲೆ ಎಳಕೊಂಡ್ರೆ ಮುಗೀತು.
ಶಾ: ಡಿಮಾನಿಟೈಜೇಷನ್‌ನಿಂದ ಪ್ರಾಬ್ಲಂ ಆಗಿರೋದು ನಿಜ ಅಂತ ನಮ್ಮ ಎಂ.ಪಿ.ಗಳೇ ಹೇಳುತ್ತಿದ್ದಾರೆ ಸಾರ್. ಕಿತ್ತಳೆ ಮಿಶ್ರಿತ ಹಳದಿ ಬಣ್ಣದ ನೋಟಿಗಿಂತ (500), ಗುಲಾಬಿ ಬಣ್ಣದ (2000) ನೋಟುಗಳನ್ನೇ ಕ್ಷೇತ್ರದ ಜನ ಕೇಳುತ್ತಿದ್ದಾರಂತೆ. ಚಿಲ್ಲರೆ ಸಮಸ್ಯೆಯಿಂದ ಚುನಾವಣೆ ಖರ್ಚು ಜಾಸ್ತಿಯಾಗುತ್ತಿದೆ ಎನ್ನುವುದು ಅವರ ದೂರು. ಮಾರವಾಡಿಗಳ ಸಿಟ್ಟೂ ಕಡಿಮೆಯಾದಂತಿಲ್ಲ.
ಮೋದಿ: ಉತ್ತರ ಪ್ರದೇಶ ಚುನಾವಣೆಗಿಂತ ಈಗಿನ ಚುನಾವಣೆಗೆ ಮುನ್ನ ಡಿಮಾನಿಟೈಜೇಷನ್ ಮಾಡಿದ್ದರೆ ಚೆನ್ನಾಗಿತ್ತೇನೋ...
ಶಾ: ಹೋಗಲಿ ಬಿಡಿ, ಈಗ ಎಲ್ಲಾ ಹುಳುಕು ಮುಚ್ಚಿ, ಮತ ತರುವಂತಹ ಬಿರುಗಾಳಿ ಎಬ್ಬಿಸೋದು ಹೇಗೆ?
ರಾಮ್ ಮಾಧವ್: ರಾಮಮಂದಿರದ ಟ್ರಂಪ್ ಕಾರ್ಡ್ ಮತ್ತೆ ಬಳಸೋಣವೇ?
ಮೋದಿ: ಛೇ, ಛೇ, ಈಗ ಆ ವಿಷಯ ಕೆದಕುವುದು ಬೇಡ. ಇಷ್ಟು ದಿನ ಏನು ಮಾಡಿದಿರಿ ಅಂತ ಜನ ಕೇಳಿದರೆ ಉತ್ತರ ನೀಡುವುದು ಕಷ್ಟ. ರಾಮಮಂದಿರ ಬೇಡ. ಬೀ ಮೋರ್ ಪ್ರ್ಯಾಕ್ಟಿಕಲ್. ನಾಳೆ ಬರುವಾಗ ಹೊಸ ಐಡಿಯಾಗಳೊಂದಿಗೆ ಬನ್ನಿ.
ಚರ್ಚೆ ಮುಗಿದು ಎಲ್ಲರೂ ಚದುರಾವಾಗ ಹತ್ತಿರದ ಮಸೀದಿಯಿಂದ ‘ಅಲ್ಲಾ ಹೋ ಅಕ್ಬರ್’ ಎಂಬ ಆಜಾನ್ ಸದ್ದು ಮೊಳಗುತ್ತಿತ್ತು. ಚೌಕಿದಾರರ ಗಸ್ತು ಯಥಾಪ್ರಕಾರ ಮುಂದುವರಿದಿತ್ತು.
*****
ಜನಪಥ್ ರಸ್ತೆಯ 10ನೇ ನಂಬರಿನ ನಿವಾಸ
ಬುಧವಾರ, ಹೆಚ್ಚು–ಕಡಿಮೆ ಅದೇ ಮಧ್ಯರಾತ್ರಿ‘ಅಮ್ಮಾ ನಾ ಪಾಸಾದೆ, ಪ್ರಧಾನಿಪಟ್ಟದ ಪಾಲಾದೆ...’ ಹಾಡು ಆ ಮನೆಯಿಂದ ದಾರಿಹೋಕರಿಗೂ ಕೇಳುವಂತೆ ಅಲೆ–ಅಲೆಯಾಗಿ ಕೇಳಿಬರುತ್ತಿತ್ತು. ಮನೆಯ ಬಾಲ್ಕನಿಯಲ್ಲಿ ಕುಳಿತು ಆ ಹಾಡು ಹಾಡುತ್ತಿದ್ದ ರಾಹುಲ್ ಅವರನ್ನು ಸೋನಿಯಾ ಗದರಿ ಒಳಗೆ ಕರೆದೊಯ್ದರು.
ಸೋನಿಯಾ: ಈಗ ಎಲೆಕ್ಷನ್ ಘೋಷಣೆಯಾಗಿದೆ ಅಷ್ಟೇ ಕಣೊ. ರಿಸಲ್ಟ್ ಬರೋಕೆ ಮೇ 23ರವರೆಗೆ ಕಾಯ್ಬೇಕು ತಿಳೀತಾ? ನಿನ್ನ ಈ ಹಾಡು ಆಂಧ್ರ ಭವನ, ಬಂಗಾಳ ಭವನದವರೆಗೆ ಕೇಳಿದರೆ ಕಥೆ ಮುಗೀತು, ಸುಮ್ನೆ ಕೂತ್ಕೊ.
ರಾಹುಲ್: ಮೊನ್ನೆ ಗೌಡರು ಬೆಂಗಳೂರಿನಲ್ಲಿ ಹೇಳಿದ್ದಾರಮ್ಮ, ಪ್ರಧಾನಿ ಹುದ್ದೆಗೆ ನನ್ನ ಛಾಯ್ಸ್ ರಾಹುಲ್ ಅಂತ.
ಸೋನಿಯಾ: ಅದನ್ನೆಲ್ಲ ನೀನು ಕಣ್ಮುಚ್ಚಿಕೊಂಡು ನಂಬಿದೇನೋ? ಸಿದ್ದರಮಯ್ಯಾ ಅವರನ್ನು ಕೇಳಿನೋಡು, ಎಲ್ಲಾ ಬಿಡಿಸಿ ಹೇಳ್ತಾರೆ...
ರಾಹುಲ್ (ಮೊಬೈಲ್‌ನಲ್ಲಿ ಸಿದ್ದರಾಮಯ್ಯ ಅವರಿಗೆ): ಸಿದ್ದರಮಯ್ಯಾ, ಗೌಡರ ಸಪೋರ್ಟ್ ನಮಗಿದೆಯೇ?
ಸಿದ್ದರಾಮಯ್ಯ: ಆಯಪ್ಪನ ಸಪೋರ್ಟ್ ನಮಗಿಲ್ಲ ಸಾರ್. ನಮ್ಮ ಸಪೋರ್ಟ್‌ನಿಂದ ಅವ್ರ ಮಗ ಸಿಎಂ ಆಗಿರೋದು.
ರಾಹುಲ್: ಸಿಎಂ ಪೋಸ್ಟ್‌ಗೆ ಅಲ್ಲ ಕಣ್ರೀ. ಪಿಎಂ ಪೋಸ್ಟ್‌ಗೆ. ಅವ್ರ ಸಪೋರ್ಟ್ ಇದೆ ತಾನೇ?
ಸಿದ್ದರಾಮಯ್ಯ: ಪಿಎಂ ಪೋಸ್ಟ್‌ಗಾ? ನೀವು ಅವ್ರಿಗೆ ಸಪೋರ್ಟ್ ಕೊಡಬೇಡಿ. ನೀವು ಪಿಎಂ ಆಗಬೇಕು ಎನ್ನುವುದು ನಮ್ಮೆಲ್ಲರ ಹಂಬಲ.
ರಾಹುಲ್: ಅದ್ಕೇ ಕಣ್ರಿ. ಅವ್ರ ಸಪೋರ್ಟ್ ಸಿಗುತ್ತಾ?
ಸಿದ್ದರಾಮಯ್ಯ: ಆ ಅಪ್ಪ–ಮಕ್ಕಳು–ಮೊಮ್ಮಕ್ಕಳ ಪಾರ್ಟಿಯನ್ನು ನಂಬೋಕೆ ಆಗಲ್ಲ ಸಾರ್. ನನ್ನನ್ನ ಸಿಎಂ ಮಾಡ್ತೀನಿ ಅಂತ ಕೈಕೊಟ್ಟಿದ್ದಕ್ಕೆ ಅಲ್ವೆ ನಾನು ಕಾಂಗ್ರೆಸ್‌ಗೆ ಬಂದಿದ್ದು. ನಿಮ್ಗೆ ಅವ್ರು ಸಪೋರ್ಟ್ ಕೊಡದಿದ್ರೆ, ಅವ್ರ ಮಗನಿಗೆ ನಾವು ಕೊಟ್ಟ ಸಪೋರ್ಟ್ ವಾಪಸ್ ಪಡೆದ್ರೆ ಆಯ್ತು ಬಿಡಿ ಸಾರ್.
ಖುಷಿಯಿಂದ ಕರೆ ಸ್ಥಗಿತಗೊಳಿಸಿದ ರಾಹುಲ್ ಕೈಯಲ್ಲಿ ರಫೇಲ್ ವಿಮಾನದ ಪ್ರತಿಕೃತಿ ಹಿಡಿದು ಆಡಿಸುತ್ತಾ ಮತ್ತೆ ಹಾಡತೊಡಗಿದರು: ‘ಅಮ್ಮಾ ನಾ ಪಾಸಾದೆ, ಪ್ರಧಾನಿಪಟ್ಟದ ಪಾಲಾದೆ...’
(ಕೃಪೆ: ಸುಧಾ, ಏ.4ರ ಸಂಚಿಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.