ADVERTISEMENT

ರೂಪ ಹಾಸನ ಅವರ ಕವನ: ನಿರ್ದಯಿ ಸಂತೆಯಲಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 0:11 IST
Last Updated 13 ಏಪ್ರಿಲ್ 2025, 0:11 IST
<div class="paragraphs"><p>ಕವಿತೆ </p></div>

ಕವಿತೆ

   

ತಿರುವು ಮುರುವು
ಆರು... ಹತ್ತು...
ಕೊಡು ಕೊಳು
ಅಂತೆ ಕಂತೆ
ಬಿಸಿಯೇರುವ ಸಂತೆ
ಹೊತ್ತಿಳಿಯುವ ಹೊತ್ತಿಗೆ
ಇಷ್ಟಿಷ್ಟೇ ಮೈನರೆಯುತ್ತದೆ.

ತೀರ ಘಟ್ಟವ ಮುಟ್ಟಿದಾಗ
ನೆರಳು ಬೆಳಕು
ಇದೆ ಇಲ್ಲ
ಬೇಕು ಬೇಡ...
ಮತ್ತೆ ಇಷ್ಟಿಷ್ಟೇ
ಕರಗುತ್ತಾ ಕರಗುತ್ತಾ
ಬೇಕಾದ್ದು ಅರೆ ಕ್ಷಣದಲ್ಲಿ
ಬಿಕರಿಯಾಗಿ ಇಲ್ಲವಾಗುತ್ತದೆ!

ADVERTISEMENT

ಕೊಡು, ಕೊಳುವ ಆಟಕ್ಕೆ
ಬೇಡದ್ದೊಗೆದು ಬಿಸುಟ
ಸಿಕ್ಕಿದ್ದುಳಿದ ಕಸದ ರಾಶಿಯಲಿ
ದೇಹವೇ ಇಲ್ಲದ
ಬೆತ್ತಲೆ ಮನಸು!
ಸಂತೆ ಮುಗಿದ ನಂತರದ
ನಿರ್ಜನ ಮೈದಾನವೇ ಮೂಕ ಸಾಕ್ಷಿ.

ಬಿಕರಿಗರ್ಹವೋ ಅಲ್ಲವೋ
ಅಳತೆ ತಕ್ಕಡಿಯಲಿ
ಎಷ್ಟು ವಜನು ತೂಗೀತು
ಎಷ್ಟು ದಿನ ಬಾಳೀತು
ಈ ತುಂಬು ದೇಹ
ಎಂಬುದಷ್ಟೇ ಲೆಕ್ಕಕ್ಕೆ.

ನಿರ್ದಯಿ ಸಂತೆಯಲಿ
ಮೈ ಅಷ್ಟೇ ಮಾರಾಟಕ್ಕೆ
ಮನಸು ಕಸದ ಗುಂಡಿಗೆ...

ಸಂತೆಯಷ್ಟೇ ನಿರ್ದಯಿ
ಮನುಷ್ಯರು ಮಾತ್ರ
ಪರಮ ದಯಾಳುಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.