ADVERTISEMENT

ನಾವೇ ರಾಗವಾಗಿ ರಾಗವೇ ನಾವಾಗಿ... ವಿದುಷಿ ಆರತಿ ಅಂಕಲಿಕರ್‌ ಕುರಿತ ಬರಹ

ಎಸ್.ರಶ್ಮಿ
Published 25 ಜೂನ್ 2022, 19:30 IST
Last Updated 25 ಜೂನ್ 2022, 19:30 IST
ವಿದುಷಿ ಆರತಿ ಅಂಕಲಿಕರ್‌
ವಿದುಷಿ ಆರತಿ ಅಂಕಲಿಕರ್‌   

ಕಡುಗುಲಾಬಿ ಸೀರೆಯುಟ್ಟು, ಉದ್ದನೆಯ ತಿಲಕದ ಮೇಲೊಂದು ಬೊಟ್ಟಿಟ್ಟು, ಇನಿದಿನಿಯಲ್ಲಿ ಮಾತನಾಡುತ್ತಿದ್ದ ವಿದುಷಿ ಆರತಿ ಅಂಕಲಿಕರ್‌ ತಮ್ಮ ಸಂಗೀತಯಾನದ ಕುರಿತು ಪದಗಳಾಗುತ್ತಿದ್ದರು. ಅಲ್ಲಲ್ಲಿ ಸಂಗೀತದ ಹದವೂ ಕಾಣುತ್ತಿತ್ತು.

***

ಸಂಗೀತ, ಇದು ನಿಮ್ಮನ್ನು ನಿಮ್ಮೊಂದಿಗೆ ಒಗ್ಗೂಡಿಸುವ ಮಾರ್ಗ. ನಿಮ್ಮನ್ನು ಬ್ರಹ್ಮಾಂಡದೊಂದಿಗೆ ಒಂದಾಗಿಸುವ ಮಾಧ್ಯಮ. ಎಲ್ಲದರಲ್ಲಿಯೂ ಸಂಗೀತವಿದೆ. ನಾದವಿದೆ, ರಾಗವಿದೆ. ಹಾಡುವಾಗ ಅವು ನಮ್ಮ ಮೈದುಂಬಿ ಬಂದಾಗ, ನಾವೇ ರಾಗಗಳಾಗುತ್ತೇವೆ...

ADVERTISEMENT

ಕಡುಗುಲಾಬಿ ಸೀರೆಯುಟ್ಟು, ಉದ್ದನೆಯ ತಿಲಕದ ಮೇಲೊಂದು ಬೊಟ್ಟಿಟ್ಟು, ಇನಿದನಿಯಲ್ಲಿ ಮಾತನಾಡುತ್ತಿದ್ದ ವಿದುಷಿ ಆರತಿ ಅಂಕಲಿಕರ್‌ ತಮ್ಮ ಸಂಗೀತಯಾನದ ಕುರಿತು ಪದಗಳಾಗುತ್ತಿದ್ದರು. ಅಲ್ಲಲ್ಲಿ ಸಂಗೀತದ ಹದವೂ ಕಾಣುತ್ತಿತ್ತು.

‘ನಮ್ಮನೆಯಲ್ಲಿ ಸಂಗೀತದ ವಾತಾವರಣ ಇತ್ತು. ಅಪ್ಪ ಆ ಕಾಲದಲ್ಲಿಯೇ ಬ್ಯಾರಿಸ್ಟರ್‌ ಆಗಿದ್ದರು. ಅಮ್ಮ ಗೃಹಿಣಿ. ಅಮ್ಮನಿಗೆ ಧಾರವಾಡ ತವರು ಮನೆ. ಹಂಗಾಗಿ ಸಂಗೀತವೆಂಬುದು, ಮಣ್ಣಿನ ಗುಣ ಇದ್ದಂತೆ ನಮಗೆ ನರನಾಡಿಯಲ್ಲಿ ಹರಿಯುತ್ತಿತ್ತು. ಅಭ್ಯಾಸ ಮಾಡಬೇಕು, ಕಲಿಯಬೇಕು ಅನ್ನುವುದಕ್ಕಿಂತಲೂ ಅದನ್ನು ಗ್ರಹಿಸಬೇಕು ಎನ್ನುವತ್ತಲೇ ಪೋಷಕರು ಹೆಚ್ಚು ಗಮನ ಕೊಟ್ಟರು. ಮೂಲ ವಿಜಯಪುರ ಜಿಲ್ಲೆಯವರಾದರೂ ಅಲ್ಲಿ ಇರಲಿಲ್ಲ. ಇಲ್ಲಿ ಬೆಳೆಯಲಿಲ್ಲ. ಆದರೆ ಎಲ್ಲ ಬೇಸಿಗೆಯ ರಜೆಗಳೂ ಧಾರವಾಡದ ಅಜ್ಜನ ಮನೆಯಲ್ಲಿ ಕಳೆದೆ.’ ಎಂದರು ಆರತಿ.

ಧಾರವಾಡದತ್ತ ಮನ, ಗಮನಗಳೆರಡೂ ಬಂದಾಗ ಕಣ್ಹೊಳೆದವು. ತುಟಿನಾವಿಯಾಗಿ ನಗೆ ಅರಳಿತು. ‘ಅದೊಂದು ಸುಂದರವಾದ ಕಾಲ. ಟಿ.ವಿ ಇರಲಿಲ್ಲ. ಧಾರವಾಡದ ತುಂಬೆಲ್ಲ ಮಾವಿನ ತೋಟಗಳು. ಬೇಸಿಗೆಯ ರಜೆ ಸಮಯ ಆಗಿರುವುದರಿಂದ ಆ ನವಿರಾದ ವಾಸನೆ ಎಲ್ಲೆಡೆ ಹರಡಿರುತ್ತಿತ್ತು. ಬಣ್ಣಬಣ್ಣದ ಹೂಗಳು, ಕೆಂಬಣ್ಣದ ಮಣ್ಣು, ಕಡುಬಿಸಿಲೆಂದು ಪರಿತಪಿಸುವಾಗಲೇ ಮಳೆ ಬಂದು ಇಳೆ ತಣ್ಣಗಾಗುವ ಪರಿ... ಎಷ್ಟು ಚಂದದ ದಿನಗಳವು...’ ಎಂದು ಸ್ಮರಿಸಿದರು.

‘ಧಾರವಾಡ ಈಗಲೂ ಹಾಗೇ ಇದೆ. ಒಂದಷ್ಟು ಕಟ್ಟಡ ಸಂಸ್ಕೃತಿ ಬದಲಾಗಿದ್ದು ಬಿಟ್ಟರೆ, ಇನ್ನೆಲ್ಲವೂ ಹಾಗೆ ಇದೆ. ಹಾಗೆಯೇ ಉಳಿಸಿಕೊಳ್ಳಬೇಕು, ಇಲ್ಲಿಯ ಜನ...’ ಎನ್ನುತ್ತಾ ಮಾತನ್ನು ಸಂಗೀತದ ಕಡೆಗೆ ಹೊರಳಿಸಿದರು.

‘ಸಂಗೀತ ನಮ್ಮನ್ನು, ನಮ್ಮಲ್ಲಿಯೇ ಕಳೆದುಹೋಗುವಂತೆ ಮಾಡುತ್ತದೆ. ಕಿಶೋರಿ ತಾಯಿ ಬಳಿ ಸಂಗೀತ ಕಲಿಯುವಾಗ ಒಂದು ತಿಂಗಳು, ಬೆಳಗಿನ ನಾಲ್ಕು ಗಂಟೆ, ಸಂಜೆಗೂ ನಾಲ್ಕು ಗಂಟೆ ರಿಯಾಜ್‌ ಮಾಡಿಸುತ್ತಿದ್ದರು. ಒಂದಿಡೀ ತಿಂಗಳು ಯಮನ್‌ ಕಲಿಯಲು ತಿಳಿಸಿದ್ದರು. ಬರಬರುತ್ತ ಬರಬರುತ್ತ.. ಆ ರಾಗದಲ್ಲಿ ಲೀನವಾಗುವುದು ಕಲಿತೆ. ನಂತರ ರಾಗವೇ ನಾನಾಗುವುದು ಕಲಿತೆ. ಅದೊಂದು ಪ್ರಕ್ರಿಯೆ. ನಿಧಾನಕ್ಕೆ ಆಗುವಂಥದ್ದು...’ ಎಂದು ರಿಯಾಜ್‌ನ ಮಹತ್ವ ತಿಳಿಸಿಕೊಟ್ಟರು.

‘ಈಗ ಬಾಗೇಶ್ರಿ, ಯಮನ್‌, ಭೈರವಿ, ಮಧುರಂಜನಿ ಯಾವುದೇ ರಾಗವಿರಲಿ, ಆ ರಾಗವಿಲಾಸದಲ್ಲಿ ಮಾನಸೋಲ್ಲಾಸ ಹೆಚ್ಚಾಗುತ್ತದೆ. ಗಾಯಕಿಯ ಸುಖವೇ ಇದರಲ್ಲಿದೆ. ಕೇಳ್ವಿಕೆಯ ರಸಾಸ್ವಾದ ಕೇಳುಗರ ಕಂಗಳಲ್ಲಿ ಎದ್ದು ಕಾಣುತ್ತದೆ. ಒಬ್ಬ ಸಂಗೀತಗಾರ, ತಾನ್‌ಪುರಾದ ಜೊತೆಗೆ ಮೊದಲ ಹದಿನೈದು ನಿಮಿಷ ಸಂವಾದಿಯಾಗುವಂತೆ ಕಳೆದು ಹೋಗುವುದಾದರೆ.. ಅದಕ್ಕಿಂತ ಬೇರೆ ತಪವೇ ಬೇಡ. ಹಾಡು ಹಾಡದೇ ತಾನ್‌ಪುರಾದ ಶ್ರುತಿಯೊಂದಿಗೆ ಒಂದಾಗಬೇಕು. ಹಾಗೆ ಒಂದಾದಾಗ ಆ ನಾದದೊಳಗೆ ನಾವಿರಬೇಕು. ನಾವು ನಾದವಾಗುತ್ತ ಆಗುತ್ತ ಹಾಡುಗಾರಿಕೆಗೆ ಇಳಿಯಬೇಕು. ಈ ಸಂಯಮ ಬಂದಾಗಲೇ ಸಂಗೀತವೆನ್ನುವುದು ತಪವಾಗುತ್ತದೆ.’ ಎಂದು ಹೇಳಿದರು.

‘ಹಾಡು, ಹಾಡೆಂಬುದು ಭಾವನಾತ್ಮಕವಾದುದು. ರಿಯಾಜ್‌ ಮಾಡಿದರೆ ರಾಗಗಳ ಪರಿಚಯ ಆಗುತ್ತದೆ. ಸಾಹಿತ್ಯದ ಅಭ್ಯಾಸ ಮಾಡಿದರೆ ರಸಗ್ರಹಣ ಮಾಡಬಹುದು. ಭಾವದುಂಬುವುದು ಅಷ್ಟು ಸರಳವಲ್ಲ... ಒಂದೇ ಸಾಲಿನಲ್ಲಿ, ಶೃಂಗಾರ, ಮುನಿಸು, ಸೆಡವು, ಜಗಳ ಇವುಗಳ ಲಾಲಿತ್ಯ ಎಲ್ಲವೂ ಬರಬೇಕು... ಸಂಯ್ಯಾ... ಮೋರೆ... ಅಂದಾಗ ಅಲ್ಲಿ ಆರಾಧನೆ, ಅಕ್ಕರೆಯ ಅರಕೆ, ಸಣ್ಣದಾದ ಮುನಿಸು, ಕಾಣದ ರಮಿಸುವಿಕೆ ಎಲ್ಲವೂ ಇರಬೇಕು. ನಮ್ಮ ಆಲಾಪನೆ, ಧ್ವನಿ ಎಲ್ಲವೂ ಇಲ್ಲಿ ಆಟವಾಡುತ್ತಿರಬೇಕು. ಪರ್ವತದಿಂದ ನದಿ ಕಣಿವೆಗೆ ಇಳಿದಂತೆ... ಉಕ್ಕಿಳಿಯುವಂತೆ, ಓಡುವಂತೆ, ಜುಳುಜುಳು ಹರಿಯುವಂತೆ...’ ಹೀಗೆಂದು ಮಾತಿಗೆ ಅಲ್ಪವಿರಾಮವಿಟ್ಟು, ‘ಭಾಳಾಯ್ತಿದು.. ಸಂಗೀತದ ಮಾತು...’ಎಂದರು.

‘ಒಂದಂತೂ ಖರೆ, ನಮ್ಮಣ್ಣಗ ಡೌನ್‌ ಸಿಂಡ್ರೋಮ್‌ ಇತ್ತು. ಸ್ವಲೀನ ಮಗು ಅದು. ಅಪ್ಪ, ಅಮ್ಮ ಆಗ ಆ ಕಾಲದಲ್ಲಿಯೇ ಸಂಗೀತವನ್ನು ವೃತ್ತಿ ಮಾಡಿಕೊಳ್ಳುವಷ್ಟು ಕಲಿಸಿದರು. ಸ್ವಾತಂತ್ರ್ಯ ನೀಡಿದರು. ಹೆಣ್ಣುಮಗುವೆಂದು ಕಡೆಗಣಿಸಲಿಲ್ಲ. ಈ ಸ್ವತಂತ್ರ ಮನೋಭಾವ ನನ್ನನ್ನು ಸ್ವಾವಲಂಬಿಯಾಗಿಸಿತು. ಸ್ವಾವಲಂಬಿ ಅಂದ್ರೆ ಕೇವಲ ಆದಾಯದ ವಿಷಯವಲ್ಲ, ಭಾವನಾತ್ಮಕವಾಗಿಯೂ, ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ, ತೀರ್ಮಾನ ಕೈಗೊಳ್ಳುವ ಎಲ್ಲ ಕೌಶಲಗಳನ್ನೂ ಕಲಿಸಿಕೊಟ್ಟರು. ಮಕ್ಕಳು ಮಕ್ಕಳಾಗಿಯೇ ಬೆಳೆಯುವಾಗ ತಮ್ಮ ಪಥವನ್ನು ತಾವು ಆರಿಸಿಕೊಳ್ಳುತ್ತಾರೆ. ಪೋಷಕರಾದವರು ಆ ಮಾರ್ಗವನ್ನು ಸರಾಗವಾಗಿಸಬೇಕು. ದೃಢನಿಶ್ಚಯ, ಗುರಿ ನಿರ್ಧಾರ, ಪರಿಶ್ರಮ ಇವಿಷ್ಟಿದ್ದರೆ ಯಶಸ್ಸೆಂಬುದು ಬೆನ್ನಟ್ಟಿ ಬರುತ್ತದೆ.’ ಎಂದು ಹೇಳಿದರು.

‘ಇಂದಿನ ಸಾಮಾಜಿಕ ಜಾಲತಾಣಗಳು ನಮ್ಮನ್ನು ನಮ್ಮಿಂದ ದೂರ ಕಸಿಯುತ್ತಿವೆ. ನಾವು ಯಾರು, ಹೇಗೆ ಇದ್ದೇವೆ, ಏನು ಮಾಡುತ್ತೇವೆ ಇವೆಲ್ಲ ಪ್ರಶ್ನೆಗಳನ್ನು ನಮ್ಮೊಂದಿಗೆ ಸಂವಾದಿಸುವ ಸಮಯವನ್ನೇ ಇವು ನೀಡುತ್ತಿಲ್ಲ. ನಾವು ಹೇಗಿದ್ದೀವಿ ಅನ್ನುವುದಕ್ಕಿಂತಲೂ ಹೇಗೆ ಇತರರಿಗೆ ಚಂದ ಕಾಣ್ತೀವಿ ಅನ್ನುವತ್ತಲೇ ಹೆಚ್ಚು ಗಮನ ಹೋಗುತ್ತಿದೆ. ಒಂದು ಹಾಡು ಕಲಿತ ತಕ್ಷಣ ರೀಲ್‌ ಮಾಡಿ ಹರಿಬಿಡ್ತಾರೆ. ಆ ಲೈಕುಗಳು, ಕಮೆಂಟುಗಳು ಇವರ ಸಾಧನೆಯ ಸುತ್ತ ಒಂದು ಕೋಟೆ ನಿರ್ಮಿಸುತ್ತಿವೆ. ಸ್ವಮೋಹದಿಂದಾಚೆ ಬಂದು ನಾದಪ್ರಿಯರಾಗುತ್ತ, ನಾದದ ಮೂಲಕ ಭಕ್ತಿಪ್ರಿಯರಾದರೆ... ಬದುಕೆಂಬುದು ಆನಂದಮಯ...’ ಎಂದರು.

‘ಆರತಿ ತಾಯಿ...’ ಅನ್ನುತ್ತಲೇ ಹಲವಾರು ಅಭಿಮಾನಿಗಳು ಅವರಿಗೆ ಮುಗಿಬಿದ್ದರು. ಎಲ್ಲರ ಕ್ಷೇಮಕುಶಲ ವಿಚಾರಿಸಿಕೊಳ್ಳುತ್ತ, ನಗೆಚಟಾಕಿ ಹಾರಿಸುತ್ತ, ಸೆಲ್ಫಿಗೆ ಒಂದು ನಗು ಚೆಲ್ಲುತ್ತ... ಆರತಿ ಅಂಕಲಿಕರ್‌ ತಮ್ಮ ಮಾತಿಗೆ ಪೂರ್ಣವಿರಾಮವಿತ್ತರು.

ಅವರ ಹಾಡುಗಾರಿಕೆ ಮನದಲ್ಲಿ ಅನುರಣಿಸುತ್ತಿತ್ತು... ಮಾತುಗಾರಿಕೆ ಕೂಡಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.