ADVERTISEMENT

ಸ್ವಾಮಿಗಳೇ, ನಿಮ್ದು ಯಾವ ಪೀಠ?

ರುದ್ರಸ್ವಾಮಿ ಹರ್ತಿಕೋಟೆ
Published 27 ಅಕ್ಟೋಬರ್ 2018, 19:32 IST
Last Updated 27 ಅಕ್ಟೋಬರ್ 2018, 19:32 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಕೆಲವು ಹೆಸರುಗಳೇ ಹಾಗೆ; ಏನೆಲ್ಲ ಫಜೀತಿ ಉಂಟು ಮಾಡಿಬಿಡುತ್ತವೆ! ಕೆಲವು ಹೆಸರುಗಳು ಅಡ್ಡಹೆಸರುಗಳಾಗಿ ಏನೆಲ್ಲಾ ಸನ್ನಿವೇಶಗಳಿಗೆ ಕಾರಣವಾಗಿಬಿಡುತ್ತವೆ. ಇನ್ನು ಕೆಲವರು ಅವರ ಹೆಸರುಗಳ ಮೇಲೆಯೇ ‘ನಮ್ಮವರು’ ಎಂದು ತಿಳಿದುಕೊಂಡು ವಿಶೇಷ ಆತಿಥ್ಯ ನೀಡುವುದು ಉಂಟು. ಹೀಗೆ ಹದಿಮೂರು ವರ್ಷದ ಹಿಂದೆ ಬಾದಾಮಿ ತಾಲ್ಲೂಕು ಮಂಗಳೂರು ಗ್ರಾಮದ ಪ್ರಾಥಮಿಕ ಶಾಲೆಗೆ ಶಿಕ್ಷಕನಾಗಿ ಹೋದ ರುದ್ರಸ್ವಾಮಿ ಎಂಬ ನನಗೆ ಈ ಹೆಸರು ಆರು ತಿಂಗಳ ಕಾಲ ಸ್ವಾಮಿಯ ಪಟ್ಟವನ್ನು ಕಟ್ಟಿತ್ತು.

ಅಂದು ಸ್ವಾತಂತ್ರ್ಯ ದಿನಾಚರಣೆ. ಮಕ್ಕಳನ್ನು ಊರಿನೊಳಗೆ ಪಥಸಂಚಲನಕ್ಕೆ ಕರೆದುಕೊಂಡು ಹೋದ್ವಿ. ಗ್ರಾಮ ಪಂಚಾಯಿತಿ ಮುಂದೆ ಧ್ವಜಾರೋಹಣ ಕಾರ್ಯಕ್ರಮ. ಅಲ್ಲಿನ ನಿರೂಪಕರು– ‘ಈಗ ಕಾರ್ಯಕ್ರಮ ಕುರಿತು ನಮ್ಮೂರ ಶಾಲೆಯ ಶ್ರೀರುದ್ರಮುನಿಸ್ವಾಮಿಗಳು ಮಾತನಾಡಬೇಕು’ ಎಂದರು. ಅಲ್ಲಿ ನೆರೆದಿದ್ದ ಕೆಲವು ಹಿರಿಯರು ನನ್ನನ್ನು ಸ್ವಾಮಿಗಳು ಎಂದು ಭಾವಿಸಿಬಿಟ್ಟರು.

ಉತ್ತರ ಕರ್ನಾಟಕ ಎಂದರೆ ನೆನಪಾಗುವುದು ಅಲ್ಲಿನ ಸಾಂಸ್ಕೃತಿಕ ಸೊಗಡು. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಅಲ್ಲಿ ಹಬ್ಬದ ವಾತಾವರಣ ಇರುತ್ತದೆ. ಊರಿನೊಳಗೆ ಹೋದರೆ ಕಡುಬು- ತುಪ್ಪದ ವಾಸನೆ ನಮ್ಮ ಹೊಟ್ಟೆ ಚುರುಗುಟ್ಟುವಂತೆ ಮಾಡುತ್ತದೆ. ಒಂದು ದಿನ ಒಬ್ಬರ ಮನೆಯಲ್ಲಿ
ಶುಭಕಾರ್ಯವಿತ್ತು.

ADVERTISEMENT

ಸಹಜವಾಗಿ ನಮ್ಮ ಶಾಲೆಗೂ ಆಹ್ವಾನ(ಬಿನ್ನಾಯಿ) ಬಂದಿತ್ತು. ಆ ದಿನ ಸಂಜೆ ನನ್ನ ಮಿತ್ರನ ಜೊತೆ ಆ ಮನೆಗೆ ಹೋದಾಗ ನನಗೆ ವಿಶೇಷ ಮಾನ್ಯತೆ. ಹಿರಿಯರೊಬ್ಬರು, ‘ಸ್ವಾಮಿಗಳು ಬಂದ್ರು. ಅವರನ್ನು ಮೊದಲು ಕೂರಿಸಿ’ ಎಂದರು. ಪುಷ್ಕಳ ಭೋಜನದ ನಂತರ ಹಿರಿಯರೊಬ್ಬರು ದಕ್ಷಿಣೆ ಕೊಟ್ಟು ಕಾಲಿಗೆ ಬೀಳಲು ಬಂದರು. ಒಮ್ಮೆಲೆ ಚೇಳು ಕುಟುಕಿದವನಂತೆ ಜಿಗಿದುಬಿಟ್ಟೆ. ‘ಏಕೆ? ನೀವು ಸ್ವಾಮಿಗಳಲ್ಲವೆ?’ ಎಂದರು. ನಾನು ಮೌನಿಯಾದೆ. ಗೆಳೆಯ ಮುಸಿಮುಸಿ ನಗುತ್ತಿದ್ದ. ಓಹೋ... ಇದು ಪಂಚಾಯಿತಿ ನಿರೂಪಕರ ಪ್ರಭಾವ ಎಂದುಕೊಂಡು ಹೊರಬಂದೆ.

ಆ ದಿನ ಶಾಲೆಗೆ ರಜೆ ಇತ್ತು. ಬಾದಾಮಿಗೆ ಬಂದು ಸಾವಜಿ ಖಾನಾವಳಿಯಲ್ಲಿ ಊಟ ಮಾಡಿ ಹೊರಬರುವುದನ್ನು ಆ ಊರಿನ ಹಿರಿಯರೊಬ್ಬರು ನೋಡಿದ್ದಾರೆ. ನಮ್ಮ ಬಳಿ ಬಂದವರೇ, ‘ಏನ್ ಸ್ವಾಮಿಗಳೇ... ನೀವು ಇಲ್ಲಿ’ ಎಂದರು.

‘ಶಾಲೆ ಸೂಟಿ ಇತ್ತಲ್ರಿ ಅಣ್ಣಾರೇ, ಹಾಗಾಗಿ ಬಂದಿದ್ವಿ...’ ಎಂದೆ.

‘ಅಲ್ಲಾ... ಅದು ಖರೆ. ಆದ್ರೆ ನೀವು ಇಲ್ಲಿ...’ ಎಂದವರೆ ಸಾವಜಿ ಖಾನಾವಳಿ ನೋಡಿದರು. ನನಗೆ ಅರ್ಥವಾಯಿತು ಸ್ವಾಮಿಗಳು ನಾನ್ವೆಜ್ ತಿಂತಾರೆ ಎಂಬುದು ಅವರ ಮನದ ಸಂಶಯ.

‘ಇವರೆಲ್ಲ ಕಳ್ಳಸ್ವಾಮಿಗಳು’ ಎಂದು ಅವರ ಮನಸ್ಸಿಗೆ ಅನಿಸಿರಬೇಕು. ಆದರೆ, ನೇರವಾಗಿ ಜಾತಿ ಕೇಳಿದರೆ ಏನೆಂದುಕೊಂಡಾರೋ ಎಂಬ ಭಾವನೆ ಅವರದು. ಈ ಘಟನೆ ನಡೆದು ಒಂದು ವಾರವಾಗಿತ್ತು. ಶಾಲೆ ಮುಗಿದ ಬಳಿಕ ನಾನೊಬ್ಬನೇ ಮನೆಯ ಕಡೆ ಹೊರಟಿದ್ದೆ. ಊರಿನ ಕಟ್ಟೆಯ ಮೇಲೆ ಕುಳಿತಿದ್ದ ನಾಲ್ಕಾರು ಹಿರಿಯರು ನನ್ನನ್ನು ನೋಡಿದರು.

ಅದರಲ್ಲೊಬ್ಬರು ‘ಸ್ವಾಮಿಗಳೇ... ಬನ್ನಿ ಇಲ್ಲಿ’ ಎಂದರು. ನಾನು ಹೋದೆ. ‘ನಿಮ್ಮದು ಯಾವ ಪೀಠ?’ ಎಂದು ಪ್ರಶ್ನಿಸಿದರು.

‘ಯಾವ ಪೀಠನೂ ಇಲ್ರೀ...’ ಎಂದು ಉತ್ತರಿಸಿದೆ.

ಮತ್ತೆ ‘ಅಲ್ರೀ... ನಿಮ್ಮದು ಯಾವ ಪೀಠ?’ ಎಂದರು. ಅವರ ಪ್ರಶ್ನೆಯ ಇರಾದೆ ಅರ್ಥವಾಯಿತು. ‘ನಮ್ಮದು ಯಾವ ಪೀಠನು ಇಲ್ರೀ... ‘ನಾವು...’ ಎಂದು ಹೇಳಿದಾಗ. ‘ಮತ್ತ ನಿಮ್ಮ ಅಡ್ಡ ಹೆಸರು ರುದ್ರಸ್ವಾಮಿ ಐತಲ್ರೀ’ ಎಂದರು. ‘ಇಲ್ರೀ... ಅಣ್ಣಾರೇ. ನಮ್ಮ ಕಡೆ ಇದೇ ರೀತಿ ಹೆಸರು ಇಟ್ಕೊಳ್ಳೊದು. ಹೆಸರಿನ ಮುಂದೆ ಇನಿಷಿಯಲ್ ಇರುತ್ತೆ ಅಷ್ಟೆ ಎಂದೆ.

ಅವರಿಗೆ ನನ್ನ ಬಗ್ಗೆ ಇದ್ದ ಸ್ವಾಮಿಯ ಸಂಶಯ ದೂರವಾಯಿತು. ಮುಂದೆ ಗಣರಾಜ್ಯೋತ್ಸವದಂದು ಅದೇ ಪಂಚಾಯಿತಿಯ ಮುಂದೆ, ಅದೇ ನಿರೂಪಕರು ‘ನಮ್ಮ ಶಾಲೆಯ ಶಿಕ್ಷಕರಾದ ರುದ್ರಸ್ವಾಮಿ ಸರ್, ಈ ಕಾರ್ಯಕ್ರಮ ಕುರಿತು ನಾಲ್ಕು ಮಾತನಾಡಬೇಕು’ ಎಂದಾಗ ನನಗೆ ಆಶ್ಚರ್ಯವಾಯಿತು. ಇನ್ನೊಂದೆಡೆ ಸಂತಸವೂ ಆಯಿತು.

ಆರು ತಿಂಗಳ ಕಾಲ ಅನಾಮತ್ತಾಗಿ ಸ್ವಾಮಿಗಳ ಪಟ್ಟ ಅಲಂಕರಿಸಿದ್ದ ನಾನು, ಸಾವಜಿ ಖಾನಾವಳಿ ಹಗರಣದಿಂದಾಗಿ ನನ್ನ ಸ್ವಾಮೀಜಿ ಪಟ್ಟದಿಂದ ಕೆಳಗಿಳಿಯಬೇಕಾಯಿತು.

ಈಗಲೂ ಈ ಘಟನೆ ನೆನಪಿಸಿಕೊಂಡು ಒಬ್ಬನೇ ನಗುತ್ತಿರುತ್ತೇನೆ. ಆಗ ನನ್ನವಳು ‘ಅದ್ಯಾಕೆ ಹುಚ್ಚ ನಕ್ಕಾಗೆ ನಗ್ತೀಯಾ. ನಮಗೂ ಸ್ವಲ್ಪ ಹೇಳಿ’ ಎನ್ನುತ್ತಾಳೆ.

‘ಎಲ್ಲ ರುದ್ರಸ್ವಾಮಿಗಳ ಪ್ರಭಾವ ಕಣೆ’ ಎಂದು ಮೌನಿಯಾಗುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.