ADVERTISEMENT

‘ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ’: ಕವಿ ಶಿವರುದ್ರಪ್ಪ ಕವನ

ಡಾ.ಜಿ.ಎಸ್.ಶಿವರುದ್ರಪ್ಪ
Published 22 ಜನವರಿ 2019, 9:35 IST
Last Updated 22 ಜನವರಿ 2019, 9:35 IST
   

ಶಿವಕುಮಾರ ಸ್ವಾಮೀಜಿ ಕುರಿತು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕವನ ‘ಶ್ರೀ ಸಿದ್ಧಗಂಗೆಯ ಶ್ರೀಚರಣಕ್ಕೆ’
–––

ಹರನ ಕರುಣೋದಯದ ತೆರದಲಿ ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀಗುರು ಪಾದುಕೆಯ ದನಿ ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವೂ ನಮಿಸಿ ನಿಲುವುದು ಸುಮ್ಮಗೆ

ಬೆಟ್ಟ ಬಂಡೆಯ ನಡುವೆ ಗಿಡ ಮರ ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದಮಂದಾನಿಲ ಜೊತೆಯೊಳು ಮನಸಿಗೆ
‌ಸಂಭ್ರಮವನುಕ್ಕಿಸೆ ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ

ADVERTISEMENT

ಇಲ್ಲಿ ಇಲ್ಲ ಪವಾಡದದ್ಭುತ ಅಥವ ಉತ್ಸವದಬ್ಬರ
ಮುಡಿಯನೆತ್ತಿದೆ ಸರಳ ಸಾಧಾರಣ ಬದುಕಿನ ಗೋಪುರ
ಅದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲ್ಲಿ ದಿನವೂ ಸೇವೆಗಾಗಿದೆ ಸರ್ವರ

ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ ಲಕ್ಷಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ ಜೊತೆಗೇ ಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ ಎಣ್ಣೆ–ಬತ್ತಿಯ ದೀಪ್ತದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ

ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ

–ಡಾ. ಜಿ.ಎಸ್. ಶಿವರುದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.