ADVERTISEMENT

ಕವಿತೆ: ನೀನೆ ನೀನೆ ಪ್ರಮಾಣ

ನಿಂಗಪ್ಪ ಮುದೇನೂರು
Published 19 ಫೆಬ್ರುವರಿ 2022, 19:30 IST
Last Updated 19 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವ ತಾಯಂದಿರು ಹಡೆದರೇ ನಿಮ್ಮ
ಸುಂದರ ಜಡೆಹೆಣೆದು ಬಣ್ಣದ ಬಟ್ಟೆ ತೊಟ್ಟು
ಕೈದೋಟದಲ್ಲಿ ಹೂವಿನಂತೆ ನಡೆದ ಪಾಠಕ್ಕಿಂತ
ಹೆಚ್ಚಿನದೇನಿದೆ ವಿದ್ಯಾಮಂದಿರದಲ್ಲಿ!?

ಮಗಳೇ,ತಾಯಿಯೇ
ಅವ್ವ ಜೋಪಾನವಾಗಿ ಕಟ್ಟಿಕೊಟ್ಟ ಬುತ್ತಿ
ಕಲಿಯುವ ಪರಿಕರಗಳ ಹೊತ್ತು
ಆತಂಕದ ದಾರಿಯಲ್ಲಿ ನಡೆದರೂ
ದೃಢವಾದ ಹೆಜ್ಜೆಗಳಿರಿಸಿ
ಜೀವದ ಹೆಣಿಗೆಯೊಂದಿಗೆ
ಇದೇ ಮಣ್ಣಿನಲ್ಲಿ ನಡೆದು ಬಂದಿರೆ
ತಾಯೇ...

ಹಿಜಾಬ್- ಕೇಸರಿ
ರಾಷ್ಟ್ರಧ್ವಜ-ಭಗವಧ್ವಜ
ಸಂವಿಧಾನ-ಭಗವದ್ಗೀತೆ
ನಡು ನಡುವೆ ಯಾರಿಟ್ಟರು ಕೊಳ್ಳಿತಾಯೇ?
ಉಂಡ ಮನೆಯಲ್ಲಿ ಜಂತಿ ಎಣಿಸಿದವರ ಕಾಯೇ

ADVERTISEMENT

ಮಗಳೇ, ಮುಗುಳೇ
ನನ್ನ ನೆಲ ನಿನ್ನ ನೆಲ
ನಮ್ಮೆಲ್ಲರ ಕರುಳ ಫಲ
ಕಾಪಿಟ್ಟು ಕಾಯೇ
ದುರುಳರ,ದುರ್ಜನರ
ಮನವ ತಿಳಿಗೊಳಿಸು ಜಗವೇ.

ನಿನ್ನಲ್ಲಿ ಶಕ್ತಿ ಇದೆ
ನಿನ್ನಲ್ಲಿಯೇ ಯುಕ್ತಿ ಇದೆ
ನೀನೆ ನೀನೆ ಪ್ರಮಾಣ
ಮಿಕ್ಕಿದ್ದೆಲ್ಲವೂ ಅ-
ಪ್ರಮಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.