
ಇಂಗ್ಲಿಷ್: ಅರುಂಧತಿ ಸುಬ್ರಮಣಿಯಂ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಬೇಕಿದೆ ಜೈವಿಕವಾಗಿ ಕರಗುವ ಕವಿ
ಯಾವುದೋ ಸ್ಥಳದಲ್ಲಿ ಲಾವಾದಂತೆ ಹರಿಯುವ
ಮೌನದಲ್ಲಿ ಮುಳುಗೆದ್ದ ಕವಿ.
ಆದರೆ ಇಲ್ಲಿ
ಈ ಪ್ರಕ್ಷುಬ್ಧ ಮಾರುಕಟ್ಟೆಯಲ್ಲಿ
ಪ್ರೀತಿಸುವುದೇ ಒಂದು ಸವಾಲು,
ಇಂಥವರನ್ನು:
ಮಿಂಚುವವರು, ವಟಗುಟ್ಟುವವರು
ಮಾಂತ್ರಿಕ ಹಸಿರು ಕಣ್ಣುಗಳುಳ್ಳವರು
ಸುಕ್ಕುಸುಕ್ಕಾಗಿರುವವರು
ಅತೀ ಅಲರ್ಜಿಯವರು, ಕೊಳೆತು ಗೊಬ್ಬರವಾಗಬಲ್ಲವರು
ಪಾಲಿನಿಸಿಯಂ ಪಿಂಕು ಸಕ್ಕರೆಯಿಂದ ಮಾಡಿದವರು
ಮರುಬಳಕೆಯಾಗುವವರು
ರಾಜನ ಪರಿಚಿತರು, ರಾಣಿಯ ಪರಿಚಿತರು
ತಲೆಯೊಳಗೆ ಸರ್ಪ ಮಂಥನ ಮಾಡುತ್ತಿರುವವವರು
ಗ್ಲಾಮರಸ್ಸಾಗಿರುವವರು, ಕಾಲ ಮುಗಿದವರು
ಮರ್ಕಬಾ ಮಂಡಲಗಳ ಸವಾರಿ ಮಾಡುವ ದೇವತೆಗಳ
ಬಾಲ ಹಿಡಿದು ಹೊರಟವರು, ಬೂಸು ನಿವಾರಕರು
ಫಾರ್ಮಾಲ್ಡಿಹೈಡ್ ಕವಿಗಳು
ಬಿದ್ದವರು, ಮರೆಗುಳಿಗಳು,
ಹಸಿದ ಕಣ್ಣವರು ಎಲ್ಲರ,
ಎಲ್ಲರ ಮೇಲಾಡುತ್ತಿರಲಿ ನಿಮ್ಮ ನೋಟಗಳು.
ನೀವೂ ಆ ಹಾದಿ ಸಾಗಿ ಬಂದವರಲ್ಲವೇ?
ನಂಬಿಕೆ ಮತ್ತು ಭೀತಿಗಳ ನಡುವೆ
ತೂಗಾಡುತ್ತಾ ಕಾವೇರುತ್ತಾ
ಅಲೆಗಳ ಸವಾರಿ ಮಾಡುವುದನ್ನು ಕಲಿಯುತ್ತಾ?
ಗೊತ್ತು ನಿಮಗೆ ಅನುಮಾನಿಸುವವರು
ಕುದಿಯುವವರೂ ಗೊತ್ತು.
ಗೊತ್ತು, ಎಷ್ಟು ಸುಲಭ ಮರೆಯುವುದು
ಆ ಏದುಸಿರು, ಏದುಸಿರಿನ ಉಬ್ಬಸದ ದಿನಗಳನ್ನು.
ಆಮೇಲೆ, ಹೌದು, ನಿಮಗೆ ಗೊತ್ತು ಈ ವಿಪರ್ಯಾಸ
ತಮ್ಮದೇ ಸ್ವರ್ಣಲೇಪಿತ ಕೀರ್ತಿಗೆ ಬದ್ಧರಾಗಿರುವವರಿಗೆ,
ಒಂದು ಪೊಳ್ಳು ಕಾರಣಕ್ಕೆ ಸಿಕ್ಕಿಬಿದ್ದವರಿಗೆ
ಕೂಡಾ ಗೊತ್ತು, ಒಮ್ಮೊಮ್ಮೆ,
ಹೇಗೆ ಹಾಡಬೇಕು ಪದಗಳಲ್ಲಿ
ಮತ್ತು ಕೆಲವೊಮ್ಮೆ, ತೀರಾ ಅಪರೂಪಕ್ಕೊಮ್ಮೆ,
ಹೇಗೆ ಸುಡಬೇಕು ಮೌನದಲ್ಲಿ ಎಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.