ADVERTISEMENT

ನಂದಿನಿ ಹೆದ್ದುರ್ಗ ಅವರ ಕವನ: ಒಲೆ ಆರುವ‌ ಸಮಯಕ್ಕೆ

ನಂದಿನಿ ವಿಶ್ವನಾಥ ಹೆದ್ದುರ್ಗ
Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಒಲುಮೆಯ ಯಾವ ಮಾತುಗಳೂ

ನಿರಂತರವಲ್ಲ.

ADVERTISEMENT

ಅಳದಲ್ಲಿ ಅಚ್ಚೊತ್ತಿದ ಭಾವವನ್ನು

ಮಾತ್ರ ಕಾದಿರಿಸಿಕೊಳ್ಳುತ್ತೇವೆ,

ಒಳಗೊಂದು ಒಲೆ ಆರುವುದಿಲ್ಲ

ಪ್ರೇಮಿಸಿದ ಮೇಲೆ

ಒಂದು ಮಧುರ ಕೇಡಿನ ಘಳಿಗೆಯಲ್ಲಿ

ಆತ್ಮದಿಂದ ಹೊರಬಿದ್ದ

ಪ್ರೇಮಿಯ ಕೊರಳ ಏರಿಳಿತಗಳನ್ನು

ಹಳಸದಂತೆ ಕುದಿಸಿ ಕುದಿಸಿ

ಪಾಕ ಬರಿಸಿಕೊಳ್ಳುತ್ತೇವೆ

ಇಳಿಗಾಲಕ್ಕೆ ಒಲೆ

ಆರುವ ಸಮಯ ಬೇಕಾಗುತ್ತವೆ ಬೆಚ್ಚಗಿರಲು.


ಅರಳುತ್ತವೆ ಚಿತ್ರ;

ಮಲಗಿದ ಕೋಣೆಯ ಸೂರಿನಲ್ಲಿ ಗೋಡೆಯಲ್ಲಿ

ಕಿಟಿಕಿಗೆ ಇಳಿಬಿಟ್ಟ ಬುದ್ದ ಚಿತ್ರದ ಪರದೆಯಲ್ಲಿ

ಇತಿಹಾಸದ ಯುದ್ದಗಳು ಸದ್ದುಗಳು ಪ್ರವಾಸಗಳು, ಪ್ರಯಾಸದ ಪ್ರಯಾಣಗಳು ಮತ್ತು 

ಪ್ರಣಯ!!

ಶಬ್ದಕ್ಕೆ ನಾಚುವ ಮಧುರ ಘಳಿಗೆಗಳು

ನೆನಪಿಗೆ ತುಟಿ ಕಂಪಿಸಿ ಜೀವ ತಲ್ಲಣಿಸಿ

ಆಗಾಗ ಕದನ ವಿರಾಮ ಶುಭ ವಿದಾಯ ಮರು ಬೆಟ್ಟಿ

ಇತ್ಯಾದಿ


ಒಂದು ನೆನಪನ್ನು ಹೆಕ್ಕಿತರುವುದಕ್ಕೆ 

ರೆಕ್ಕೆ ಕಟ್ಟಿಕೊಂಡ ಹೋದ ಇನ್ನೊಂದು ನೆನಪು 

ಮತ್ತೆ ಬಾರದಿರಲಿ

ಮತ್ತು ಆ ಇನ್ನೊಂದನ್ನು ಹುಡುಕಿ ಮತ್ತೊಂದು

ಹೊರಡಲಿ ಎನಿಸುತ್ತದೆ

ಅವುಗಳು ಯಾರ ಎದೆಯನ್ನಾದರೂ ಹೊಕ್ಕು

ಇಷ್ಟು ಕಾಲದ ಸುಭಗತನದ ಸುಳಿವು‌ ಲೋಕಕ್ಕೆ

ಕೊಟ್ಟರೆ..?

ಹರೆಯ ಬತ್ತಿದ ಈ ಹೊತ್ತಿನಲ್ಲಿ ಹೆರವರ ಬಾಯಿಯ

ಸಿಹಿಯಾಗಬಹುದು;


ಲೆಟ್ಸ್ ಬ್ರೇಕಪ್ ಎನ್ನುತ್ತಾಳೆ ಮಗಳು ಫೋನಿನಲ್ಲಿ

ತುಸು ದೊಡ್ಡಕೆ

ಅಮ್ಮನಿಗಿದೆಲ್ಲ ಅರಿಕೆಯಾಗದು ಎನ್ನುವ ನಿರಾಳದಲ್ಲಿ

ಶುಭವಿದಾಯ ಎಂದವನ ಕೊರಳ ದೊರಗಿನ

ನೆನಪಿಗೆ ಕಣ್ಣು ಹಸಿಯಾಯಿತು,

ಸಿಕ್ಕಿದ ಅಪರೂಪದ ಮುತ್ತು ಇನ್ನೂ 

ತುಟಿಯ ಮೇಲೆ ಇದ್ದಂತೆ 

ಕಿವಿ ಬಿಸುಪೇರಿದೆ ಅವಳಿಗೆ.


ಆಮೇಲಿನದ್ದು 

ಆಮೇಲಿನದ್ದು...

ಬೆಚ್ಚಗಿರಲು ಬೇಕಾಗಿರುವ

ನಿಮ್ಮ ನಿಮ್ಮದೇ ಕಲ್ಪನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.