ADVERTISEMENT

ಎಡಬಿಡಂಗಿ ದೊರೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:23 IST
Last Updated 4 ಮೇ 2019, 20:23 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ಉದಯಪುರಿ ಎಂಬುದೊಂದು ನಗರ. ಅಲ್ಲಿ ಸುಗುಣಮತಿ ಎನ್ನುವ ಅರಸನಿದ್ದ. ಅವನು ಹೆಸರಿಗೆ ತಕ್ಕಂತೆ ಇರದೇ ಎಡಬಿಡಂಗಿ ದೊರೆಯೆಂದೇ ಹೆಸರಾಗಿದ್ದ. ತಾನು ಬಯಸಿದ್ದು ಸಿಗುವುದು ಎಷ್ಟೇ ಅಸಂಭವವಿದ್ದರೂ ಅದನ್ನು ಪಡೆದೇ ತೀರಬೇಕೆಂಬ ಐಲು ಅವನದ್ದು.

ಒಂದು ದಿನ ಬೆಳಗಿನ ಜಾವ ರಾಜನಿನ್ನೂ ಎದ್ದಿರಲಿಲ್ಲ. ಚಾಕರರು ಹಿಂದಿನ ರಾತ್ರಿ ಕಿಟಕಿಗಳ ಪರದೆ ಮುಚ್ಚುವುದನ್ನು ಮರೆತುಬಿಟ್ಟಿದ್ದರು. ಆ ಕಿಟಕಿಗಳಿಂದ ತೂರಿಬಂದ ಉದಯ ಸೂರ್ಯನ ಎಳೆ ಕಿರಣಗಳು ನೇರವಾಗಿ ರಾಜನ ಮುಖವನ್ನು ಆಕ್ರಮಿಸಿದವು. ಅವನಿಗೆ ಗಬಕ್ಕನೆ ಎಚ್ಚರವಾಯಿತು.

ಸೂರ್ಯನ ಕಿರಣಗಳ ತೀಕ್ಷ್ಣತೆಯಿಂದ ಕಣ್ಣು ಬಿಡಲಾಗುತ್ತಿಲ್ಲ! ಸೂರ್ಯನ ಕಿರಣಗಳ ಈ ಅಕ್ರಮ ವರ್ತನೆಯಿಂದ ರಾಜನ ಕಣ್ಣು ಕೆಂಪಗಾಯಿತು. ಈ ವಿಶಾಲ ರಾಜ್ಯಕ್ಕೆ ಅಧಿಪತಿಯಾದ ನನ್ನ ಮುಖದ ಮೇಲೆ ಕಿರಣಗಳನ್ನು ಬಿಡುವಷ್ಟು ಧಿಮಾಕೇ ಈ ಕ್ಷುಲ್ಲಕ ಸೂರ್ಯನಿಗೆ ಎಂದು ರಾಜನಿಗೆ ಕೋಪ ನೆತ್ತಿಗೇರಿತು. ಹೇಗಾದರೂ ಮಾಡಿ ಈ ಸೂರ್ಯನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದ ರಾಜ. ತಕ್ಷಣ ಸೇನಾಪತಿಯನ್ನು ಕರೆಸಿ ಸೂರ್ಯನ ವಿರುದ್ಧ ಯುದ್ಧ ಮಾಡಲು ಸೇನೆಯನ್ನು ಸಜ್ಜಾಗಿಸುವಂತೆ ಆಜ್ಞೆ ಮಾಡಿದ.

ADVERTISEMENT

ಅರಸನ ಅಣತಿ! ಸೇನೆ ಸಜ್ಜಾಗಿ ಹೊರಟಿತು. ನಾಲ್ಕು ಲಕ್ಷ ಸೈನಿಕರೊಂದಿಗೆ, ಮಹಾಮಂತ್ರಿಯೊಂದಿಗೆ ತಾನೇ ಮುಂದಾಳತ್ವ ವಹಿಸಿ ಸೂರ್ಯನಿರುವ ದಿಕ್ಕಿನೆಡೆಗೆ ದೌಡಾಯಿಸಿದ ರಾಜ. ಸೈನಿಕರು ದೊರೆಯ ಈ ಹುಚ್ಚುತನವನ್ನು ಪ್ರತಿಭಟಿಸಲಾರದೇ ಹಿಂಬಾಲಿಸಿದರು.

ಸೂರ್ಯನನ್ನೇ ನೋಡುತ್ತಾ ಸಾಗುತ್ತಿದ್ದಾಗ ತುಸು ದೂರದಲ್ಲಿಯೇ ಒಂದು ಬೆಟ್ಟ ಅಡ್ಡವಾಯಿತು. ಸೂರ್ಯ ಕಾಣದಾದ. ಅರಸ ಆ ಬೆಟ್ಟವನ್ನು ಕಡಿಯಲು ಹೇಳಿದ. ಸೈನಿಕರು ಕಡಿಯಲಾರಂಭಿಸಿದರು. ಸೂರ್ಯ ಮೇಲೆರುತ್ತಾ ಬೆಟ್ಟದ ಇನ್ನೊಂದು ಮಗ್ಗುಲಲ್ಲಿ ಕಂಡ. ಬೆಟ್ಟ ಕಡಿಯುವುದನ್ನು ತಕ್ಷಣ ನಿಲ್ಲಿಸಿ ತನ್ನನ್ನು ಹಿಂಬಾಲಿಸುವಂತೆ ಸೈನಿಕರಿಗೆ ರಾಜ ಆಜ್ಞೆ ಮಾಡಿದ. ಪುನಃ ದಂಡಯಾತ್ರೆ ಸಾಗಿತು. ಮಂತ್ರಿ ಅಸಹಾಯಕನಾಗಿ ಕೈ ಕೈ ಹಿಸುಕಿಕೊಳ್ಳುತ್ತಿದ್ದ.

ತುಸು ದೂರದಲ್ಲಿಯೇ ಸೂರ್ಯನಿಗೆದುರಾಗಿ ಒಂದು ನದಿ ಹರಿಯುತ್ತಿತ್ತು. ‘ಈ ನದಿಯ ನೀರನ್ನು ಖಾಲಿ ಮಾಡಿ. ನಾವು ಆಚೆ ಹೋಗಿ ಸೂರ್ಯನನ್ನು ಬಂಧಿಸಬೇಕು’ ಎಂದು ದೊರೆ ಕೋಪಾವೇಶದಿಂದ ಅರಚತೊಡಗಿದ. ಸೈನಿಕರು ಏನು ಮಾಡುವುದೆಂದು ತೋರದೆ ನಿಂತುಬಿಟ್ಟರು. ವಿಷಯ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಮಂತ್ರಿ ಅರಸನಲ್ಲಿ ಅರಿಕೆ ಮಾಡಿಕೊಂಡ.

‘ಮಹಾಪ್ರಭು, ತಪ್ಪಾಗಿ ತಿಳಿಯದಿದ್ದರೆ ನನ್ನದೊಂದು ವಿನಂತಿ. ನಮ್ಮ ಮನೆಯಲ್ಲಿ ವೀರನೊಬ್ಬನಿದ್ದಾನೆ. ಅವನು ಖಂಡಿತ ಸೂರ್ಯನನ್ನು ಸೋಲಿಸುತ್ತಾನೆ. ನನಗೆ ಇಂದು ಸಂಜೆಯವರೆಗೆ ಅವಕಾಶ ಕೊಡಿ’ ಎಂದ ಮಂತ್ರಿ.

ಅರಸನಿಗೆ ಅದು ಒಪ್ಪಿಗೆಯಾಯಿತು. ಎಲ್ಲರೂ ಅರಮನೆಗೆ ಮರಳಿದರು. ಸಂಜೆಯಾಯಿತು, ಸೂರ್ಯ ಪಡುವಣದಲ್ಲಿ ಮುಳುಗಿ ವಿಶ್ರಾಂತಿಗೆ ತೆರಳಿದ್ದ. ಎಲ್ಲೆಡೆ ಹುಣ್ಣಿಮೆ ಚಂದ್ರಮನ ಬೆಳದಿಂಗಳು ಹಾಲಿನ ನೊರೆಯಂತೆ ಪಸರಿಸಿತ್ತು. ಮಂತ್ರಿ ಓಡೋಡುತ್ತಾ ಅಂತಃಪುರಕ್ಕೆ ಬಂದು ‘ಮಹಾಪ್ರಭು, ನಮ್ಮ ಧೀರ ಸೂರ್ಯನನ್ನು ಸೋಲಿಸಿಬಿಟ್ಟ’ ಎಂದು ಹೇಳಿದ. ಎಡಬಿಡಂಗಿ ರಾಜ ಹೊರಬಂದು ಸುತ್ತಮುತ್ತ ನೋಡಿದ. ನಿಜ! ಎಲ್ಲಿಯೂ ಸೂರ್ಯನ ಕಿರಣಗಳಿಲ್ಲ. ಆಕಾಶ ನೋಡಿದ, ಅಲ್ಲಿಯೂ ಸೂರ್ಯ ಇಲ್ಲ! ಅವನಿಗೆ ಮಹದಾನಂದವಾಯಿತು. ಹರ್ಷಾತಿರೇಕದಿಂದ ಮಂತ್ರಿಗೆ ಕೇಳಿದ:

‘ಎಲ್ಲಿ, ಆ ನಿಮ್ಮ ಮಹಾವೀರನೆಲ್ಲಿ?’ ಮಂತ್ರಿ ಮುಗುಳ್ನಗುತ್ತಾ ಆಗಸ ತೋರಿಸಿದ. ಅಲ್ಲಿ ಹುಣ್ಣಿಮೆ ಚಂದ್ರ ಈ ಹುಚ್ಚು ದೊರೆಯ ಪಿರ್ಕಿತವನ್ನು ಕಂಡು ಪಕಪಕನೆ ನಗುತ್ತಿದ್ದ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.