ADVERTISEMENT

‘ದಿಗ್ಗಜರ ಒಡನಾಟ ನನ್ನ ಸುಯೋಗ’: ವಿದುಷಿ ಆರ್‌.ಎನ್‌. ಶ್ರೀಲತಾ ಸಂದರ್ಶನ

ಉಮಾ ಅನಂತ್
Published 19 ನವೆಂಬರ್ 2022, 23:45 IST
Last Updated 19 ನವೆಂಬರ್ 2022, 23:45 IST
ವಿದುಷಿ ಆರ್‌.ಎನ್‌. ಶ್ರೀಲತಾ
ವಿದುಷಿ ಆರ್‌.ಎನ್‌. ಶ್ರೀಲತಾ   

ರಾಜ್ಯದ ಪ್ರತಿಷ್ಠಿತ ಸಂಗೀತ ಸಂಸ್ಥೆ ‘ಕರ್ನಾಟಕ ಗಾನಕಲಾ ಪರಿಷತ್ತು’ ತನ್ನ ಐವತ್ತೊಂದನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಬೆಂಗಳೂರಿನ ಎನ್.ಆರ್‌. ಕಾಲೊನಿಯಲ್ಲಿ ನಡೆಸುತ್ತಿದ್ದು ಇಂದು (ನ. 20) ಸಮಾರೋಪ. ಈ ಬಾರಿ ಹಿರಿಯ ಸಂಗೀತಗಾರ್ತಿ ಡಾ. ಆರ್‌.ಎನ್‌. ಶ್ರೀ‌ಲತಾ ಅವರಿಗೆ ‘ಗಾನಕಲಾಭೂಷಣ’ ಹಾಗೂ ಯುವ ಹಾಡುಗಾರ್ತಿ ಮಾನಸಿ ಪ್ರಸಾದ್‌ ಅವರಿಗೆ ‘ಗಾನ ಕಲಾಶ್ರೀ’ ಬಿರುದು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾನಕಲಾಭೂಷಣ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೈಸೂರಿನ ವಿದುಷಿ ಆರ್‌.ಎನ್‌. ಶ್ರೀಲತಾ ಅವರು ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆ.

***

l ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್ ಅವರೊಂದಿಗೆ ಅತ್ಯಂತ ಸನಿಹದಿಂದ ಒಡನಾಡಿದವರು ನೀವು. ಈ ಘಟಾನುಘಟಿ ಸಂಗೀತಗಾರ್ತಿಯರ ಜೊತೆಗಿನ ನಿಮ್ಮ ಅನುಬಂಧ ತಿಳಿಸಿ.

ADVERTISEMENT

ಚೆನ್ನೈನ ಮ್ಯೂಸಿಕ್ ಅಕಾಡೆಮಿ ಮತ್ತು ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಲ್ಲಿ ನಡೆಸುವ ಸಂಗೀತ ಸ್ಫರ್ಧೆಗಳಿಗೆ ನಾನು ಹೋಗುತ್ತಿದ್ದೆ. ಪ್ರತಿ ಬಾರಿಯೂ ಪ್ರಥಮ ಬಹುಮಾನ ಬರುತಿತ್ತು. ಒಮ್ಮೆ ಸೊಸೈಟಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಮೂರು ಪ್ರಥಮ ಬಹುಮಾನ ಎರಡು ದ್ವಿತೀಯ ಬಹುಮಾನ ಬಂದವು. ಆ ವರ್ಷದ ಸಂಗೀತೋತ್ಸವದಲ್ಲಿ ನಾನೇ ಪ್ರಾರ್ಥನೆಯನ್ನೂ ಹಾಡಿದೆ. ಅಲ್ಲಿಗೆ ಸುಬ್ಬುಲಕ್ಷ್ಮಿ, ಪಟ್ಟಮ್ಮಾಳ್‌, ಎಂ.ಡಿ. ರಾಮನಾಥನ್ ಮುಂತಾದ ವಿದ್ವಾಂಸರು ಬಂದಿದ್ದರು. ನಾನು ಹಾಡಿದ ಮೇಲೆ ಎಲ್ಲರೂ ‘ತುಂಬಾ ಭಾವಪೂರ್ಣವಾಗಿ ಹಾಡಿದೆ, ಸಂಗೀತ ಬಿಡಬೇಡ, ಮುಂದುವರಿಸು’ ಎಂದು ಆಶೀರ್ವದಿಸಿದರು. ಅಲ್ಲಿ ನನಗೆ ಎಮ್.ಡಿ.ರಾಮನಾಥನ್ ಅವರು ತಂಬೂರಿಯನ್ನು ಬಹುಮಾನವಾಗಿ ಕೊಟ್ಟರು. ಸುಬ್ಬುಲಕ್ಷ್ಮಿ ಅವರು ಮನೆಗೆ ಕರೆದರು. ಇಂಥ ಸಂಗೀತಗಾರರ ಒಡನಾಟ ನನಗೆ ಸಿಕ್ಕಿದ್ದು ನನ್ನ ಸುಯೋಗವೇ ಸರಿ.

l ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ‘ಮನೋಧರ್ಮ ಸಂಗೀತ’ಕ್ಕೆ (ಕಲ್ಪನಾ ಸ್ವರ) ವಿಶಿಷ್ಟ ಸ್ಥಾನವಿದೆ. ಈ ವಿಚಾರದ ಬಗ್ಗೆ ನೀವು ಮಹಾಪ್ರಬಂಧವನ್ನೇ ಬರೆದಿದ್ದೀರಿ. ಈಗ ನಿಮ್ಮ ಮನೋಧರ್ಮದ ಬಗ್ಗೆ ತಿಳಿಸಿ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರರ ಸೃಜನಶೀಲತೆಗೆ ಪೂರ್ಣ ಅವಕಾಶವಿದೆ. ನಮ್ಮ ಸಂಗೀತ ಕಛೇರಿಯ ಅವಧಿಯಲ್ಲಿ ಸಿಂಹಪಾಲು ಮನೋಧರ್ಮ ಸಂಗೀತಕ್ಕೇ ಮೀಸಲು. ಅಲ್ಲದೆ ಮನೋಧರ್ಮ ಸಂಗೀತವೆಂಬುದು ಗುರುಗಳಿಂದ ಹೇಳಿಸಿಕೊಂಡೇ ಬರುವಂತಹುದಲ್ಲ. ಇದು ಹಾಡುಗಾರರ ಕಲ್ಪನೆ, ಸೃಜನಶೀಲತೆಯಿಂದ ಅಭಿವ್ಯಕ್ತವಾಗುವಂತಹುದು. ಇದಕ್ಕಾಗಿ ಒಳ್ಳೆಯ ಗುರುಗಳ ಮಾರ್ಗದರ್ಶನ, ಕೇಳ್ಮೆ, ಮನನ, ಅಭ್ಯಾಸ, ಸಾಧನೆ, ಚಿಂತನೆ, ಶ್ರದ್ಧೆ ಎಲ್ಲವೂ ಬಹಳ ಮುಖ್ಯ. ನನಗೆ ತಾಯಿ ಸಾವಿತ್ರಮ್ಮವರು ಚಿಕ್ಕಂದಿನಿಂದಲೇ ಪ್ರೋತ್ಸಾಹ ನೀಡಿದರು. ನಮ್ಮ ತಂದೆ ಹಾಗೂ ಗುರುಗಳಾದ ಆರ್.ಕೆ. ನಾರಾಯಣಸ್ವಾಮಿ ಅವರು ಸಂಗೀತ ಕಲಿಕೆ ಆರಂಭಿಸಿದರು. ನನ್ನ ಹಿರಿಯ ಅಣ್ಣ ಪದ್ಮಶ್ರೀ ಪುರಸ್ಕೃತ ಆರ್.ಎನ್. ತ್ಯಾಗರಾಜನ್ ಅವರು ಸಂಗೀತ ಹೇಳಿಕೊಡುತ್ತಿದ್ದರು. ನಾನು ಅಭ್ಯಾಸ ಮಾಡುವಾಗ ಒಂದೇ ರಾಗವನ್ನು ಹತ್ತಾರು ಸಲ ಆಲಾಪನೆ ಮಾಡುತ್ತಿದ್ದೆ. ಪ್ರತಿಬಾರಿಯು ಹೊಸಹೊಸ ಸಂಗತಿಗಳು ಸ್ಫುರಿಸುತ್ತಿದ್ದವು. ಹೀಗೆ ನಮ್ಮ ಮನೋಧರ್ಮವನ್ನು ವೃದ್ಧಿಸಿಕೊಳ್ಳುವುದು. ಜೊತೆಗೆ ಆ ಕಾಲದ ಅನೇಕ ಹಿರಿಯ ವಿದ್ವಾಂಸರ/ವಿದುಷಿಯರ ಸಂಗಿತ ಕಛೇರಿಗೆ ಹೋಗಿ ಕೇಳುತ್ತಿದ್ದೆ. ನಮ್ಮ ತಾತ, ಮುತ್ತಾತ ಎಲ್ಲರೂ ಸಂಗೀತ ವಿದ್ವಾಂಸರೇ, ಜೊತೆಗೆ ಮನೋಧರ್ಮ ಸಂಗೀತಕ್ಕೆ ಶಾಸ್ತ್ರದಲ್ಲಿ ಏನು ಇರಬಹುದು ಎಂಬ ಕುತೂಹಲದಿಂದ ಪ್ರಯೋಗಾತ್ಮಕ ವಿಷಯ ಆರಿಸಿಕೊಂಡು ಮಹಾಪ್ರಬಂಧ (ಪಿಎಚ್‌ಡಿ) ವನ್ನೂ ಬರೆದೆ.

l ಸಂಗೀತ ಕಛೇರಿ ನೀಡುವ ನಿಟ್ಟಿನಲ್ಲಿ ಸಂಗೀತದ ಅಕ‌ಡೆಮಿಕ್ ಅಧ್ಯಯನ ಅಗತ್ಯವಿದೆಯೆ?

ಸಂಗೀತ ಕಲಾವಿದರು ಕಛೇರಿಯನ್ನೇ ವೃತ್ತಿಯಾಗಿ ತೆಗೆದುಕೊಂಡರೆ ಅಕಡೆಮಿಕ್ ಅಧ್ಯಯನದ ಅಗತ್ಯವಿರುವುದಿಲ್ಲ. ಸಂಗೀತದ ಶಾಸ್ತ್ರವನ್ನು ಸ್ವಲ್ಪಮಟ್ಟಿಗೆ ಮನೆಯಲ್ಲೇ ಅಧ್ಯಯನ ಮಾಡಬಹುದು. ‘ಲಕ್ಷ್ಯ ಪ್ರಧಾನಮ್ ಖಲು ಶಾಸ್ತ್ರಮ್’ ಎಂಬಂತೆ ಲಕ್ಷ್ಯವೇ ಪ್ರಧಾನ, ನಂತರ ಶಾಸ್ತ್ರವು ಬಂದಿದ್ದು. ಆದರೆ ಇದರಲ್ಲೇ ಸಂಶೋಧನೆ ಮಾಡಬೇಕೆಂದಿದ್ದರೆ ಶಾಲಾ ಕಾಲೇಜಿನಲ್ಲಿ ಸಂಗೀತದ ಆಳವಾದ ಅಧ್ಯಯನದ ಅಗತ್ಯವಿರುತ್ತದೆ.

l ನಮ್ಮಲ್ಲಿ ಪಾರಂಪರಿಕ ಸಂಗೀತಕ್ಕೆ ಭದ್ರ ಬುನಾದಿ ಇದೆ. ಆದರೆ ಈಗೀಗ ಈ ಪರಂಪರೆ ಕೊಂಚ ಹಾದಿ ತಪ್ಪುತ್ತಿದೆ ಅನಿಸುತ್ತಿದೆ. ನಿಮ್ಮ ಅನಿಸಿಕೆ ಏನು?

ನಿಜವಾಗಿ ಪರಂಪರೆಗೆ ಭದ್ರಬುನಾದಿ ಇದೆ. ಈಗ ರುದ್ರಪಟ್ಟಣಮ್ ಸಂಗೀತ ಪರಂಪರೆ ಅಂದರೆ ಸಂಪ್ರದಾಯ ಶುದ್ಧ ಎಂದು ಹೇಳುತ್ತಾರೆ. ಹಾಗೆ ಸಂಗೀತ ಕ್ಷೇತ್ರದಲ್ಲಿ ಅನೇಕ ಪರಂಪರೆಗಳಿವೆ. ಶೋತೃಗಳು ಬದಲಾವಣೆಯನ್ನು ಇಷ್ಟಪಡುತ್ತಾರೆ. ಕೆಲವರು ತಮ್ಮ ಪ್ರಸ್ತುತಿಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಂಡಿರುತ್ತಾರೆ..ಅದು ಕಾರಣವಾಗುತ್ತದೆ. ಇದನ್ನು ಸರಿ ಎನ್ನಲು, ತಪ್ಪು ಎನ್ನಲು ಬರುವುದಿಲ್ಲ. ಅವರವರ ಮನಃಸ್ಥಿತಿಗೆ ಬಿಟ್ಟಿದ್ದು.

l ಪ್ರತಿಷ್ಠಿತ ಗಾನಕಲಾ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಇದು ಸಂಸ್ಥೆಯ ಹೆಮ್ಮೆಯ ಪ್ರಶಸ್ತಿ. ನಿಮಗೆ ಏನನಿಸುತ್ತಿದೆ?

ಪ್ರತಿಯೊಬ್ಬ ಸಂಗೀತಗಾರನಿಗೂ ‘ಗಾನಕಲಾಭೂಷಣ’ ಪುರಸ್ಕಾರ ಪಡೆಯುವುದು ಒಂದು ಕನಸು. ಇದು
ಸಂಗೀತ ಜೀವನದ ಮೈಲಿಗಲ್ಲು. ನಿಜಕ್ಕೂ ಈ ಸಂಸ್ಥೆಯಿಂದ ನಾನು ಈ ಬಾರಿ ಪ್ರಶಸ್ತಿ ಪಡೆಯುತ್ತಿರುವುದು ಬಹಳ ಹೆಮ್ಮೆಯಾಗುತ್ತಿದೆ. ಈ ವೇದಿಕೆಯಲ್ಲಿ ಕಛೇರಿ ನೀಡುವುದೂ ಒಂದು ದೊಡ್ಡ ಗೌರವ ಎಂದೇ ಭಾವಿಸುತ್ತೇನೆ. ಸಂಗೀತ ವಿದ್ವಾಂಸ ಆರ್‌.ಕೆ. ಪದ್ಮನಾಭ ಅವರು
ಅನೇಕ ವರ್ಷಗಳಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಾ ಬರುತ್ತಿದ್ದು, ಹಲವಾರು ಕಲಾವಿದರಿಗೆ ಅವಕಾಶ ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದು ಎಲ್ಲ ಸಂಗೀತಗಾರರ ಸೌಭಾಗ್ಯ ಎಂದೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.