ಒಮ್ಮೊಮ್ಮೆ ಹಳೆಯ
ವೇದನೆಗಳು ಮರುಕಳಿಸುತ್ತವೆ
ಥೇಟ್ ಪಳಿಯುಳಿಕೆಗಳಂತೆ
ಕಂಡಷ್ಟೂ
ದಫನ್ ಮಾಡಿಬಿಡಬೇಕು
ಕಂಡರೂ ಕಾಣದಂತೆ ॥
ಆದರೂ ಅಗೆಯ ತೊಡಗುತ್ತೇವೆ
ಮತ್ತೆ ಮತ್ತೆ ಹಳೆ ನೆನಪುಗಳ
ಗೋರಿಯ ಕೆದಕುತ
ದೊರಕುವುದೆಲ್ಲವೂ
ಅರ್ಧಂಬರ್ಧ ಸತ್ಯವೆಂದು
ತಿಳಿದು ತಿಳಿಯದಂತೆ॥
ಬಿಟ್ಟು ಹೋದ ಅನಾಥ
ಭರವಸೆ ಅನಂತ ನಿಟ್ಟುಸಿರುಗಳೂ
ತಂತಾನೆ ಮೀಟ ತೊಡಗಿವೆ
ಹೆಸರಿರದ ಭಾವದಲಿ
ಬಹುಶಃ ಬದುಕು ಮತ್ತೊಮ್ಮೆ
ಮಗ್ಗಲು ಬದಲಾಯಿಸುವಂತೆ॥
ಬರೆಯಿಸಿದ ಮರಣ ಫಲಕಗಳು
ನಾಚಿಕೆಯಿಲ್ಲದೆ ಇನ್ನು
ದಾಖಲಿಸಲಿವೆ ಅರೆ
ಸಹಾನುಭೂತಿ ಪ್ರೀತಿ
ಮಾನವೀಯತೆ ಕೊಂಚವಾದರೂ
ದಕ್ಕಿದ್ದರೆ ಅಲ್ಲಿಗಿಂತ
ಇಲ್ಲೇ ಚೆಂದವಂತೆ ॥
ಮರಳದ ಘಳಿಗೆಗಳ
ಮರಳಿ ನೆನೆಯುತ ಕಾದ
ಒಲೆಯ ಮೇಲೆ ಪದೇ ಪದೇ
ಕುದಿಸುತ ನೆನಪುಗಳು
ಕಾಡಲಿವೆ ಇನ್ನು ಮತ್ತೊಮ್ಮೆ
ಬದುಕು ಮಗ್ಗಲು ಬದಲಿಸುವ ತನಕ॥
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.