ADVERTISEMENT

ಕವಿತೆ: ಕೌದಿ

ಕವಿತೆ

ಡಾ.ಲಕ್ಷ್ಮಣ ವಿ.ಎ.
Published 15 ಏಪ್ರಿಲ್ 2023, 19:30 IST
Last Updated 15 ಏಪ್ರಿಲ್ 2023, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಂಜುಗಣ್ಣಿನ ಮುದುಕಿ
ಸಣ್ಣ ಕಣ್ಣಿನ ಸೂಜಿಯೊಳಗೆ
ಕಂಪಿಸುವ ಕೈಗಳಿಂದ ದಾರವ ತೂರಿಸಿ
ಕೌದಿ ಹೊಲಿಯುತ್ತಾಳೆ

ಕೆಲವೇ ಕ್ಷಣಗಳ ಹಿಂದೆ ಎಲ್ಲೋ
ಕಳೆದು ಹೋದ ಕುರುಡು ಸೂಜಿಗೀಗ
ಕಣ್ಣು ಮೂಡಿ
ಬರಡು ದಾರಕೂ ಜೀವದ ಜೀವ ಕೂಡಿ
ಕಂಪಿಸುವ ಕೈಗಳಲ್ಲೂ ದಾರಿ ತಪ್ಪುವುದಿಲ್ಲ
ಈಗ ಈ ಸೂಜಿ ದಾರ
ಹರಿತ ಮೊನೆಯ ಸಣ್ಣ ಬಿಂದು ಇನ್ನು
ಹೊಲಿಯುತ್ತದೆ
ಅಖಂಡ ಭೂಖಂಡಗಳ ಗಾಯ

ಅವಸರದಲಿ ಎಂದೂ
ಹೊಲಿಯಲಾಗುವುದಿಲ್ಲ ಈ ಕೌದಿ

ADVERTISEMENT

ಅಟ್ಟದ ಮೇಲೆಸೆದ ಲ್ಯಾವೀ ಗಂಟಿನಲಿ
ಎಷ್ಟೊಂದು ಬಟ್ಟೆ ಬವಣೆಗಳು
ಕಾಲನ ಕಾಲಿಗೆ
ಪೆಟ್ಟಾಗಿ ಮುರಿದುಕೊಂಡ ಬಿದ್ದ ಕನಸುಗಳ
ಬಡ ಬಾಳಿನಲಿ ಬೆಂದು
ಗರಿ ಸುಟ್ಟುಕೊಂಡು ಹಾರಲಾರದ ಹಕ್ಕಿಯ ರೆಕ್ಕೆಗಳ
ಹನಿಗಣ್ಣಿನಲೇ ಮುಟ್ಟಿ ಮೈ ದಡವಿ
ಹಳೆಯ ಹಳವಂಡಗಳ ಧೂಳು ಕೊಡವಿ
ತೇಪೆ ಹಚ್ಚಿ ಹೊಲಿಯುತ್ತಾಳೆ ಕೌದಿ

ಮೈ ಮನಗಳಲಿ ಈಗ
ನೆನಪುಗಳ ಚಿತ್ರ ಸಂತೆಯ ಸವಾರಿ

ಕೊನೆಯ ಬಾರಿಗೆ ಅಪ್ಪ
ಉಟ್ಟ ಧೋತರ
ಮುನಿಸಿ ಮುಖ ತಿರುವಿಕೊಂಡು ಹೋದ
ಮಗನ ಅಂಗಿ
ತವರು ತೊರೆಯವಾಗ ಹನಿಗಣ್ಣು
ಒರೆಸಿಕೊಂಡು ಮರೆತು ಹೋದ
ಮಗಳ ಕರವಸ್ತ್ರ
ಗೂಡು ತೊರೆದವರ
ಊರು ಮರೆತವರ ಹೆಸರುಗಳಿಗೂ
ಸೂಜಿ ಮೊನೆಯಷ್ಟು ಜಾಗವುಂಟು
ಅಲ್ಲಲ್ಲಿ
ಸಾಲಾಗಿ ಬೆಸುಗೆಗೊಂಡ ಭಗ್ನ ಬಿಂಬಗಳ
ನಡುವೆ

ಒಮ್ಮೊಮ್ಮೆ ಕನಸಿನಲಿ
ಮಗದೊಮ್ಮೆ ಕನವರಿಕೆಯಲಿ
ಕಂಪಿಸುವ ಕೈಗಳಲಿ ಸದಾ ಈಗ ಸೂಜಿ ದಾರ
ಏನು ಕೊಟ್ಟರೂ ಅರೆಗಳಿಗೆಯಲಿ
ಬೆಸೆದು ಕೊಡುವ ಮುದುಕಿ
ಮುರಿದ ಅಂಗಾಂಗ ಜೋಡಿಸುವ
ಬಡ ಹಕೀಮನ ಹಾಗೆ

ಅರ್ಧ ಮರ್ಧ ಹೊಲಿದ ಕೌದಿ

ಅಪೂರ್ಣಗೊಂಡ ಕವಿತೆಯ ಸಾಲಿನಂತೆ
ಈಗ
ಪದ ಪ್ರಾಸಗಳ ಹೆಕ್ಕಿ
ಕವಿಸಮಯದ ದಿವ್ಯ ಗಳಿಗೆಯ ತನ್ಮಯತೆಯಲಿ ಮುದುಕಿಯೆದಿರು ಮೈ ದಳೆಯುತಿದೆ ಜಗದ ನೋವಿಗೆ
ಮದ್ದೆರೆಯುವ
ಮಹಾಕಾವ್ಯವೊಂದರ ಮುನ್ನುಡಿ

ಮೊಟ್ಟೆಯೊಡೆದ
ಮರಿ ಅನುದಿನ ಇಷ್ಟಿಷ್ಟೇ
ಜೀವ ದಾರವುಂಡು ಬೆಳೆದ ಕೌದಿಯ
ಮೈ ತುಂಬ ನವಿಲುಗರಿಯ
ನೂರು ಕಣ್ಣು
ಮಾಗಿಯ ಚಳಿಯಲಿ ಮೈ ಮಾನ ಮುಚ್ಚಿ
ಬೆಚ್ಚಗೆ
ನನ್ನ
ಅರೆ ಬರೆ ಕನಸುಗಳು ದಿಕ್ಕು ತಪ್ಪಿಸಿಕೊಂಡು ಹೋಗದಂತೆ
ಕಾವಲು ಕಾಯುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.