ADVERTISEMENT

ನಾಣಿ ಮತ್ತು ನಾಯಿ

ನರೇಂದ್ರ ಎಸ್ ಗಂಗೊಳ್ಳಿ
Published 2 ಮಾರ್ಚ್ 2019, 19:45 IST
Last Updated 2 ಮಾರ್ಚ್ 2019, 19:45 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ಒಂ ದೂರಿನಲ್ಲಿ ನಾರಾಯಣ ಎನ್ನುವ ಹುಡುಗ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಅವರ ಮನೆಯಲ್ಲಿ ‘ಜಲ್ಲಿ’ ಹೆಸರಿನ ಒಂದು ನಾಯಿಯೂ ಇತ್ತು. ನಾರಾಯಣನನ್ನು ಎಲ್ಲರೂ ಪ್ರೀತಿಯಿಂದ ನಾಣಿ ಎಂದೇ ಕರೆಯುತ್ತಿದ್ದರು. ಅವನ ತಾಯಿ ದಿನವೂ ದೂರದ ಊರಿನಲ್ಲಿರುವ ಕಚೇರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಬೆಳಿಗ್ಗೆ ಉಪಾಹಾರ ಸಿದ್ಧಪಡಿಸಲು ಸಹ ಕೆಲವೊಮ್ಮೆ ಆಕೆಗೆ ಸಮಯ ಸಾಕಾಗುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಆಕೆ ತಮ್ಮ ಮನೆಯ ಬೀದಿಯ ಕೊನೆಯಲ್ಲಿರುವ ಹೋಟೆಲ್‌ನಿಂದ ತಿಂಡಿ ತರಿಸುತ್ತಿದ್ದಳು. ತಿಂಡಿ ತರುವ ಕೆಲಸ ನಾಣಿಯದ್ದಾಗಿತ್ತು.

ಹಾಗೆ ತಿಂಡಿ ತರಲು ಹೊಗುವಾಗಲೆಲ್ಲ ನಾಣಿಯು ತನ್ನ ಪ್ರೀತಿಯ ನಾಯಿ ಜಲ್ಲಿಯನ್ನು ಜೊತೆಗೆ ಕರೆದೊಯ್ಯುತ್ತಿದ್ದ. ‘ಜಲ್ಲಿ’ ನೋಡಲು ದಷ್ಟಪುಷ್ಟವಾಗಿತ್ತು. ಆ ಬೀದಿಯ ಬೇರೆ ನಾಯಿಗಳು ಅದನ್ನು ಕಂಡರೆ ಹೆದರುತ್ತಿದ್ದವು. ಕೆಲವು ನಾಯಿಗಳು ಇವರ ಜೋಡಿಯನ್ನು ನೋಡಿದಾಗೆಲ್ಲಾ ಬಾಲ ಮುದುರಿಕೊಂಡು ಪಕ್ಕಕ್ಕೆ ಹೋಗುತ್ತಿದ್ದವು. ನಾಣಿ ಹೋಟೆಲ್‌ಗೆ ಹೋಗುವ ಅವಕಾಶ ಸಿಕ್ಕಿದಾಗೆಲ್ಲಾ ಜಲ್ಲಿಗೆಂದು ಒಂದು ಬನ್ ಖರೀದಿಸಿ ಮನೆಗೆ ಬರುವ ದಾರಿಯಲ್ಲಿ ಅದನ್ನು ಜಲ್ಲಿಗೆ ತಿನ್ನಿಸುತ್ತಿದ್ದ. ಇವನು ಚೂರು ಚೂರೇ ಬನ್ ಎಸೆದಾಗ ಜಲ್ಲಿ ಅದನ್ನು ಆಸ್ವಾದಿಸಿ ತಿನ್ನುತ್ತಿತ್ತು.

ಅದೊಂದು ದಿನ ನಾಣಿ ಬನ್ ಎಸೆಯುತ್ತಾ ಬರುತ್ತಿರುವಾಗ ಬಡಕಲು ನಾಯಿಯೊಂದು ನಾಣಿಯನ್ನು ಆಸೆಯ ಕಂಗಳಿಂದ ನೋಡುತ್ತಾ ಅವನ ಹಿಂದೆಯೇ ಬರತೊಡಗಿತು. ಜಲ್ಲಿ ಗುರ್‍ರೆಂದರೂ ಅದು ಹೆದರಲಿಲ್ಲ. ನಾಣಿ ಕೂಡ ‘ಹಚಾ’ ಎಂದು ಅದನ್ನು ಓಡಿಸಲು ಪ್ರಯತ್ನಿಸಿದ. ಅದು ಬೆದರದೆ ಮತ್ತೆ ಹಿಂಬಾಲಿಸತೊಡಗಿತು. ‘ಜಲ್ಲಿ ಅದನ್ನು ಓಡಿಸು’ ಎಂದು ನಾಣಿಯು ಹೇಳಿದ್ದೇ ತಡ, ಜಲ್ಲಿಯು ಆ ಬಡಕಲು ನಾಯಿಯನ್ನು ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಮತ್ತೆ ನಾಣಿಯ ಬಳಿಗೆ ಬಂದಿತು. ಇದರಿಂದ, ‘ನನ್ನ ನಾಯಿ ಎಷ್ಟು ಬಲಶಾಲಿ. ಎಲ್ಲಾ ನಾಯಿಗಳು ಇದಕ್ಕೆ ಹೆದರುತ್ತವೆ ನನ್ನ ಜಲ್ಲಿಯೇ ಶ್ರೇಷ್ಠ’ ಎಂದು ನಾಣಿ ಒಳಗೊಳಗೆ ಖುಷಿಪಟ್ಟ.

ADVERTISEMENT

ಆ ಘಟನೆ ಇಲ್ಲಿಗೆ ಕೊನೆಯಾಗಲಿಲ್ಲ. ನಾಣಿ ಮತ್ತು ಜಲ್ಲಿ ಪ್ರತಿ ಬಾರಿ ಹೋಟೆಲ್‌ಗೆ ಹೋಗಿ ಬರುವಾಗಲೂ ಬಡಕಲು ನಾಯಿ ಅವರನ್ನು ಹಿಂಬಾಲಿಸುವುದು, ಜಲ್ಲಿ ಅದನ್ನು ದೂರಕ್ಕೆ ಓಡಿಸುವುದು ನಡೆಯುತ್ತಲೇ ಇತ್ತು.

ಹೀಗಿರಲಾಗಿ ಒಂದು ದಿನ ಕಾಯಿಲೆ ಬಂದು ಜಲ್ಲಿ ಸತ್ತು ಹೋಯಿತು. ಅಂದು ಇಡೀ ದಿನ ನಾಣಿ ಅಳುತ್ತಾ ಕುಳಿತಿದ್ದ. ಎರಡು ದಿನ ಕಳೆದು ಮತ್ತೆ ನಾಣಿ ತಿಂಡಿ ತರಲು ಹೋಟೆಲ್‌ಗೆ ಹೋಗಿದ್ದ. ರೂಢಿಯಂತೆ ಒಂದು ಬನ್ ಖರೀದಿಸಿದ್ದ. ಆ ಬಳಿಕ ‘ಇಂದು ನನ್ನ ಜೊತೆ ಜಲ್ಲಿ ಇಲ್ಲ’ ಎನ್ನುವುದು ನೆನಪಾಯಿತು. ಅದರೂ ಅದನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದ. ಮತ್ತೆ ಆ ಬಡಕಲು ನಾಯಿ ನಾಣಿಯನ್ನು ಹಿಂಬಾಲಿಸತೊಡಗಿತ್ತು. ಅದಕ್ಕೆ ಹಚಾ ಎಂದು ಗದರಿದನು. ಅದು ಓಡಲಿಲ್ಲ. ಕೊನೆಗೆ, ಕೈಯಲ್ಲಿದ್ದ ಬನ್ನನ್ನು ಅದರತ್ತ ಎಸೆದ. ಅದು ಬನ್ ತಿನ್ನುತ್ತಾ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿ ಬಾಲ ಅಲ್ಲಾಡಿಸುತ್ತಾ ಹೊರಟು ಹೋಯಿತು.

ಮರುದಿನವೂ ನಾಣಿ ಹೋಟೆಲ್‌ಗೆ ಹೋಗಿ ತಿಂಡಿ ಖರೀದಿಸಿದ. ಆದರೆ ಬನ್ ತೆಗೆದುಕೊಳ್ಳಲಿಲ್ಲ. ಮನೆಯತ್ತ ಬರುವಾಗ ಮತ್ತೆ ದಾರಿಯಲ್ಲಿ ಆ ಬಡಕಲು ನಾಯಿ ಹಿಂಬಾಲಿಸಲಾರಂಭಿಸಿತು. ಇವನು ಗದರಿದರೂ ಅದು ಓಡಿ ಹೋಗಲಿಲ್ಲ. ‘ಬರಲಿ, ನನಗೇನೂ ತೊಂದರೆ ಇಲ್ಲ’ ಅಂದುಕೊಂಡು ಇವನು ಮುಂದೆ ನಡೆಯತೊಡಗಿದ. ಅಷ್ಟರಲ್ಲಿ ಅದೆಲ್ಲಿಂದಲೋ ಇದ್ದಕ್ಕಿದ್ದಂತೆ ಐದಾರು ನಾಯಿಗಳ ಗುಂಪು ಎದುರಿಗೆ ಬಂದು ನಾಣಿಯನ್ನು ನೋಡಿ ಬೊಗಳಲಾರಂಭಿಸಿದವು. ಅದರಲ್ಲೂ ಎರಡು ದಪ್ಪ ನಾಯಿಗಳ ಕೋರೆ ಹಲ್ಲುಗಳನ್ನು ನೋಡಿ ನಾಣಿ ಭಯಬಿದ್ದ. ರಸ್ತೆಯಲ್ಲಿ ಬೇರೆ ಯಾರೂ ಇರಲಿಲ್ಲ. ಹೆದರಿಕೆಯಿಂದ ಕಾಲುಗಳು ನಡುಗಲಾರಂಭಿಸಿದವು. ಏನೂ ಮಾಡಲು ತೋಚದೆ ಅಲ್ಲಿಯೇ ನಿಂತುಬಿಟ್ಟ ನಾಣಿ.

ಅದೇ ಸಂದರ್ಭ, ಅವನನ್ನು ಹಿಂಬಾಲಿಸಿ ಬರುತ್ತಿದ್ದ ಬಡಕಲು ನಾಯಿ ನಾಣಿಯ ಎದುರಿಗೆ ಬಂದು ನಾಯಿಗಳ ಗುಂಪನ್ನು ನೋಡಿ ಬೊಗಳಲಾರಂಭಿಸಿತು. ಬಡಕಲು ನಾಯಿಯು ಬೊಗಳುತ್ತಲೇ ಆ ನಾಯಿಗಳ ಗುಂಪನ್ನು ಅಟ್ಟಿಸಿಕೊಂಡು ಒಡತೊಡಗಿತು. ಉಳಿದ ನಾಯಿಗಳೆಲ್ಲಾ ದಿಕ್ಕಾಪಾಲಾಗಿ ಓಡಿದವು. ನಾಣಿ ಅಚ್ಚರಿ ಮತ್ತು ಖುಷಿಯಿಂದ ನಿಟ್ಟುಸಿರುಬಿಟ್ಟ. ಯಾವ ನಾಯಿಯನ್ನು ಬಡಕಲು ಎಂದುಕೊಂಡಿದ್ದನೋ ಅದೇ ನಾಯಿ ಅಂದು ನಾಣಿಯನ್ನು ಅಪಾಯದಿಂದ ಪಾರು ಮಾಡಿತ್ತು. ಒಂದು ದಿನ ನೀಡಿದ ಬನ್‍ಗೆ ಅದು ತೀರಿಸಿದ ಉಪಕಾರ ಬಹಳ ದೊಡ್ಡದಾಗಿತ್ತು.

ಶರೀರದ ಆಕಾರಕ್ಕಿಂತ ಒಳಗಿರುವ ಆತ್ಮವಿಶ್ವಾಸ ಬಹಳ ದೊಡ್ಡದು ಎನ್ನುವುದು ನಾಣಿಗೆ ಅರಿವಾಗಿತ್ತು. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಬೇಕು ಎನ್ನುವ ಪಾಠವನ್ನು ಆ ನಾಯಿ ಕಲಿಸಿತ್ತು.

ನಾಣಿ ಮನೆಯ ಹತ್ತಿರ ಬರುತ್ತಿದ್ದಂತೆ ಆ ಬಡಕಲು ನಾಯಿ ಮತ್ತೆ ಎದುರಾಗಿತ್ತು. ಅದನ್ನು ಕಂಡವನೇ ಖುಷಿಯಾದ ನಾಣಿ, ‘ಇನ್ನು ಮುಂದೆ ನೀನೆ ನನ್ನ ಜಲ್ಲಿ’ ಎಂದು ಅದನ್ನು ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸಾಕತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.