ADVERTISEMENT

ಸೊಪ್ಪಿನ ಸಂತೆ

ಸುರೇಶ ನೇರ್ಲಿಗೆ
Published 8 ಡಿಸೆಂಬರ್ 2018, 19:30 IST
Last Updated 8 ಡಿಸೆಂಬರ್ 2018, 19:30 IST
ಚಿತ್ರ: ವಿಜಯಕುಮಾರಿ ಆರ್‌.
ಚಿತ್ರ: ವಿಜಯಕುಮಾರಿ ಆರ್‌.   

ನಮ್ಮೂರಲ್ಲಿ ಒಂದು ದಿನ
ಸಂತೆ ನಡೆದಿತ್ತು
ರೈತರು ಬೆಳೆದ ಸೊಪ್ಪುಗಳೆಲ್ಲ
ಅಲ್ಲಿಗೆ ಬಂದಿತ್ತು

ಘಮಘಮವೆನ್ನುತ ಕೊತ್ತಂಬರಿಯು
ನಾಚುತ ನಿಂತಿತ್ತು
ಸಣ್ಣಿಯ ಹೊಲದ ಅಣ್ಣೇ ಸೊಪ್ಪು
ಕಣ್ ಕಣ್ ಬಿಡುತಿತ್ತು

ಅಜ್ಜಿಯು ತಂದ ಅರಿವೆ ಸೊಪ್ಪು
ಗರಿಗರಿಯಾಗಿತ್ತು
ಅಜ್ಜನ ಇಷ್ಟದ ಸಬಾಸ್ಗಿ ಸೊಪ್ಪು
ಸಂಭ್ರಮ ಪಡುತಿತ್ತು

ADVERTISEMENT

ಹಸಿರೆಲೆ ಬಣ್ಣದ ಪಾಲಾಕ್ ಸೊಪ್ಪು
ಮುಸಿಮುಸಿ ನಗುತಿತ್ತು
ನೆಂಟರ ಇಷ್ಟದ ದಂಟಿನ ಸೊಪ್ಪು
ಗಂಟಲಿ ಕಟ್ಟಿತ್ತು

ಹುಳಿಹುಳಿ ರುಚಿಯ ಪುಂಡಿ ಸೊಪ್ಪು
ಪುಂಡಾಟ ನಡೆಸಿತ್ತು
ಕರಿ ಹೊಲದಾಗಿನ ಕನ್ನೆ ಸೊಪ್ಪು
ಕನ್ಯೆಯ ಕರೆದಿತ್ತು

ಒಗ್ಗರಣೆಗೆ ತಾನಿರಬೇಕೆಂದು
ಕರಿಬೇವದು ಹಠಮಾಡಿತ್ತು
ವರ್ಷಕ್ಕೊಮ್ಮೆ ತಿನ್ನಲಿಕ್ಕೆಂದು
ಕೆಸುವಿನ ಸೊಪ್ಪು ಕೂಗಿತ್ತು

ಬಳ್ಳಿಯ ಮೇಲಿನ ಬಸಳೆ ಸೊಪ್ಪು
ಬಿಂಕದಿ ನುಲಿದಿತ್ತು
ಅಧರಕೆ ಕಹಿಯ ಮೆಂತೆ ಸೊಪ್ಪು
ಉದರದ ಸೌಖ್ಯ ಬಯಸಿತ್ತು

ಥರಥರ ರುಚಿಯ ಬಗೆಬಗೆ ಸೊಪ್ಪು
ಕಣ್ಣಿಗೆ ಹಬ್ಬವ ನೀಡಿತ್ತು
ಅಪ್ಪನ ಕೂಡಿ ಬೇಗನೆ ಓಡಿ
ಕೊಳ್ಳುವ ಆಸೆಯು ಬಂದಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.