ADVERTISEMENT

ಶಶಿ ತರೀಕೆರೆ ಬರೆದ ಕವಿತೆ: ಎದೆ ಸೆಟೆದು ನಿಂತ ಹುಡುಗ

ಶಶಿ ತರೀಕೆರೆ
Published 12 ಮಾರ್ಚ್ 2022, 19:30 IST
Last Updated 12 ಮಾರ್ಚ್ 2022, 19:30 IST
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌   

ದೂರದಲ್ಲೆಲ್ಲೋ ಗಮನ ಸೆಳೆಯುವ

ನಕ್ಷತ್ರ ರಾಶಿ, ಫುಟ್ಬಾಲು ಆಟ,

ಬೆಳಕಿನ ದಿಬ್ಬಣ, ಇನ್ನೆಲ್ಲೋ

ADVERTISEMENT

ಸಮರಕ್ಕೆ ನಿಂತ ಕ್ರೌಂಚ ಪಕ್ಷಿಯ ಅನುರಣನ

ಆಟದಲ್ಲಿ ಸೋತ ಕೂಡಲೇ

ಚಿತ್ತ ಚಂಚಲನಾದ ಪೆಂತೇರಿ ರೆಫರಿ

ಮೂಳೆಯೊಳಗಿನ ಮೇಣ

ಚಿನ್ನದಂತೆ ಕುದಿಸುತ್ತಿದ್ದಾನೆ ಹುಡುಗ

ಸುಮ್ಮನೆ ಕೆಣಕುತ್ತಿವೆ ಸೊಕ್ಕಿನ ಇಲಿಗಳು

ಕಿಟಕಿ ತೆರೆದೇ ಇದ್ದರೂ

ಗಾಳಿ ಹಿಡಿದಿಟ್ಟುಕೊಂಡಿದೆ ಬಾಗಿಲನ್ನು

ಇನ್ನಷ್ಟು ಗಟ್ಟಿಯಾಗುತ್ತಿದೆ ಅವನ ಎದೆಯ ಕಂಬನಿ

ಯಾರವರು ಬೇರೆ ಮಾಡಿದವರು

ಆ ಸರಸರ ಈಜುವ ಹುಡುಗನನ್ನು

ಸೈಕಲ್ಲು ಏರಿ

ಸೂರ್ಯನನ್ನು ಪಡಸಾಲೆಗೆ ತಂದು ಕೂರಿಸಿದವನನ್ನು

ಬಳಪದಿಂದ ಆತ್ಮ ಶುದ್ಧಿ ಎಂದವನನ್ನು

ಯಾರು ದಸ್ತಗಿರಿ ಮಾಡಿಸಿದವರು

ಲಕ್ಷ ಲಕ್ಷ ಮಿಂಚು ಹುಳ ನುಂಗಿದವನನ್ನು

ಕೀಟ ಕ್ರಿಮಿಗಳ ಪಾದಯಾತ್ರೆಗೆ

ವಿಷ ಕಾಯಿಸುವ ಎದೆಯ ಜ್ವಾಲೆಯ

ಗೂಡು ಕೆಂಪಾಗಾಗಿದೆ

ಚೆಂಡು ಹೊದೆಯುವ ಕಾಳಗಕ್ಕೆ

ನಿಮ್ಮ ತಲೆಗಳನ್ನೆ ಬಳಸಿಕೊಳ್ಳುವನು

ಆ ಎದೆ ಸೆಟೆದು ನಿಂತ ಹುಡುಗ

ಕೊನೆಗೆ ಹಠಮಾರಿಯನ್ನು

ನೀವು ಕೊಲ್ಲಬಹುದು ಗೆಲ್ಲಲಾಗುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.