ADVERTISEMENT

ಕಣ್ಣೀರ ಹನಿ

ಸ.ರಘುನಾಥ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಲೆ: ಮದನ್‌ ಸಿ.ಪಿ.
ಕಲೆ: ಮದನ್‌ ಸಿ.ಪಿ.   

ಹಳೆಯ ಪ್ರಣಯ ಮಧುರ ಗೀತೆಗಳ ಆಲಿಸುವ ಇರಾದೆ
ಎದೆಯ ಬಾವಿಗೆ ಇಳಿದ ನೆನಪಿನ ಹಗ್ಗ
ಎದ್ದ ಅಲೆಗಳ ನಾದ ಮಿಡಿದ ಹೃದಯ
ಒತ್ತಿ ಕಂಪ್ಯೂಟರಿನ ಸ್ವಿಚ್ಚು ವಿಂಡೋಸ್‍ನ ಸ್ವಾಗತ ಪಡೆದು

ಯೋಚಿಸುತ್ತ ಇಲಿಯ ಆಡಿಸಿ ಅತ್ತಿತ್ತ
ಗೂಗಲಿನ ಹೊಟ್ಟೆಯಲಿ ಬಾಣ ಚುಚ್ಚಿ
ತೆರೆಸಿದ ಆಯತಾವರಣದಲ್ಲಿ
‘ಕನ್ನಡ ಓಲ್ಡ್ ರೊಮ್ಯಾಂಟಿಕ್ ಸಾಂಗ್ಸ್’ ಅಚ್ಚಿಸಿ

ರೆಪ್ಪೆ ಬಡಿದಾಗ ತನಗೂ ಉಂಟೆಂದು ರೆಪ್ಪೆ ಬಡಿದು ಪರದೆ
ಮೈದೆರೆಯಿತು ಹಬ್ಬಕ್ಕೆ ಸುಣ್ಣ ಹಚ್ಚಿದ ಗೋಡೆಯಂತೆ
ಇಲಿಗೆ ನಾಮವೆನಿಸುವಂತಿದ್ದ ಚಕ್ರ ತಿರುಗಿಸಿದಂತೆಲ್ಲ
ಅರೆಬರೆ ಮಾಹಿತಿಗಳ ಸಚಿತ್ರದುದ್ದ ಪಟ್ಟಿ

ADVERTISEMENT

ತಿಂಡಿ ತಿನಿಸುಗಳ ಹೆಸರು ಬಡಬಡಾ ಒದರಿ
ಆರ್ಡರಿಗೆ ಕಾಯುವ ಸರ್ವರನ ಹಾಗೆ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳ
ಇನ್ನಷ್ಟು ಭಾಷೆಗಳ ಹಾಡುಗಳ ಸರತಿ ಸಾಲು

ನಡುನಡುವೆ ಇಡ್ಲಿಯ ಮೇಲೆ ಸಾಂಬಾರಿನ ಈರುಳ್ಳಿ ಚೂರಿನಂತೆ
ಸೆರಗಿರದ ಆಂಟಿ, ಮಂಚದಲಿ ಅಂಗಾತ ಹುಡುಗಿ
ಹೊಕ್ಕುಳು ಚುಂಬಿಸಿಕೊಳುತ ಅರೆ ನಿಮೀಲಿತ ನಯನೆ
ವೆಜ್ ಅಂಡ್ ನಾನ್‍ವೆಜ್ ಹೋಟಲಿನ ಚಿತ್ರ ನೆನಪಿಗೆ

ನಾಕಾರು ಹಾಡುಗಳಿಗೆ ಹಿಂದಿಂದೆ ಒತ್ತಿ ಡೌನ್‍ಲೋಡಿಗೆ
ಕಾಯುವ ಬಿಡುವಲ್ಲಿ ‘ಹಾಟ್ ಆಂಟಿ ರೊಮಾನ್ಸ್ ವಿತ್...’ ಅಲ್ಲಿ
ಒತ್ತಿದಾಗ ಕರಿ ಚೌಕದಲಿ ಮುಕ್ಕಾಲು ಚಂದ್ರ ತಿರುತಿರುಗಿ ನಿಂತು
ಲಿಂಗ ಸಾಮರ್ಥ್ಯ ಹೆಚ್ಚಿಸಲು ಎಣ್ಣೆ ಕ್ಯಾಪ್ಸಲ್ಲುಗಳ ಜಾಹೀರಾತು

ದಾಟಿಸಿದಾಗ ಮೈತೆರೆದ ದೃಶ್ಯ: ಕೋಣೆ ನಡುವಿನ ಮಂಚದಲಿ
ಕುಳಿತ ಹೆಣ್ಣು, ಏನೇನೊ ಸದ್ದು, ಅಸ್ಪಷ್ಟ ಧ್ವನಿ
ಕೈಯೊಂದು ಸರಿಸುವುದು ಅವಳ ಸೆರಗು, ತೊಡೆತನಕ ಸೀರೆ
ಕ್ಯಾಮೆರಾದತ್ತೊಮ್ಮೆ ನೋಡಿ, ಕಣ್ಮುಚ್ಚಿ ಮಲಗುವಳು ಸ್ವಕುಚ ಮರ್ಧನೆ

ತೆರೆದೆದೆಯ ಗಂಡು ಚುಂಬಿಸುವ ಹೊಕ್ಕಳು
ಕ್ಲೋಜಪ್ಪಿನಲಿ ನುಲಿವ ಮೈ, ಸುಖ ನಿರೀಕ್ಷೆಯ ಮುಲುಕು
ಸೂಕ್ಷ್ಮಗೊಳಿಸಿದ ಕಿವಿ ತಮಟೆಗೆ ಬಡಿಯುವುದು ನರಳು ಹೊರಳು
ಮೈಯುದ್ದ ಅವನ ತುಟಿ ಚಲನೆ, ಅವಳ ಮುಖದಲ್ಲಿ ಅಮಲು ನಟನೆ

ಪ್ರಖರ ದೀಪದ ಬೆಳಕು ಅವಳ ಮುಖದ ಮೇಕಪ್ಪು
ಯಾವುದೋ ಸೂಚನೆಗೆ ಅವಳ ಕೈ ಹೇಳುವುದು ಒಲ್ಲೆ ಒಲ್ಲೆ
ಅರ್ಥವಾಗದು, ಆದರೂ ಕದ ತೆರೆಯುವುದು ಉದ್ವೇಗದ ಊಹೆ
ಅವಳ ಉಸಿರಲಿ ಕಾಣಿಸದು ಅವಳ ಹೊಟ್ಟೆಯಲುರಿವ ಕುಲುಮೆ ಕಕ್ಕುವ ಹೊಗೆ

ನಿರ್ದೇಶನದಂತೆ ತುಟಿ ಕಚ್ಚಿ, ಅರೆ ನಿಮೀಲಿತ ನಟಿತ ನೇತ್ರ
ಹುಟ್ಟಿದ್ದಿಲ್ಲ ರತಿಸುಖದ ನಿಡು ಉಸಿರು ಕಿರುಬೆವರು
ಸೊಂಟದ ಮೇಲ್ಭಾಗ ಅಸಹಜ ಅಲುಗಾಟ
ತಲೆ ಓರೆ, ಮುಚ್ಚಿದ ಕಣ್ಣು, ಮಂಚದಲಿ ಮಲಗಿರುವ ಹೆಣ
ಬಂದ ಸೂಚನೆಗೆ ಕೈ ಎರಡು ತಲೆ ಹಿಂದಕಿಟ್ಟಾಗ ಕಂಡಿತು
ಕಂಕುಳಲಿ ಬಿಳಿರವಿಕೆಗೆ ಹಾಕಿದ ಕರಿದಾರದ ಕೈ ಹೊಲಿಗೆ

ಮಂಚ ಬಿಟ್ಟೆದ್ದು ನಿಂತು ಸೆರಗು ಹೊದ್ದು, ತಲೆ ತಗ್ಗಿಸಿ
ಹೊಕ್ಕುಳ ಕೆಳಗೆ ನೆರಿಗೆ ಸಿಗಿಸುವಾಗ ಹೊಕ್ಕುಳ ಮೇಲೆ
ಬಿದ್ದು ಅಳುತಿರುವ ಕಣ್ಣೀರ ಹನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.