ADVERTISEMENT

ನೋಬಾಲ್ ಪ್ರಶಸ್ತಿ ವಿಜೇತ

ಪ್ರಕಾಶ ಶೆಟ್ಟಿ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
   

ಏನಾಶ್ಚರ್ಯ! ನಮ್ಮ ಕರುನಾಡಿನ ಪ್ರಚಂಡ ಮಜಾಕಾರಣಿ ಹುಷಾರಪ್ಪ ಅವರಿಗೆ ಈ ವರ್ಷದ ಮಜಾಕೀಯ ಶಾಸ್ತ್ರದ ವಿಭಾಗದಲ್ಲಿ ನೋಬಾಲ್ ಪ್ರಶಸ್ತಿ ಲಭಿಸಿದೆ. ಮೆದುಳು ಉಪಯೋಗಿಸದ ಮಜಾಕಾರಣಿಗಳ ಬಗ್ಗೆ ಅವರು ನಡೆಸಿದ ಭಾರಿ ಸಂಶೋಧನೆಗೆ ಇದೀಗ ಜಾಗತಿಕ ಮನ್ನಣೆ ಸಿಕ್ಕಿದೆ.

ತೋಳಗುಡ್ಡ ಹುಷಾರಪ್ಪ ಅವರಿಗೆ ಸಂಶೋಧನೆಯೇನೂ ಹೊಸತಲ್ಲ. ಅವರು ಈ ಹಿಂದೆ ಒಂದು ಲಕ್ಷ ನೋಟುಗಳನ್ನು ಐದೇ ಸೆಕೆಂಡಿನಲ್ಲಿ ಎಣಿಸುವ ಅದ್ಭುತ ಯಂತ್ರವನ್ನು ಕಂಡುಹುಡುಕಿದ್ದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. ಆನಂತರ ಅವರು ಕಂಡು
ಹುಡುಕಿದ್ದು ಮಹಾಶಕ್ತಿಯುಳ್ಳ ಒಂದು ತಂತ್ರ! ಅದು ‘ಶಾಂತಿವೀರ ಬ್ರಿಗೇಡ್’. ಈ ಎರಡು ಸಂಶೋಧನೆಗಳು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟರೂ, ವಿರೋಧಿ ಪಕ್ಷದ ಮಾಜಿ ಸಿಎಮ್ಮಯ್ಯರಿಂದ ‘ನಾಲಾಯಕ್ಕು’ ಎಂದು ಆಗಾಗ ಕರೆಸಿಕೊಳ್ಳುವುದು ತಪ್ಪಲಿಲ್ಲ. ಬಹುಶಃ ಅದೇ ಅವಮಾನದಿಂದ ‘ಬೇಜಾರಪ್ಪ’ರಾಗಿದ್ದ ಹುಷಾರಪ್ಪರಿಗೆ ಮೆದುಳು ಉಪಯೋಗಿಸದ ಮಜಾಕಾರಣಿಗಳ ಬಗ್ಗೆ ಸಂಶೋಧನೆ ಮಾಡಲು ಉತ್ತೇಜನ ಸಿಕ್ಕಿತೋ ಏನೋ!

ನಿಜ, ಹುಷಾರಪ್ಪರು ಈಗ ತುಂಬಾನೇ ಹುಷಾರಾಗಿದ್ದಾರೆ. ನಾಲಾಯಕ್ಕು ಪಟ್ಟದಿಂದ ದೂರವಾಗಿದ್ದೇನೆ ಎಂದು ಅವರಿ
ಗಂತೂ ತೋಚತೊಡಗಿದೆಯಂತೆ. ಅವರನ್ನು ಈ ವಿಚಾರದಲ್ಲಿ ಮಾತನಾಡಿಸಿದಾಗ ಅವರು ಹೇಳಿದ್ದು ಇಷ್ಟು: ‘ಇದಕ್ಕೆಲ್ಲಾ ಕಾರಣ ನನ್ನ ಲಂಗು ಲಗಾಮಿಲ್ಲದ ನಾಲಗೆಯೇ ಹೊರತು ಮೆದುಳಲ್ಲ. ನನ್ನಂತಹ ಮಜಾಕಾರಣಿಗಳಿಗೆ ಮೆದುಳು ಮುಖ್ಯವೇ ಅಲ್ಲ. ನಾಲಗೆಯೇ ನಮ್ಮ ಅಸ್ತ್ರ. ನಾನಂತೂ ನನ್ನ ಮೆದುಳನ್ನು ಎಲ್ಲಿ ಹೋದರೂ ಮನೆಯಲ್ಲಿಟ್ಟೇ ಹೋಗೋದು...’ ಅವರು ಹಾಗೆ ಹೇಳಿದ್ದೇನೂ ಸುಳ್ಳಲ್ಲ. ಯಾಕೆಂದರೆ ಮೊನ್ನೆ ನೆರೆ ಬಂದು ಜನ ಎದೆ ಹೊಡೆದುಕೊಳ್ಳುತ್ತಾ ಹೆಚ್ಚಿನ ಧನಸಹಾಯ ಕೋರಿದಾಗ, ಇವರು ‘ಹತ್ತುಸಾವಿರ ಕೊಟ್ಟಿದ್ದೇ ಜಾಸ್ತಿ’ ಎಂದು ಕಣ್ಮುಚ್ಚಿಕೊಂಡು ಹೇಳಲಿಲ್ಲವೇ? ಅದರ ಬದಲು ‘ಕೊಡ್ಸೋಣ... ನಾವಿರೋದು ನಿಮಗಾಗಿ...’ ಎಂದು ಹೇಳಿದ್ದಿದ್ದರೆ ಅದೊಂದು ಸುದ್ದಿಯಾಗುತ್ತಿತ್ತೇ? ಖಂಡಿತ ಇಲ್ಲ.

ADVERTISEMENT

ಹದಿನೇಳು ಶಾಸಕರು ಆಪರೇಷನ್ನಿನಿಂದಲೋ ಸಿಸೇರಿಯನ್‌ನಿಂದಲೋ ಹುಟ್ಟಿದವರಲ್ಲ ಎಂದು ಪಕ್ಷದ ಇತರ ಮುಖಂಡರು ಸಾರಿ ಹೇಳುತ್ತಿರುವಾಗ, ಹುಷಾರಪ್ಪ ಮಾತ್ರ ‘ಅನರ್ಹ ಶಾಸಕರೆಲ್ಲಾ ನಮ್ಮ ಮನೆಅಳಿಯಂದಿರು. ಬೇಜಾನ್ ವರದಕ್ಷಿಣೆ ಕೊಟ್ಟಿದ್ದೇವೆ’ ಎಂದು ಒಬ್ಬ ಮುತ್ಸದ್ದಿ ಮಜಾಕಾರಣಿಯಂತೆ ಹೇಳಿದ್ದು ಅವರ ಸಂಶೋಧನೆಯ ಪರಿಣಾಮವೇ ಸರಿ!

ಅವರು ಈಚೆಗೆ ಬ್ಯಾಂಕಾಕ್‍ನಲ್ಲಿ ನಡೆದ ಸರ್ವರಾಷ್ಟ್ರ ಬೊಗಳೆ ಸಮಾವೇಶದಲ್ಲಿ ಅದ್ಭುತವಾಗಿ ಮಾತನಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು. ‘ನಮ್ಮ ಪಕ್ಷಕ್ಕೆ ಮತ ಹಾಕಿದವರು ಮಾತ್ರ ರಾಷ್ಟ್ರಭಕ್ತರು...! ಪಾಕಿಸ್ತಾನ ಆಕ್ರಮಿತ ಪ್ರದೇಶ ಅವರಪ್ಪನದ್ದಲ್ಲ! ಇನ್ನು ಕೆಲವು ದಿವಸಗಳಲ್ಲೇ ನಾವು ಪಿ.ಓ.ಕೆಯನ್ನು ಡಿನೋಟಿಫೈ ಮಾಡುವುದು ಗ್ಯಾರಂಟಿ...!’ ಎಂದೆಲ್ಲಾ ಹುಷಾರಪ್ಪ ಬಡಬಡಿಸಿದಾಗ ಅಲ್ಲಿ ಸೇರಿದ ವಿಚಾರವಂತರಿಗೆಲ್ಲಾ ಒಂದೇ ಯೋಚನೆ. ಮೆದುಳೇ ಇಲ್ಲದ ವ್ಯಕ್ತಿಯೊಬ್ಬರಿಗೆ ಹೀಗೆ ಮೇಧಾವಿಯಂತೆ ಮಾತನಾಡುವುದು ಹೇಗೆ ಸಾಧ್ಯವಾಯಿತು ಎಂದು ಅವರೆಲ್ಲಾ ತಬ್ಬಿಬ್ಬು ಆಗಿಬಿಟ್ಟಿದ್ದರಂತೆ.

ಮೆದುಳುರಹಿತ ಮಜಾಕಾರಣಿ ಹೇಗೆ ನಾಲಗೆಯ ಶಕ್ತಿ ತೋರಿಸಬಲ್ಲ ಎಂಬುದಕ್ಕೆ ಹುಷಾರಪ್ಪರು ಸ್ವತಃ ತಮ್ಮ ಮೇಲೆಯೇ ಪ್ರಯೋಗ ನಡೆಸಿ ನಾನಾ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ.

ಉದಾಹರಣೆಗೆ, ಎಲ್ಲೋ ಭಾಷಣದಲ್ಲಿ ‘ನಾನು ಯಾವ ಜಾತಿಗೂ ಸೇರದವನಲ್ಲ!’ ಎಂದು ಖಡಾಖಡಿಯಾಗಿ ಅರಚಿದಾಗ ಜನರಿಂದ ಮೇಲಿಂದ ಮೇಲೆ ಸಿಳ್ಳೆಗಳು. ಕರುನಾಡಿನಲ್ಲಿ ತಾವೊಬ್ಬ ಜಾತ್ಯತೀತ ಮುಖಂಡ ಎಂದು ಹೇಳಿಕೊಳ್ಳುವ ಧೈರ್ಯ ಬಂದದ್ದು ಹೇಗೆ ಎಂದು ಗೊತ್ತಾಯಿತಲ್ಲವೇ?

ಹುಷಾರಪ್ಪರು ತಮ್ಮ ಸಂಶೋಧನೆಯ ಬಹುಪಾಲು ಭಾಗವನ್ನು ತಮ್ಮ ಬದ್ಧವೈರಿ ಮಾಜಿ ಸಿಎಮ್ಮಯ್ಯರ ಮೇಲೆ ಪ್ರಯೋಗಿಸಿರುವುದು ಕಾಣುತ್ತದೆ. ಗೋಸುಂಬೆ... ಹಿಜಡಾ... ಬೇ... ಸೂ... ಎಂದೆಲ್ಲಾ ತಮ್ಮ ವೈರಿಗಳನ್ನು ಕರೆಯಬೇಕಾದರೆ, ತಮಗೆ ಮೆದುಳು ಇರುವುದನ್ನೇ ಮರೆತುಬಿಡಬೇಕೆನ್ನುವುದು ಈ ನೋಬಾಲ್ ಪ್ರಶಸ್ತಿ ವಿಜೇತರ ವಾದ. ಅವರ ಪ್ರಕಾರ, ಅಂತಹವರು ಯಾವುದೇ ವೈದ್ಯಕೀಯ ಶಿಕ್ಷಣ ಕಲಿಯದಿದ್ದರೂ, ಮಾಜಿ ಸಿಎಮ್ಮಯ್ಯರಿಗೆ ‘ಅಧಿಕಾರವಿಲ್ಲದೆ ಹುಚ್ಚರಾಗಿದ್ದಾರೆ’ ಎಂದು ಮೆಡಿಕಲ್ ರಿಪೋರ್ಟ್ ಕೊಡುವ ಸಾಮರ್ಥ್ಯ ಹೊಂದಿರುತ್ತಾರೆ.

ತಮ್ಮ ‘ನಾಲಾಯಕ್ಕು’ ವೈರಿಗೆ ಪ್ರಶಸ್ತಿ ಬಂದದ್ದನ್ನು ಕೇಳಿ ಮಾಜಿ ಸಿಎಮ್ಮಯ್ಯರಿಗೂ ಬಹಳ ಸಂತೋಷವಾಗಿದೆಯಂತೆ. ಅವರು ಟ್ವೀಟ್‍ನಲ್ಲಿ ‘ಮೆದುಳನ್ನೇ ಬಳಸದೆ ಹೀಗೆ ಪ್ರತಿಷ್ಠಿತ ನೋಬಾಲ್ ಪ್ರಶಸ್ತಿ ಪಡೆದವರು ಇತಿಹಾಸದಲ್ಲೇ ಇರಲಿಕ್ಕಿಲ್ಲ. ಅವನ ಹೇಳಿಕೆ, ಭಾಷೆ, ಸಂಸ್ಕೃತಿ ಇಷ್ಟು ಕೆಳಮಟ್ಟದಲ್ಲಿರಲು ಕೊನೆಗೂ ಮೂಲ ಕಾರಣ ಗೊತ್ತಾಯಿತಲ್ಲ! ಏನೇ ಹೇಳಿ, ಈ ಆಸಾಮಿ ಅಸಾಧ್ಯವಾದುದನ್ನೂ ಮಾಡಿ ತೋರಿಸಿದ್ದಾನೆ, ಅಭಿನಂದನೆಗಳು’ ಎಂದು ಬರೆದಿದ್ದಾರೆ.

‘ಹುಷಾರಪ್ಪರಿಗೆ ನೋಬಾಲ್ ಪ್ರಶಸ್ತಿ ಕೊಟ್ಟವರಿಗಂತೂ ಖಂಡಿತ ಮೆದುಳಿಲ್ಲ. ವಾಸ್ತವದಲ್ಲಿ ಮಜಾಕಾರಣಿಗಳಲ್ಲಿ ನಿಂಬೆಹಣ್ಣಿನ ಆಕಾರದ ಮೆದುಳು ಇರುತ್ತದೆ. ಅದನ್ನು ಅವರು ಪೋಲಿ-ಟ್ರಿಕ್ಸ್ ಮತ್ತು ನುಂಗುವುದಕ್ಕೆ ಬಳಸಿಕೊಳ್ಳುತ್ತಾರೆ’ ಎಂದು ಟ್ವೀಟಿಗರೊಬ್ಬರು ಬರೆದರೆ, ಇನ್ನೊಬ್ಬರು ‘ಹುಷಾರಪ್ಪರು ಒಂದು ವೇಳೆ ಮೆದುಳು ಉಪಯೋಗಿಸಿಕೊಂಡರೂ ಅಂತಹ ವಿಶೇಷ ವ್ಯತ್ಯಾಸವಾಗಲಿಕ್ಕಿಲ್ಲ’ ಎಂದು ಕಾಲು ಎಳೆದಿದ್ದಾರೆ.

ಅಂದಹಾಗೆ ಈ ಶತಮಾನದ ಅತ್ಯದ್ಭುತ ಎಂದು ಪರಿಗಣಿಸಿ, ಹುಷಾರಪ್ಪರ ಉಪಯೋಗಿಸದ ಮೆದುಳನ್ನು ಮ್ಯೂಸಿಯಂನಲ್ಲಿಡುವ ಯೋಚನೆ ಸರ್ಕಾರಕ್ಕಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.