ಪಂ.ಡಿ. ಕುಮಾರದಾಸ್
ಹಿಂದೂಸ್ತಾನಿ ಗಾಯನದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಧಾರವಾಡದ ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನ ಕೊಡುವ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಹಿಂದೂಸ್ತಾನಿ ಗಾಯಕ ಪಂ. ಡಿ. ಕುಮಾರದಾಸ್ ಅವರಿಗೆ ಒಲಿದಿದೆ.
ಹನುಮ ಎಂದರೆ ಶಕ್ತಿ, ಭಕ್ತಿ, ಪ್ರೀತಿ. ಹನುಮನ ಸಾಹಸಗಾಥೆಗಳು ಮಕ್ಕಳಿಗೆ ಬಹುಪ್ರಿಯ. ಈ ಹನುಮನ ಮೇಲೆ ಅನೇಕ ಭಕ್ತಿಗೀತೆಗಳು, ಕೀರ್ತನೆಗಳು ಬಂದಿವೆ. ಹಲವಾರು ಗಾಯಕರು ಹನುಮನನ್ನು ಸಂಗೀತದ ಮೂಲಕ ಗುಣಗಾನ ಮಾಡಿದ್ದಾರೆ. ಹನುಮನ ಕುರಿತ ಈ ಎಲ್ಲ ಹಾಡುಗಳಿಗೆ ಮೇಲ್ಪಂಕ್ತಿ ಹಾಕಿದವರು ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂ.ಡಿ. ಕುಮಾರದಾಸ್. ‘ಭಾಗೇಶ್ರೀ’ ರಾಗದಲ್ಲಿ ಇವರು ಹಾಡಿದ ‘ಕಡಲ ದಾಂಟಿದ ವೀರ ಹನುಮಾ’ ದೇವರನಾಮ ಅತ್ಯಂತ ಜನಪ್ರಿಯವಾಗಿದೆ.
ಬಳ್ಳಾರಿ ಜಿಲ್ಲೆಯ ಪಂ. ಕುಮಾರದಾಸ್ ಹಿಂದೂಸ್ತಾನಿ ಸಂಗೀತದ ಕಂಪನ್ನು ಜಗತ್ತಿನಾದ್ಯಂತ ಪಸರಿಸಿದವರು. ಇವರ ವಿದ್ವತ್ಪೂರ್ಣ ಗಾಯನ ಕೇಳಲು ಬಹಳ ಆಪ್ಯಾಯಮಾನ. ಸಂಗೀತದ ಮತ್ತೊಬ್ಬ ವಿದ್ವಾಂಸ ಪಂ. ವೆಂಕಟೇಶ ಕುಮಾರ್ ಅವರ ಸಮಕಾಲೀನರಾದ ಪಂ. ಕುಮಾರದಾಸ್, ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಪಳಗಿದವರು. ಕುಮಾರದಾಸ್–ವೆಂಕಟೇಶ ಕುಮಾರ್ ಹಲವಾರು ಜುಗಲಬಂದಿ ಕಛೇರಿ ನೀಡಿದ್ದು, ಇಬ್ಬರೂ ಹಿಂದೂಸ್ತಾನಿ ಸಂಗೀತ ಕ್ಷೇತ್ರವನ್ನು ಆಳಿದವರು.
‘ನಾನು ಸಂಗೀತ ಕ್ಷೇತ್ರಕ್ಕೆ ಬರಲು ಮನೆಯಲ್ಲಿನ ಕಡು ಬಡತನವೇ ಕಾರಣ’ ಎಂದು ವಿನಮ್ರವಾಗಿ ಹೇಳುವ ಕುಮಾರದಾಸ್, ತಮ್ಮ ಮನೆಯ ಬಡತನ ಹಾಗೂ ತಾವು ಸಂಗೀತ ಕ್ಷೇತ್ರವನ್ನು ಆಯ್ದುಕೊಂಡ ಹಿನ್ನೆಲೆಯನ್ನು ಹೀಗೆ ವಿವರಿಸುತ್ತಾರೆ: ‘ಬಳ್ಳಾರಿ ಜಿಲ್ಲೆಯ ಯಲಮಂಚಿ ನಮ್ಮೂರು. ತಂದೆ ತಾಯಿಗೆ ಹತ್ತು ಮಂದಿ ಮಕ್ಕಳು. ತುಂಬಿದ ಮನೆಯಲ್ಲಿ ಆಗ ಊಟಕ್ಕೂ ತತ್ವಾರವಿತ್ತು. ಹೀಗಾಗಿ ಐದನೇ ತರಗತಿವರೆಗೆ ಮಾತ್ರ ಓದಿದೆ. ಸಂಗೀತದಲ್ಲಿ ಚಿಕ್ಕಂದಿನಲ್ಲೇ ಆಸಕ್ತಿಯಿತ್ತು. ಅಪ್ಪ ಜನಪದ ಕಲಾವಿದರು. ಡೊಳ್ಳಿನ ಪದವನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಊರಿನಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳಲ್ಲಿ ನನಗೂ ಹಾಡಲು ಅವಕಾಶ ಸಿಗುತ್ತಿತ್ತು. ನನ್ನ ಹಾಡನ್ನು ಕೇಳಿದ ಊರಿನ ಮಂದಿ ಅಲ್ಪಸ್ವಲ್ಪ ಹಣವನ್ನೂ ಕೊಡುತ್ತಿದ್ದರು. ಜೊತೆಗೆ ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಕೆಗೆ ಅವಕಾಶ ಇರುವುದನ್ನೂ ತಿಳಿಸಿದರು. ಹೀಗಾಗಿ ಪುಟ್ಟರಾಜ ಗವಾಯಿ ಅವರ ಸಂಗೀತಾಶ್ರಮಕ್ಕೆ ಸೇರಿದೆ. ಅಲ್ಲಿ ವೆಂಕಟೇಶ ಕುಮಾರ್ ಅವರೂ ಇದ್ದರು. ನಾವಿಬ್ಬರೂ ಸುಮಾರು 15 ವರ್ಷ ಆಶ್ರಮದಲ್ಲಿ ಗುರು–ಶಿಷ್ಯ ಪರಂಪರೆಯಲ್ಲಿ ಸಂಗೀತ ಕಲಿತೆವು. ಅಲ್ಲಿಂದ ಮುಂದೆ ನೂರಾರು ಸಂಗೀತ ಕಛೇರಿಗಳಲ್ಲಿ ಹಾಡಿದೆವು. ಇದೇ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯನ್ನೂ ಊರಿದೆವು’.
ಎಂದೂ ಮರೆಯಲಾಗದು...
ಪಂ. ಕುಮಾರದಾಸ್ ಅವರ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆಗಳು ನಡೆದಿವೆ. ಇದು ಸುಮಾರು ಐವತ್ತು ವರ್ಷಕ್ಕೂ ಹಿಂದಿನ ಘಟನೆ. ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕುಮಾರದಾಸ್ ಸಂಗೀತ ಕಲಿಯುತ್ತಿದ್ದ ದಿನಗಳು. ತೋಂಟದ ಸಿದ್ಧಲಿಂಗೇಶ್ವರ ಸ್ವಾಮೀಜಿ ಐದನೇ ಪುಣ್ಯತಿಥಿ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ಸಂಗೀತ ವಿದ್ಯಾರ್ಥಿಗಳಿಗಾಗಿಯೇ ಹಾಡುಗಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು ಐವತ್ತು ಮಂದಿ ಸ್ಪರ್ಧಿಗಳಿದ್ದರು. ವೇದಿಕೆಯ ಮುಂಭಾಗದಲ್ಲಿ ಘಟಾನುಘಟಿ ಕಲಾವಿದರಾಗಿದ್ದ ಪಂ. ಮಾಧವ ಗುಡಿ, ಪಂ. ಸಿದ್ಧರಾಮ ಜಂಬಲದಿನ್ನಿ ಅವರು ತೀರ್ಪುಗಾರರಾಗಿ ಆಸೀನರಾಗಿದ್ದರು. ಪಂ. ಪುಟ್ಟರಾಜ ಗವಾಯಿಗಳೂ ಕುಳಿತಿದ್ದರು. ಈ ಸ್ಪರ್ಧೆಯಲ್ಲಿ ಕುಮಾರದಾಸ್ ವಚನವೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಫಲಿತಾಂಶ ಪ್ರಕಟಿಸಿದಾಗ ಕುಮಾರದಾಸ್ ಅವರಿಗೆ ಮೊದಲ ಬಹುಮಾನ ಒಲಿದಿತ್ತು. ಅಷ್ಟೇ ಅಲ್ಲದೆ ಇವರ ಗಾಯನವನ್ನು ಆಲಿಸಿದ ಪುಟ್ಟರಾಜ ಗವಾಯಿಗಳು ತಮ್ಮ ಕೊರಳಿನಲ್ಲಿದ್ದ ಎರಡು ತೊಲೆ ಬಂಗಾರದ ಸರವನ್ನು ಕುಮಾರದಾಸ್ ಅವರ ಕತ್ತಿಗೆ ಹಾಕಿ ಪ್ರಶಂಸೆ ವ್ಯಕ್ತಪಡಿಸಿದರು.
ಪಂ. ಕುಮಾರ್‌ದಾಸ್
‘ಈ ಘಟನೆಯನ್ನು ನಾನು ಜೀವಮಾನದಲ್ಲಿ ಮರೆಯಲಾರೆ. ಈಗಲೂ ನೆನೆಸಿಕೊಂಡರೆ ಪುಳಕವಾಗುತ್ತದೆ, ಸಂತೃಪ್ತಿ, ಸಮಾಧಾನದ ಭಾವ ಮೂಡಿಬರುತ್ತದೆ. ಸಂಗೀತ ಕಲಿತದ್ದು ಸಾರ್ಥಕವಾಯ್ತು’ ಎಂದು ಹೆಮ್ಮೆಯಿಂದ ಸ್ಮರಿಸುತ್ತಾರೆ ಪಂ. ಕುಮಾರದಾಸ್.
‘ಪುಣ್ಯಾಶ್ರಮದಲ್ಲಿ ದಿನವಿಡೀ ಸಂಗೀತಾಭ್ಯಾಸವೇ. ಹಾಡುವುದನ್ನು ಬಿಟ್ಟರೆ ಬೇರೆ ಏನೂ ಕೆಲಸವಿರುತ್ತಿರಲಿಲ್ಲ. ವೆಂಕಟೇಶ್ ಕುಮಾರ್ ಜತೆಗೆ ಭಾಳ ವರ್ಷ ಹಾಡಿದ್ದೀನಿ. ಅಂಥ ದಿನಗಳು ಮತ್ತೆ ಬಾರದು’ ಎಂದು ಮೆಲುಕು ಹಾಕುತ್ತಾರೆ ಈ ವಿದ್ವಾಂಸ.
ಆಕಾಶವಾಣಿಯ ಎ ಗ್ರೇಡ್ ಕಲಾವಿದರಾದ ಕುಮಾರದಾಸ್, ಸುಮಾರು ಮೂವತ್ತು ವರ್ಷ ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿದವರು. ಹಿಂದೂಸ್ತಾನಿ ಸಂಗೀತದ ಕಿರಾಣ–ಗ್ವಾಲಿಯರ್ ಘರಾಣೆಯಲ್ಲಿ ಹಾಡುವ ಇವರು, ಶಾಸ್ತ್ರೀಯ ಸಂಗೀತವಲ್ಲದೆ ವಚನ, ದೇವರನಾಮ, ಅಭಂಗಗಳನ್ನೂ ಸೊಗಸಾಗಿ ಹಾಡುತ್ತಾರೆ. ರಾಗ ಭಾಗೇಶ್ರೀ, ತೋಡಿ, ಬೈರಾಗಿಭೈರವ್, ಶುದ್ಧ ಸಾರಂಗ, ಯಮನ್ ಕಲ್ಯಾಣ್ ಮುಂತಾದ ರಾಗಗಳನ್ನು ಬಹಳ ಇಷ್ಟಪಡುವ ಇವರು, ಅನೇಕ ಕಛೇರಿಗಳಲ್ಲಿ ಈ ರಾಗಗಳನ್ನು ಹಾಡಿ ರಂಜಿಸಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ನೀಡಲಾಗುವ ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಪಂ. ಕುಮಾರದಾಸ್ ಅವರಿಗೀಗ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಪ್ರಶಸ್ತಿಯ ಗರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.