ADVERTISEMENT

ರಿಕಿ ರಾಗ ಮಕ್ಕಳ ಸ್ವರ...

ಪೃಥ್ವಿರಾಜ್ ಎಂ ಎಚ್
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
‘ಪರಿಕ್ರಮ’ ತಂಡದ ವಿದ್ಯಾರ್ಥಿಗಳು ರಿಕಿ ಕೇಜ್‌ ತಂಡದೊಂದಿಗೆ ಹಾಡಿ ಕುಣಿದಾಗ...
‘ಪರಿಕ್ರಮ’ ತಂಡದ ವಿದ್ಯಾರ್ಥಿಗಳು ರಿಕಿ ಕೇಜ್‌ ತಂಡದೊಂದಿಗೆ ಹಾಡಿ ಕುಣಿದಾಗ...   

ಝಗಮಗಿಸುವ ಬೆಳಕಿನ ಸಂಯೋಜನೆ, ನಯನ ಮನೋಹರ ಕಾರಂಜಿ, ಶ್ರವಣಾನಂದಕರವಾದ ಸಂಗೀತ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ನೂರಾರು ಮಕ್ಕಳು ನೀಲಿ ಅಂಗಿ ತೊಟ್ಟು ನೆರೆದಿದ್ದರು. ಗಾಯಕರು ಹಾಡಲು ಶುರುಮಾಡುತ್ತಿದ್ದಂತೆಯೇ ಜೋರಾಗಿ ದನಿಗೂಡಿಸಿ ಸಿಳ್ಳೆ, ಕರತಾಡನಗಳ ಮೂಲಕ ವಾತಾವರಣವನ್ನು ಆಹ್ಲಾದಕಗೊಳಿಸಿದರು.

ವಿಶ್ವ ಮಕ್ಕಳ ದಿನಾಚರಣೆ (ನವೆಂಬರ್ 20) ಅಂಗವಾಗಿ ಮಂಗಳವಾರ ಸಂಜೆ ಒರಾಯನ್‌ ಮಾಲ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್ ಅವರ ಸಂಗೀತ ಕಾರ್ಯಕ್ರಮ ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಕುಣಿಯುವಂತೆ ಮಾಡಿತು.

ಹಾಡುಗಳನ್ನು ಆರಂಭಿಸುವ ಮುನ್ನ, ನಿರೂಪಕಿ ನಡೆಸಿದ ಪ್ರಶ್ನೋತ್ತರ ಸ್ಪರ್ಧೆ ಕುತೂಹಲ ಕೆರಳಿಸಿತು. ಯುನಿಸೆಫ್‌ ಕಾರ್ಯಕ್ರಮಗಳ ಕುರಿತು ಅವರು ಪ್ರಶ್ನೆ ಕೇಳಲು ಆರಂಭಿಸುತ್ತಿದ್ದಂತೆಯೇ, ಮಕ್ಕಳು ಕೈ ಎತ್ತಿ ಉತ್ತರಿಸಲು ಪೈಪೋಟಿ ನೀಡಿದರು.

ADVERTISEMENT

ಆದರೆ, ‘ಯುನಿಸೆಫ್‌ನ ಟ್ಯಾಗ್‌ಲೈನ್‌’ ಏನು ಎಂದು ಪ್ರಶ್ನೆ ಕೇಳುತ್ತಿದ್ದಂತೆಯೇ, ಕೆಲವು ಮಕ್ಕಳು ‘ಟ್ಯಾಗ್‌ಲೈನ್‌ಗೆ ಕನ್ನಡದಲ್ಲಿ ಏನಂತಾರೆ’ ಮರು ಪ್ರಶ್ನೆ ಹಾಕಿದರು. ಮಕ್ಕಳ ಪ್ರಶ್ನೆಗೆ ನಿರೂಪಕಿ ನಿರುತ್ತರರಾದರು. ಕೊನೆಗೆ ಒಬ್ಬ ಬಾಲಕ ಅರ್ಥ ಮಾಡಿಕೊಂಡು ‘ ಬೈ ಚಿಲ್ಡ್ರನ್, ಫಾರ್ ಚಿಲ್ಡ್ರನ್ ಎಂದು ಹೇಳುತ್ತಿದ್ದಂತೆಯೇ ಸಭಾಂಗಣವೆಲ್ಲಾ ಕರತಾಡನದ ಸದ್ದಿನಲ್ಲಿ ಮುಳುಗಿತು.

ಮಕ್ಕಳ ಉತ್ಸಾಹ, ಹುರುಪನ್ನು ಮತ್ತಷ್ಟು ಹೆಚ್ಚಿಸಲು ಗಾಯಕಿ ಮೈಕ್ ಹಿಡಿದು ಹಾಡು ಆರಂಭಿಸುತ್ತಿದ್ದಂತೆಯೇ, ಮಕ್ಕಳು ಸಂಗೀತದ ರಸದೌತಣ ಸವಿಯಲು ಸಜ್ಜಾದರು.ಪರಿಸರ ಸಂರಕ್ಷಣೆ, ಸ್ವಚ್ಛತೆ, ನದಿಗಳ ರಕ್ಷಣೆ... ಹೀಗೆ ಸಾಮಾಜಿಕ ಕಳಿಕಳಿಯೇ ಇಡೀ ಕಾರ್ಯಕ್ರಮದಲ್ಲಿ ಧ್ವನಿಸಿತು.

ಪ್ಲಾಸ್ಟಿಕ್‌ನಿಂದ ಎದುರಾಗಬಹುದಾದ ಅಪಾಯಗಳನ್ನು ಮನದಟ್ಟು ಮಾಡಿಕೊಡಲು ರಚಿಸಿದ್ದ‘ಥ್ರೊ ದಿ ಪ್ಲಾಸ್ಟಿಕ್’ ಇಂಗ್ಲಿಷ್‌ ಹಾಡು ಗಮನ ಸೆಳೆಯಿತು. ಇದೇ ಹಾಡನ್ನು ‘ಬೇಡ ಪ್ಲಾಸ್ಟಿಕ್ ಚೀಲ’ ಎಂದು ಕನ್ನಡದಲ್ಲಿಹಾಡುತ್ತಿದ್ದಂತೇ ಮಕ್ಕಳು ದನಿಗೂಡಿಸಿ, ಗಾಯಕರು ಮತ್ತು ವಾದ್ಯ ನುಡಿಸುವವರಿಗೆ ಉತ್ಸಾಹ ತುಂಬಿದರು. ನಂತರ ಇದೇ ಹಾಡನ್ನುಹಿಂದಿಯಲ್ಲಿ ಹಾಡಿದಾಗಲೂ ಕೇಳಿ ಆನಂದಿಸಿದರು.

ಕಣ್ಮರೆಯಾಗಿರುವ ಗುಬ್ಬಚ್ಚಿ, ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ನೆರವಾಗುವ ಸೈಕಲ್‌, ಅಳಿವಿನಂಚಿಲ್ಲಿರುವ ಘೇಂಡಾಮೃಗ, ಆಮ್ಲಜನಕ ಪೂರೈಸುವ ಮರ–ಗಿಡ ಹೀಗೆ ಒಟ್ಟಾರೆ ಪರಿಸರದ ಸಮಸ್ಯೆಗಳಿಗೆ ಈ ಕಾರ್ಯಕ್ರಮಕ್ಕೆ ಕನ್ನಡಿ ಹಿಡಿಯಿತು.

ನಾಲ್ಕೈದು ಹಾಡುಗಳು ಮುಗಿದ ಮೇಲೆ ರಿಕಿ ಕೇಜ್ ಅವರು ವೇದಿಕೆಗೆ ಬಂದಾಗ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ಅವರು ಹಾಡಲು ಆರಂಭಿಸುತ್ತಿದ್ದಂತೆಯೇ ಪ್ರೇಕ್ಷಕರೆಲ್ಲಾ ದನಿ ಗೂಡಿಸಿ ಸುಶ್ರಾವ್ಯವಾದ ರಾಗಮಳೆಯಲ್ಲಿ ಮಿಂದು ಸಂತಸಪಟ್ಟರು.

ರಿಕಿ ಕೇಜ್ ಅವರು ಪರಿಸರ ಜಾಗೃತಿ ಮೂಡಿಸಿದರು. ವನಜಾಕ್ಷಿ ಅವರ ಕೊಳಲು ವಾದನ ಮುದ ನೀಡಿತು. ಕೊನೆಯದಾಗಿ ನಡೆದ ವಯಲಿನ್ ಮತ್ತು ಕೊಳಲಿನ ಜುಗಲ್‌ಬಂದಿ ಮಕ್ಕಳನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು. ಡ್ರಮ್ ವಾದನವಂತೂ ಹುಚ್ಚೆದ್ದು ಕುಣಿಯುವಂತೆ ಇತ್ತು.

ಈ ವಿಶೇಷ ದಿನದ ಅಂಗವಾಗಿ ರಿಕಿ ಕೇಜ್ ಅವರು ‘ಮೈ ಅರ್ತ್ ಸಾಂಗ್ಸ್‌’ ಶೀರ್ಷಿಕೆಯಡಿ ತಯಾರಿಸಿದ್ದ ಹಾಡುಗಳ ಆಲ್ಬಂ ಬಿಡುಗಡೆ ಮಾಡಲಾಯಿತು. ಇಂಗ್ಲಿಷ್‌ ಹಾಡುಗಳನ್ನು ಡೊಮಿನಿಕ್ ಡಿಕ್ರೂಜ್ ಬರೆದರೆ, ಕವಿ ಲಕ್ಷ್ಮಣರಾವ್ ಮನಮುಟ್ಟವಂತೆ ಕನ್ನಡದಲ್ಲಿ ಪದ ಪೋಣಿಸಿದ್ದಾರೆ. ಇದೇ ಹಾಡುಗಳನ್ನು ಹಿಂದಿಯಲ್ಲೂ ಬರೆಯಲಾಗಿದೆ. ಕನ್ನಡದಲ್ಲಿ ‘ನನ್ನ ಭೂಮಿ ಗೀತೆಗಳು’ ಎಂದು ಶೀರ್ಷಿಕೆ ಇಡಲಾಗಿದೆ. ಹಿಂದಿಯಲ್ಲಿ ‘ಮೇರೆ ಧರ್ತಿ ಕೇ ಗೀತ್‌’ ಹೆಸರಿನಲ್ಲಿವೆ.

ಹೊಸ ಪರಿಕಲ್ಪನೆಯೊಂದಿಗೆ ಆಶ್ಚರ್ಯಗೊಳಿಸುವ ರಿಕಿ ಕೇಜ್‌ ಅವರನ್ನೇ ಆಶ್ಚರ್ಯಗೊಳಿಸಲು ಯುನಿಸೆಫ್ ತಯಾರಿ ಮಾಡಿಕೊಂಡಿತ್ತು.

ಅವರನ್ನು ಯುನಿಸೆಫ್‌ನ ತಾರಾ ಪ್ರಚಾರ ರಾಯಭಾರಿಯಾಗಿ ನೇಮಿಸುತ್ತಿರುವುದಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಯುನಿಸೆಫ್‌ ಮುಖ್ಯಸ್ಥೆ ಮಿಯಾಟಲ್ ರಸ್ಟಿಯಾ ಅವರು ಘೋಷಿಸುತ್ತಿದ್ದಂತೇ ಅವರು ಮಾತೇ ಹೊರಡದೆ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.