ಎ.ವಿ. ಆನಂದ್
ಮೃದಂಗ ವಿದ್ವಾನ್ ಎ.ವಿ. ಆನಂದ್ ಅವರು 90ನೇ ವರ್ಷಕ್ಕೆ ಕಾಲಿಡುವ ಹೊಸ್ತಿಲಲ್ಲಿ ಹಾಗೂ ಅವರ 80 ವರ್ಷಗಳ ನಾದಪಯಣವನ್ನು ಗೌರವಿಸುವ ದಿಸೆಯಲ್ಲಿ ಬೆಂಗಳೂರಿನ ಲಯನಾದ ಸಂಸ್ಥೆಯು ರಾಜಧಾನಿಯಲ್ಲಿ ಈಚೆಗೆ ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಈ ಮೂಲಕ ಒಬ್ಬ ನಾದತಪಸ್ವಿಗೆ ನಿಜವಾದ ಗೌರವ ಸಿಕ್ಕಿದಂತಾಯಿತು. ಅವನದ್ಧ ವಾದ್ಯದಲ್ಲಿ ಇಷ್ಟು ಸುದೀರ್ಘ ಸಂಗೀತ ಪಯಣ ನಡೆಸಿದ ಮೃದಂಗ ವಿದ್ವಾಂಸರು ಕರ್ನಾಟಕದಲ್ಲಿ ಬಹುಶಃ ಇವರೊಬ್ಬರೇ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಿಗೆ ಮೃದಂಗ ಪಕ್ಕವಾದ್ಯ ಇಲ್ಲದೇ ಹೋದರೆ ಆ ಕಛೇರಿಯೇ ಅಪೂರ್ಣ. ಮೃದಂಗದ ನಾದ ಕೇಳಲು ಬಹು ಸೊಗಸು. ಹೀಗಾಗಿಯೇ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರು ‘ಸೊಗಸುಗಾ ಮೃದಂಗ ತಾಳಮು...’ ಎಂದು ಕೀರ್ತನೆಯೊಂದರಲ್ಲಿ ಸ್ಮರಿಸಿದ್ದಾರೆ. ಈ ಸಾಲನ್ನು ನಾವು ಕೊಂಚ ಮಾರ್ಪಾಡು ಮಾಡಿ, ‘ಸಂಗೀತವು ಸೊಗಸಾದ ಅನುಭವ ನೀಡಬೇಕೆಂದರೆ ವಿದ್ವಾನ್ ಎ.ವಿ. ಆನಂದ್ ಅವರ ಮೃದಂಗ ಇರಬೇಕು’ ಎನ್ನಬಹುದು. ಏಕೆಂದರೆ, ಮಹಾಗುರು ಆನಂದ್ ಅವರು ಮೃದಂಗ ವಾದನಕ್ಕೆ ಅನ್ವರ್ಥನಾಮವಾಗಿ ಸಂಗೀತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಸಂಗೀತ ದಿಗ್ಗಜರಾದ ಚೆಂಬೈ ವೈದ್ಯನಾಥ ಭಾಗವತರ್, ಕೊಳಲು ಮಾಂತ್ರಿಕ ಟಿ.ಆರ್. ಮಹಾಲಿಂಗಂ, ಪಿಟೀಲು ಚೌಡಯ್ಯ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ವಿದುಷಿ ಡಿ.ಕೆ. ಪಟ್ಟಮ್ಮಾಳ್, ಬಾಲಮುರಳಿಕೃಷ್ಣ ಅವರಂತಹವರು ಆನಂದ್ ಅವರ ಮೃದಂಗ ಸಹಕಾರವನ್ನೇ ಬಯಸುತ್ತಿದ್ದುದು.
ಒಬ್ಬ ಕಲಾವಿದ ಎಂಟು ದಶಕಗಳ ಕಾಲ ಈ ವಾದನದಲ್ಲಿ ತೊಡಗಿಕೊಂಡು ಮೃದಂಗ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಸಣ್ಣ ವಿಚಾರವೇನಲ್ಲ. ವಿದ್ವಾಂಸರೆಲ್ಲರ ಗಾಯನ, ವಾದನಕ್ಕೆ ಮೃದಂಗ ತನಿ ನೀಡುತ್ತಾ, ಕೇಳುಗರ ಚಪ್ಪಾಳೆಯ ಸುರಿಮಳೆಯನ್ನೇ ಗಳಿಸುತ್ತಿದ್ದುದು ಇವರ ಕೈಚಳಕಕ್ಕೆ ಸಾಕ್ಷಿ. ಇವರ ನುಡಿಸಾಣಿಕೆ ಬೆರಗು ಹುಟ್ಟಿಸುವಷ್ಟು ಅದ್ಭುತ. ತಾಳದ ಹಿಡಿತ, ಮನೋಧರ್ಮದ ಸೊಬಗು ಮೃದಂಗ ಕೇಳುಗರಿಗೆ ಎಂದಿಗೂ ಆಪ್ಯಾಯಮಾನ. ಹೀಗಾಗಿಯೇ ಆನಂದ್ ‘ಲಯವಾದ್ಯ ನಿಪುಣ’ ಎನಿಸಿಕೊಂಡು ‘ಕರ್ನಾಟಕ ಕಲಾಶ್ರೀ’ ಆಗಿರುವುದು.
1950ರ ದಶಕದಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ದಿಗ್ಗಜರ ಕಛೇರಿಗಳಿಗೆ ಆನಂದ್ ಅವರೇ ಮೃದಂಗದ ಕೇಂದ್ರಬಿಂದು. ಪಿಟೀಲು ಚೌಡಯ್ಯನವರಿಗೆ ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ಮೃದಂಗ ಸಾಥಿ ನೀಡಿದವರು ಆನಂದ್. ಮೃದಂಗ ನುಡಿಸಾಣಿಕೆಯಲ್ಲಿನ ಪ್ರಬುದ್ಧತೆ ಇವರಿಗೆ ಹಲವು ಅವಕಾಶಗಳನ್ನೂ ಒದಗಿಸಿಕೊಟ್ಟಿತು. ಈ ಮಾತಿಗೆ ಪುಷ್ಟಿ ನೀಡುವಂತೆ ಆನಂದ್ ಅವರೇ ಒಂದು ಉದಾಹರಣೆಯನ್ನು ಮೆಲುಕು ಹಾಕುತ್ತಾರೆ. ಒಮ್ಮೆ ಹಬ್ಬದ ಸಂದರ್ಭದಲ್ಲಿ ಪಿಟೀಲು ಚೌಡಯ್ಯನವರು ಆಕಸ್ಮಿಕವಾಗಿ ಇವರ ಮನೆಗೆ ಬಂದರಂತೆ. ಪೂಜೆಯ ನಂತರ ಸಂಗೀತ ಸೇವೆ ಮಾಡುವೆ ಎಂದು ಚೌಡಯ್ಯನವರು ಪಿಟೀಲು ಕೈಗೆತ್ತಿಕೊಂಡರಂತೆ. ಚೌಡಯ್ಯನವರಿಗೆ ಮೃದಂಗ ಸಹಕಾರ ನೀಡಲು ಯಾರೂ ಇರದೇ ಇದ್ದಾಗ ಆನಂದ್ ಅವರನ್ನೇ ಮೃದಂಗ ನುಡಿಸಲು ಕೇಳಿಕೊಂಡರಂತೆ. ಸುಮಾರು ಒಂದು ಗಂಟೆ ಕಾಲ ಪಿಟೀಲು ನುಡಿಸಿದಾಗ ಆನಂದ್ ನುಡಿಸಿದ ಮೃದಂಗ ಪಕ್ಕವಾದ್ಯ ಕೇಳಿ ಚೌಡಯ್ಯನವರು ತುಂಬಾ ಖುಷಿಪಟ್ಟು ಬೆನ್ನು ತಟ್ಟಿದರಂತೆ.
ಇದಾದ ಮೇಲೆ ಆನಂದ್ ಅವರ ಸಂಗೀತದ ಬದುಕು ಮಹತ್ವದ ತಿರುವು ಪಡೆಯಿತು. ದಿಗ್ಗಜರ ಸಂಗೀತ ಕಛೇರಿಗಳಿಗೆಲ್ಲ ತನ್ನಿಂದ ತಾನೇ ಅವಕಾಶ ಒದಗಿಬಂದಿತು. ಆನಂದ್ ಬಹುಬೇಗ ಖ್ಯಾತಿಯ ಉತ್ತುಂಗಕ್ಕೇರಿದರು. ಎಂಬತ್ತರ ದಶಕದಲ್ಲಿ ವಿದೇಶಗಳಿಗೂ ಹೋಗಿ ಮೃದಂಗ ಕಛೇರಿ, ಉಪನ್ಯಾಸ, ಪ್ರಾತ್ಯಕ್ಷಿಕೆ ನೀಡುವ ಅವಕಾಶವನ್ನು ಪಡೆದುಕೊಂಡರು.
‘ಗಾಯಕರ ಭಾವಕ್ಕೆ ಅನುಗುಣವಾಗಿ ಲಯವಾದ್ಯವನ್ನು ನುಡಿಸಬೇಕಾಗುತ್ತದೆ. ಹಾಡುಗಾರರು ‘ತನಿ’ ಬಿಟ್ಟಾಗ ಅವರ ಮನೋಧರ್ಮಕ್ಕೆ ಅನುಗುಣವಾಗಿ ಮೃದಂಗ ನುಡಿಸಿದರೆ ವಾದಕ ಗೆದ್ದ ಹಾಗೇ. ಒಬ್ಬ ಪಕ್ಕವಾದ್ಯಗಾರನ ನೈಪುಣ್ಯ ತಿಳಿಯುವುದು ಕೂಡ ಇದೇ ಸಂದರ್ಭದಲ್ಲಿ. ಹೀಗಾಗಿ, ವಾದಕ ರಂಜನೀಯವಾಗಿ ನುಡಿಸುವ ಕಲೆಗಾರಿಕೆಯನ್ನು ಸಿದ್ಧಿಸಿಕೊಳ್ಳಬೇಕು’ ಎನ್ನುತ್ತಾರೆ ವಿದ್ವಾನ್ ಆನಂದ್.
ಮುಂದಿನ ಪೀಳಿಗೆಗೆ ಸಂಗೀತದ ಸವಿಯನ್ನು ಹಂಚುವ, ಮಕ್ಕಳಲ್ಲಿ ಸದ್ಭಾವನೆ ಮೂಡಿಸುವ ಕೆಲಸವನ್ನು ಆನಂದ್ ಮಾಡುತ್ತಲೇ ಬಂದಿದ್ದಾರೆ. ಇವರ ಸಾಧನೆ, ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದ್ದು, ಸಂಗೀತ ಕಲಾರತ್ನ, ಗಾನಕಲಾಭೂಷಣ, ಮೈಸೂರು ಅರಮನೆಯಿಂದ ‘ಆಸ್ಥಾನ ವಿದ್ವಾನ್’ ಪುರಸ್ಕಾರ, ಕರ್ನಾಟಕ ಕಲಾಶ್ರೀ, ಲಯಕಲಾ ನಿಪುಣ ಮುಂತಾದ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಇದು, ಈ ಮಾಗಿದ ಕಲಾವಿದನ ‘ಲಯ ಸಾಮರ್ಥ್ಯ’ಕ್ಕೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.