ADVERTISEMENT

ನಂದಿನಿ ಹೆದ್ದುರ್ಗ ಅವರ ಕವನ: ವೈರುಧ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 23:58 IST
Last Updated 3 ಫೆಬ್ರುವರಿ 2024, 23:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಸಿವು ಹಸಿವು ಎಂದು ಹಿಂದೆ ಮುಂದೆ

ಹಾರಾಡಿ ರೆಕ್ಕೆ ಸೋತ ಹಕ್ಕಿಯನ್ನು 

ಬಡಕಲು ನಾಯಿಯ ಬೋನಿಗೆ ಬಿಟ್ಟವರು

ADVERTISEMENT

ಎದುರಿಗೆ

ಒಂದು ಕುರ್ಚಿ ಹಾಕಿ ಕೂತು 

ಬುದ್ದ ಬಸವ ಸದ್ಯದ ತುರ್ತು

ಎಂಬ ಲೇಖನ ಬರೆಯುತ್ತಿದ್ದಾರೆ


ಈ ಕಾಲದ ಗಾಂಧಿಯರು

ನಾಳೆ ಅದನ್ನು ಓದಿ

ಭಳಿರೆ ಭಳಿರೆ ಎನ್ನುವುದ ಕೇಳಲು

ಕಿವಿ ತೊಳೆದು ಕೂತವಳಿಗೆ

ನಿಮ್ಮ ಧ್ವನಿಯೂ ಜೊತೆಗಿರಲಿ

ಉಪ್ಪು ನೀರಲ್ಲೊಮ್ಮೆ ಗಂಟಲು ಗಲಬರಿಸಿ

ಎನ್ನುತ್ತಾ ಕೊಡುತ್ತಿದ್ದಾರೆ ಬಟ್ಟಲು


ಯಾವುದಕ್ಕೂ ಇರಲಿ

ಎನ್ನುತ್ತಾ ಒಳಕೋಣೆಯಲ್ಲಿದ್ದ

ಪಿಸ್ತೂಲು ತಲ್ವಾರಿಗೆ ಅಭ್ಯಂಜನ ಮಾಡಿಸಿ

ಗುಲಾಬಿ ಹೂಹಾರ ಹಾಕಿ ಗಂದದ ಕಡ್ಡಿ ಹಚ್ಚಿ

ತಿರುವಿನ ಅಂಗಡಿಗೆ ದೊಣ್ಣೆ ಕಲ್ಲು

ತುಸು ಹೆಚ್ಚೇ ಪೇರಿಸಲು ಹಚ್ಚುತ್ತೇನೆ 

ಫೋನು


‘ನನ್ನ ಭೀಮ ಅನ್ನು ಅಮ್ಮಮ್ಮ’

ಎನ್ನುತ್ತಾ  ಮೊಮ್ಮಗು

ತೆಕ್ಕೆಗೆ ಬಿದ್ದ ಹೊತ್ತು,

ಅವನು ಮಂಡಿಯೂರಿ ತಲೆಗೆ ಕರ್ಚೀಫು ಕಟ್ಟಿ

ಪಂಚಾಕ್ಷರಿ ಹೇಳಿದ್ದು ನೆನಪಾಗಿ

ಝಲ್ಲೆನ್ನುತ್ತದೆ ಜೀವ

ಅಂಟಿಕೊಂಡಿದ್ದ ಅಕ್ಷರಗಳ ಕೊಡವಿ

ಏಳುತ್ತೇನೆ

ಮಗುವಿಗೆ ಮಾಮಿ ಮಾಡಿಸಿ

ಹಿಟ್ಟು ಊಡಿಸಿ ಬಕಾಸುರನ ಕಥೆ

ಹೇಳಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.