ADVERTISEMENT

‘ದಿನದ ಕಾರ್ಯಕ್ರಮ...’

ಪ್ರಕಾಶ ಶೆಟ್ಟಿ
Published 26 ಅಕ್ಟೋಬರ್ 2018, 20:10 IST
Last Updated 26 ಅಕ್ಟೋಬರ್ 2018, 20:10 IST
   

ನಿಜ, ನಮ್ಮ ನಗರದ ಸ್ಥಿತಿ ಅಧೋಗತಿಗೆ ತಲುಪಿದೆ. ಅದೇ ಮಾಮೂಲಿ... ಕಸ, ಗುಂಡಿಗಳ ಸಮಸ್ಯೆ ಅಂದುಕೊಂಡಿರಾ? ಖಂಡಿತ ಅಲ್ಲ. ಹಿಂದೆ ಈ ನಗರದಲ್ಲಿ ಗೋಪ್ಯವಾಗಿ ಖತರ್‌ನಾಕ್ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಹಾಗಲ್ಲ, ಮುಚ್ಚುಮರೆಯೇ ಇಲ್ಲ. ಪೊಲೀಸರು ಕಂಗಾಲಾಗಿದ್ದಾರೆ. ದೈನಿಕವೊಂದರಲ್ಲಿ ಪ್ರಕಟವಾದ ‘ದಿನದ ಕಾರ್ಯಕ್ರಮ’ ಪಟ್ಟಿಯನ್ನು ನೋಡಿದರೆ ನೀವು ಅದನ್ನು ಒಪ್ಪಿಯೇ ಒಪ್ಪುತ್ತೀರಿ.

ಗಾಯನ ಗೋಷ್ಠಿ ಮತ್ತು ಇನ್ನಿತರ ದಾಂದಲೆ ಕಾರ್ಯಕ್ರಮಗಳು: ಸ್ಥಳ– 14ನೇ ಕ್ರಾಸ್‌ನಲ್ಲಿರುವ ಫುಟ್‌ಪಾತ್, ಬಾಪು ಬಡಾವಣೆ. ಸಮಯ- ರಾತ್ರಿ 12 ಗಂಟೆಯಿಂದ. ಮುಖ್ಯ ಅತಿಥಿ– ಖ್ಯಾತ ಡ್ರಗ್ಸ್ ಪೆಡ್ಲರ್ ತಾಂಜೇನಿಯದ ಚರಸ್ ಡಿಕ್ರೂಸ್.

ಸಿನಿಮಾ ಬಿಡುಗಡೆ ಪ್ರಯುಕ್ತ ರಕ್ತಾಭಿಷೇಕ: ರಾಜ್ಯದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ ‘ಪ್ಯೂರ್ ವೆಜ್’ ಎಂಬ ಸಿನಿಮಾದ ಯಶಸ್ಸು ಕೋರಲು ನಾಯಕನ ಕಟೌಟ್‌ಗೆ ರಕ್ತಾಭಿಷೇಕ. ಆಯೋಜನೆ– ತಲವಾರ್ ಬಳಗ. ಸಮಯ– ಬೆಳಿಗ್ಗೆ 9ಕ್ಕೆ.

ADVERTISEMENT

ವಿಚಾರ ಸಂಕಿರಣ: ವಿಷಯ- ಭ್ರಷ್ಟಾಚಾರ ನಮ್ಮ ಹಕ್ಕು. ಸ್ಥಳ– ಮಹಾನಗರ ಪಾಲಿಕೆ ಸಭಾಂಗಣ. ಸಮಯ– ಬೆಳಿಗ್ಗೆ 10ಕ್ಕೆ (ಆರಂಭ ಮಧ್ಯಾಹ್ನ 12ಕ್ಕೆ). ಭಾಗವಹಿಸುವವರು– ತಿಮಿಂಗಿಲಯ್ಯ, ಕೇ.ಡಿ. ಕಂತ್ರಿ, ಬಕಾಸುರ್ ಮತ್ತು ಕಾಂಚನ್. ವಿಶೇಷ ಪ್ರಾತ್ಯಕ್ಷಿಕೆ- ಭ್ರಷ್ಟ ನಿಗ್ರಹ ನಾಟಕ ಮಂಡಳಿ ಅವರಿಂದ ಆಗರ್ಭ ಶ್ರೀಮಂತರ ಮನೆಗಳಿಗೆ ದಾಳಿ ನಡೆದ ಮೇಲೆ ಪಾರಾಗುವ ವಿಧಾನ.

ರಂಗ ಪ್ರವೇಶ: ‘ಸರಗಳ್ಳ ಮಾಸ್ಟರ್’ ಎಂದೇ ಖ್ಯಾತರಾಗಿದ್ದ ಪಾಪಣ್ಣನ ಪುತ್ರ ಚೈನ್ ಕುಮಾರ್, ಸರಗಳ್ಳತನಕ್ಕೆ ‘ರಂಗ ಪ್ರವೇಶ’ ಮಾಡಲಿದ್ದಾರೆ. ಸ್ಥಳ– ನೊರೆಕೆರೆ ನಗರದ ಸುತ್ತಮುತ್ತ. ಸಮಯ– ಸಂಜೆ 6.47ಕ್ಕೆ.

ಪ್ರವಚನ: ಧಡಿಯಾ ಅಲಿಯಾಸ್ ಕಿಟ್ಟ ಅವರಿಂದ. ‘ರಾಜಕೀಯದಲ್ಲಿ ಗೂಂಡಾ ತತ್ವದ ಬಳಕೆ’ ಬಗ್ಗೆ ವಿಶೇಷ ಪ್ರವಚನ. ಸ್ಥಳ– ಗೋಪ್ಯ. ಆಯೋಜನೆ- ದುರ್ನಾತ ಪಕ್ಷ. ಸಮಯ– ಸಂಜೆ 7ಕ್ಕೆ.

ವಿಚಿತ್ರ ಕೊಲೆ ಪ್ರದರ್ಶನಗಳು: ವಿಷಯ- ಸಿಗರೇಟ್ ಕೊಡದಿದ್ದಕ್ಕೆ ಖಲ್ಲಾಸ್‌. ಸ್ಥಳ- ಬ್ರಾಂದಿನಗರ, ವಿಚಿತ್ರ ಬಾರ್ ಎದುರು. ಸಮಯ–ರಾತ್ರಿ ಸುಮಾರು 12.30ಕ್ಕೆ.

ವಿಷಯ- ಬೈದಿದ್ದಕ್ಕೆ ಅಪ್ಪನ್ನನ್ನೇ ಕೊಂದ ಮಗ. ಸ್ಥಳ- ಪವಿತ್ರನಗರ. ಸಮಯ- ರಾತ್ರಿ 11ಕ್ಕೆ.

ವಿಷಯ- ಕುಡಿಯಲು ಬಿಡದಿದ್ದಕ್ಕೆ ಗಂಡನಿಗೆ 47 ಬಾರಿ ಚೂರಿಯಿಂದ ಇರಿದ ಹೆಂಡತಿ. ಸ್ಥಳ- ನಯಾಪೈಸಾ ಕಾಲೊನಿ. ಸಮಯ- ಬೆಳಿಗ್ಗೆ 8.30ಕ್ಕೆ.

ವಿಷಯ- ಏನಿಲ್ಲ. ಕೊಲೆ ಮಾಡದೆ ಬಹಳ ಸಮಯವಾಯಿತು ಎಂಬ ಒಂದೇ ಕಾರಣಕ್ಕಾಗಿ ಈ ಕೃತ್ಯ (ಹತ್ತು ವರ್ಷ ಜೈಲಲ್ಲಿ ಇದ್ದು ಹೊರಬಂದ ದಿನ). ಸ್ಥಳ– ಹುಚ್ಚರಾಯನಪುರ. ಸಮಯ- ಬೆಳಿಗ್ಗೆ-ರಾಹುಕಾಲ 7ರಿಂದ 8.

ಪುಸ್ತಕ ಬಿಡುಗಡೆ: ‘ನಾನೂ ಶ್ರೀಮಂತನಾದೆ!’ ಎಂಬ ಅನುಭವ ಕಥನ. ಲೇಖಕರು ಸಿಕ್ಕ ಸಿಕ್ಕ ಮಹಿಳೆಯರ ತಲೆಕೂದಲನ್ನು ಕತ್ತರಿಸಿ, ದೇಶ- ವಿದೇಶಗಳಿಗೆ ಮಾರುತ್ತಿರುವ ಕೇಶರಾಜ. ಬಿಡುಗಡೆ: ಸಣ್ಣ ಕೈಗಾರಿಕೆ ಸಚಿವ ಪೆದ್ದು ಕೂಸಪ್ಪ. ಸ್ಥಳ- ನಿಧಾನಸಭಾ ಬಾಂಕ್ವೆಟ್ ಹಾಲ್. ಸಮಯ- ಬೆಳಿಗ್ಗೆ 10ಕ್ಕೆ.

‘ರೌಡಿ ಬಿರಿಯಾನಿ ಬಿಲ್ಲಾ-60’: ಅಭಿನಂದನಾ ಸಮಾರಂಭ. ಮುಖ್ಯ ಅತಿಥಿ- ಶಾಸಕ ಕೊಲೆಪಾಡ್ ಅಲಿಯಾಸ್ ಭಯಂಕರರಾಜ್. ಮನರಂಜನೆ– ನಟ ಗಾಂಚಾಳಿ ಮತ್ತು ಅವರ ಗ್ಯಾಂಗ್‌ನವರಿಂದ. ಸ್ಥಳ– ಪ್ಯಾಲೇಸ್ ಗ್ರೌಂಡ್. ಸಮಯ- ರಾತ್ರಿ 12ಕ್ಕೆ.

ಪ್ರತಿಭಾ ಪುರಸ್ಕಾರ: ಜನರ ಗಮನ ಬೇರೆಡೆ ಸೆಳೆದು ಹಣ ದೋಚುವುದರಲ್ಲಿ ಸಾಧನೆಗೈದ ಸದ್ಗುಣ ಸಾಗರ್ ಅವರಿಗೆ ಸನ್ಮಾನ. ಅಧ್ಯಕ್ಷತೆ– ಮಹಾನಗರಪಾಲಿಕೆ ಅಧಿಕಾರಿ ಗುಳುಂನಾತ. ಆಯೋಜನೆ- ಅಖಿಲ ಕರ್ನಾಟಕ ಜಾಣ ಕಳ್ಳರ ಕೂಟ(ರಿ). ಸ್ಥಳ- ಮೂರ್ಖರ ಸಂಘ ಸಭಾಂಗಣ, ಮೂರ್ಖನಗರ. ಸಮಯ- ಸಂಜೆ 6ಕ್ಕೆ.

ಸ್ಥಳದಲ್ಲೇ ಸ್ಕೆಚ್ ಹಾಕುವ ಸ್ಪರ್ಧೆ: ‘ಗೂಂಡಾಗಿರಿ’ ಸಂಸ್ಥೆಯವರು ಏರಿಯಾ ಮಟ್ಟದ ಸ್ಕೆಚ್ ಹಾಕುವ ಸ್ಪರ್ಧೆ ನಡೆಸಲಿದ್ದಾರೆ. ವಿಷಯ ಸ್ಥಳದಲ್ಲೇ ಕೊಡಲಾಗುವುದು. ಸ್ಥಳ- ಸುರಂಗ ಪಾದಚಾರಿ ಮಾರ್ಗ, ಕ್ರೂರ ಮಾರ್ಕೆಟ್. ಸಮಯ- ಬೆಳಿಗ್ಗೆ 10ಕ್ಕೆ.

ತರಬೇತಿ ಶಿಬಿರ: ಕಂಪ್ಯೂಟರ್ ಕುತಂತ್ರ ಜಾಣರಾಗಲು ಬಯಸುವವರಿಗೆ ಒಂದು ದಿನದ ಶಿಬಿರ. ಹ್ಯಾಕಿಂಗ್, ಆನ್‌ಲೈನ್ ಹಣ ದರೋಡೆ ಮಾತ್ರವಲ್ಲದೆ ಕಚೇರಿಗಳಿಂದ ಕಂಪ್ಯೂಟರ್ ಕಳ್ಳತನ ಮಾಡುವ ವಿಧಾನಗಳನ್ನೂ ತಿಳಿಸಲಾಗುವುದು. ಸ್ಥಳ- ಹೊಟೇಲ್ ಸೌಭಾಗ್ಯ (ಶಾಸ್ತ್ರಿಪುರಂ ಪೊಲೀಸ್ ಸ್ಟೇಷನ್ ಎದುರು) ಬೆಳಿಗ್ಗೆ 9ರಿಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.