ADVERTISEMENT

ನಂದಿನಿ ಹೆದ್ದುರ್ಗ ಅವರ ಕವನ: ಸತ್ಯದ ಫ್ಯಾಕ್ಟರಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 23:30 IST
Last Updated 20 ಸೆಪ್ಟೆಂಬರ್ 2025, 23:30 IST
   

ತಯಾರಾಗುತ್ತಿದೆ ಸತ್ಯ

ಅವರ ಫ್ಯಾಕ್ಟರಿಯಲ್ಲಿ

ಅವರ ಸತ್ಯ

ADVERTISEMENT

ಇವರ ಫ್ಯಾಕ್ಟರಿಯಲ್ಲಿ

ಇವರ ಸತ್ಯ

ಇನ್ನೆಲ್ಲೊ ಇನ್ನಾರದ್ದೊ ಸತ್ಯ

ಬೇಡಿಕೆಗೂ ಮೀರಿ

ಮಾರುಕಟ್ಟೆಗೆ ಅವಕ

ನಿಶ್ಚಿತ ಧಾರಣೆ ಕುಸಿತ 


ಎಂದೋ ತಯಾರಿಸಿಟ್ಟು

ತುಕ್ಕು ಬರಲಾರಂಭಿಸಿದ್ದ

ಮಚ್ಚು ಪಿಸ್ತೂಲುಗಳಿಗೆ

ನೆತ್ತರ ವಾಸನೆ ಹೊಡೆದು

ಆಕಳಿಸುತ್ತಾ ಮಗ್ಗುಲು

ಬದಲಿಸುತ್ತಿವೆ


ಕಣ್ಣುಗಳ ಎಬ್ಬಿ ತೆಗೆದಾದ

ಮೇಲೆ ಮೃಗದ ಕಣ್ಣು

ಬಾಯಿ ಹರಿದಾದ ಮೇಲೆ

ಹಾವಿನ ನಾಲಿಗೆ

ಬುರುಡೆ ಒಡೆದಾದ‌ ಮೇಲೆ

ಖಾಲಿ ಗೋಲ ಸ್ಥಾಪಿಸಿಕೊಂಡವರಷ್ಟೇ

ಉಳಿದಿದ್ದೇವೆ ಇಲ್ಲಿ


ಎಷ್ಟೊಂದು ಮಂದಿ

ಪ್ರವಾದಿಗಳಿದ್ದಾರೆ  ನಮ್ಮ ನಡುವೆ

ನಿಯಮಗಳ ಸುಡುವೆ

ಎನ್ನುವವರು!

ಏನೂ‌ ಬದಲಿಸಲಾಗದೆ ಹೋದಾಗ

ಬಾಡಿಗೆ ಕಳ್ಳರ ಸಹಾಯ ಪಡೆದು

ಉತ್ಪನ್ನಗಳ ಅದಲುಬದಲು

ಮಾಡಿಸುವವರು!!


ತಾಳ್ಮೆಯಿಂದಿರಿ  ಮಹಾಜನಗಳೆ

ಮಚ್ಚು ಪಿಸ್ತೂಲುಗಳು

ಒಬ್ಬರಿನ್ನೊಬ್ಬರ ಮುಗಿಸಿಕೊಂಡು

ಕೊನೆಯಲ್ಲಿ ಯಾರೂ ಸಿಗದೆ

ತಮ್ಮವರನ್ನೇ ಕೊಲ್ಲುತ್ತವೆ

ಹಾಗಾಗುವುದೂ

ಪೂರ್ವಜನ್ಮದ ಸುಕೃತವೇ ಇರಬೇಕು


ಅಗೋ

ಪ್ರವಾದಿಗಳು ಬಂದರು

ವೇದಿಕೆ  ತೆರವು ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.