ADVERTISEMENT

ಮೃದಂಗ ಭೀಷ್ಮ ಇನ್ನು ಬರೀ ನೆನಪು

ಸ್ತಬ್ದವಾಯಿತು ಅವನದ್ದ ವಾದ್ಯ

ಪ್ರಜಾವಾಣಿ ವಿಶೇಷ
Published 4 ಮೇ 2023, 21:16 IST
Last Updated 4 ಮೇ 2023, 21:16 IST
Karaikudi
Karaikudi   

ಉಮಾ ಅನಂತ್‌

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೃದಂಗ ಪಕ್ಕವಾದ್ಯಕ್ಕೆ ಒಂದು ವಿಶಿಷ್ಟ ಸ್ಥಾನಮಾನ ತಂದುಕೊಟ್ಟು ‘ಮೃದಂಗ ಸಾರ್ವಭೌಮ’ ಎಂದು ಹೆಸರಾದವರು ಕಾರೈಕುಡಿ ಮಣಿ.

ಚೆನ್ನೈಯಲ್ಲಿ ಘಟಾನುಘಟಿ ಸಂಗೀತಗಾರರೇ ಕಾರೈಕುಡಿ ಅವರನ್ನು ‘ಎನ್‌ಸೈಕ್ಲೊಪೀಡಿಯ ಆಫ್ ರಿದಮ್ಸ್’ ಎಂದೇ ಕರೆಯುತ್ತಿದ್ದರು. ಲಯವಾದ್ಯದಲ್ಲಿ ಅವರು ಇಟ್ಟುಕೊಂಡಿದ್ದ ಪ್ರೀತಿ, ನುಡಿಸಾಣಿಕೆಯಲ್ಲಿ ಶ್ರದ್ಧೆ, ಬೆರಳುಗಳ ಚಮತ್ಕಾರ, ಹೊಸ ಬಾನಿ, ಮೆರುಗು, ಸೃಜನಶೀಲತೆ ಇವರಿಗೆ ವಿಶ್ವಮಟ್ಟದಲ್ಲಿ ಅತ್ಯುತ್ತಮ ವಾದಕ ಎಂಬ ಹೆಸರು ತಂದುಕೊಟ್ಟವು.

ADVERTISEMENT

1945 ಸೆ. 11ರಂದು ತಮಿಳುನಾಡಿನ ಕಾರೈಕುಡಿಯಲ್ಲಿ ಜನಿಸಿದರು. ಮೂರನೇ ವಯಸ್ಸಿಗೆ ಸಂಗೀತ ಕಲಿಯಲಾರಂಭಿಸಿ ಹತ್ತನೇ ವಯಸ್ಸಿಗೆ ಮೃದಂಗ ನುಡಿಸಾಣಿಕೆ ಆರಂಭಿಸಿದರು. ಚೆನ್ನೈಯ ಹರಿಹರ ಶರ್ಮ ಅವರ ಬಳಿ ವಾದ್ಯದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಪಡೆದರು. ತಮ್ಮ ಹದಿನೆಂಟನೆ ವಯಸ್ಸಿಗೇ (1958) ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದರು.

ಅದು 1960ರ ದಶಕ. ಚೆನ್ನೈಯಲ್ಲಿ ಪಳನಿ ಸುಬ್ರಮಣ್ಯ ಪಿಳ್ಳೈ, ವಿದ್ವಾನ್ ಮಣಿ ಅಯ್ಯರ್ ದೊಡ್ಡ ಕಲಾವಿದರು. ಇವರಿಬ್ಬರ ಜೊತೆ ಜೊತೆಗೆ ತಮ್ಮದೇ ಆದ ಹೊಸ ಶೈಲಿ ರೂಢಿಸಿಕೊಂಡು ಲಯವಾದ್ಯ ನಿಪುಣ ಎನಿಸಿಕೊಂಡದ್ದು ಕಡಿಮೆ ಸಾಧನೆಯಲ್ಲ.

ತನಿಯಾವರ್ತನದ ಸೊಬಗು

ಸಂಗೀತ ಕಛೇರಿಗಳಲ್ಲಿ ತನಿಯಾವರ್ತನ ಬಹುಮುಖ್ಯ ಭಾಗ. ಗಾಯಕರು ತನಿ ಬಿಟ್ಟಾಗ ವಾದಕರ ಕೈಚಳಕಕ್ಕೆ ಸುವರ್ಣಾವಕಾಶ. ಕಾರೈಕುಡಿ ಅವರ ಬೆರಳುಗಳ ಚಮತ್ಕಾರ ನೋಡಲೆಂದೇ ಕೇಳುಗರು ಕಾದು ಕುಳಿತು ಲಯವಾದ್ಯದ ಸೊಬಗನ್ನು ಆಸ್ವಾದಿಸುತ್ತಿದ್ದರು.

‘ಕಾರೈಕುಡಿ ಒಬ್ಬ ಸಂಗೀತ ಸನ್ಯಾಸಿ’ ಎಂದು ವಿಶ್ಲೇಷಿಸುತ್ತಾರೆ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ. ‘ಮೃದಂಗ ನುಡಿಸುವಾಗ ‘ಧೃತ ಕಾಲ’ದಲ್ಲಿ ನುಡಿಸುತ್ತಿದ್ದ ಅಪರೂಪದ ಸಾಧಕ’ ಎನ್ನುವ ಅವರು, ‘ಕಾರೈಕುಡಿ ಅವರಿಗೆ ನುಡಿಸಾಣಿಕೆ ಎಂಬುದು ತಪಸ್ಸಾಗಿತ್ತು. ಇವರೊಬ್ಬ ವಿರಳಾತಿ ವಿರಳ ಸಾಧಕ’ ಎನ್ನುತ್ತಾರೆ.

ಪರಿಪೂರ್ಣ ವಾದ್ಯನಿಪುಣ

‘ಕಾರೈಕುಡಿ ಒಬ್ಬ ಪರ್ಫೆಕ್ಷನಿಸ್ಟ್ ಆಗಿದ್ದರು’ ಎಂದು ಹೇಳುತ್ತಾರೆ ಖ್ಯಾತ ಕೊಳಲುವಾದಕ ಶಶಾಂಕ್ ಸುಬ್ರಮಣ್ಯ. ‘1990ರಲ್ಲಿ ಅವರೊಂದಿಗೆ ಚೆನ್ನೈಯಲ್ಲಿ ಮೊದಲ ಕಛೇರಿ. ಅದಾಗಿ ವಿಶ್ವವೇದಿಕೆಗಳ ಹಲವಾರು ಕಛೇರಿಗಳಲ್ಲಿ ಜೊತೆಯಾಗಿ ನುಡಿಸಿದ್ದೇವೆ. ಲಯದಲ್ಲಿ ಅವರ ಜ್ಞಾನ ಅಮೇಜಿಂಗ್’ ಎಂದು ಕೊಂಡಾಡುತ್ತಾರೆ ಅವರು.

ಅಂತರರಾಷ್ಟ್ರೀಯ ಮಟ್ಟದ ಲಯವಾದ್ಯಗಾರರೊಂದಿಗೆ ಅವರು ನಡೆಸಿದ ‘ಫ್ಯೂಷನ್ ಎನ್ಸೆಂಬಲ್’ ಕಾರೈಕುಡಿ ಅವರಿಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ ಎಂದು ನೆನಪಿಸುತ್ತಾರೆ ಶಶಾಂಕ್.

ಸುಮಾರು ಆರು ದಶಕಗಳ ಕಾಲ ಸಂಗೀತ ಪ್ರಪಂಚದಲ್ಲಿ ಧ್ರುವತಾರೆಯಂತೆ ಮೆರೆದ ಕಾರೈಕುಡಿ ಇನ್ನು ಬರೀ ನೆನಪು.

Karaikudi

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.