ADVERTISEMENT

ಚಂದ್ರಕಾಂತ ಪೋಕಳೆ ಅವರ ಕವಿತೆ: ಅಜಾತಶತ್ರುವಿಗೆ ವಿದಾಯ!

ಚಂದ್ರಕಾಂತ ಪೋಕಳೆ
Published 11 ಜನವರಿ 2025, 22:30 IST
Last Updated 11 ಜನವರಿ 2025, 22:30 IST
   

ಈ ಅಜಾತಶತ್ರು ನಮ್ಮ ನಡುವೆ ಇದ್ದದ್ದು ಬಹಳ
ಜನರಿಗೆ ಗೊತ್ತೇ ಇರಲಿಲ್ಲ.
ಎಲ್ಲರೊಳು ಚಂದಾಗಿ
ಒಂದಾಗಿ ಇದ್ದೂ ಇಲ್ಲದ
ಪ್ರಬುದ್ಧ ಬುದ್ಧನಾಗಿದ್ದ.
ಎಲ್ಲರೂ ನಮ್ಮವ ನಮ್ಮವ ಎಂಬ ಭಾವ.
ಅನುರಾಗಿಯಾಗಿಯೂ ವಿರಾಗಿಯಂತಿದ್ದ.
ಶಿಲುಬೆ ಹೊತ್ತ ನೇಗಿಲಯೋಗಿಯಾಗಿದ್ದ.ಸದ್ದಿಲ್ಲದೆ ಕನ್ನಡದ ಕಹಳೆ ಊದಿದ್ದ.
ಮಕ್ಕಳನು ಮೋಡಿ ಮಾಡುವ ಸಾಗರದ ಕಿನ್ನರ ಜೋಗಿಯಾಗಿದ್ದ.
ಅಂತರಂಗದಲಿ ಕ್ರಿಸ್ತನಾಗಿದ್ದ.
ಬಹಿರಂಗದಲಿ ಶಾಂತಿದೂತನಾಗಿದ್ದ.
ಕನ್ನಡದಲಿ ಉಸಿರಾಡುವ ಕ್ರಾಂತಿದೂತನಾಗಿದ್ದ.

ಈ 'ನಾಡಿ 'ಯ ನಡೆ ಅಪರಂಜಿ.
ನುಡಿ ಮಾಸದ ಹೊನ್ನಕಳಸ.
ಲಿಂಗವೂ ಮೆಚ್ಚಿ ಅಹುದಹುದೆಂಬ ಬರಹ.
ನಾಡಿಯ ನುಡಿಮುತ್ತಿಗೆ
ಬೊಮ್ಮನೂ ತಲೆದೂಗಿದ್ದುಂಟು.
ಭಳಿರೇ! ಎಂದದ್ದುಂಟು!!

ಈ ಅಜಾತಶತ್ರುವಿಗೆ ಪ್ರಶಸ್ತಿ ಸಮ್ಮಾನಗಳ
ಹಂಗಿಲ್ಲ.
ಎಂದೂ ಕೀರ್ತಿಯ ಬೆನ್ನು ಹತ್ತಿದವನಲ್ಲ.

ADVERTISEMENT

ಇವನು ಕನ್ನಡ ಸಾಹಿತ್ಯಲೋಕದ
ಮಿಶನರಿಯಾಗಿದ್ದ!
ಕನ್ನಡದ ಚಿಣ್ಣರ ಪ್ರಿಯ ಸಾಂತಾಕ್ಲೂಜ್ ಅಜ್ಜನಾಗಿದ್ದ!

ಇಂಥ ನುಡಿಬ್ರಹ್ಮ
ನಮ್ಮ ನಡುವೆ ಇದ್ದ
ಎಂಬುದನು ನಂಬಲು ಸಾಧ್ಯವೇ ಇಲ್ಲ.
ಇಂದವನು ನಮ್ಮ ನಿಮ್ಮೆಲರನು ತೊರೆದು
ದೂರ - ಬಹುದೂರ
ಪಯಣ ಕೈಕೊಂಡಿದ್ದಾನೆ.
ಅಂಥ ಅನಾಸಕ್ತ ಕ್ರಿಸ್ತಯೋಗಿಗೆ
ನಮೋ! ನಮೋ!!
ನಮ್ಮ ನಿಮ್ಮೆಲ್ಲರ ಕಂಬನಿಯ ತರ್ಪಣ.
ಶ್ರದ್ಧಾಂಜಲಿಯ ಸಮರ್ಪಣ.

ಓಂ ಶಾಂತಿ!
ಅಮೆನ್!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.