ADVERTISEMENT

ಗಾಯಕಿ ವಾಣಿ ಜಯರಾಮ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2023, 11:31 IST
Last Updated 4 ಫೆಬ್ರುವರಿ 2023, 11:31 IST
ವಾಣಿ ಜಯರಾಮ್
ವಾಣಿ ಜಯರಾಮ್   

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ಅವರು ಶನಿವಾರ ನಿಧನರಾಗಿದ್ದಾರೆ.

ವಾಣಿ ಜಯರಾಮ್ ಅವರ ನಿಧನಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕೃಷ್ಣ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ಕನ್ನಡ ಸೇರಿದಂತೆ ಇತರ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸಾಹಿತ್ಯಕ್ಕೆ ಭಾವ ತುಂಬಿ ಅವರು ಅನೇಕ ಅದ್ಭುತ ಗೀತೆಗಳನ್ನು ಹಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಖ್ಯಾತ ಗಾಯಕಿ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ ಅಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಓಂ ಶಾಂತಿ’ ಎಂದು ಕೇಂದ್ರ ಸಚಿವ ಜಿ.ಕೃಷ್ಣ ರೆಡ್ಡಿ ಟ್ವೀಟ್ ಮಾಡಿದ್ದಾರೆ.

‘ವಾಣಿ ಜಯರಾಮ್ ಅಮ್ಮ ಇನ್ನಿಲ್ಲ ಎಂಬ ಕಟುವಾದ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಮ್ಮಾ... ನಾವು ನಿಮ್ಮನ್ನು ಕಳೆದುಕೊಳ್ಳುತ್ತೇವೆ. ಕಳೆದ ಆಗಸ್ಟ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಇಂದು ಅವರು ನಮ್ಮೊಂದಿಗಿಲ್ಲ ಎಂದು ತಿಳಿದು ನನಗೆ ಆಘಾತವಾಗಿದೆ ಎಂದು ಸಂಗೀತ ಸಂಯೋಜಕ ಡಿ.ಇಮ್ಮನ್ ಟ್ವೀಟ್ ಮಾಡಿದ್ದಾರೆ.

ಚೆನ್ನೈನ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಾಣಿ ಜಯರಾಮ್ ಅವರು ಶವವಾಗಿ ಪತ್ತೆಯಾಗಿದ್ದು, ಅವರ ಹಣೆಯ ಮೇಲೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಾಣಿ ಅವರು ಸಿನಿಮಾ ಹಿನ್ನೆಲೆ ಗಾಯಕಿಯಾಗಿದ್ದು, ಕನ್ನಡ, ತಮಿಳು ಹಿಂದಿ, ಉರ್ದು, ಮರಾಠಿ, ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.