ADVERTISEMENT

ಸಂಗೀತ: ಬದುಕೆಲ್ಲವೂ ನಾದಮಯ!

ಉಮಾ ಅನಂತ್
Published 14 ಡಿಸೆಂಬರ್ 2024, 23:30 IST
Last Updated 14 ಡಿಸೆಂಬರ್ 2024, 23:30 IST
<div class="paragraphs"><p>ಆರ್‌.ಕೆ. ಪದ್ಮನಾಭ</p></div>

ಆರ್‌.ಕೆ. ಪದ್ಮನಾಭ

   
ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದ ವಿದ್ವಾನ್ ಆರ್‌.ಕೆ. ಪದ್ಮನಾಭ ಅವರು ನಾದತಪಸ್ವಿ. ಶಾಸ್ತ್ರೀಯ ಗಾಯನ, ದೇವರನಾಮ, ವರ್ಣ, ಕೃತಿ, ತಿಲ್ಲಾನಗಳನ್ನು ಹೃದಯ ತಟ್ಟುವಂತೆ ಹಾಡುವ ಈ ಅದ್ಭುತ ಗಾಯಕ, ಗೋಷ್ಠಿ ಗಾಯನದ ಮೂಲಕ ಸಂಗೀತವನ್ನು ಮನೆಮಾತಾಗಿಸಿದ್ದಾರೆ. ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದ ಈ ಸಾಧಕನಿಗೆ ಈಗ ಎಪ್ಪತೈದರ ಹರೆಯ, ಇವರ ಸಂಗೀತ ಪಯಣಕ್ಕೆ ಸುವರ್ಣ ಸಂಭ್ರಮ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಗಾನಕಲಾಭೂಷಣ ಆರ್‌.ಕೆ. ಪದ್ಮನಾಭ ಅವರು ‘ನಡೆದಾಡುವ ಸಂಗೀತ ಎನ್‌ಸೈಕ್ಲೊಪೀಡಿಯ’. ವಾಗ್ಗೇಯಕಾರ, ಗಾಯಕ, ಬೋಧಕ, ಸಂಘಟಕ, ವಾಗ್ಮಿ, ಸಂಗೀತ ಬರಹಗಾರ... ಹೀಗೆ ಸಂಗೀತದ ಹತ್ತೆಂಟು ವಿಶೇಷಣಗಳನ್ನು ಹೊಂದಿರುವ ಇವರು ಸಂಗೀತದ ಗಟ್ಟಿಕುಳ! ಡಿ. 21ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇವರ ಶಿಷ್ಯಂದಿರು ‘ಗುರುನಮನ’ ಏರ್ಪಡಿಸಿ ‘ಗಾನಕಲಾ ಬ್ರಹ್ಮರ್ಷಿ’ ಬಿರುದು ಪ್ರದಾನ ಮಾಡುವರು. ಇಡೀ ದಿನದ ಕಾರ್ಯಕ್ರಮದಲ್ಲಿ ವಿದ್ವಾಂಸರ ಸಂಗೀತ ಕಛೇರಿಗಳನ್ನೂ ಸವಿಯುವ ಅವಕಾಶ ಸಹೃದಯರಿಗಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಂಗೀತ ಪಯಣ ಕುರಿತು ‘ಭಾನುವಾರದ ಪುರವಣಿ’ಯೊಂದಿಗೆ ಮಾತನಾಡಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ನಿಮ್ಮದು ಸುಮಾರು ಐವತ್ತು ವರ್ಷಗಳ ಸುದೀರ್ಘ ಪಯಣ. ನಿಮ್ಮ ನಾದ ಬದುಕಿನ ಆರಂಭದ ದಿನಗಳು ಹೇಗಿದ್ದವು...?

ADVERTISEMENT

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದ ಶಾಲೆಯಲ್ಲಿ ಓದುತ್ತಿರುವಾಗ ಅಲ್ಲಿ ಸಂಗೀತ ಪಾಠ ಹೇಳಿಕೊಡುವವರು ಇರಲಿಲ್ಲ. ಆದರೆ ನನ್ನ ಬಳಿ ಆ ಕಲೆ ಇತ್ತು. ಧೈರ್ಯವೂ ಇತ್ತು. ಯಾರಾದರೂ ಹಾಡು ಎಂದಾಗ ಹಾಡುತ್ತಿದ್ದೆ. ಆಮೇಲೆ ಮೈಸೂರಿಗೆ ಬಂದೆವು. ಅಲ್ಲಿ ಬಿಡಾರಂ ಕೃಷ್ಣಪ್ಪನವರು ಕಟ್ಟಿಸಿದ ಬಿಡಾರಂ ರಾಮಮಂದಿರದಲ್ಲಿ ಸಂಗೀತ ಕ್ಲಾಸ್ ಇತ್ತು. ಅಲ್ಲಿ ಚೌಡಯ್ಯನವರು ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್ ಅಂತ ಶುರು ಮಾಡಿದ್ರು. ಅಲ್ಲಿ ಸ್ವಲ್ಪವೇ ಸಂಗೀತ ಕಲಿತು 1962–63ರಲ್ಲಿ ಬೆಂಗಳೂರಿಗೆ ಬಂದು ಸೀತಾರಾಮ ಶಾಸ್ತ್ರಿ ಅವರ ಬಳಿ ಸಂಗೀತ ಕಲಿತೆ. ಕಲಿಕೆ ಕಷ್ಟ ಅನಿಸ್ತು, ಬಿಟ್ಟು ಬಿಟ್ಟೆ. ನಂತರ 1973ರಲ್ಲಿ ಬ್ಯಾಂಕ್ ನೌಕರನಾಗಿ ಸೇರಿದೆ. ಮುಂದೆ 1974ರಲ್ಲಿ ವಿಜಯಾ ಕಾಲೇಜ್ ಆಫ್ ಮ್ಯೂಸಿಕ್‌ಗೆ ಸೇರಿ ಕೃಷ್ಣಮೂರ್ತಿ ಹಾಗೂ ನಾರಾಯಣಸ್ವಾಮಿ ಭಾಗವತ ಬಳಿ ಸಂಗೀತ ಕಲಿತೆ. ಇಲ್ಲೂ ಮನೋಧರ್ಮ ಸಂಗೀತ, ರಾಗ ಎಲ್ಲವೂ ಕಷ್ಟ ಅನಿಸಿತು. ಕ್ಲಾಸಿಗೆ ಹೋಗೋದೇ ಬಿಟ್ಟೆ. ಒಮ್ಮೆ ಮೇಷ್ಟ್ರೇ ಮನೆಗೆ ಬಂದು ನನ್ನನ್ನು ಎಳ್ಕೊಂಡು ಹೋದ್ರು. 1975ರಲ್ಲಿ ಮೊದಲ ಕಛೇರಿ. ಅಲ್ಲಿಂದ ನಾನು ಸಂಗೀತವನ್ನು ತುಂಬ ಗಂಭೀರವಾಗಿ ತೆಗೆದುಕೊಂಡೆ. ವಾಯ್ಸ್ ಕಲ್ಚರ್ ಬಗ್ಗೆ ನಾನೇ ಚಿಂತನೆ ಮಾಡಿದೆ. 2001ರಿಂದ ನಾನು ಸ್ವತಂತ್ರನಾಗಿ ಹಾಡಲು ಶುರು ಮಾಡಿದೆ. ಅದೇ ನನ್ನ ಸಂಗೀತ ಜೀವನಕ್ಕೆ ದೊಡ್ಡ ತಿರುವು. ಅಲ್ಲಿಂದ ಮುಂದಿನ ನನ್ನ ಬದುಕೆಲ್ಲವೂ ಸಂಗೀತಮಯ, ಬರೀ ನಾದಮಯ!.

ಶಾಸ್ತ್ರೀಯ ಸಂಗೀತ ಕುರಿತು ಹಲವಾರು ಕೃತಿಗಳನ್ನು ರಚಿಸಿದ್ದಲ್ಲದೆ, ಕೃತಿಗಳಿಗೆ ವರ್ಣಮಟ್ಟುಗಳನ್ನು ಹಾಕಿ ಹಾಡಿದಿರಿ. ನಿಮ್ಮ ಸಂಗೀತ ಕೃಷಿ ಬಗ್ಗೆ ತಿಳಿಸಿ.

ನಾನು ಸಂಗೀತದ ಮಟ್ಟುಗಳನ್ನು ಬರೆಯಲು ಶುರು ಮಾಡಿದ್ದು 1990ರಲ್ಲಿ ವಾದಿರಾಜರ ಅನುಗ್ರಹ ಆದ ಮೇಲೆ. ವಾದಿರಾಜರ ಮೇಲೆ 48 ಕೃತಿಗಳನ್ನು ಬರೆದೆ. ಇದು ಸೀರೀಸ್‌ನಲ್ಲಿ ಪ್ರಕಟವೂ ಆಯ್ತು. ವಾಗ್ಗೇಯಕಾರ ವಾಸುದೇವಾಚಾರ್ಯರ ಸಮಗ್ರ ಕೃತಿ, ವರ್ಣ, ತಿಲ್ಲಾನಗಳನ್ನೊಳಗೊಂಡ ಧ್ವನಿಸುರುಳಿ ಹಾಗೂ ಪುಸ್ತಕಗಳನ್ನು ಅವರ ಮೊಮ್ಮಗ ಎಸ್‌.ಕೃಷ್ಣಮೂರ್ತಿ ಅವರ ನೆರವಿನೊಂದಿಗೆ ಹೊರತಂದಿದ್ದೇನೆ. ಈ ಎಲ್ಲ ಕೃತಿಗಳನ್ನು ನಾಡಿನ ಹಿರಿಯ ಕಲಾವಿದರು ಹಾಡಿದ್ದಾರೆ. ಇದು ಕನ್ನಡಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಜೊತೆಗೆ ನವಾವರಣ ಕೃತಿಗಳು, ರಾಘವೇಂದ್ರ, ಕನಕದಾಸ, ಪುರಂದರದಾಸರ ಮೇಲೆ ಪುಸ್ತಕ ಬರೆದೆ. 1991ರಿಂದ 2004ರವರೆಗೆ ಸಂಗೀತ ಕೃತಿಗಳ ಪುಸ್ತಕ ಪ್ರಕಟಣೆ ಮಾಡಿ ಸಂಗೀತ ಜತನವಾಗಿ ಉಳಿಯುವಂತೆ ಮಾಡಿದೆ. ಶಂಕರ ಭಾಗವತರ ನೂರು ಕೃತಿ ರಚನೆ ಮಾಡಿದೆ. ಸಂಗೀತದ 72 ಮೇಳರಾಗಗಳಲ್ಲೂ ಕೃತಿಗಳನ್ನು ಕನ್ನಡದಲ್ಲಿ, ‘ಪುರಂದರ ಮೇಳ ಮಾಲಾ’ ಹೆಸರಿನಲ್ಲಿ ರಚಿಸಿದೆ. ಸೌಂದರ್ಯಲಹರಿಗೂ ಮಟ್ಟು ಹಾಕಿದೆ. ಕನ್ನಡ ಮಾತ್ರವಲ್ಲದೆ ಸಂಸ್ಕೃತ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸುಮಾರು 700–800 ಕೃತಿಗಳನ್ನು ರಚಿಸಿದ್ದೇನೆ. ಇವುಗಳಲ್ಲಿ ಬಹುತೇಕ ಕನ್ನಡದಲ್ಲಿಯೇ ಮಾಡಿದ್ದು, ದೇಶ ವಿದೇಶಗಳಲ್ಲಿ ಹಾಡಿದೆ. ಸಂಗೀತ ಕೃತಿಗಳನ್ನು ಗಮನಿಸಿ ಪುಟ್ಟರಾಜ ಗವಾಯಿಗಳು ನನ್ನನ್ನು ಆಶ್ರಮಕ್ಕೆ ಕರೆಸಿದ್ರು. ಅಲ್ಲಿ ಹಾಡಿದೆ. ಅಲ್ಲಿ ನನಗೆ ‘ಪುಟ್ಟರಾಜ ಗವಾಯಿ ರಾಷ್ಟ್ರೀಯ ಪ್ರಶಸ್ತಿ’ಯೂ ಲಭಿಸಿತು.

ನೀವು ಏರ್ಪಡಿಸುವ ‘ಗೋಷ್ಠಿ ಗಾಯನ’ ಬಹಳ ಜನಪ್ರಿಯವಾಗಿದೆ. ಗೋಷ್ಠಿ ಗಾಯನದ ಉದ್ದೇಶ...

ನೂರಾರು ಕಲಾವಿದರು ಸೇರಿ ಗುಂಪಿನಲ್ಲಿ ಶಾಸ್ತ್ರೀಯ ಕೃತಿ, ದೇವರನಾಮಗಳನ್ನು ಹಾಡುವುದು, ಈ ಮೂಲಕ ಸಂಗೀತದ ಕಂಪನ್ನು ನಾಡಿನ ಮೂಲೆಮೂಲೆಗೂ ತಲುಪಿಸುವುದು. ಅಲ್ಲದೆ ಮಹಿಳೆಯರಿಗೆ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸುವುದು, ಅವರಲ್ಲಿ ಧೈರ್ಯ ತುಂಬುವುದು, ಕೀಳರಿಮೆಯನ್ನು ಹೋಗಲಾಡಿಸುವುದು ಇದರ ಉದ್ದೇಶ. ಪ್ರತಿಭೆ ಇದ್ದರೂ ಅನೇಕ ಕಾರಣಗಳಿಂದ ಮಹಿಳೆಯರಿಗೆ ಮನೆಬಿಟ್ಟು ಹೊರಗೆ ಬರೋದಕ್ಕೆ ಆಗುವುದಿಲ್ಲ. ಇದರಿಂದ ಅವರಲ್ಲಿ ಕೀಳರಿಮೆ ಬೆಳೆಯುತ್ತದೆ. ಇಂಥವರಿಗೆ ಗೋಷ್ಠಿ ಗಾಯನ ಅತ್ಯಂತ ಸೂಕ್ತವಾದದ್ದು. ಇಲ್ಲಿ ಕೃತಿಗಳನ್ನು ಗುಂಪಿನಲ್ಲಿ ಹಾಡುವುದು, ‘ಕಲೆಕ್ಟಿವ್ ವಾಯ್ಸ್’ ಇಲ್ಲಿರುತ್ತದೆ. ಈ ಗಾಯನದಲ್ಲಿ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು, ನವಗ್ರಹ ಕೃತಿಗಳು, ಚತುರ್ದಶ ರಾಗಮಾಲಿಕಾ, ತ್ಯಾಗರಾಜರ ಪಂಚರತ್ನ ಕೀರ್ತನೆಗಳು, ವಾದಿರಾಜರ ಲಕ್ಷ್ಮೀ ಸೋಬಾನೆ, ಪುರಂದರ ದಾಸರ ನವರತ್ನ ಕೀರ್ತನೆಗಳು, ಶ್ಯಾಮಾಶಾಸ್ತ್ರಿಗಳ ಸ್ವರಜತಿಗಳನ್ನು ಹಾಡುತ್ತೇವೆ, ಇದರಿಂದ ಶಾಸ್ತ್ರೀಯ ಸಂಗೀತಕ್ಕೆ ಕಿವಿಗಳು ಸೃಷ್ಟಿಯಾಗುತ್ತದೆ. ಇಲ್ಲಿ 8ರಿಂದ 80 ವರ್ಷದವರೆಗಿನವರು ಕಲಾವಿದರು ಹಾಡ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ.

‘ರುದ್ರಪಟ್ಟಣ ಸಂಗೀತೋತ್ಸವ’ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇಲ್ಲಿ ‘ಸಪ್ತಸ್ವರ ದೇವತಾ ಧ್ಯಾನ ಮಂದಿರ’ ಕಟ್ಟಿಸಿದ್ದು ಮಹತ್ವದ್ದು. ಈ ಸಂಗೀತೋತ್ಸವ ಆರಂಭಿಸಿದ ಹಿನ್ನೆಲೆ ಏನು?

ರುದ್ರಪಟ್ಟಣ ಸಣ್ಣ ಹಳ್ಳಿ. ಆದರೆ ಸಂಗೀತ ಕಲಾವಿದರಿಗೆ ಈ ಊರೇ ಸ್ವರ್ಗ. ಇಲ್ಲಿ ಸಂಗೀತಕ್ಕಾಗಿ ಏನಾದರೂ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಜೊತೆಗೆ ಊರವರು ಕೂಡ ಎಲ್ಲ ಸೇರಿ ಏನಾದರೂ ಮಾಡೋಣ ಅಂದ್ರು. ಮೊದಲು ‘ಗೆಳೆಯರ ಸಮಾಗಮ’ ಅಂತ ಶುರು ಮಾಡಿದೆವು. 2003ರಿಂದ ಇಲ್ಲಿ ಸಂಗೀತೋತ್ಸವ ಶುರು ಮಾಡಿದೆ. ಸಂಗೀತ ಕೇಳಲು ಜನ ತಾವಾಗಿಯೇ ಬರಬೇಕು ಎಂದು 2007ರಲ್ಲಿ ಇಲ್ಲಿ ತಂಬೂರಿ ಆಕಾರದಲ್ಲಿ ‘ಸಪ್ತಸ್ವರ ದೇವತಾ ಧ್ಯಾನ ಮಂದಿರ’ ಕಟ್ಟಿಸಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ದೇವಸ್ಥಾನದಲ್ಲಿ ಸಂಗೀತವೇ ಪೂಜೆ. ವೇದ, ಪಾರಾಯಣ ಪೂಜೆ ಎಂಬುದಿಲ್ಲ. ಸಂಗೀತ ಪ್ರೇಮಿಗಳು ನೋಡಲೇಬೇಕಾದ ಅದ್ಭುತವಾದ ತಾಣ ಇದು.

ಕೊನೆಯದಾಗಿ ನಾನು ಹೇಳುವುದಿಷ್ಟು. ಕರ್ನಾಟಕ ಸಂಗೀತವನ್ನು ಕೊನೆಯುಸಿರಿರುವವರೆಗೂ ಮುಂದುವರಿಸುವೆ. ‘ಹಾಡಿದರಿರಬೇಕು, ಹಾಡದ ದಿವಸವೇ ಸೇರಬೇಕು ಹರಿಪಾದವ...’ ಎಂದರೆ ಹಾಡ್ತಾ ಇರಬೇಕು, ಹಾಡದೇ ಇದ್ದರೆ ಅದು ಜೀವನವೇ ಇಲ್ಲ. ಸಂಗೀತವೇ ಉಸಿರು, ಅದುವೇ ನನ್ನ ಬದುಕು...!

ಆರ್‌.ಕೆ. ಪದ್ಮನಾಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.