ADVERTISEMENT

ಸಂಗೀತ: ಕಾವೇರಿ ಹರಿದಿಹಳು ಸಪ್ತಸ್ವರವಾಗಿ..

ಉಮಾ ಅನಂತ್
Published 11 ಮಾರ್ಚ್ 2023, 23:45 IST
Last Updated 11 ಮಾರ್ಚ್ 2023, 23:45 IST
ಅಮೃತಾ ವೆಂಕಟೇಶ್
ಅಮೃತಾ ವೆಂಕಟೇಶ್   

ಕಾವೇರಿ ನದಿಗುಂಟ ಸಂಗೀತವಿದೆ. ನದಿಗೂ, ಸಂಗೀತಕ್ಕೂ ಅವಿನಾಭಾವ ಸಂಬಂಧವೂ ಇದೆ. ಇದನ್ನು ಗುರುತಿಸಿ, ನದಿಗಳಿಗೆ ಸ್ವರಗಳ ಮೆರುಗನ್ನು ನೀಡುವ ಸುಂದರ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ನಡೆಯಿತು. ಆಲಾಪಗಳ ಅಕ್ಷರ ರೂಪ ಇಲ್ಲಿದೆ..

ಅಲ್ಲಿ ಜುಳು ಜುಳು ಹರಿಯುವ ಕಾವೇರಿ ಇಲ್ಲಿ ಸಪ್ತಸ್ವರವಾಗಿ ಹರಿದಳು. ರಾಗ, ಲಯ, ಭಾವ, ನಾದದೊಂದಿಗೆ ಶಾಸ್ತ್ರೀಯವಾಗಿ, ಸ್ವಚ್ಛಂದವಾಗಿ ವಿಹರಿಸಿದಳು.

ಭಾರತೀಯ ಸಾಮಗಾನ ಸಂಗೀತ ಸಭಾ, ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಏರ್ಪಡಿಸಿದ್ದ ‘ಸ್ವರ ಕಾವೇರಿ’ ಸಂಗೀತ ಸುಧೆ ಕೇಳುಗರಲ್ಲಿ ಸಂಚಲನ ಮೂಡಿಸಿತು. ಹೌದು, ಕಾವೇರಿ ದಿವ್ಯ ಅನುಭೂತಿ ಸೃಷ್ಟಿಸಿದಳು. ಮನಸ್ಸಿಗೆ ತಂಗಾಳಿ ಬೀಸಿದಳು. ಹಾಗೆಯೇ ವಿಷಯಾಧಾರಿತ ಸಂಗೀತ ಕಛೇರಿಗಳು ಕೇಳುಗರ ಮನಮುಟ್ಟಿದವು.

ADVERTISEMENT

ಕಾವೇರಿ ನದಿಗುಂಟ ಸಂಗೀತವಿದೆ. ನದಿಗೂ, ಸಂಗೀತಕ್ಕೂ ಅವಿನಾಭಾವ ಸಂಬಂಧವೂ ಇದೆ. ಇದನ್ನು ಗುರುತಿಸಿ, ನದಿಗಳಿಗೆ ಸ್ವರಗಳ ಮೆರುಗನ್ನು ನೀಡುವ ಸುಂದರ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರು ಸಾಮಗಾನ ಸಂಗೀತ ಸಭಾದ ಅಧ್ಯಕ್ಷ ಆರ್.ಆರ್‌. ರವಿಶಂಕರ್.

ಕಾವೇರಿ, ನದಿ ಕರ್ನಾಟಕದಲ್ಲಿ ರುದ್ರಪಟ್ಟಣ, ಮೈಸೂರು, ಶ್ರೀರಂಗಪಟ್ಟಣದ ಮೂಲಕ ಹರಿಯುತ್ತಾಳೆ. ತಮಿಳುನಾಡಿನ ಶ್ರೀರಂಗಂ, ತಂಜಾವೂರು, ತಿರುವಾರೂರು, ತಿರುವೈಯಾರ್‌ ಸರಹದ್ದಿನಲ್ಲೂ ವಿಹರಿಸುತ್ತಾಳೆ. ಇಷ್ಟೆಲ್ಲ ಜಾಗಗಳಲ್ಲಿಯೂ ಸಂಗೀತ ದಿಗ್ಗಜರು ಆಗಿ ಹೋಗಿದ್ದಾರೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು ಕಾವೇರಿ ತಟದಿಂದಲೇ ಬಂದವರು. ನಮ್ಮಲ್ಲಿ ಆರ್‌.ಎಸ್‌. ಕೇಶವಮೂರ್ತಿ, ಆರ್‌.ಕೆ. ಶ್ರೀಕಂಠನ್, ಶ್ರೀನಿವಾಸ ಮೂರ್ತಿ, ಸೂರ್ಯನಾರಾಯಣ, ಆರ್‌.ಆರ್‌. ಕೇಶವಮೂರ್ತಿ ಎಲ್ಲರೂ ಕಾವೇರಿ ನಾಡಿನವರೇ.

ಮೈಸೂರು ಭಾಗದ ಮೈಸೂರು ಸದಾಶಿವರಾಯರು, ಮೈಸೂರು ವಾಸುದೇವಾಚಾರ್ಯ, ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ಪಿಟೀಲು ಚೌಡಯ್ಯ, ದೊರೆಸ್ವಾಮಿ ಅಯ್ಯಂಗಾರ್‌, ಮುತ್ತಯ್ಯ ಭಾಗವತರ್, ಜಯಚಾಮರಾಜೇಂದ್ರ ಒಡೆಯರ್‌, ತಲಕಾವೇರಿ ಭಾಗದ ಮುಸುರಿ ಸುಬ್ರಹ್ಮಣ್ಯ ಅಯ್ಯರ್... ಈ ವಾಗ್ಗೇಯಕಾರರೆಲ್ಲ ದಕ್ಷಿಣ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದವರು.

ಸಂಗೀತ ದೇವಾಲಯದಲ್ಲೂ ಇದೆ. ಹಬ್ಬಹರಿದಿನಗಳ ಮೇಲೆ ಬಂದ ಹಾಡುಗಳಿಗೆ ಲೆಕ್ಕವಿಲ್ಲ. ನವರಸ ಭಾವಗಳೂ ಸಂಗೀತದ ಅಂಗಗಳೇ. ಈ ರಾಗರಸಗಳು ನಮ್ಮಲ್ಲಿ ಒಳ್ಳೆಯ ಭಾವನೆಯನ್ನು ಮೂಡಿಸುತ್ತವೆ, ಮೂಡ್‌ ಅನ್ನು ಸೃಷ್ಟಿ ಮಾಡುತ್ತವೆ. ಹೀಗಾಗಿಯೇ ರಾಗಗಳನ್ನು ಚಿಕಿತ್ಸೆಗಾಗಿ ಬಳಸುವುದು. ತಲೆನೋವು, ಮಾನಸಿಕ ಒತ್ತಡ, ಹೊಟ್ಟೆನೋವು... ಅಷ್ಟೇ ಏಕೆ ಮಾರಕ ಕ್ಯಾನ್ಸರ್‌ನ ತೀವ್ರತೆಯನ್ನು ಕಡಿಮೆಮಾಡುವ ಗುಣವೂ ಸಂಗೀತಕ್ಕಿದೆ. ಇಂತಹ ಸಂಗೀತದ ಆರಾಧನೆಗೆ ‘ಸ್ವರ ಕಾವೇರಿ’ ವೇದಿಕೆಯಾಯಿತು. ಈ ಜೀವನದಿ ತೀರದ ಸಂಗೀತಗಾರರನ್ನು ಗಮನದಲ್ಲಿಟ್ಟುಕೊಂಡು ನಡೆದ ಕಾರ್ಯಕ್ರಮ ಶ್ರೋತೃಗಳ ಹೃದಯ ಗೆದ್ದಿತು. ತತ್ವಾಧಾರಿತ ವಿಷಯಗಳ ಮೇಲೆ ನುರಿತ ಕಲಾವಿದರಿಂದ ಸಂಗೀತ ಕಛೇರಿ ಏರ್ಪಡಿಸಿದ್ದು, ವಾಗ್ಗೇಯಕಾರರಿಗೆ ನೀಡಿದ ವಿನಮ್ರ ಗೌರವ ಎಂದರೆ ತಪ್ಪಿಲ್ಲ.

ಗಾಯನದಲ್ಲಿ ಕಾವೇರಿ ಲಹರಿ!

ಇದೊಂದು ಒಂದು ಸುಂದರ ಪರಿಕಲ್ಪನೆ. ಕಾವೇರಿ ನದಿ ತೀರದಲ್ಲಿರುವ ದೇವಾಲಯಗಳು ಮತ್ತು ದೇವರನ್ನು ಸ್ತುತಿಸಿ ಅನೇಕ ವಾಗ್ಗೇಯಕಾರರು ಕೃತಿ ರಚನೆ ಮಾಡಿದ್ದಾರೆ, ಹಾಡಿದ್ದಾರೆ. ಇದೇ ಪರಿಕಲ್ಪನೆಯಲ್ಲಿ ‘ದೇವಾಲಯ ಕೃತಿಗಳು’ ಎಂಬ ಥೀಮ್‌ ಇಟ್ಟುಕೊಂಡು ಚಿಲ್ಕುಂದ ಸಹೋದರಿಯರಾದ ಇಂದು ನಾಗರಾಜ್‌ ಹಾಗೂ ಲಕ್ಷ್ಮೀ ನಾಗರಾಜ್ ಹಾಡಿದರು.

‘ಕಲಾಪ್ರಜ್ಞೆ’ ಎಂಬುದು ಮತ್ತೊಂದು ವಿಷಯಾಧಾರಿತ ಗಾಯನ ಕಛೇರಿ. ವಿದುಷಿ ಐಶ್ವರ್ಯ ವಿದ್ಯಾ ರಘುನಾಥ್ ಅವರು, ಸೃಷ್ಟಿ, ಬೆಳವಣಿಗೆ, ಸಂಪ್ರದಾಯ, ಅನುಭವ, ಆನಂದ ಮತ್ತು ಆಸ್ವಾದವನ್ನು ಒಳಗೊಂಡಿರುವ ಕೃತಿಗಳನ್ನು ಪ್ರಸ್ತುತಪಡಿಸಿದರು. ಸಂಗೀತ ಎಂದರೆ ಅದು ಪರಂಪರೆ. ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಸಂಸ್ಕಾರಯುತ ನಾದವೇ ಸಂಗೀತ. ‘ಜನಪ್ರಿಯ ಪಾರಂಪರಿಕ ಸಂಗೀತ’ವನ್ನು ಪ್ರಸ್ತುತಪಡಿಸಿ ಸಂಗೀತದ ಚೆಲುವನ್ನು ಅನಾವರಣಗೊಳಿಸಿದವರು ತ್ರಿಶೂರು ಸಹೋದರರು.

ಹಬ್ಬ ಹರಿದಿನಗಳಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಹೀಗಾಗಿಯೇ ಪ್ರತಿಹಬ್ಬದ ಹಿಂದೆ ಸುಮಧುರ ನಾದವಿದೆ. ದೇವತೆಗಳನ್ನು ಸ್ತುತಿಸುವುದು, ಶ್ಲೋಕ, ಉಗಾಭೋಗಗಳನ್ನು ಪ್ರಸ್ತುತಪಡಿಸುವುದು, ಕೃತಿ, ಕೀರ್ತನೆಗಳನ್ನು ಹಾಡುವುದು... ಹೀಗೆ ಹಬ್ಬದ ಸಂಗೀತ ಪರಂಪರೆ ದೊಡ್ಡದು. ‘ಸ್ವರ ಕಾವೇರಿ’ ಸರಣಿಯಲ್ಲಿ ಗಾಯಕಿಯರಾದ ಅನಾಹಿತ–ಅಪೂರ್ವ ಹಬ್ಬದ ಕೃತಿಗಳನ್ನು ಹಾಡಿದರು. ವಿದುಷಿ ಅಮೃತಾ ವೆಂಕಟೇಶ್‌, ‘ಚಿಕಿತ್ಸಾ ಸಂಗೀತ’ ದ ಬಗ್ಗೆ ಕೆಲ ರಚನೆಗಳನ್ನು ಪ್ರಸ್ತುತಪಡಿಸಿದ್ದು ಸಾಂದರ್ಭಿಕವಾಗಿಯೂ ಗಮನಸೆಳೆಯಿತು.

ಸಂಗೀತಜ್ಞರ ಸ್ಮರ‌ಣೆ ಎಲ್ಲ ಸಂಗೀತಗಾರರ, ಸಂಗೀತ ವಿದ್ಯಾರ್ಥಿಗಳ ಹಾಗೂ ಆಸಕ್ತರ ಆದ್ಯ ಕರ್ತವ್ಯ ಎಂದೇ ಹೇಳಬೇಕು. ಇಲ್ಲಿ ಸಾಧನೆ, ಸಿದ್ಧಿ ಎರಡೂ ಮುಂದಿನ ಪೀಳಿಗೆಗೆ ದಾರಿದೀಪವಾಗಿ ಕೆಲಸ ಮಾಡುತ್ತದೆ. ‘ಶ್ರೇಷ್ಠ ಸಂಗೀತಜ್ಞರ ಸ್ಮರಣೆ’ ಈ ಸರಣಿ ಕಛೇರಿಯಲ್ಲಿ ಸ್ಥಾನ ಪಡೆದುಕೊಂಡು ವಿಭಿನ್ನವಾಗಿ ಮೇಳೈಸಿತು. ವಿದ್ವಾನ್‌ ಸಂದೀಪ್‌ ನಾರಾಯಣ್‌ ಗಾಯನ ಈ ನೆಲೆಯಲ್ಲಿ ಅದ್ಭುತವಾಗಿ ಮೂಡಿಬಂತು. ಸಂಗೀತ ಎಂದರೆ ಜ್ಞಾನ, ಇದೊಂದು ಅಧ್ಯಾತ್ಮ. ಇದರಿಂದ ಏಕಾಗ್ರತೆ, ಗುರಿ ಸಾಧನೆ ಸಾಧ್ಯ. ಈ ಥೀಮ್‌ ಇಟ್ಟುಕೊಂಡು ವಿದುಷಿ ಮಾಧುರಿ ಕೌಶಿಕ್‌ ಗಾಯನ ನಡೆಸಿಕೊಟ್ಟರು.

ಕಛೇರಿಗಳಲ್ಲಿ ಹಾಡುಗಾರನ ಸೃಜನಶೀಲ ಮನಸ್ಸು ಅನಾವರಣಗೊಳ್ಳುವುದು ಮನೋಧರ್ಮದ ಪ್ರಸ್ತುತಿಯಿಂದಲೇ. ಕಲ್ಪನಾಸ್ವರಗಳನ್ನು ಎಷ್ಟು ವಿಭಿನ್ನವಾಗಿ, ಕಲಾತ್ಮಕವಾಗಿ, ಹೃದಯಕ್ಕೆ ತಟ್ಟುವ ಹಾಗೆ ಪ್ರಸ್ತುತಪಡಿಸಿದರೆ ಆ ಗಾಯಕ ಗೆದ್ದಂತೆಯೇ. ‘ಪ್ರಾಯೋಗಿಕ ಸಂಗೀತ’ವನ್ನು ಆಧಾರವಾಗಿಟ್ಟುಕೊಂಡು ವಿದುಷಿ ಶ್ರೀರಂಜಿನಿ ಸಂತಾನಗೋಪಾಲನ್‌ ನಡೆಸಿಕೊಟ್ಟ ಗಾಯನವೂ ಪೂರಕವಾಗಿತ್ತು.

ಸಂಗೀತ ಹೃದಯದ ಭಾಷೆ. ಇದಕ್ಕೆ ಮನಸ್ಸು–ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಇದೆ. ಸಂಗೀತಕ್ಕೆ ಯಾವುದೇ ಮಿತಿಗಳಿಲ್ಲ. ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯ ಇರುವುದು ಸಂಗೀತಕ್ಕೆ ಮಾತ್ರ. ಇಂತಹ ಅಮೂಲ್ಯ ಥೀಮ್‌ ‘ಸಾಮಾಜಿಕ ಬಂಧನ’ ಇಟ್ಟುಕೊಂಡು ವಿದ್ವಾನ್‌ ರಾಜೇಶ್‌ ವೈದ್ಯ ವೀಣಾವಾದನ ನಡೆಸಿಕೊಟ್ಟದ್ದು ಸಂಗೀತ ಕ್ಷೇತ್ರದಲ್ಲಿ ಅಪರೂಪ ಎನಿಸಿಬಿಟ್ಟಿತು.

‘ಸ್ವರ ಕಾವೇರಿ’ ಸರಣಿಯ ಕೊನೆಯ ಕಛೇರಿಯಾಗಿ ಅತ್ಯಂತ ವಿಶಿಷ್ಟವಾಗಿ ಹೊರಹೊಮ್ಮಿದ್ದು, ‘ಸಾಮಗಾನ ಮಾತಂಗ’ ಪ್ರಶಸ್ತಿ ಸ್ವೀಕರಿಸಿದ ಗಾಯಕಿಯರಾದ ರಂಜನಿ–ಗಾಯತ್ರಿ ಅವರ ಕಛೇರಿಯಿಂದ. ಸಂಗೀತ ಒಂದು ದಿವ್ಯ ಶಕ್ತಿ, ಅದು ಕೇಳುಗರಲ್ಲಿ ವಿಶಿಷ್ಟ ಅನುಭೂತಿಯನ್ನು ಸೃಷ್ಟಿಸುತ್ತದೆ. ರಾಗ, ತಾಳ, ಲಯ, ಮಾಧುರ್ಯ ಎಲ್ಲವೂ ಒಂದೆಡೆ ಸೇರಿದಾಗ ಅಲ್ಲಿ ಅದ್ಭುತ ಮಾಯಾಲೋಕ ಉಂಟಾಗುತ್ತದೆ. ಇಂತಹ ಮಾಂತ್ರಿಕ ಸಂಗೀತವನ್ನು ಉಣಬಡಿಸಿದವರು ಈ ಸಹೋದರಿಯರು.

ಕಾವೇರಿ ಎಂದರೆ ಅದು ಪಾವಿತ್ರ್ಯ, ಪ್ರೀತಿ, ಪರಿಶುದ್ಧತೆ, ಜೀವನ, ನಿರಂತರತೆ, ನವೀಕರಣ ಮತ್ತು ಪರಿವರ್ತನೆ ಎಂಬ ಉದಾತ್ತ ಧ್ಯೇಯಗಳನ್ನು ಇಟ್ಟುಕೊಂಡು ಭಾರತೀಯ ಸಾಮಗಾನ ಸಭಾ ತನ್ನ 14ನೇ ಶಾಸ್ತ್ರೀಯ ಸಂಗೀತೋತ್ಸವವನ್ನು ಸಂಪನ್ನಗೊಳಿಸಿದ್ದು ಸಂಗೀತ ಲೋಕದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂಬ ಭಾಷ್ಯ ಬರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.