ADVERTISEMENT

ಫಾಲ್ಗುಣ ಗೌಡ ಅಚವೆ ಅವರ ಕವನ 'ಮಂಗಟ್ಟೆ'

ಫಾಲ್ಗುಣ ಗೌಡ, ಅಚವೆ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆ ಕಾಡಿನ ಮತ್ತು ಈ ಕಾಡಿನ
ಮಂಗಗಳ ನಡುವೆ ನಡೆಯುವ ಗಡಿ ತಂಟೆಯ ಬಗ್ಗೆಯೇ ಮಾತನಾಡುತ್ತಿದ್ದ ಮರಗಳು ಹಗಲಲ್ಲೂ
ನಿದ್ದೆ ಹೋಗಿವೆ ಮಂಜು ಹೊದ್ದು

ಸಮೀಕ್ಷೆಗೆ ಹೊರಟ ಹೆಲಿಕಾಪ್ಟರ್‌ಗಳಂತೆ
ಮಂಗಟ್ಟೆಗಳು ಹಾರುವ ರಭಸ
ಜೋಂಪಿಗೆ ಸರಿದ ಕಾಡುಗಳನ್ನೆಬ್ಬಿಸುವುದು

ಹಿಕ್ಕೆ ಬಿದ್ದಲ್ಲೇ ಬೀಜ ಮೊಳೆತು
ಎದ್ದು ನಿಲ್ಲುತ್ತದೆ ಮಳೆ ಕಾಡು
ಕಳಗಲ ಗೊಂಬಳ ಇಪ್ಪೆ ಬಸವನಕೊಟ್ಟೆ ಕವಲು ಹೋದಲ್ಲೇ ಬಿದ್ದು ದಟ್ಟ ಕವಲೊಡೆದು ಕತ್ತಲಾದಂತೆ
ಹಗಲಲ್ಲು ಭಾಸ

ADVERTISEMENT

ಸೀತೆಯ ಹೊತ್ತ ರಾವಣನ ತಡೆದ ರಾಮಾಯಣದ ಜಟಾಯು ಇವನೇ
ಏಕ ಪತ್ನಿಯ ವೃತದ ಚಿರಾಯು
ಸೀತೆಯ ರಾಮನಂತೆ

ಕಡಿಯುವ ಕೊಡಲಿಯನ್ನು ಏನು ಮಾಡಲಾಗುವುದಿಲ್ಲ
ನೋವಿನ ಮುಖ ಹೊತ್ತು
ಚುರುಕ್ ಅನ್ನುತ್ತದೆ ಕರುಳು
ಬೀಜ ರೂಪದ ಹಿಕ್ಕೆ
ಮೌನ ಪ್ರತಿಭಟನೆ

ಹಾಲಕ್ಕಿ ಕರೆವಕ್ಕಲು ಗಾಮೊಕ್ಕಲು ಒಕ್ಕಲಿಗರಂತೆ
ಹಲ್ಕಿಸ್ಕ ಮಂಗಟ್ಟೆ ಕುಡೋಲಕ್ಕಿ ಒಂದೆರಡೇ
ಸದಾ ಸಮತೋಲಿಸುವ ಕಾಡಿಗೆ
ಸ್ತಬ್ಧಗೊಂಡ ಕಾಡು ಕನಸಲ್ಲಿ
ಬೆಚ್ಚಿ ಬೀಳುವುದು ಜಾವದ ಕೂಗಿಗೆ
ನಿದ್ದೆಯ ಜೋಂಪಿಗೆ ಸರಿದ ಹಕ್ಕಿಗಳು ಕಾಲ್ತಪ್ಪುವವು
ಎಚ್ಚೆತ್ತುಕೊಳ್ಳುವುದು ಕೋಳಿ ತಲೆಯ ಜೈವಿಕ ಗಡಿಯಾರ

ಆಕಾಶವಾಣಿಯ ವಂದನಾ ಕಾರ್ಯಕ್ರಮ ಕೇಳುತ್ತ ಕೂತ ಕಾಜಾಣಗಳು
ಆವರಿಸಿದ ಗಾಢ ಚಳಿ ತಾಳಲಾರದೇ ಮೂಡುದಿಕ್ಕಿಗೆ ಹೊರಟ ಬೆಳ್ಳಕ್ಕಿಗಳ ಜೊತೆ
ರೇಡಿಯೋ ಎತ್ತಿಕೊಂಡೇ ಹೋಗುವುದ ಕಂಡು
ಬೆಚ್ಚನೆ ಎಳೆಬಿಸಿಲು ಮೋಡಗಳ ನೋಕುವುದು

ಹೆಬ್ಬಲಸು ಬಸವನ ಕೊಟ್ಟೆಗೆ ಹಣ್ಣಾದರೆ ಮಂಗಟ್ಟೆಗೆ ಮಿಲನೋತ್ಸವ ಸುಗ್ಗಿ
ತಟಾರಿಬೊಳೆ ಮೋತಿಗುಡ್ಡ ಔಲ್ ಗದ್ದೆಯ ಕಾಡಿಗೆ
ಪ್ರತಿದಿನ ವನಮಹೋತ್ಸವ ಹುಗ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.