ADVERTISEMENT

ಕವಿತೆ: ಆತ್ಮಸಖ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:31 IST
Last Updated 9 ಏಪ್ರಿಲ್ 2022, 19:31 IST
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ   

ಈಗೀಗ ಹಿತವೆನಿಸುತ್ತಿದೆ ನನಗೆ
ನಿನ್ನ ಸಖ್ಯದಲಿ
ನಿನ್ನ ಪ್ರೇಮದಲಿ
ಇರುಳ ಕೊರಳಲಿ
ನಿನ್ನ ಕನಸಿನಲಿ
ಕಳೆದು ಹೋಗಿ
ಮುದ್ದಾಂ ನಿಶಾಚರಿಯಾಗಿ
ನನ್ನೆಲ್ಲ ಸಿಕ್ಕುಗಳ ಬಲೆಯಿಂದ ಬಿಡಿಸಿಕೊಳ್ಳಲು

ಈಗೀಗ ಹಿತವೆನಿಸುತ್ತಿದೆ ನನಗೆ
ನನ್ನ ಉಬ್ಬು ತಗ್ಗುಗಳ ಪುಳಕವನು
ನೀನು ಲಕ್ಷಿಸಿದರೂ
ಅಲ್ಲಿಯೇ ನಿಲ್ಲದೆ ನಿನ್ನ ಕನಸುಗಳಲಿ
ನನಗೆ ಹಾಜರಿ ನೀಡುವುದಕ್ಕೆ
ಆಖ್ಯಾನವನು ಮೀರಿದ
ನಿನ್ನ ಅನುರಾಗದ ವ್ಯಾಖ್ಯಾನಕ್ಕೆ

ಈಗೀಗ ಹಿತವೆನಿಸುತ್ತಿದೆ ನನಗೆ
ಇರುಳ ಗವಿ ಗರ್ಭದಲ್ಲಿ ಹೂತ
ಹುಣಸೆಯಂಥ ನಿನ್ನ ಪ್ರೀತಿ
ನಾಲಗೆಯ ಸವಿಯಾಗುವ
ನಿನ್ನೊಲವ ರಾಗಕೆ
ಆತ್ಮಸಖ್ಯದ ಸಾಮಿಪ್ಯದ ಚಡಪಡಿಕೆಯ ಸುಖಕೆ

ADVERTISEMENT

ಈಗೀಗ ಹಿತವೆನಿಸುತ್ತಿದೆ ನನಗೆ
ನನ್ನಲಿ ಒಲವ ದೀಪ ಮುಡಿಸಿ
ಮತ್ತೆ ಬರುವೆನೆಂದು ಹುಸಿ ನುಡಿದು
ಹರಿವ ತೊರೆಯಲ್ಲಿ ಒಮ್ಮೆ ತಾಕಿದ
ಕಲ್ಲನ್ನು ಮತ್ತೆ ತಾಕದ ಬಿಂದುವಿನಂತೆ
ಉರುಳುವ ನಿನ್ನ ನೆನಪಲ್ಲೇ ಕಾಯುವುದು

ಸಖ,
ಈಗೀಗ ಹಿತವೆನಿಸುತ್ತಿದೆ ನನಗೆ
ದೀರ್ಘ ಅಲೌಕಿಕ ಚುಂಬನವನ್ನು
ಬಯಸುವ ನಿನ್ನ ಅಧರಗಳು
ಒಡೆದು ಹೋಗುವ
ಈ ಮಡಿಕೆಯನು ತಾಗಿಸಿಕೊಳ್ಳದೆ
ನಿನ್ನ ದಾಹ ಹಿಂಗಿಸಿಕೊಳ್ಳುವ ಬಯಕೆ

ಸದಾ ಕಾಲವೂ
ಸೋನೆಗೆ ಕಾಯುವ
ಹಚ್ಚಹಸಿರಾಗಿಯೇ ಇರಲು ಹವಣಿಸುವ ಈ ಭೂಮಿ!

ಬಿಟ್ಟು ಬಿಡದೆ ಹುಯ್ಯಲಿ ಮಳೆ
ಸುರಿದು, ಹರಿದು ಬಿಡು
ಮೂಡಿ ಬರಲಿ ಕಾಮನಬಿಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.