ADVERTISEMENT

ಕನ್ನಡ ಬರುತ್ತೆ ತಾನೆ? ಮಾತಾಡೋಕೆ ಏನ್‌ ಬೇನೆ?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 5:14 IST
Last Updated 27 ನವೆಂಬರ್ 2017, 5:14 IST
ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಫಲಕ ಹಿಡಿದು ಗಮನ ಸೆಳೆದ ಕಂಕಣ ಸಂಘಟನೆ ಗೆಳೆಯರು
ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಫಲಕ ಹಿಡಿದು ಗಮನ ಸೆಳೆದ ಕಂಕಣ ಸಂಘಟನೆ ಗೆಳೆಯರು   

ಮೈಸೂರು: ಕನ್ನಡ ಬರುತ್ತೆ ತಾನೆ? ಮಾತಾಡೋಕೆ ಏನ್‌ ಬೇನೆ?, ಅಣ್ಣಯ್ಯನಿಗೂ ಕನ್ನಡ ಕಲಿಸಿ, ಭಾಯಿ ಸಾಹೇಬಗೂ ಕನ್ನಡ ಕಲಿಸಿ, ಇಂಗ್ಲಿಷ್‌, ಹಿಂದಿ ಬಿಡಿ – ಕನ್ನಡ ಮಾತಾಡಿ...

ಇಂಥ ಹತ್ತಾರು ಪ್ಲೆಕಾರ್ಡ್ ಹಿಡಿದ 50 ಯುವಕ ಹಾಗೂ ಯುವತಿಯರು ಸಮ್ಮೇಳನದ ಮುಖ್ಯದ್ವಾರದ ಎರಡೂ ಬದಿ ಮೌನವಾಗಿ ನಿಂತು ಗಮನ ಸೆಳೆದರು. ಅವರೆಲ್ಲ ಬೆಂಗಳೂರಿನಲ್ಲಿ ಐಟಿ/ಬಿಟಿಯಲ್ಲಿರುವವರು, ಶಾಲಾ ಶಿಕ್ಷಕರು ಮೊದಲಾದ ವೃತ್ತಿಯಲ್ಲಿರುವವರು.

‘ಅವ್ವ ಕಣೋ ಕನ್ನಡ, ನಮ್ಮ ಜೀವ ಕಣೋ ಕನ್ನಡ, ಧರ್ಮ ಕಣೋ ಕನ್ನಡ, ನಮ್ಮ ಗರ್ವ ಕಣೋ ಕನ್ನಡ’ ಎಂಬ ಬರಹಗಳನ್ನು ಹೊತ್ತ ಟೀಶರ್ಟ್‌ ಧರಿಸಿದ್ದ ಅವರು, ‘ಎಲ್ಲಿದ್ದರೇನು ಮಂಕೇ, ಕನ್ನಡ ಮಾತಾಡಲು ಯಾಕೆ ಹಿಂಜರಿಕೆ’ ಎಂದು ಪ್ಲೆಕಾರ್ಡ್ ಹಿಡಿದು ನೋಡಿದವರಿಗೆ ಕೇಳುವಂತಿದ್ದರು. ಅವರ ಬಳಿ ಹತ್ತಿರ ಹೋದವರಿಗೆ ಕರಪತ್ರಗಳನ್ನು ಹಂಚಿದರು.

ADVERTISEMENT

ಬೆಂಗಳೂರಿನ ಸಮಾನ ಮನಸ್ಕರೆಲ್ಲ ಸೇರಿ ಮೂರು ವರ್ಷಗಳ ಹಿಂದೆ ನಾಡು–ನುಡಿಗಾಗಿ ‘ಕಂಕಣ’ ಎಂಬ ಸಂಘಟನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಕಾವೇರಿ, ಕೃಷ್ಣ, ಶರಾವತಿ ಹಾಗೂ ತುಂಗಾ ಎಂಬ ನಾಲ್ಕು ಪ್ರದೇಶವಾರು ಗುಂಪುಗಳಿವೆ. ಈ ನಾಲ್ಕು ಗುಂಪುಗಳು ವರ್ಷವಿಡೀ ನಿರ್ದಿಷ್ಟ ಸ್ಥಳಗಳಲ್ಲಿ ‘ಕನ್ನಡ ಮಾತಾಡಿ’ ಎಂಬ ಅಭಿಯಾನವನ್ನು ಮುಂದುವರಿಸುತ್ತವೆ.

ಯಾವುದೇ ವ್ಯಾಪಾರ ಮಳಿಗೆಗಳಿಗೆ ಹೋದಾಗ ಕನ್ನಡದಲ್ಲೇ ವ್ಯವಹರಿಸಿ. ಅಲ್ಲಿನ ಕೆಲಸಗಾರರು ಕನ್ನಡ ಬರಲ್ಲ ಎಂದರೆ ಕನ್ನಡ ಬರುವವರನ್ನು ಕಳಿಸಿ ಎಂದು ವ್ಯವಸ್ಥಾಪಕರಿಗೆ ಇಲ್ಲವೆ ಮಾಲೀಕರಿಗೆ ತಿಳಿಸಿ. ಕನ್ನಡ ನೆಲದಲ್ಲಿ ಕನ್ನಡ ಸೇವೆ ಪಡೆಯುವುದು ನಮ್ಮ ಸಂವಿಧಾನದ ಹಕ್ಕು. ಇಂತಹ ಬೇಡಿಕೆ ದಿನೇ ದಿನೇ ಹೆಚ್ಚಬೇಕು ಎನ್ನುವುದು ಅವರ ಮೊದಲ ಮನವಿ.

ಸೂಪರ್‌ ಮಾರ್ಕೆಟ್, ಮಾಲ್‌, ಬ್ಯಾಂಕ್, ಸ್ಟಾರ್‌ ಹೋಟೆಲುಗಳಿಗೆ ಹೋದಾಗಲೂ ಹಿಂಜರಿಯದೆ ಹೆಮ್ಮೆಯಿಂದ ಕನ್ನಡದಲ್ಲಿ ಮಾತಾಡಿ. ಇದು ಇತರ ಕನ್ನಡಿಗರಿಗೆ   ಸ್ಫೂರ್ತಿಯಾಗುತ್ತದೆ. ಸಾಮಾಜಿಕ ಜಾಲತಾಣ ಹಾಗೂ ಮೊಬೈಲುಗಳಲ್ಲಿ ಹೆಚ್ಚಾಗಿ ಕನ್ನಡ ಲಿಪಿ ಬಳಸಿ. ಸಾಧ್ಯವಾದಷ್ಟೂ ನಿಮ್ಮ ಕನ್ನಡದಲ್ಲಿ ಇಂಗ್ಲಿಷ್‌ ಪದಗಳ ಕಲಬೆರಕೆ ತಪ್ಪಿಸಿ ಎನ್ನುತ್ತಾರೆ.

ನಿಮ್ಮ ಮನೆಗಳಲ್ಲೂ ಕನ್ನಡದಲ್ಲೇ ಮಾತನಾಡಿ, ನಿಮ್ಮ ಮಕ್ಕಳಿಗೆ ತಪ್ಪದೇ ಕನ್ನಡ ಕಲಿಸಿ, ಮಾತೃಭಾಷೆಯ ಘನತೆ ಮತ್ತು ಆದ್ಯತೆಯ ಅರಿವು ಮೂಡಿಸಿ, ಹೊರರಾಜ್ಯಗಳ ನಿಮ್ಮ ಗೆಳೆಯರಿಗೆ ಕನ್ನಡ ಕಲಿಸಿ, ಕನ್ನಡದಲ್ಲೇ ಮಾತಾಡಿಸಿ. ನಿಮ್ಮ ಸುತ್ತಮುತ್ತ ಕನ್ನಡದ ಕಡೆಗಣನೆ ಆಗುತ್ತಿದ್ದರೆ ಪ್ರತಿಭಟಿಸಿ ಎಂದು ಹೇಳುತ್ತಾರೆ. ಅಭಿಯಾನದೊಂದಿಗೆ ಕೈ ಜೋಡಿಸಲು kannadakankana@gmail.com ಇಲ್ಲವೆ facebook.com/naadunudigagikankana ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.