ನಾನು ಬರೆಯುತ್ತಲೇ ಇರುತ್ತೇನೆ
ನನ್ನೊಳಗಿನ
ಹುಟ್ಟು ಕಲ್ಮಷ ತೊಳೆಯಲು
ಮಲಿನ ಧಾತುಗಳನಳಿಸಲು
ಅನಿಷ್ಟ ನೆರಳುಗಳ ಸರಿಸಲು ;
ನಾನು ಬರೆಯುತ್ತಲೇ ಇರುತ್ತೇನೆ
ಪರಿಕಲ್ಪಿತ
ಶುದ್ಧಾಶುದ್ಧತೆಯಳಿಸಲು
ಜಾತಿ ಸೋಂಕು ತೊಳೆಯಲು
ಬಣ್ಣದ ಹಂಗು ತೊರೆಯಲು ;
ನಾನು ಬರೆಯುತ್ತಲೇ ಇರುತ್ತೇನೆ
ಸುತ್ತಲಾವರಿಸಿಹ
ಕಾರ್ಗತ್ತಲನಳಿಸಲು
ಶ್ರೇಷ್ಠತೆಯಹಮಿಕೆ ಅಳಿಸಲು
ನಂದಿದ ಹಣತೆಗಳನುರಿಸಲು ;
ನಾನು ಬರೆಯುತ್ತಲೇ ಇರುತ್ತೇನೆ
ಅಳಿಸಿಹೋದ
ಸಹನೆಯ ಬೀಜ ಬಿತ್ತಲು
ವಿಶ್ವಪಥವನು ಕಟ್ಟಲು
ಮನುಜಮತವನು ಬೆಳೆಸಲು ;
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.