ADVERTISEMENT

ಸಮ್ಮೇಳನಕ್ಕೆ ಪ್ರತಿಭಟನೆ ಬಿಸಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 19:30 IST
Last Updated 24 ನವೆಂಬರ್ 2017, 19:30 IST

ಮೈಸೂರು: ರಾಜ್ಯದ ವಿವಿಧೆಡೆಯಿಂದ ಸಮ್ಮೇಳನಕ್ಕೆ ಧಾವಿಸಿದ ಪ್ರತಿನಿಧಿಗಳಿಗೆ ಕಿಟ್ ವಿತರಿಸುವಲ್ಲಿ ಉಂಟಾದ ವಿಳಂಬವು ಆಯೋಜಕರ ವಿರುದ್ಧ ಪ್ರತಿಭಟನೆಗೆ ಎಡೆಮಾಡಿಕೊಟ್ಟಿತು.

ಅಸಮಾಧಾನಗೊಂಡ ಸಾಹಿತ್ಯಾಸಕ್ತರು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರೊ.ಚಂದ್ರಶೇಖರ ಪಾಟೀಲ ಅವರ ಭಾಷಣಕ್ಕೆ ಅಡ್ಡಿ
ಪಡಿಸಲು ಅನೇಕರು ಯತ್ನಿಸಿದರು.

ಪ್ರತಿನಿಧಿಗಳು ಆಯಾ ಜಿಲ್ಲೆಯಲ್ಲಿಯೇ ಹೆಸರು ನೋಂದಾಯಿಸಿದ್ದರು. ಮೈಸೂರಿನಲ್ಲಿ ಕಿಟ್‌ ವಿತರಿಸುವುದಾಗಿ ತಿಳಿಸಲಾಗಿತ್ತು. ನೋಂದಣಿ ಕೇಂದ್ರವಿದ್ದ ಪಡುವಾರಹಳ್ಳಿಯ ಬಾಬು ಜಗಜೀವನರಾಮ್‌ ಭವನದ ವಿಳಾಸವನ್ನು ನೀಡಲಾಗಿತ್ತು. ವಿವಿಧ ಜಿಲ್ಲೆಯಿಂದ ಧಾವಿಸಿದ ಅನೇಕರು ಬುಧವಾರ ಬೆಳಿಗ್ಗೆ ಬಾಬು ಜಗಜೀವನರಾಮ್‌ ಭವನಕ್ಕೆ ಭೇಟಿ ನೀಡಿದರು.

ADVERTISEMENT

ಆದರೆ, ಅಲ್ಲಿ ‘ಮಹಾರಾಜ ಕಾಲೇಜು ಮೈದಾನದಲ್ಲಿ’ ಕಿಟ್‌ ಲಭ್ಯ ಎಂಬ ಫಲಕವನ್ನು ಹಾಕಲಾಗಿತ್ತು. ಅನೇಕರು ಮೈದಾನದಕ್ಕೆ ಧಾವಿಸುವ ಹೊತ್ತಿಗೆ ಬೆಳಿಗ್ಗೆ 10 ಗಂಟೆ ಮೀರಿತ್ತು. ಇದರಿಂದ ಅಸಮಾಧಾನಗೊಂಡ ಸಾಹಿತ್ಯಾಸಕ್ತರು ಆಯೋಜಕರ ವಿರುದ್ಧ ಸಿಡಿದೆದ್ದರು.

50 ಕಿಟ್‌ ಕಳವು

ಪ್ರತಿಭಟನೆಯ ಬಳಿಕ ಕಿಟ್ ವಿತರಿಸಲು ನೋಂದಣಿ ಸಮಿತಿ ಮುಂದಾಯಿತು. ಈ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ 24ನೇ ಕೌಂಟರಿನಲ್ಲಿ 50ಕ್ಕೂ ಹೆಚ್ಚು ಬ್ಯಾಗ್‌ಗಳು ಕಳವಾಗಿವೆ. ಪೊಲೀಸ್‌ ಭದ್ರತೆಯೊಂದಿಗೆ ಶನಿವಾರ ಬೆಳಿಗ್ಗೆ 9ಕ್ಕೆ ಕಿಟ್‌ ವಿತರಿಸಲು ನೋಂದಣಿ ಸಮಿತಿ ನಿರ್ಧರಿಸಿದೆ.

‘ಹೆಸರು ನೋಂದಾಯಿಸಿಕೊಳ್ಳುವಂತೆ 3 ಸಾವಿರಕ್ಕೂ ಹೆಚ್ಚು ಮಂದಿ ದುಂಬಾಲು ಬಿದ್ದಿದ್ದಾರೆ. ಏಕಾಏಕಿ ಎಲ್ಲರಿಗೂ ಕಿಟ್‌ ಹೊಂದಿಸಲು ಸಾಧ್ಯವಿಲ್ಲ. ಹೀಗಾಗಿ, ಒಒಡಿ ಚೀಟಿಯನ್ನು ನೀಡಲು ಸಮಿತಿ ತೀರ್ಮಾನಿಸಿದೆ’ ಎಂದು ಎಚ್‌.ಎ.ವೆಂಕಟೇಶ್‌ ತಿಳಿಸಿದರು.

* ಕನ್ನಡದ ಮೇಲಿನ ಅಭಿಮಾನದಿಂದ ಸಮ್ಮೇಳನಕ್ಕೆ ಬಂದಿದ್ದೇವೆ. ಸಮ್ಮೇಳನದ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ಆಯೋಜಕರ ಅವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇವೆ

–ಸಿಂ.ಲಿಂ.ನಾಗರಾಜ
ಜಿಲ್ಲಾ ಘಟಕದ ಅಧ್ಯಕ್ಷ, ರಾಮನಗರ

* ಸಮ್ಮೇಳನಕ್ಕೆ 11 ಸಾವಿರ ಪ್ರತಿನಿಧಿಗಳನ್ನು ನಿರೀಕ್ಷಿಸಿದ್ದೆವು. 15 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ನಿರೀಕ್ಷೆ ಮೀರಿ ಜನರು ಬಂದಿದ್ದರಿಂದ ಸಮಸ್ಯೆ ಉಂಟಾಯಿತು

–ಎಚ್‌.ಎ.ವೆಂಕಟೇಶ್‌
ನೋಂದಣಿ ಸಮಿತಿ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.