ADVERTISEMENT

ಟ್ರಯಲ್ ರೂಮಿನ ಅಪ್ಸರೆಯರು

ತೀರ್ಪುಗಾರರ ಮೆಚ್ಚುಗೆ ಪಡೆದ ಕವನ

ಭುವನಾ ಹಿರೇಮಠ
Published 15 ಡಿಸೆಂಬರ್ 2018, 19:30 IST
Last Updated 15 ಡಿಸೆಂಬರ್ 2018, 19:30 IST
ಚಿತ್ರ: ಡಿ.ಕೆ. ರಮೇಶ್‌
ಚಿತ್ರ: ಡಿ.ಕೆ. ರಮೇಶ್‌   

ಅಷ್ಟಷ್ಟೇ ಇಕ್ಕಟ್ಟಿನಲ್ಲಿ
ಮೂರೂ ದಿಕ್ಕಿನಿಂದ ಕೈಮಾಡಿ ಕರೆಯುವ ಕನ್ನಡಿಗಳ ಆತ್ಮಕ್ಕೆ ಮಾಟವಿಲ್ಲ,

ಆಸೆಗಣ್ಣಿನಿಂದ ಬಯಸಿ ತೊಟ್ಟ
ಸ್ಲಿವ್‌ಲೆಸ್ ಟಾಪಿನ ಟುಲಿಪ್ ಮೊಗ್ಗು,
ದುಬಾರಿ ಪ್ರಿನ್ಸ್ ಕಟ್ ಬ್ಲೌಜಿನ ಜರ‍್ರಿ ಬಾರ್ಡರು,
ಟ್ರಯಲ್ ರೂಮಿನ ಹ್ಯಾಂಗರುಗಳಲ್ಲಿ
ಹಾಗೆಯೇ ನೇತುಬಿದ್ದಿವೆ,
ನೀಳ ಬೆರಳಿನ ಸೇಲ್ಸ್ ಗರ್ಲ್ ಮುಟ್ಟಿ ಮುಟ್ಟಿ ಮಡಿಕೆ ಮಾಡಿ
ನಾಳೆಯ ಮನಸುಗಳ ಕದ ತಟ್ಟುವ ತನಕ.

ಕೂಲಿಂಗ್ ಗ್ಲಾಸಿನ ಕಾರ್ಪೋರೇಟ್ ಹುಡುಗಿಯ
ಬೆಳ್ಳನೆಯ ಮೈಯ್ಯ ಮೇಲೆ
ಬಿಸಿಲು ಮುತ್ತಿರಿಸಿದ ದಿನ
ಟುಲಿಪ್ ಮೊಗ್ಗು ಬಿರಿಯುವ ತನಕ,

ADVERTISEMENT

ಮನೆಯ ಕನ್ನಡಿಯಲ್ಲಿ
ಎಂದೂ ಅನಾವರಣಗೊಳ್ಳದ ಸುಂದರತೆ,
ಕಣ್ಣು ಮೂಗು ಗಲ್ಲದ ಮೇಲೊಂದು ನೇವರಿಕೆ
ಸ್ಪರ್ಶದಲ್ಲಿ ಕನ್ನಡಿಯ ಪರಕೀಯತೆ,
ಮೊಣಕಾಲು ಬಿಟ್ಟು ಮೇಲೇರುವ ಸ್ಕರ್ಟುಗಳು
ವ್ಯಾಕ್ಸ್ ಮಾಡದ ಮೀನಖಂಡ ತೊಡೆಗಳು
ಯಾವ ಮಾಡೆಲ್ಲಿಗೂ ಕಡಿಮೆಯಿಲ್ಲ ನಾನು...
ಟ್ರಯಲ್ ರೂಮಿನ ರಾರಾಜಿತ ಸತ್ಯ
ಸೀಮೆಯೊಳಗೇ,
ಮನಸು ಕನ್ನಡಿ ನಮ್ಮ ಬೆನ್ನ ಹಿಂದೆ ಬರಲಾರವು
ನಾವೆಲ್ಲ ಟ್ರಯಲ್ ರೂಮಿನ ಅಪ್ಸರೆಯರು

ವಯಸ್ಸು ಹೋದ ಹರೆಯವ ಬಡಿದೆಬ್ಬಿಸುವ
ಸ್ಟ್ರೀಟ್ ಬಾಯ್
‘ಲುಕಿಂಗ್ ಸ್ಮಾರ್ಟ್...’
ಎನ್ನುತ್ತ ಗಾಳಿಯ ಹೆಗಲ ಮೇಲೆ ಕೈಹಾಕಿ
ಚೂರು ಚೂರು ಸುಗಂಧವ ಬಿತ್ತುತ್ತಾ ನಡೆದಿದ್ದಾನೆ
ಕಾರ್ಪೋರೇಟ್ ಕಾಡು ಹೊಕ್ಕ
ಅಜ್ಞಾತ ಜಿಂಕೆಮರಿಗಳು ನಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.