ಕೆಂಡ ತೂರುವ ಆಟವಂತೆ
ಊರ ಮುಂದೆ
ತರುಣರು
ಮುಷ್ಠಿ ತುಂಬಾ
ಹೂವಿನಂತೆ ಕೆಂಡ ಹಿಡಿದು
ಭೇರಿ ಹೊಡೆತಕೆ ಮತ್ತೇರಿ
ತೂರಿ ತೂರಿ
ರಾಶಿ ರಾಶಿ ಬೆಂಕಿ
ಪಡುವಣದ ಗಾಳಿ
ಮೂಡಣಕೆ ಬಿರು ನುಗ್ಗಿ
ಕೈಯೊಳಗೆ ಕೆಂಡ
ಬಾಯೊಳಗೆ ಕೆಂಡ
ಅಹ! ಜ್ವಾಲೆ ಹೂ
ಉಂಡೆ ಬಾಯುಗುಳಿದಷ್ಟು
ನೆಲ ಮುಗಿಲು ದಶ ದಿಕ್ಕು
ಬೆಂಕಿಯಲೆ ಕುಣಿಯುತಿವೆ
ಯಾರ ಹುಕುಮಿಗೆ
ಹಿಡಿಯಿತೀಪರಿಯ ಹುಚ್ಚು!?
ಮನೆ ಮಾರು ಸಿಡಿವಂತ
ಅಬ್ಬರದ ಹಾಡುಗಳು
ಗ್ವಾಮಾಳ ಕೊಯ್ವಂತ
ಮಾರುದ್ದ ಕತ್ತಿಗಳು
ದೈವ ಕೆಟ್ಟ್ಹೋದವೋ!
ಇವರೆ ಕೆಡು ದೈವವೋ!
ಆಟ ರಂಗೇರುತಿದೆ
ಒಂದೊಂದು ಮೈ ಕೆಂಡ
ಒಂದೊಂದು ಕೈ ಜ್ವಾಲೆ
ಎಷ್ಟಂತ ಹೊಗಳುವಿರಿ
ಮೂಕ ಪ್ರೇಕ್ಷಕ ಗಣವೇ
ವಿಲಯವಿದು ಸಾಹಸವೆ?
ಹುಚ್ಚು ಮಚ್ಚರವುಂಡ
ನಮ್ಮದೇ ಕುನ್ನಿಗಳು
ನಮ್ಮ ಬಸಿರಲಿ
ಗೋರಿ ತೋಡುತಲೆ ನಲಿಯುವವು
ಮರುಳಿನಲಿ ಈ ಧರೆಯ
ಮರಳಾಗಿಸುವ ಮುನ್ನ
ನಮ್ಮೊಡಲಿನೊಂದೊಂದು
ಮೋಡ ಫುಗ್ಗೆಯನೆಸೆದು
ಮಳೆ ಸುರಿಸಿ ಪೈರ ನಿಲಿಸಿ
ಹುಚ್ಚು ತೊಡೆಯೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.