ADVERTISEMENT

ಛೆ ಛೆ... ಎಂಥೆಂಥ ವಿಚ್ಛೇದನ!

ಪ್ರಕಾಶ ಶೆಟ್ಟಿ
Published 13 ಸೆಪ್ಟೆಂಬರ್ 2019, 20:15 IST
Last Updated 13 ಸೆಪ್ಟೆಂಬರ್ 2019, 20:15 IST
   

ನಮ್ಮ ದೇಶದಲ್ಲಿ ಪ್ರತೀ ದಿನ ನಿಮಿಷಕ್ಕೆ ಎಷ್ಟು ಕೂಸುಗಳ ಜನನವಾಗುತ್ತದೆ ಎಂದು ಸರ್ಕಾರ ಲೆಕ್ಕವಿಟ್ಟು ಅದನ್ನು ಕೆಲವು ನಗರಗಳಲ್ಲಿ ದೊಡ್ಡ ಡಿಜಿಟಲ್ ಸ್ಕ್ರೀನ್‌ನಲ್ಲಿ ಬಿತ್ತರಿಸುವ ವಾಡಿಕೆ ಇದೆ. ಜನರಿಗೆ ಒಂದಿಷ್ಟು ದಿಗ್ಭ್ರಮೆ ಹುಟ್ಟಿಸುವುದು ಅಧಿಕಾರಸ್ಥರ ಉದ್ದೇಶವಿರಬಹುದು. ಇಂದು ನಮ್ಮ ಸಮಾಜದಲ್ಲಿ ಹುಚ್ಚುಚ್ಚಾಗಿ ನಡೆಯುತ್ತಿರುವ ವಿಚ್ಛೇದನಗಳನ್ನು ಗಮನಿಸಿದರೆ, ಅದರ ಸಂಖ್ಯೆಯನ್ನೂ ದಿನಾ ಬಿತ್ತರಿಸುವ ವಿಚ್ಛೇ-ದಿನಗಳು ಬರಬಹುದೇನೋ!

ಮೊನ್ನೆ ಮೊನ್ನೆಯಷ್ಟೇ ವಕೀಲರೊಬ್ಬರ ಫೈಲುಗಳ ಕಂತೆಗೆ ಸೇರಿದ ‘ಮ್ಯಾರೇಜ್ ಫೇಲು’ ಕೇಸ್‌ನ ಕತೆ ಕೇಳಿ. ಅವರು ಯುವ ದಂಪತಿ. ಅರ್ಧಾಂಗಿಗೆ ಅರ್ಧ ಗಂಡನ ಮೇಲೆ, ಇನ್ನರ್ಧ ನಾಯಿ, ಬೆಕ್ಕುಗಳ ಮೇಲೆ ಪ್ರೀತಿ. ಆದರೆ ಬರಬರುತ್ತಾ ಮನೆಯಲ್ಲಿ ನಾಯಿ, ಬೆಕ್ಕುಗಳ ಸಂಖ್ಯೆ ಹೆಚ್ಚತೊಡಗಿತು. ಗಂಡ ಅತೃಪ್ತನಾಗತೊಡಗಿದ. ಕ್ರಮೇಣ ಅಸಮಾಧಾನದ ಹೊಗೆ ಭುಸುಗುಟ್ಟತೊಡಗಿದ. ನಾಯಿಗಳಿಗೆ ನಾಚಿಕೆಯಾಗುವಂತೆ ಅವರಿಬ್ಬರೂ ಜಗಳವಾಡಿದರು. ಸಾಧಾರಣವಾಗಿ ಹೀಗೆ ದಾಂಪತ್ಯದಲ್ಲಿ ರಸ ಕಳೆದುಕೊಂಡು ವಿರಸದ ಘಟ್ಟ ಮುಟ್ಟಿದಾಗ ಗಂಡ, ‘ಈ ಮನೇಲಿ ಒಂದಾ ನಾನಿರಬೇಕು, ಇಲ್ಲ, ನೀನಿರಬೇಕು’ ಅನ್ನುವ ಲಾಸ್ಟ್ ವರ್ಡ್ ಬರುತ್ತದೆ. ಆದರೆ ಇಲ್ಲಿ ಗಂಡ, ‘ಈ ಮನೇಲಿ ಒಂದಾ ನಾವಿರಬೇಕು, ಇಲ್ಲ... ಆ ನಾಯಿ, ಬೆಕ್ಕುಗಳಿರಬೇಕು’ ಎಂದು ಖಡಾಖಡಿಯಾಗಿ ಹೇಳುತ್ತಾನೆ. ಆಕೆ, ಗಂಡನೆಂಬ ಮನುಷ್ಯ ಪ್ರಾಣಿಗಿಂತ ಈ ಸಾಕು ಪ್ರಾಣಿಗಳೇ ಲೇಸು ಎಂದು ವಿಚ್ಛೇದನಕ್ಕೆ ಒಪ್ಪುತ್ತಾಳೆ!

ಈಚಿನ ದಿನಗಳಲ್ಲಿ ಇಂತಹ ಅನೇಕ ದಾಂಪತ್ಯ ದುರ್ಘಟನೆಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಹನಿಮೂನ್‌ಗೆ ಹೊರಟ ನವದಂಪತಿ ‘ಚಂದ್ರ ಯಾನ’ ಯಶಸ್ವಿಯಾಗಿ ಮುಗಿಸುವ ಮುಂಚೆಯೇ ಎಲ್ಲಿ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳುತ್ತಾರೋ ಎಂಬ ಭಯ ಹೆತ್ತವರಿಗೆ ಕಾಡತೊಡಗಿದೆ. ಈ ಬಗ್ಗೆ ಯಾವುದಾದರೂ ವಕೀಲರನ್ನು ಕೇಳಿದರೆ, ‘ಏನ್ಸಾರ್ ನೀವು... ಹನಿಮೂನ್‌ವರೆಗೆ ಹೊರಟಿದ್ದೀರಿ. ಬೆಳಿಗ್ಗೆ ತಾಳಿ ಕಟ್ಟಿದ್ಮೇಲೆ ರಾತ್ರಿ ರಿಸೆಪ್ಷನ್ ಸಮಾರಂಭಕ್ಕೆ ಹುಡುಗ ನಾಪತ್ತೆಯಾದದ್ದೂ ಇದೆ ಗೊತ್ತಾ?’ ಅನ್ನುವ ಬ್ರೇಕಿಂಗ್ ನ್ಯೂಸ್ ಕೊಡುತ್ತಾರೆ!

ADVERTISEMENT

ಹೀಗೆ ನಡೆಯುತ್ತಿರುವ ಬಹಳಷ್ಟು ವಿಚ್ಛೇದನಗಳ ಮೂಲಗಳನ್ನು ಸಂಗ್ರಹಿಸುತ್ತಾ ಹೋದರೆ ಶೇಕ್ಸ್‌ಪಿಯರನಿಗೇ ಸಡ್ಡು ಹೊಡೆಯುವಂತಹ ‘ಕಾಮಿಡಿ ಆಫ್ ಎರರ್ಸ್’ ಎಂಬ ಪುಸ್ತಕ ಹೊರತರಬಹುದು. ನಿಜ ಹೇಳಬೇಕೆಂದರೆ ಬಹಳ ಹಿಂದಿನಿಂದ ಮದುವೆ ಎಂಬ ‘ಕಟ್ಟು-ಪಾಡು’ ಅನೇಕರಿಗೆ ಒಂದು ಹಾಸ್ಯದ ವಿಷಯ. ಅದರಲ್ಲೂ ನಗೆಬರಹಗಾರರು, ಹಾಸ್ಯ ಕವಿಗಳು, ಹಾಸ್ಯಗಾರರು, ವ್ಯಂಗ್ಯಚಿತ್ರಕಾರರು, ನಗೆಹನಿಕರ್ತರು ಇವರಿಗೆಲ್ಲಾ ಗಂಡ ಮತ್ತು ಹೆಂಡತಿ ಅತೀ ಮುಖ್ಯ ಸಾಮಗ್ರಿ. ‘ಮದುವೆಯೆಂಬುದು ಲಾಟರಿ ಟಿಕೆಟ್ ಕೊಂಡುಕೊಂಡಂತೆ’ ಎಂದು ಬರೆಯುವ ಕನ್ನಡದ ಹಾಸ್ಯಬ್ರಹ್ಮ ಬೀಚಿ, ‘ಹೆಂಡತಿಯನ್ನು ಬೈಯಬೇಕೇ? ಶತಮೂರ್ಖನ ಹೆಂಡತಿಯೇ... ಎಂದೇ ಆರಂಭಿಸಿ ’ ಎಂದು ಅರ್ಧಾಂಗಿಯನ್ನು ಹೇಗೆ ‘ಡೀಲ್’ ಮಾಡಬೇಕೆನ್ನುವ ಸೂತ್ರವನ್ನೂ ಹೇಳಿಕೊಡುತ್ತಾರೆ.

ತಮ್ಮ ಅಪ್ಪ-ಅಮ್ಮಂದಿರು ಮದುವೆಯ ಕ್ವಾರ್ಟರ್ ಸೆಂಚುರಿ, ಹಾಫ್ ಸೆಂಚುರಿ ಬಾರಿಸುವುದನ್ನು ನೋಡಿ, ಇಂದಿನ ಯುವ ದಂಪತಿಗಳು ದಂಗಾಗಿಬಿಡಬಹುದು. ಆದರೆ ಅವರು ತಿಳಿದುಕೊಂಡಂತೆ ಕಳೆದ ಇಪ್ಪತ್ತೈದು ವರ್ಷಗಳ ದಾಂಪತ್ಯದಲ್ಲಿ ಯುದ್ಧಗಳೇ ನಡೆದಿಲ್ಲ ಎನ್ನಲಾಗುವುದಿಲ್ಲ. ಶೂರ್ಪನಖಿ ಬಿರು ದಾಂಕಿತ ಹೆಂಡತಿ ಜತೆ ಇಪ್ಪತೈದು ಯಾಕೆ ಐವತ್ತು ವರ್ಷ ‘ಸುಖಜೀವನ’ ನಡೆಸಿದವರಿಲ್ಲವೇ? ರಾಕ್ಷಸ ಗಂಡನೊಂದಿಗೆ ‘ಸಹಬಾಳ್ವೆ’ ನಡೆಸಿದ ಪತ್ನಿಯರು ಇಲ್ಲವೇ? ಅಯ್ಯೋ! ನಮ್ಮಜ್ಜಂದಿರ ಕತೆ ಕೇಳಬೇಡಿ. ಹೆಂಡತಿ ಜೊತೆಗೆ ಒಬ್ಬರಲ್ಲ, ಇಬ್ಬರು, ಮೂವರನ್ನು ‘ಇಟ್ಟುಕೊಳ್ಳುತ್ತಿದ್ದರೂ’ ಅಲ್ಲಿ ವಿಚ್ಛೇದನದ ಪ್ರಶ್ನೆಯೇ ಏಳುತ್ತಿರಲಿಲ್ಲ.

ಇವನ್ನೆಲ್ಲಾ ಕೇಳಿದರೆ ಇಂದಿನ ಯುವ ದಂಪತಿಗಳು ‘ಆ ಕಾಲ ಬೇರೆ’ ಎಂದು ಹೇಳುವುದರಲ್ಲಿ ಸಂಶಯವೇ ಇಲ್ಲ. ಹೌದು, ಈ ಕಾಲವೇ ಬೇರೆ. ‘ರಾತ್ರಿಯಿಡೀ ಹುಲಿ ಗರ್ಜಿಸುವಂತೆ ಗೊರಕೆ ಹೊಡೆಯುವ ಗಂಡ ನನಗೆ ಬೇಡ!’ ‘ಪುಟ್ಟ ಸಂಸಾರದಿಂದ ದೇಶಪ್ರೇಮ’ ತತ್ವವನ್ನು ಪಾಲಿಸಲು ಹೊರಟ ಹೆಂಡತಿ, ಇನ್ನೂ ಮುಂದೆ ಹೋಗಿ ‘ಮಕ್ಕಳೇ ಬೇಡ’ ಎಂದು ಹಟ ಹಿಡಿದರೆ ಗಂಡನಿಗೆ ವಿಚ್ಛೇದನವೇ ಗತಿ! ಮೋದಿ ಅಭಿಮಾನಿಯಾಗಿರುವ ಹೆಂಡತಿಗೆ ಗಂಡ ಪ್ರಿಯಾಂಕಾ ಗಾಂಧಿಯ ಕಟ್ಟಾ ಅಭಿಮಾನಿಯಾಗಿರುವುದನ್ನು ಸಹಿಸಲಾಗದೆ ತವರು ಮನೆಗೆ ವಾಪಸ್! ಕೆಟ್ಟದಾಗಿ ಅಡುಗೆ ತಯಾರಿಸುವ ಗಂಡನೊಂದಿಗೆ ಇನ್ನೆಂದೂ ಬಾಳಲಾರೆ! ಮದುವೆಯ ಸಮಯದಲ್ಲಿ ಸಪೂರವಾಗಿ ಒಳ್ಳೆಯ ಫಿಗರ್ ಉಳಿಸಿಕೊಂಡಿದ್ದ ಹುಡುಗಿ, ಮದುವೆಯಾದ ಮೇಲೆ ಡುಮ್ಮಿಯಾಗುತ್ತಿದ್ದಾಳೆ. ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕವಷ್ಟೇ ಮಾತನಾಡುವ ಗಂಡನಿಗೆ ವಿಚ್ಛೇದನದ ವಿಷಯವನ್ನೂ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕವೇ ತಿಳಿಸಬೇಕಾಯಿತು! ಛೆ, ಛೇ... ಮುಂದೆ ಇನ್ನೂ ಎಂಥೆಂಥ ವಿಚಿತ್ರ ಕಾರಣ ಗಳಿಗಾಗಿ ವಿಚ್ಛೇದನಗಳನ್ನು ನಾವು ಕಾಣಲಿಕ್ಕಿದೆಯೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.