ಸಾಂದರ್ಭಿಕ ಚಿತ್ರ
ಬೆಳಗಿನ ಕಾಫಿ
ಒಟ್ಟಿಗೆ ಹೀರಿ
ಮನೆಗೆಲಸಗಳನ್ನು
ಜೊತೆಜೊತೆಗೆ ಮುಗಿಸಿ
ಕೀಲಿತಿರುವಿ
ಹೊರಬೀಳಬೇಕು ಎಂದುಕೊಂಡವರು
ನಾವಿಬ್ಬರೇ ಅಲ್ಲ
ಅಚ್ಚರಿ ಎನಿಸಿದ್ದನ್ನು
ಆಸಕ್ತಿ ಕೆರಳಿಸಿದ್ದನ್ನು
ಚರ್ಚಿಸುತ್ತಾ
ಊಟದ ಸವಿ ಹೆಚ್ಚಿಸಬೇಕು
ಎಂದುಕೊಂಡವರು
ನಾವಿಬ್ಬರೇ ಅಲ್ಲ!
ಬೆಳದಿಂಗಳು ಸುರಿವಾಗ
ಮಳೆ ಹನಿವಾಗ
ಹಾಡ ಗುನುಗುನಿಸುತ್ತಾ
ಪರವಶರಾಗಬೇಕು
ಎಂದುಕೊಂಡವರು
ನಾವಿಬ್ಬರೇ ಅಲ್ಲ
ಮುದ್ದಿನ ಕಂದನಿಗೆ
ಕಲ್ಪನೆಯ
ಕುಲಾವಿ ತೊಡಿಸಿ,
ಬೆಚ್ಚನೆಯ ತೊಟ್ಟಿಲಲ್ಲಿಟ್ಟು
ಗಿಲಕಿ ಗಿಲಕಿಸಿದವರು
ನಾವಿಬ್ಬರೇ ಅಲ್ಲ!
ಮುಪ್ಪಿನಲಿ
ಮನೆಯಂಗಳದಿ ಕುಳಿತು
ನೆನಹುಗಳ
ಉಯ್ಯಾಲೆಯಲಿ ಜೀಕುವ
ಯೋಜನೆ ಹಾಕಿಕೊಂಡವರು
ನಾವಿಬ್ಬರೇ ಅಲ್ಲ!
ಸಾವಿರ-ಲಕ್ಷಗಳ ಲೆಕ್ಕದಲ್ಲಿ
ನಮ್ಮಂತಹಾ
ಇಬ್ಬರಿರುತ್ತಾರೆ!
ಬಿಡು…
ಏಳು ಜನ್ಮಗಳುಂಟಂತೆ
ಅಲ್ಲಿ ಸಾವಿರಾರು
ಕಾರ್ತೀಕ-ಶ್ರಾವಣಗಳುಂಟಂತೆ
ಒಂದು ಜನ್ಮ
ಒಂದು ಮಾಸ
ಒಂದು ಘಳಿಗೆ
ನಮ್ಮಿಬ್ಬರದೇ
ಆಗುತ್ತದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.