ADVERTISEMENT

ವಯಸ್ಸು ಶರೀರಕ್ಕೆ, ಶಾರೀರಕ್ಕಲ್ಲ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:31 IST
Last Updated 19 ಜೂನ್ 2019, 19:31 IST
spb
spb   

ಮೊದಲ ಬಾರಿಗೆ ಹಾಡಿದಾಗ ಇದ್ದಷ್ಟೇ ಶ್ರದ್ಧೆ ಈಗಲೂ ನನ್ನಲ್ಲಿ ಇದೆ. ಅದೇ ನನ್ನನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ನನ ಶರೀರಕ್ಕೆ 73 ವರ್ಷ. ಶಾರೀರಕ್ಕೆ (ಕಂಠ) ಇನ್ನೂ 37ರ ಹರೆಯ. ಶರೀರಕ್ಕೆ ವಯಸ್ಸಾಗಿರಬಹುದು, ಶಾರೀರಕ್ಕಲ್ಲ...ವಯಸ್ಸಿನಿಂದ ಬಳಲಿದ್ದು ದೇಹ. ಕಂಠವಲ್ಲ. ಜೀವನದ ಕೊನೆಯ ಉಸಿರು ಇರುವವರೆಗೂ ನನ್ನ ಧ್ವನಿ ಬಳಲುವುದಿಲ್ಲ. ಹಾಡು ನಿಲ್ಲುವುದಿಲ್ಲ...

– ಹೀಗೆಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದು ಖ್ಯಾತ ಹಿನ್ನಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣಂ. ಹಾಡುಗಳೊಂದಿಗಿನ ಪಯಣವನ್ನು ಅವರು ಮೆಲುಕು ಹಾಕುತ್ತಿದ್ದರೆ, ಪ್ರೇಕ್ಷಕರು ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುತ್ತಿದ್ದರು.

ಎಸ್‌ಪಿಬಿ ಫ್ಯಾನ್ಸ್‌ ಚಾರಿಟೆಬಲ್‌ ಫೌಂಡೇಶನ್‌ ಮತ್ತು‘ಪ್ರಜಾವಾಣಿ‘ ಸಹಭಾಗಿತ್ವದಲ್ಲಿ ಶನಿವಾರ ನಡೆದ ಎಸ್‌ಪಿಬಿ ಹಿಂದಿ ಹಾಡುಗಳ ‘ಬಾಲಿವುಡ್‌ ಪಯಣ’ (ದ ಜರ್ನಿ ಆಫ್‌ ಬಾಲಿವುಡ್‌)ರಸಸಂಜೆಯಲ್ಲಿ ಭಾಗವಹಿಸಲು ಬಂದಿದ್ದ ಅವರನ್ನು ಖುದ್ದಾಗಿ ಭೇಟಿಯಾಗುವ ಅವಕಾಶವನ್ನು ಅಭಿಮಾನಿಗಳಿಗೆ ಒದಗಿಸಲಾಗಿತ್ತು.ಟಿಎಎಂ (ಟ್ಯಾಮ್‌) ಪ್ರೊಡಕ್ಷನ್‌ ಮತ್ತು ರಾಜ್‌ ಇವೆಂಟ್ಸ್‌ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು.

ADVERTISEMENT

ಪ್ರಯಾಣ ಮತ್ತು ಅಭಿಮಾನಿಗಳ ಜತೆ ಫೋಟೊ ಸೆಷನ್‌ನಿಂದ ಬಳಲಿದಂತೆ ಕಂಡು ಬಂದ ಎಸ್‌ಪಿಬಿ ಹಾಡುವ ಮೂಡ್‌ನಲ್ಲಿ ಇರಲಿಲ್ಲ. ಮಾತನಾಡುವ ಉಮೇದಿನಲ್ಲಿದ್ದರು. ‘ನನಗೀಗ 73 ವರ್ಷ. ಮೊದಲಿನಂತೆ ಬಹಳ ಹೊತ್ತು ನಿಲ್ಲಲು ಆಗುತ್ತಿಲ್ಲ. ಕಾಲು, ಮಂಡಿ ನೋಯುತ್ತವೆ. ಆಯಾಸವಾಗುತ್ತದೆ. ಹೀಗಾಗಿ ಕುಳಿತುಕೊಂಡೇ ಮಾತನಾಡುತ್ತೇನೆ. ಕ್ಷಮಿಸಿ’ ಎಂಬ ಸಂಕೋಚದ ಒಕ್ಕಣೆಯೊಂದಿಗೆ ಮೆಲು ಧ್ವನಿಯಲ್ಲಿ ಮಾತು ಶುರುವಿಟ್ಟುಕೊಂಡರು.

ಕನ್ನಡ ಚಿತ್ರವೊಂದಕ್ಕೆ ಹಾಡಲು ಮೊದಲ ಬಾರಿಗೆ ಆಹ್ವಾನ ಬಂದಾಗಿನ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಎಸ್‌ಪಿಬಿ ಅವರ ಮಾತಿನ ಬಂಡಿ ಓಟ ಆರಂಭಿಸಿತು.

‘ಬೆಂಗಳೂರು ನನಗೆ ಹೊಸದಲ್ಲ. 53 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ.ಕನ್ನಡ ಚಿತ್ರವೊಂದಕ್ಕೆ ಹಾಡಲು ಮೊದಲ ಬಾರಿಗೆ ಆಹ್ವಾನ ಬಂದಾಗಿನ ಕ್ಷಣಗಳು ಈಗಲೂ ಹಚ್ಚ ಹಸಿರಾಗಿವೆ. ಆಗ ಕನ್ನಡ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಅಳುಕಿತ್ತು. ಕನ್ನಡಿಗರು ನನ್ನನ್ನು ಕೈಹಿಡಿದು ಇಲ್ಲಿಗೆ ಕರೆತಂದರು. ಮುಂದಿನದು ಇತಿಹಾಸ. ನಾನು ಕನ್ನಡಿಗನೇ ಆಗಿ ಹೋದೆ. ಕನ್ನಡಿಗರ ಮನೆ, ಮನಗಳಲ್ಲಿ ಒಬ್ಬನಾಗಿದ್ದೇನೆ. ಈಗ ನನ್ನನ್ನು ಕನ್ನಡಿಗನಲ್ಲ ಎಂದು ಹೇಳಲು ಯಾರಿಗೆ ತಾನೆ ಸಾಧ್ಯ? ಅಷ್ಟು ನಿರರ್ಗಳವಾಗಿ ಕನ್ನಡ ಮಾತುನಾಡುತ್ತೇನೆ’ ಎಂದು ಕನ್ನಡದೊಂದಿಗಿನ ನಂಟು ಬಿಡಿಸಿಟ್ಟರು.

ಮುಂಬೈನಂತೆ ಬೆಂಗಳೂರು ಕೂಡ ಅಚ್ಚ ಕಾಸ್ಮೊಪಾಲಿಟನ್‌ ಸಿಟಿ.ಎಲ್ಲ ಭಾಷಿಕರೂ ಇಲ್ಲಿ ಸಿಗುತ್ತಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷಿಕರ ಒಂದಲ್ಲ ಒಂದು ಕಾರ್ಯಕ್ರಮ ನೀಡುತ್ತಿರುತ್ತೇನೆ.ದಕ್ಷಿಣ ಭಾರತದಲ್ಲಿ ಸಂಪೂರ್ಣ ಬಾಲಿವುಡ್‌ ರಸಸಂಜೆ ನೀಡುತ್ತಿರುವುದು ಇದೇ ಮೊದಲು. ಎಲ್ಲರಿಗೂ ಅವರ ಮಾತೃ ಭಾಷೆ ಶ್ರೇಷ್ಠ. ಹಾಗಂತ ಉಳಿದ ಭಾಷೆಗಳು ಕನಿಷ್ಠ ಅಲ್ಲ. ಎಲ್ಲ ಭಾಷೆಗಳನ್ನೂ ಪ್ರೀತಿಸುವ ಮತ್ತು ಗೌರವಿಸುವ ದೊಡ್ಡ ಗುಣ ಬೆಳೆಸಿಕೊಳ್ಳಬೇಕು. ಇದರಿಂದಾಗಿಯೇ ನನಗೆ 15–16 ಭಾಷೆಯಲ್ಲಿ ಹಾಡಲು ಸಾಧ್ಯವಾಯಿತು ಎಂದರು.

ಒಬ್ಬ ಹಿನ್ನೆಲೆ ಗಾಯಕನಾಗಿ ಬಹುತೇಕ ಭಾರತೀಯ ಭಾಷೆಗಳಲ್ಲಿ ಹಾಡಿದ್ದೇನೆ. ಎಲ್ಲರನ್ನೂ ರಂಜಿಸಿದ್ದೇನೆ. ಎಲ್ಲರ ಪ್ರೀತಿ ಗಳಿಸಿದ್ದೇನೆ ಎಂಬ ಸಾರ್ಥಕ ಭಾವ ನನ್ನಲ್ಲಿದೆ. ಯಾರೂ ನನ್ನನ್ನು ತೆಲುಗು ಭಾಷಿಕ ಎಂದು ನೋಡಲಿಲ್ಲ. ತಮ್ಮ ಮಗನ ಮನೆಯಂತೆ ಸ್ವೀಕರಿಸಿದ್ದಾರೆ. ಅದು ನಿಮ್ಮ ದೊಡ್ಡ ಗುಣ ಎಂದು ಎಸ್‌ಪಿಬಿ ಭಾವುಕರಾದರು.

ಎಲ್ಲ ಭಾಷೆಗಳೂ ಶ್ರೇಷ್ಠ. ಪ್ರತಿಯೊಂದು ಭಾಷೆಗೂ ಅದರದೇ ಆದ ವೈಶಿಷ್ಟ್ಯಇರುತ್ತದೆ. ನಾನು ಯಾವುದೇ ಭಾಷೆಯಲ್ಲಿ ಹಾಡಲಿ ನನ್ನ ಮಾತೃ ಭಾಷೆಯಲ್ಲಿ ಹಾಡಿದಷ್ಟೇ ಪ್ರೀತಿಯಿಂದ ಹಾಡುತ್ತೇನೆ. ಭಾಷೆ ಹಿಂದಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ಹಾಡುತ್ತೇನೆ. ಹೀಗಾಗಿ ಎಲ್ಲ ಭಾಷೆಯವರು ನನ್ನನ್ನು ಒಪ್ಪಿಕೊಂಡಿದ್ದಾರೆ ಮತ್ತು ಅಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ನಿಮ್ಮ ಹಾಡುಗಳನ್ನು ಕೇಳುತ್ತ ನಾವು ಬೆಳೆದಿದ್ದೇವೆ ಎಂದು ನನ್ನನ್ನು ಕಂಡು ಜನರು ಪ್ರೀತಿಯಿಂದ ಹೇಳುತ್ತಾರೆ. ಆಗ... ಎಲ್ಲರ ಜೀವನದ ಘಟ್ಟದಲ್ಲಿ ನಾನಿದ್ದೇನಲ್ಲ ಎಂಬ ಧನ್ಯತಾ ಭಾವ ಮೂಡುತ್ತದೆ. ನಾನುನನ್ನ ಹೊಟ್ಟೆ ಪಾಡಿಗೆ ಹಾಡಿದ ಹಾಡನ್ನು ಜನರು ತಮ್ಮ ಹಾಡು ಎಂದು ಭಾವಿಸಿ ಸ್ವೀಕರಿಸಿದ್ದಾರೆ. ಅದು ಅವರ ದೊಡ್ಡ ಗುಣ. ಜನರು ಗುರುತಿಸಿದರೆ ಮಾತ್ರ ಕಲೆ ಮತ್ತು ಕಲಾವಿದನಿಗೆ ಬೆಲೆ.ಕಲಾವಿದರ ಯಶಸ್ಸು ನೀವು ಕೊಟ್ಟ ಭಿಕ್ಷೆ ಎಂದು ಸಂಕೋಚದ ಮುದ್ದೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.