ADVERTISEMENT

ದೊಡ್ಡಿ ಶೇಖರ ಅವರ ಕವಿತೆ: ಕೋಟೆಯೊಡೆದು ಬರಿದಾಗಲಿ

ದೊಡ್ಡಿಶೇಖರ  ಪುತ್ತೂರು
Published 28 ಸೆಪ್ಟೆಂಬರ್ 2025, 0:38 IST
Last Updated 28 ಸೆಪ್ಟೆಂಬರ್ 2025, 0:38 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಶುಗರಿದ್ದ ಮೈಯಲ್ಲಿ ಗಾಯ ಮೊಳೆಯದೆ
ನೆವ ಯಾವುದಾದರೂ ಸಾಕು
ಹಾದಿಯ ಎಡಗುಕಲ್ಲು
ಬಾಗಿಲ ಹೊಸ್ತಿಲು
ಮುರಿವ ಸೌದೆಯ ಸಿವರು
ನವೆಯ ಕರೆವ ತನ್ನುಗುರು
ಏನಾದರೂ ಗಾಯದ ಬೀಜ ಬಿತ್ತಿದಂತೆ

ಎದೆಯಲ್ಲಿ ಅವುತ ನೋವ ಮರ್ಮವ
ತಾಕುವುದಕ್ಕೆ ಏನಾದರೂ ಸಾಕು
ಮಾತಿನ ಕಾಲು ಮುರಿದು ಕುಕ್ಕರಿಸಿದರೆ
ಆಡುತ್ತಲೇ ನೆನಪ ಹಕ್ಕಳೆ ಹರಿದರೆ
ನಗುವೂ ಮುಳ್ಳ ಗೆರೆ ಎಳೆದರೆ
ಒಲ್ಲದ ಓರೆಯು ಕಣ್ಣಿಗೆ ಚುಚ್ಚಿದರೆ
ಪಸೆಯಾಡುವುದು ನೋವ ಗಾಯ
ರಸಿಕೆಯೆಂಬುದು ತುಂಬುದು ಎದೆಯ

ADVERTISEMENT

ಎಚ್ಚರ ಸತ್ತಿದ್ದು ಒಳಗೋ ಹೊರಗೋ
ಚಚ್ಚರದರಿವು ಬೇಗುದಿ ಆರದ ಕಿಡಿ
ತಿಳಿವು ತಗ್ಗಾದ ನೆಲದ ನೀರು
ಯಾವ ಕೋಳಿಯ ಕಾಲೂ
ಕಲಕಿದರೆ ಬಗ್ಗಡದ ಮನೆ
ನೋವ ಕನ್ನಡಿ ಸಿಡಿಯುವುದು ಯಾವಾಗ
ತೂರುವ ಕೃಪಾ ಕಲ್ಲು ಎಲ್ಲಿದೆಯೋ
ನೀರಗುಳ್ಳೆಯ ಮನಸು ಒಡೆಯುವುದಾದರೂ ಯಾವಾಗ
ತಂಗಾಳಿಯ‌ ಬೆರಳೇ ಮುಟ್ಟಾಡು ಗುಳ್ಳೆ ಹೊಟ್ಟೆಯ
ತನಗೆ ತಾನೇ ಕೋಟೆಯೊಡೆದು ಬರಿದು ಬರಿದಾಗಲಿ
ದೂರಿನ ದೊರೆ ಮರಣಿಸಲಿ
ಪಟಾಕಿ ಬಾಲಕ್ಕೆ ಬೆಂಕಿಕೊಡದೆ ಕುಣಿಯದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.