ಈ ದಿನ ತಾನು ಬೇರೆಯದಾಗಿ ಕಾಣಿಸುತ್ತಿದ್ದೇನೆ ಎಂದು ಅನ್ನಿಸಿತು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದ ಮುರಳಿ. ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದವನಿಗೆ ಕಣ್ಣಲ್ಲಿನ ನಿರುತ್ಸಾಹ ಕಾಣಿಸಿತು. ಯಾರಿಗೆ ಗೊತ್ತು ಇದು ಭ್ರಮೆ ಆಗಿರಲೂ ಸಾಧ್ಯ, ಆಗದಿರಲೂ ಸಾಧ್ಯ, ನಿಜವೇ ಇರಬಹದು, ನಿಜವಾಗಿರಲು ಸಾಧ್ಯವೇ ಇರಬಹುದು. ಈ ಕನ್ನಡಿಯಲ್ಲಿನ ಪ್ರತಿಬಿಂಬ ನನ್ನದೇ ಎನ್ನಲು ಯಾವ ಪುರಾವೆ ಇದೆ. ಇದು ನಾನೂ ಆಗಿರಬಹದು, ಬೇರೆ ಯಾರೋ ಆಗಿರಬಹದು. ಹೇಗೆ ಸಾಧ್ಯ? ಕನ್ನಡಿ ತನ್ನ ಮುಂದಿನದು ಹೇಗಿರುವುದೋ ಹಾಗೆ ತೋರಿಸುತ್ತದೆ ಎನ್ನಿಸಿ ನಗು ಬಂತು. ಹಾಗಾದರೆ ಇದು ತಾನೇ ಎಂದು ಮತ್ತೊಮ್ಮೆ ನಕ್ಕ. ಇದೇ ಕನ್ನಡಿಯಲ್ಲಿನ ನನ್ನ ಪ್ರತಿಬಿಂಬವನ್ನು ಬೇರೆ ಯಾರಾದರೂ ನೋಡಿದರೆ ಅದು ಅವರಿಗೆ ಬೇರೆಯದೇ ರೀತಿ ಕಾಣಿಸಬಹುದೇ? ಕಾಣಿಸಬಹುದು. ಕನ್ನಡಿಯ ಹೊರಗಿನ ಮತ್ತು ಕನ್ನಡಿಯೊಳಗಿನ ನನ್ನ ರೂಪ ಒಂದೇ ರೀತಿ ಅವರಿಗೆ ಕಾಣಿಸಬಹುದೇ?. ಹಲವಾರು ಜನರಿಗೆ ಹಲವಾರು ರೀತಿ ಕಾಣಿಸುವ ನಮ್ಮ ರೂಪದ ನಿಜ ಸ್ವರೂಪ ಯಾವುದು?.
ಪತ್ನಿ ಗಾಯತ್ರಿಗೆ ಹೇಗೆ ಕಾಣಿಸುತ್ತೇನೆ?
ಅವಳ ಪ್ರೀತಿ ಹಂಬಲಿಸುವ ಬಗೆಗೆ, ತೀವ್ರ ಪ್ರೇಮಕೆ ತಾನು ಸಾಟಿಯಾಗುವುದಿಲ್ಲ ಎಂದು ಅವಳು ಜಗಜ್ಜಾಹೀರು ಮಾಡುವ ಪರಿಗೆ, ಅವನಿಗೆ ಸಂಕಟವಾಗುತ್ತದೆ. ಹಲವಾರು ವರುಷಗಳ ಅವಳ ಮೌನ ವಿಸ್ಫೋಟಗೊಂಡಂತಾಗಿ, ತಾನು ಆ ವಿಸ್ಫೋಟದಲ್ಲಿ ಚೂರು ಚೂರಾದ ಭಾವನೆ ಅವನನ್ನು ಕಾಡುತ್ತದೆ. ತನ್ನ ಇರುವಿಕೆ ತನ್ನ ಮನೆಯಲ್ಲೇ ಮಸುಕಾದಂತಾಗಿ ನೋವಾಗುತ್ತದೆ. ತನ್ನ ಸಹಜ ಮೌನದ ಗುಣವನ್ನು ಅವಳು ಲಘುವಾಗಿ ತೆಗೆದುಕೊಳ್ಳುತ್ತಿದ್ದಾಳೆ ಎನಿಸಿ ಚಡಪಡಿಸುತ್ತಾನೆ. ಮಾತನಾಡಲು ಬಾಯಿ ತೆರೆದಾಗ ತನಗೇ ಕೇಳಿಸದ ತನ್ನ ಕ್ಷೀಣ ದನಿ ತನ್ನನ್ನೇ ಅಣಕಿಸಿದಂತಾಗಿ ಅವಮಾನಕ್ಕೆ ಒಳಗಾದಂತೆ ಭಾವಿಸಿ ಕುಗ್ಗಿ ಹೋಗುತ್ತಾನೆ. ಛೇ, ಇದೆಂತಹ ಸವಾಲು ಎಣಿಸುತ್ತದೆ. ಮತ್ತೆ ತನ್ನ ಮೌನದ ಗೂಡಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.
ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಅವನು ಸೋಲುತ್ತಾನೆ. ಎಲ್ಲವನ್ನು ತಣ್ಣಗೆ ಅನುಭವಿಸುವ ಅವನ ರೀತಿಗೆ ಅವಳು ಸಹನೆ ಕಳೆದುಕೊಳ್ಳುತ್ತಾಳೆ. ತಾನು ಒಡ್ಡುವ ಸವಾಲನ್ನು ಯಾವುದೇ ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳುತ್ತಾನೆ. ತನ್ನ ಅಭಿಪ್ರಾಯಗಳಿಗೆ ಯಾವತ್ತೂ ಅಡ್ಡಿಪಡಿಸುವುದಿಲ್ಲ. ಎಲ್ಲವೂ ಸರಿಯಾಗಿ ಇರುವಂತೆ ಅವಳಿಗೆ ಅನಿಸುತ್ತದೆ. ಆದರೂ ಏನೋ ಕಳೆದುಕೊಂಡಂತೆ ಅವಳಿಗೆ ಭಾಸವಾಗುತ್ತದೆ. ಅವನ ಮೌನ ಕೃತ್ರಿಮ ಎನ್ನುವುದು ಅವಳ ಭಾವನೆ. ತನ್ನನ್ನು ಹಚ್ಚಿಕೊಳ್ಳದೆ ತನ್ನ ಪಾಡಿಗೆ ತಾನು ಇರುವ ಅವನ ಪರಿ ಅವಳಿಗೆ ಮೈಯೆಲ್ಲಾ ಮುಳ್ಳೆನಿಸುತ್ತದೆ. ಇಡೀ ವಿಶ್ವವೇ ಮೌನವಾಗಿರುವಂತೆ ಅವಳಿಗೆ ಅನಿಸುತ್ತದೆ.
ಗಾಯತ್ರಿ ಮತ್ತು ಮುರಳಿ ಮದುವೆಯಾಗಿ ಹದಿನೈದು ವರುಷಗಳಾಗುತ್ತಾ ಬಂದಿದೆ. ಒಬ್ಬ ಮಗಳೂ ಇದ್ದಾಳೆ. ಅವಳಿಗೀಗ ಹದಿನಾಲ್ಕು ವರುಷ. ಮಗಳು ತಾಯಿಗಂಟಿಕೊಂಡೇ ಬೆಳೆಯುತ್ತಿದೆ. ತಂದೆಯನ್ನು ನೋಡಿ ಹಾಯ್ ಅಪ್ಪ ಎಂದು ತನ್ನ ರೂಮನ್ನು ಸೇರಿಕೊಳ್ಳುತ್ತದೆ.
ಗಾಯತ್ರಿ ಸಿಕ್ಕ ಸಿಕ್ಕ ಕಡೆಯೆಲ್ಲಾ ತನಗೆ ಬೇಕಾದ ಪ್ರೀತಿ ಸಿಕ್ಕಲಿಲ್ಲ ಎನ್ನುತ್ತಾಳೆ. ಮುರಳಿಯನ್ನು ಸದಾ ಹೀಯಾಳಿಸುವುದು, ಅವಮಾನಿಸಿ ಮಾತನಾಡುವುದು ಮಾಡುತ್ತಾಳೆ. ತನ್ನದೇ ಕಥೆ ಎಂಬಂತೆ ಕಥೆ ಕವನಗಳನ್ನು ಬರೆಯುತ್ತಾಳೆ. ಬರೆದು ಎಲ್ಲಾ ಪತ್ರಿಕೆಗಳಿಗೂ ಕಳುಹಿಸುತ್ತಾಳೆ. ಅದರಲ್ಲಿ ಸದಾ ತಾನು ಹೇಗೆ ಪ್ರೀತಿಯಿಂದ ವಂಚಿತಳಾಗಿದ್ದೇನೆ ಎಂದು ಹಳಹಳಿಸುತ್ತಾಳೆ. ತನಗೆ ಸಿಕ್ಕದ ಪ್ರೀತಿಯ ಬಗ್ಗೆ, ತನಗೆ ಮತ್ತೆಲ್ಲೋ ಸಿಗಬಹುದಾದಾ ಪ್ರೀತಿಯ ಬಗ್ಗೆ ಸದಾ ಬರೆಯುತ್ತಾಳೆ.
ಮುರಳಿಗೆ ಇದರಿಂದ ಕಸಿವಿಸಿ ಆಗುತ್ತದೆ. ಸ್ನೇಹಿತರ ಗುಂಪಿನಲ್ಲಿ ತನ್ನನ್ನು ಹೀಯಾಳಿಸುವುದರ ಬಗ್ಗೆ ಮೌನ ವಹಿಸುತ್ತಾನೆ. ತನ್ನ ಮಾತಿನಿಂದ ಅವಳು ಬದಲಾಗುವ ಸ್ಥಿತಿ ಎಂದೋ ದಾಟಿಹೋಗಿದೆ ಎಂದು ಅವನಿಗೆ ಗೊತ್ತಿದೆ. ಸ್ನೇಹಿತರು ಕೆಲವು ಸಲ ಉಚಿತ ಸಲಹೆಗಳನ್ನು ಕೊಡುವುದು ಅವನಿಗೆ ಇಷ್ಟವಾಗುವುದಿಲ್ಲ. ಎಲ್ಲರ ಬಾಳಿನಲ್ಲೂ ಏನಾದರೂ ಒಂದು ಕೊರೆತೆ ಇದ್ದೇ ಇರುತ್ತದೆ. ಅದನ್ನು ಎಲ್ಲರಿಗೂ ಹೇಳಿಕೊಂಡರೆ ಅವರಿಗೆ ಮಾತನಾಡಲು ಒಂದು ವಿಷಯ ಸಿಗುವುದು ಬಿಟ್ಟರೆ ಬೇರೆ ಏನು ಪ್ರಯೋಜನವಿಲ್ಲ ಎಂದು ಅವನು ಬಲ್ಲ. ಅದಲ್ಲದೆ ಏನಾದರೂ ಮನಸ್ತಾಪ ಬಂದಾಗ ಸ್ನೇಹಿತರೇ ಆಡಿಕೊಳ್ಳುತ್ತಾರೆ ಎಂದು ಅವನಿಗೆ ತಿಳಿದಿದೆ. ಜೀವನದಲ್ಲಿ ಸ್ನೇಹಿತರಿಗಿಂತ ಒಂದು ಮೆಟ್ಟಲು ಹೆಚ್ಚು ಹತ್ತಿದಾಗಲೋ, ಏನಾದರೂ ಸಾಧಿಸಿ ಹೆಸರು ಗಳಿಸಿಕೊಂಡಾಗಲೋ ಸ್ನೇಹಿತರೇ ತಮಗೆ ಗೊತ್ತಿರುವ ರಹಸ್ಯಗಳನ್ನೋ, ನಮ್ಮ ಬಲಹೀನತೆಗಳನ್ನೋ ಹೊರಬಿಡುವುದು. ಆದ್ದರಿಂದ ಯಾರು ಎಷ್ಟೇ ಹತ್ತಿರದವರಾದರೂ ತನ್ನ ಜೀವನದ ಯಾವುದೇ ವಿಷಯಗಳನ್ನು ಯಾರಿಗೂ ಹೇಳಿಕೊಳ್ಳುವುದಿಲ್ಲ. ಯಾರಾದರೂ ಏನಾದರೂ ಹೇಳಿದಾಗ ಸುಮ್ಮನೆ ಕೇಳಿಸಿಕೊಳ್ಳುತ್ತಾನೆ. ‘‘ಏನು ಮುರಳಿ ಮಾತಾನಾಡುತ್ತಿಲ್ಲ’’ ಎಂದರೆ ‘‘ಎಲ್ಲರೂ ಮಾತನಾಡಿದರೆ ಕೇಳಿಸಿಕೊಳ್ಳುವರು ಯಾರು?’’ ಎನ್ನುತ್ತಾನೆ.
ಮುರಳಿಗೆ ಸಮಸ್ಯೆ ಅರ್ಥ ಆಗದೆ, ಅದಕ್ಕೆ ಪರಿಹಾರವೇನು ಎಂದು ಯೋಚಿಸುತ್ತಾನೆ. ಕೆಲಸ ಮುಗಿಸಿ ಮನೆಗೆ ಬಂದಾಗ ಮೌನ ಅವನಿಗೆ ಸ್ವಾಗತ ನೀಡುತ್ತದೆ. ಸುಮ್ಮನೆ ಒಳಗಡೆ ನಡೆದು ಬಟ್ಟೆ ಬದಲಾಯಿಸಿ, ಅಡುಗೆ ಮನೆ ತಲುಪುತ್ತಾನೆ, ಅಲ್ಲಿ ಅವನಿಗಾಗಿ ಚಹಾ ಸಿದ್ಧವಿರುತ್ತದೆ. ನಿಧಾನವಾಗಿ ಎತ್ತಿಕೊಂಡು, ಟಿವಿ ನೋಡುತ್ತಾ ಚಹಾ ಮುಗಿಸುತ್ತಾನೆ. ಹಾಗೆಯೆ ಎಂಟುಗಂಟೆಯವರೆಗೆ ಟಿವಿ ನೋಡುತ್ತಾನೆ. ಅಡುಗೆ ಮನೆಯ ಸದ್ದು ನಿಧಾನವಾಗಿ ನಿಂತಮೇಲೆ, ಎದ್ದು ಡೈನಿಂಗ್ ಟೇಬಲ್ ಹತ್ತಿರ ಬರುತ್ತಾನೆ, ಅಲ್ಲಿ ಊಟ ಸಿದ್ಧವಿರುತ್ತದೆ. ಒಬ್ಬನೇ ಕುಳಿತು ಊಟ ಮಾಡುತ್ತಾನೆ. ಮತ್ತೆ ಟಿವಿ ನೋಡಿ ರಾತ್ರಿ ಹತ್ತರ ನಂತರ ಮಲಗಲು ಹೋಗುತ್ತಾನೆ. ಅಲ್ಲಿ ಆಗಲೇ ಗಾಯತ್ರಿ ಮಲಗಿರುತ್ತಾಳೆ, ಮುರಳಿ ನಿಧಾನವಾಗಿ ಮಲಗಿ ಲೈಟ್ ಆರಿಸುತ್ತಾನೆ.
ಒಂದೊಂದು ರಾತ್ರಿ ಹೆಂಡತಿಯ ಹತ್ತಿರ ಜರುಗಿ, ಅವಳನ್ನು ಅಪ್ಪಿಕೊಳ್ಳಲು ನೋಡುತ್ತಾನೆ. ಹೆಂಡತಿಯ ಅಡಚಣೆಯಿಲ್ಲದಿದ್ದರೆ ಮುಂದುವರೆಯುತ್ತಾನೆ. ಮಾತೇ ನಡೆಯದೆ ಕೆಲಸ ಮುಗಿದುಹೋಗುತ್ತದೆ. ಒಂದೊಂದು ಸಲ ಅವಳು ತಿರುಗಿ ಬೀಳುತ್ತಾಳೆ, ‘ಇದಕ್ಕಾದರೆ ಹತ್ತಿರ ಬರುತ್ತೀರಾ, ಇಲ್ಲ ಅಂದರೆ ನಾನು ಮನೆಯಲ್ಲಿ ಇರುವುದೂ ಗುರುತಿಸುವುದಿಲ್ಲ ಎನ್ನುತ್ತಾಳೆ’. ಅವನ ಮನದಲ್ಲೂ ಅದೇ ಮಾತು ಇರುತ್ತದೆ, ಆದರೆ ಆಡುವುದಿಲ್ಲ, ಸಮ್ಮನೆ ಪಕ್ಕಕ್ಕೆ ತಿರುಗಿ ಮಲಗುತ್ತಾನೆ.
ಒಬ್ಬರನೊಬ್ಬರು ದ್ವೇಷಿಸುವುದಿಲ್ಲ, ಮದುವೆಯ ಮೊದ ಮೊದಲು ಅವಳು ಮಾತನಾಡುತ್ತಿದ್ದರೆ ಅವನು ಕೇಳುತ್ತಾ ಕುಳಿತಿರುತ್ತಿದ್ದ. ಕಡಿಮೆ ಮಾತನಾಡುತ್ತಿದ್ದ, ಮಾತ ಕೇಳುವ ಗಂಡ ಸಿಗುವುದೇ ಸುಖ ಎಂದುಕೊಳ್ಳುತ್ತಿದ್ದ ಗಾಯತ್ರಿ, ಖುಷಿಯಿಂದ ಮಾತನಾಡುತ್ತಿದ್ದಳು. ಇಂದು ಏನಾಯಿತೋ ತಿಳಿಯದು, ಅವಳಿಗೆ ತನ್ನಂತೆಯೇ ತನ್ನ ಗಂಡ ಕೂಡ ಮಾತನಾಡಬೇಕು ಎನ್ನಿಸಹತ್ತಿತು. ತಾನು ಮಾತು ನಿಲ್ಲಿಸಿ ಗಂಡನ ಮುಖ ನೋಡುತ್ತಾ ಕುಳಿತುಕೊಳ್ಳಲು ಪ್ರಾರಂಭಿಸಿದಳು. ಮುರಳಿಗೆ ಇದು ಹೊಸದಾಗಿ ಕಾಣಿಸಹತ್ತಿತು. ಏನು ಮಾತನಾಡುವುದು ತಿಳಿಯಲಿಲ್ಲ. ಕ್ರಮೇಣ ಅವರ ನಡುವಿನ ಮಾತು ಕಡಿಮೆಯಾಯಿತು.
‘‘ನೀವು ಮಾತನಾಡುವರೆಗೂ ನಾನು ಏನೂ ಮಾತನಾಡುವುದಿಲ್ಲ’’ ಅವಳು ದುತ್ತೆಂದು ಎದ್ದು ಹೋಗಿದ್ದಳು.
‘‘ಏನು ಮಾತನಾಡುವುದು, ನಾನು ಮಾತನಾಡುತ್ತೆನೆಲ್ಲ, ಎಷ್ಟು ಬೇಕೋ ಅಷ್ಟು ಮಾತನಾಡುತ್ತೇನೆ, ಅದಕ್ಕಿಂತ ಏನು ಮಾತನಾಡುವುದೋ ತಿಳಿಯುತ್ತಿಲ್ಲ’’.
"ಮೊನ್ನೆ ಫೋನಿನಲ್ಲಿ ಅಷ್ಟು ಹೊತ್ತು ನಗು ನಗುತ್ತಾ ಮಾತನ್ನಾಡುತ್ತಿದ್ದಿರಿ, ನನ್ನ ಹತ್ರ ಮಾತನಾಡಲು ಮಾತ್ರ ನಿಮಗೆ ಮಾತಿಲ್ಲ"
" ಅದು ಕೆಲಸ"
" ಅಂದರೆ ನಾನು ಬೇಕಾ ಬಿಟ್ಟಿ"
ಅವನು ಏನೂ ಹೇಳಲಿಲ್ಲ. ಕ್ರಮೇಣ ಅವರ ನಡುವೆ ಮಾತು ನಿಂತಿತು. ಬೇಕೇ ಬೇಕೆಂದರೆ ಎರಡು ಮಾತು ಅಷ್ಟೇ. ಅಲ್ಲಿಂದ ಶುರುವಾಯಿತು ಅವಳ ಹೀಗೆಳೆಯುವ ಮಾತು. ಅವನ ಮೌನ ಇನ್ನೂ ಹೆಚ್ಚಾಯಿತು.
ಪ್ರತಿಯೊಬ್ಬರೂ ಒಂದೊಂದು ರೀತಿ, ಕೆಲವರಿಗೆ ಮೌನವಾಗಿರುವ, ಕೆಲವರಿಗೆ ಮಾತನಾಡುವ, ಕೆಲವರಿಗೆ ತನ್ನೊಡನೆ ಮಾತ್ರ ಮಾತನಾಡುವ, ಕೆಲವರಿಗೆ ಎಲ್ಲಾ ಕೆಲಸ ತಾನೇ ಮಾಡುವ, ಕೆಲವರಿಗೆ ತನಗೇ ಎಲ್ಲವನ್ನೂ ಬಿಡುವ ಸಂಗಾತಿಯ ಬಯಕೆ ಇರುತ್ತದೆ. ಆದರೆ ಅದು ಮದುವೆ ಆಗುವವರೆಗೂ ತಿಳಿಯಲು ಸಾಧ್ಯವಿಲ್ಲದಿದ್ದರಿಂದ ಬಹುತೇಕ ವಿರುದ್ಧವಾಗಿರುವ ವ್ಯಕ್ತಿತ್ವ ಇರುವವರೇ ಸಿಗುವುದು.
ವ್ಯಕ್ತಿತ್ವ ಸ್ವಲ್ಪ ವಿರುದ್ಧವಿದ್ದರೂ, ಪ್ರೀತಿ ಇದ್ದರೆ ಸಾಕಲ್ಲವೇ ಎಂದು ಅವನು ಅಂದುಕೊಳ್ಳುತ್ತಾನೆ. ಆದರೆ ಆ ಪ್ರೀತಿ ವ್ಯಕ್ತಪಡಿಸುವಲ್ಲಿ ತಾನು ಸೋಲುತ್ತಿದ್ದೇನೆಯೇ ಎಂದುಕೊಳ್ಳುತ್ತಾನೆ. ಈಗ ಇದ್ದಕ್ಕಿಂದಂತೆ ಪ್ರೀತಿ ನದಿಯ ರಭಸದಿಂದ ಹರಿಸುವುದು ಹೇಗೆ, ಹಾಗೆ ಮಾಡಿದರೆ ಕೃತ್ರಿಮವಾಗಿ ಇರುವುದಿಲ್ಲವೇ. ಹಾಗೆ ತಾನು ಪ್ರೀತಿ ತೋರ್ಪಡಿಸಿದರೆ ಅವಳು ಇನ್ನೂ ವ್ಯಗ್ರವಾಗುವುದಿಲ್ಲವೇ, ಏಕೆಂದರೆ ತಾನು ಪ್ರೀತಿ ತೋರಿಸುವ ಪರಿ ಅವಳಿಗೆ ಹಿಡಿಸದೆ ಬೇರೇನೋ ಬೇಕು ಎನಿಸುತ್ತದೆ. ಇದಕ್ಕೆ ಮದ್ದು ಅರೆಯುವುದು ಹೇಗೆ ಎಂದು ಅರಿಯದೆ ಚಡಪಡಿಸುತ್ತಾನೆ.
ತಾನು ಚಿಕ್ಕಂದಿನಿಂದಲೂ ಮೌನಿ ಎಂದು ಅವಳಿಗೆ ತಿಳಿಹೇಳಲು ಬಯಸುತ್ತಾನೆ. ಅವಳು ಅವನ ಜೊತೆ ಕೂತು ಮಾತನಾಡುವುದು ಬಿಟ್ಟು ವರುಷಗಳಾಗಿವೆ. ಅಲ್ಲೊಂದು ಇಲ್ಲೊಂದು ಮಗಳ ಅಗತ್ಯಗಳ ಮಾತು ನಡೆಯುತ್ತದೆ. ತನಗೆ ಮಾತನಾಡಲು ಒಂದು ವಿಷಯ ಬೇಕು, ಆ ವಿಷಯದಲ್ಲಿ ತನಗೆ ಪರಿಣತಿ ಇರಬೇಕು, ಹಾಗಿದ್ದರೆ ಮಾತ್ರ ತಾನು ಮಾತನಾಡಬಲ್ಲೆ. ಇಲ್ಲದಿದ್ದರೆ, ತಾನು ಮೌನವಾಗಿರುತ್ತೇನೆ ಎಂದು ಗಾಯತ್ರಿಗೆ ತಿಳಿದಿದೆ ಎಂದು ಅವನು ನಂಬಿದ್ದ. ಆದರೆ ಅವಳಿಗೆ ಅಂತಹ ನಂಬಿಕೆ ಏನೂ ಇರಲಿಲ್ಲ.
ಒಂದು ದಿನ ಅವಳ ಹೀಗೆಳೆಯುವ ಪರಿ ಇನ್ನೊಂದು ಹಂತಕ್ಕೆ ಹೋಯಿತು. ಯಾರೊಡನೆಯೂ ಫೋನಿನಲ್ಲಿ ‘ಯಾರಾದರೂ ನನ್ನನ್ನು ಕರೆದೊಯ್ದು ಪ್ರೀತಿಯ ಮಳೆ ಸುರಿಸಬಾರದೇ ಅನಿಸುತ್ತದೆ’ ಎಂದು ಹೇಳುತ್ತಿದ್ದಳು. ಅದನ್ನು ಕೇಳಿಸಿಕೊಂಡ ಮುರಳಿಯ ತಲೆ ದಿಮ್ ಎಂದಿತು.
ಅಸಲಿಗೆ, ಈ ಪ್ರೀತಿ ಎಂದರೇನು? ಅದನ್ನು ಹೆಣ್ಣು ಹೇಗೆ ಬಯಸುತ್ತಾಳೆ? ಗಂಡು ಹೇಗೆ ಬಯಸುತ್ತಾನೆ? ಹೆಣ್ಣಿನ ಪ್ರೀತಿ ಪರಿ ಯಾವ ರೀತಿಯಿದು, ಅಂತಹ ಪ್ರೀತಿ ಸದಾ ಒಂದೇ ತೆರನಾಗಿ ಇರುತ್ತದೆಯೇ, ಇಲ್ಲ ಬದಲಾಗುತ್ತಾ ಇರುತ್ತದೆಯೇ? ಅಂತಹ ಪ್ರೀತಿಗೆ ಮಿತಿ ಇರುತ್ತದೆಯೇ, ಇಲ್ಲ ಅದು ಅಪರಿಮಿತವೇ? ಯಾವ ಹೆಣ್ಣೂ ತನ್ನ ಪ್ರೀತಿಯನ್ನು ಗಂಡಿಗೆ ಸರಿಯಾಗಿ ಅರಹುವುದಿಲ್ಲ, ಗಂಡೇ ಅದನ್ನು ಅರ್ಥ ಮಾಡಿಕೊಳ್ಳಬೇಕು, ಹಾಗೆ ನಡೆದುಕೊಳ್ಳಬೇಕು. ಹೇಳದಿದ್ದರೆ ತಿಳಿದುಕೊಳ್ಳುವುದು ಹೇಗೆ?
ಮಾತು ಮಾತ್ರ ಪ್ರೀತಿಯೇ? ಮೌನಕ್ಕೆ ಪ್ರೀತಿ ಸಿಗುವುದಿಲ್ಲವೇ. ಮೌನ ಪ್ರೀತಿಯಲ್ಲವೇ?. ಮನುಷ್ಯ ಹೆಚ್ಚು ಮಾತನಾಡಿದಷ್ಟೂ ಸುಳ್ಳು ಹೇಳಲು ತೊಡಗುತ್ತಾನೆ ಎಂದು ಅವನ ನಂಬಿಕೆ. ಸತ್ಯಕೆ ಹೆಚ್ಚು ಮಾತು ಬೇಕಿಲ್ಲ. ಸುಳ್ಳಿಗೆ ಮಾತು ಜಾಸ್ತಿ. ಪ್ರೀತಿವ್ಯಕ್ತತೆ ಮಾತಿನಲ್ಲಿ ಜಾಸ್ತಿ ಇರಬೇಕೇ ಅಥವಾ ಕ್ರಿಯೆಯಲ್ಲಿ ಇರಬೇಕೇ? ಮಾತಿಗಿಂತ ಕ್ರಿಯೆ ಮುಖ್ಯ ಅಲ್ಲವೇ?.
ಗಾಯತ್ರಿ ಮಾತನಾಡುತ್ತಿದ್ದುದ್ದು ಯಾರ ಜೊತೆ, ಹೆಣ್ಣಿನ ಜೊತೆಯೇ, ಗಂಡಿನ ಜೊತೆಯೇ, ಎಷ್ಟು ಮುಕ್ತವಾಗಿ ಮಾತನಾಡುತ್ತಿದ್ದಳು ಎಂದರೆ ಅದು ಯಾರೋ ಹತ್ತಿರದವರೇ ಇರಬೇಕು, ಅವರು ವಿಶ್ವಾಸಾರ್ಹರೇ ಇರಬೇಕು. ಹೆಣ್ಣು ಮುಕ್ತವಾಗಲು ಬಯಸಿದರೆ ಅದನ್ನು ತಡೆಯಲು ಕಷ್ಟ. ಅವಳು ರಹಸ್ಯಗಳನ್ನು ಕಾಪಾಡಬಯಸಿದರೆ ದೇವರೇ ಬಂದರು ಅವಳ ಮನ ತೆರೆದುಕೊಳ್ಳುವುದಿಲ್ಲ. ಅವಳ ಎಷ್ಟೋ ಸ್ನೇಹಿತರು ನನಗೆ ತಿಳಿದಿಲ್ಲ, ನನ್ನ ಮೌನ ವ್ಯಕ್ತಿತ್ವ ಅವಳ ಸ್ನೇಹಿತರು ಮನೆಗೆ ಬರಲು ಅಡ್ಡಿಯಾಗಿರಬಹುದು. ಅವಳ ಫೋನನ್ನು ನಾನು ನೋಡುವುದಿಲ್ಲ. ಅವಳು ಫೋನಿನಲ್ಲಿ ಮಾತನಾಡುವುದು ನಾನು ಅಷ್ಟಾಗಿ ನೋಡಿಲ್ಲ. ಬಹುಶಃ ಆಫೀಸಿನಲ್ಲಿ ಮಾತನಾಡುತ್ತಾಳೇನೋ.
ಮರುದಿನ ಮುರಳಿಯ ಸ್ನೇಹಿತ ಸಲ್ಮಾನ್ ಮನೆಗೆ ಬಂದ. ಸಲ್ಮಾನ್ ಹತ್ತನೇ ತರಗತಿಯವರೆಗೆ ಮುರಳಿ ಸಹಪಾಠಿ. ಹತ್ತನೇ ತರಗತಿಯಲ್ಲಿ ನಪಾಸ್ ಆದ ಸಲ್ಮಾನ್ ತನ್ನ ತಂದೆಯ ಹುಣಸೆಹಣ್ಣಿನ ವ್ಯಾಪಾರಕ್ಕೆ ಇಳಿದಿದ್ದ . ಮುರಳಿ ಮುಂದೆ ಸಾಗಿ ಎಂಜಿನಿಯರಿಂಗ್ ಮುಗಿಸಿದ್ದ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಮುರಳಿಗೆ ಸಲ್ಮಾನ್ ದೂರ ಆಗುತಿದ್ದನೇನೋ, ಆದರೆ ಹಳ್ಳಿಯ ತಮ್ಮ ಜಮೀನಿನಲ್ಲಿ ಇದ್ದ ಹುಣಸೇಮರಗಳ ಹಣ್ಣನ್ನು ಸಲ್ಮಾನ್ ವ್ಯಾಪಾರ ಮಾಡುತ್ತಿದ್ದರಿಂದ ಅವರ ಗೆಳೆತನ ಹಾಗೆ ಉಳಿಯಿತು. ಸಲ್ಮಾನ್ ಆಗಾಗ ಬೆಂಗಳೂರಿಗೆ ಬಂದರೆ, ಇಲ್ಲ ಹುಣಸೇಹಣ್ಣಿನ ಹಣ ಕೊಡಲು ಮುರಳಿಯನ್ನು ಭೇಟಿ ಮಾಡುತ್ತಿದ್ದ.
ಈ ಸಲ ಸಲ್ಮಾನ್ ಮನೆಗೆ ಬಂದಾಗ ಸ್ವಲ್ಪ ದುಗುಡುಗೊಂಡಿದ್ದ. "ಏನಾಯಿತು ಸಲ್ಮಾನ್" ಮುರಳಿ ಆಸ್ಥೆಯಿಂದ ಕೇಳಿದ. "ಮುರಳಿ ಎಲ್ಲರೂ ಹೇಳುತ್ತಿದ್ದಾರೆ ನಮ್ಮನ್ನು ದೇಶದಿಂದ ಹೊರಗೆ ಕಳಿಸುತ್ತಾರಂತೆ, ನೀನು ಬೆಂಗಳೂರಿನಲ್ಲಿ ಇದ್ದೀಯ, ನಿನಗೆ ತಿಳಿದಿರುತ್ತದೆ ಇದು ನಿಜವಾ?. ಮುರಳಿ ಅವನನ್ನೇ ನೋಡುತ್ತಾ " ಯಾರು ಹೇಳಿದ್ದು, ನೀನು ಇಲ್ಲೇ ಹುಟ್ಟಿ ಬೆಳೆದ್ದಿದ್ದೀಯ, ಅದು ನಿನಗಲ್ಲ, ಕೆಲವರು ಅಕ್ರಮವಾಗಿ ಬೇರೆ ದೇಶದಿಂದ ಬಂದು ನೆಲೆಸಿದ್ದಾರೆ. ಅವರಿಗೆ ಮಾತ್ರ. ನೀನೇನೂ ಹೆದರಬೇಡ, ಅಂತಹುದು ಏನೂ ಇಲ್ಲ. ಅದಿರಲಿ ನಿಮ್ಮ ಪತ್ನಿಯನ್ನು ಬೆಂಗಳೂರಿಗೆ ಬಂದು ಇಲ್ಲಿನ ಜಾಗಗಳನ್ನು ತೋರಿಸು ಎಂದು ಹೇಳುತ್ತೇನೆ, ನೀನು ಮಾತ್ರ ಕರೆತರುವುದಿಲ್ಲ" ಎಂದ.
"ಇಲ್ಲ ಮುರಳಿ, ನಾನು ಹಾಗೆ ಬಂದು ಹೀಗೆ ಹೋಗುವವ, ಸಮಯವೆಲ್ಲಿಯದು" ಎಂದ.
ಊಟ ಮಾಡಿ ಸಲ್ಮಾನ್ ಹೋದಮೇಲೆ ಮುರಳಿಗೆ ಗಾಯತ್ರಿಗೆ ಏನಾದರೂ ತನ್ನನ್ನು ಮನೆಯಿಂದ ಹೊರಹಾಕುವ ಯೋಚನೆ ಇದೆಯೇ, ಮನೆ ಅವಳ ಹೆಸರಲ್ಲೇ ಇದೆ. ಯಾರಾದರೂ ಅವಳನ್ನು ಪ್ರೀತಿಸುವವರು ಸಿಕ್ಕರೆ ಅವಳು ನನ್ನನ್ನು ದೂರ ಮಾಡುತ್ತಾಳೆಯೇ? ನಾವು ಈಗಿನ ಕಾಲದವರು, ಬೇಕೆಂದರೆ ಕಾನೂನಿನ ರೀತಿ ದೂರವಾಗಬಹುದು. ಅಂತಹ ಇರಾದೆ ನನಗೇನೂ ಇಲ್ಲ. ಅವಳಿಗೆ ಅಂತಹ ಇರಾದೆ ಇರಬಹುದೇ, ಕೇಳಲೇ, ಕೇಳಿದರೆ ತನ್ನ ಮೇಲೆ ಎರಗುವುದಿಲ್ಲವೇ? ತಲೆ ಜುಮ್ ಎಂದಿತು. ಇದಕ್ಕೆ ಪರಿಹಾರವೇನು ಎಂದು ಪ್ರಶ್ನಿಸಿಕೊಂಡ.
ಪತ್ನಿಗೆ ತನ್ನ ಮೇಲೆ ಪ್ರೀತಿ ಇರುವುದರಿಂದಲೇ ಹೀಗೆ ಮುನಿಸೂ ತೋರುತ್ತಿದ್ದಾಳೆಯೇ?, ಹೀಗೆ ಮುನಿಸು ತೋರಿ ನನಗೆ ಹತ್ತಿರವಾಗಲೂ ಹವಣಿಸುತ್ತಿದ್ದಾಳೆಯೇ, ಅಥವಾ ಅವಳನ್ನು ನಾನು ಅರ್ಥಮಾಡಿಕೊಳ್ಳಲು ಅವಳು ಹುಡುಕಿಕೊಂಡಿರುವ ಮಾರ್ಗವೇ?
ಒಂದು ದಿನ ಮಧ್ಯಾಹ್ನ ಮುರಳಿ ಆಫೀಸಿನಿಂದ ಮನೆಗೆ ಬೇಗ ಬಂದ. ಮನೆಯಲ್ಲಿ ಮಗಳು ಒಬ್ಬಳೇ ಟಿವಿ ಮಾಡುತ್ತಾ ಸೋಫಾದಲ್ಲಿ ಮಲಗಿದ್ದಳು. ಮುರಳಿ ಆಶ್ಚರ್ಯದಿಂದ ಹತ್ತಿರ ಬಂದು ಸೋಫಾದಲ್ಲಿ ಕುಳಿತುಕೊಂಡ. ಮಗಳು ಎದ್ದು ಕುಳಿತಳು. ಮಗಳನ್ನು ಸರಿಯಾಗಿ ನೋಡಿ ಎಷ್ಟು ದಿನವಾಯಿತು ಎಂದುಕೊಂಡ. ಎತ್ತರಕ್ಕೆ ಬೆಳೆದಿದ್ದಾಳೆ, ನನ್ನದೇ ರೂಪ, ಸುಂದರವಾಗಿದ್ದಾಳೆ.
‘‘ಸ್ಕೂಲಿಗೆ ಹೋಗಲಿಲ್ವ?’’ ಪ್ರೀತಿಯಿಂದ ಕೇಳಿದ. ‘‘ಇಲ್ಲ ಅಪ್ಪ ಹುಷಾರಿಲ್ಲ’’. ‘‘ಯಾಕೆ ಏನಾಯಿತು’’. "ಸ್ವಲ್ಪ ಜ್ವರ". "ನನಗೆ ಹೇಳಲೇ ಇಲ್ಲ". ಅಮ್ಮ ಅಂದರು ನಿಮಗೆ ಹೇಳಿ ಪ್ರಯೋಜನವಿಲ್ಲ, ಎಲ್ಲಾ ನಾನೇ ನೋಡಿಕೊಳ್ಳಬೇಕು ಎಂದು ಹೇಳ್ತಾ ಇದ್ದರು".
ಮುರಳಿ ಮಗಳನ್ನು ನೋಡುತ್ತಾ "ನೋಡು ಮಗಳೇ ನೀನು ಅಂದರೆ ನನಗೆ ತುಂಬಾ ಪ್ರೀತಿ, ನಿಮ್ಮ ಅಮ್ಮ ಅಂದರೂ ಪ್ರೀತಿನೇ, ಆದರೆ ನಾನು ಸ್ವಲ್ಪ ಮೌನಿ, ಹಾಗಂತ ಮಾತೇ ಆಡುವುದಿಲ್ಲ ಎಂದು ಅಲ್ಲ, ಎಷ್ಟು ಬೇಕೋ ಅಷ್ಟು, ನನಗೆ ಇನ್ನೊಬ್ಬರ ಮಾತು ಕೇಳುವುದು ಇಷ್ಟ, ಸಾರಿ ಮಗಳೇ ನಿನ್ನ ಜೊತೆ ಅಷ್ಟಾಗಿ ಮಾತನಾಡಲು ನಾನು ಪ್ರಯತ್ನ ಪಡಲಿಲ್ಲ. ನಿಮ್ಮ ಅಮ್ಮನ ಭಯಕ್ಕೆ ಸುಮ್ಮನೆ ಇದ್ದೆ, ಈಗ ಹೇಳು, ಮಾತ್ರೆ ಏನಾದರು ತೆಗೆದುಕೊಂಡ್ಯಾ, ಈಗ ಹೇಗಿದೆ".
"ತಗೊಂಡೆ ಜ್ವರ ಇಳಿದಿದೆ, ಆರಾಮವಾಗಿದ್ದೇನೆ, ನಾಳೆ ಸ್ಕೂಲಿಗೆ ಹೋಗುತ್ತೇನೆ’’.
"ಸರಿ, ಹೇಗಿದೆ ಸ್ಕೂಲು"
ಅಪ್ಪ ತನ್ನ ಹತ್ತಿರ ಮಾತನಾಡುತ್ತಿರುವುದಕ್ಕೆ ಅವಳಿಗೆ ಖುಷಿ ಆಯಿತು. ಸದಾ ಅಮ್ಮನ ಆಕ್ಷೇಪಣೆ ಕೇಳಿ ಕೇಳಿ ಅಪ್ಪನ ಚಿತ್ರಣ ಅವಳ ಮನದಲ್ಲಿ ಬೇರೆಯದೇ ಆಗಿ ಮೂಡಿತ್ತು. ಮುರಳಿ ಅವಳಿಗೆ ತಾನು ಸ್ಕೂಲಿಗೆ ಹೋಗದಿರಲು ಹೇಗೆಲ್ಲಾ ಜ್ವರ ಬಂದವನಂತೆ ನಟಿಸಿ ಮನೆಯಲ್ಲಿ ಮಲಗಿರುತ್ತಿದ್ದೆ ಎಂದು ಹೇಳಿ ನಗಿಸಿದ. ಅವಳೂ ತನ್ನ ಶಾಲೆ, ಸಹಪಾಠಿಗಳ ಬಗ್ಗೆ ಹೇಳಿ ಅಪ್ಪನ ಜೊತೆ ನಕ್ಕು ನಲಿದಳು. ಮಗಳ ಮಾತನ್ನು ಮುರಳಿ ಮನತುಂಬಿ ಕೇಳಿಸಿಕೊಂಡ. ಅಮ್ಮ ಹೇಳಿದಂತಲ್ಲ, ಅಪ್ಪ ತುಂಬಾ ಒಳ್ಳೆಯವರು ಎಂದುಕೊಂಡಳು.
ಗಾಯತ್ರಿ ಮನೆಗೆ ಬಂದಾಗ ಮುರಳಿ ಮಗಳ ಜೊತೆ ಕುಳಿತು ನಗುತ್ತಾ ಮಾತನಾಡುತ್ತಿದ್ದನ್ನು ಕಂಡು ಆಶ್ಚರ್ಯಪಟ್ಟಳು. ಅಪ್ಪನ ಮಾತಿಗೆ ಕಾಯಿಲೆ ಕರಗಿಹೋಯಿತೇ ಎನ್ನುವಷ್ಟು ಮಟ್ಟಿಗೆ ಮಗಳು ಲವಲಕೆಯಿಂದ ಇದ್ದಳು.
"ಅಬ್ಬಬ್ಬಾ ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿರಬೇಕು, ಮನೆಯಲ್ಲಿ ಮಾತು, ನಗು ತುಂಬಿದೆ" ಅಂದಳು. ಅಪ್ಪ ಮಗಳು ಒಬ್ಬರ ಮುಖ ಒಬ್ಬರು ನೋಡಿಕೊಂಡು ಮುಗುಳ್ನಕ್ಕರು. ಆದರೆ ಏನೂ ಹೇಳಲಿಲ್ಲ.
"ನಾನು ಮನೆಗೆ ಬಂದ ತಕ್ಷಣ ಗರ ಬಡಿಯಿತೇ, ಇಬ್ಬರೂ ಸೈಲೆಂಟ್ ಆಗಿ ಬಿಟ್ಟಿರಿ"
ಮುರಳಿ ಏನೂ ಮಾತನಾಡದೆ ಎದ್ದು ತನ್ನ ರೂಮಿಗೆ ಹೋದ. ಮಗಳು ಅಮ್ಮನ ಜೊತೆ ವಾಗ್ವಾದ ಮಾಡುವುದು ಕೇಳಿಸಿತು.
ಮುಂದಿನ ಹತ್ತು ದಿನಗಳಲ್ಲಿ ಮನೆಯಲ್ಲಿ ಅಪ್ಪ ಮಗಳ ಮಾತು ಹೆಚ್ಚು ಕೇಳಿಸತೊಡಗಿತು. ಗಾಯತ್ರಿಗೆ ಇದೊಂದು ತನ್ನನ್ನು ಅಣಕಿಸುವ ಸಂಚು ಎನಿಸತೊಡಗಿತು. ಗಂಡ ಮಗಳನ್ನು ತನ್ನ ಕಡೆ ತಿರುಗಿಸಿಕೊಂಡಿದ್ದಾನೆ ಎನಿಸಿತು. ಮಗಳ ಮೇಲೆ ರೇಗಾಡುವುದಕ್ಕೆ ಪ್ರಾರಂಭಿಸಿದಳು. ಮಗಳು ಏನು ಮಾಡಲು ತೋಚದೆ, ಯಾರೊಡನೆಯೂ ಮಾತನಾಡದೆ ತನ್ನ ರೂಮಿನಲ್ಲೇ ಕಾಲ ಕಳೆಯಲಾರಂಭಿಸಿದಳು.
ಒಂದು ದಿನ ಸಂಜೆ ಗಾಯತ್ರಿ ಮನೆಗೆ ಬಂದಾಗ ಮುರಳಿ ಇನ್ನೂ ಮನೆಗೆ ಬಂದಿರಲಿಲ್ಲ. ಎಂದಿನಂತೆ ಅಡುಗೆ ಮಾಡಿಟ್ಟು, ಮಗಳ ಜೊತೆ ಊಟಮಾಡಿ, ಒಬ್ಬಳೇ ಟಿವಿ ನೋಡುತ್ತಾ ಕುಳಿತಳು. ರಾತ್ರಿ ಹತ್ತಾದರೂ ಮುರಳಿಯ ಸುಳಿವಿಲ್ಲ. ಮುರಳಿಗೆ ಫೋನ್ ಮಾಡಿದಳು, ಫೋನ್ ಆಫ್ ಆಗಿತ್ತು. ಮುರಳಿಯ ಕೆಲ ಸ್ನೇಹಿತರಿಗೆ ಫೋನ್ ಮಾಡಿದಳು, ಅವರಿಗೂ ಮುರಳಿಯ ಸುಳಿವಿರಲಿಲ್ಲ. ಕಚೇರಿಯ ಸಹೋದ್ಯೋಗಿಗಳಿಗೆ ಫೋನ್ ಮಾಡಿದರೆ, ಅವರಿಂದ ಎಂದಿನಂತೆ ಐದು ಗಂಟೆಗೆ ಮುರಳಿ ಆಫೀಸ್ ಬಿಟ್ಟಿದ್ದು ತಿಳಿಯಿತು. ಗಾಬರಿಯಾಗಲು ಶುರುವಾಯಿತು. ಏನು ಮಾಡುವುದೋ ತೋಚಲಿಲ್ಲ. ರಾತ್ರಿ ಬರಬಹುದು ಕಾಯೋಣ ಎಂದುಕೊಂಡಳು.
ರಾತ್ರಿ ನಿದ್ರೆ ಹತ್ತಲಿಲ್ಲ. ಹಾಸಿಗೆಯ ಪಕ್ಕದಲ್ಲಿ ಅವ ಮೌನವಾಗಿ ಮಲಗುತ್ತಿದ್ದ ಚಿತ್ರಣ ಕಾಣಿಸಿತು. ಅವನು ಪಕ್ಕದಲ್ಲಿ ಇದ್ದಾಗ ಧೈರ್ಯವಾಗಿ ಮಲಗುತ್ತಿದ್ದಳು. ಯಾವುದೇ ಆತಂಕ ಮನದಲ್ಲಿ ಬರುತ್ತಿರಲಿಲ್ಲ. ಮನೆಯಲ್ಲಿ ಸ್ವಲ್ಪ ಶಬ್ದವಾದರೂ ಅವನನ್ನು ಎಬ್ಬಿಸಿ ನೋಡಲು ಹೇಳುತ್ತಿದ್ದಳು. ಎಷ್ಟೋ ಸಲ ಯಾವುದೇ ಶಬ್ದ ಕೇಳಿದರೂ ಹಾಗೇ ಯಾವುದೇ ಭಯವಿಲ್ಲದೆ ಮಲಗುತ್ತಿದ್ದಳು. ಇಡೀ ರಾತ್ರಿ ನಿದ್ದೆ ಬರಲಿಲ್ಲ. ಮಗಳು ಅಪ್ಪ ಬಂದಿಲ್ವಾ ಎಂದು ಎರಡು ಮೂರು ಸಲ ಕೇಳಿ ಹೋಗಿದ್ದಳು.
ಬೆಳಿಗ್ಗೆಯಾದಾಗ ಬೇಗ ಬೇಗ ಸಿದ್ಧಳಾಗಿ, ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆಯಲ್ಲಿ ಒಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟು ಬಂದಳು. "ಬರುತ್ತಾರೆ ಬಿಡಿ, ನಮಗೆ ವಿಷಯ ತಿಳಿದ ತಕ್ಷಣ ನಿಮಗೆ ವಿಷಯ ತಿಳಿಸುತ್ತೇವೆ" ಎಂದು ಹೇಳಿ ಪೋಲಿಸಿನವರು ಕಳುಹಿಸಿಕೊಟ್ಟಿದ್ದರು.
ಮಗಳನ್ನು ಶಾಲೆಗೆ ಕಳುಹಿಸಿ, ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಕುಳಿತು, ಮುರಳಿಗೆ ಗೊತ್ತಿದ್ದ ಸ್ನೇಹಿತರಿಗೆ, ಬಂಧುಗಳಿಗೆ ಫೋನ್ ಮಾಡಿ ಕೇಳಿದಳು. ಅಪ್ಪ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಅವರು ತಕ್ಷಣ ಬರುತ್ತೇವೆ ಎಂದಾಗ, ಅಪ್ಪನ ಅರೋಗ್ಯ ಸ್ಥಿತಿ ಗೊತ್ತಿದ್ದ ಗಾಯತ್ರಿ ‘ನೀವು ಬರುವುದು ಬೇಡ, ಬೇಕೆಂದಾಗ ನಾನೇ ಬರಹೇಳುವೆ’ ಎಂದಳು.
ಎರಡು ದಿನ ಕಳೆದಮೇಲೆ, ಮುರಳಿಯ ಇಲ್ಲದಿರುವಿಕೆ ಗಾಯತ್ರಿಯ ಮನಕಲಕತೊಡಗಿತು. ಅವನ ಮೌನ ಮನೆಯಲ್ಲಾ ತುಂಬಿ, ಕಿವಿಗಪ್ಪಳಿಸತೊಡಗಿತು. ಎಲ್ಲಿ ನೋಡಿದರೂ ಮುರಳಿಯ ಇಲ್ಲದಿರುವಿಕೆ ಅರಿವಿಗೆ ಬರತೊಡಗಿತು. ಅಡುಗೆ ಮಾಡುವಾಗ ಎಂದಿನಂತೆ ಹೆಚ್ಚು ಮಾಡಿ, ಅದು ಮಿಕ್ಕಿಹೋಗುತ್ತಿತ್ತು. ಮನೆಯಲ್ಲಿ ಅವನು ನೋಡುತ್ತಿದ್ದ ಕೇಳುತ್ತಿದ್ದ ಹಳೇ ಕನ್ನಡದ ಸಿನೆಮಾ ಹಾಡುಗಳು ಕೇಳಿಸದೇ ಎಲ್ಲವೂ ನಿಂತುಹೋಗಿತ್ತು. ಅವನ ಹಳೇ ಹಾಡು ಕೇಳುವ ಚಾಳಿಯನ್ನು ಹಂಗಿಸುತ್ತಿದ್ದುದ್ದು ನೆನಪಿಗೆ ಬಂತು. ಟಿವಿ ಆನ್ ಮಾಡಿ ಅವನು ನೋಡುತ್ತಿದ್ದ ಹಾಡೊಂದನ್ನು ಪ್ಲೇ ಮಾಡಿದಳು. "ಬಯಕೆ ಬಾಳಿನಲ್ಲಿ, ಒಲುಮೆ ಹೂವ ಚೆಲ್ಲಿ, ಚೆಲುವೆ ನೀನು ಬಂದೆ" ಇಂಪಾದ ಹಾಡು ಅನಿಸಿತು. ನನ್ನ ಜೀವ ನೀನು, ಒಮ್ಮೆ ನಿನ್ನನ್ನು ಕಣ್ತುಂಬಾ, ಕರೆದಾಗ ನೀನು ಬರಬಾರದೇನು, ಮನಸು ಒಂದಾದ ಮೇಲೆ" ಹೇಗೆ ಒಂದಾದರೊಂದಂತೆ ಹಾಡು ಮನೆಯ ತುಂಬಿತು. ಸುಂದರ ಹಾಡುಗಳು, ನಾನೇಕೆ ಅಷ್ಟೊಂದು ಬೇಸರಿಸಿಕೊಳ್ಳುತ್ತಿದ್ದೆ, ಬಹುಶ ಅವನು ಮೇಲಿನ ಇಷ್ಟ, ಅವನ ಇಷ್ಟಗಳ ಮೇಲೂ ಇತ್ತೇನೋ.
ಮುರಳಿ ಯಾವೊತ್ತು ತನಗೆ ಎದುರಾಡಿದವನಲ್ಲ. ತನ್ನ ಅಡುಗೆಗೆ ಹೆಸರಿಟ್ಟವನಲ್ಲ. ಪಾತ್ರೆ ತೊಳೆದು, ಕಸಗುಡಿಸುವುದನ್ನು ದಿನಾ ಮಾಡುತಿದ್ದ. ‘ಕ್ಲೀನಿಂಗ್ ಎಲ್ಲಾ ನನ್ನ ಕೆಲಸ ನೀನು ಅಡುಗೆ ಮಾಡು ಸಾಕು’ ಎನ್ನುತ್ತಿದ್ದ. ಈಗಿರುವ ಮೌನಕ್ಕಿಂತಲೂ ಅವನು ಮನೆಯಲ್ಲಿರುವಾಗಿನ ಮೌನ ಹೆಚ್ಚು ಸುಖ ಎನಿಸಿತು. ಅವನನ್ನು ತಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆಯೇ ಎಂದು ಅನಿಸಲುತೊಡಗಿತು. ಅವನ ನೆನಪು ಮತ್ತೆ ಮತ್ತೆ ನುಗ್ಗಿ ಬರತೊಡಗಿತು. ‘ಅಪ್ಪ ಅಮ್ಮ ಸ್ವಲ್ಪ ದಿನ ಇಲ್ಲಿಗೆ ಬಾ, ವಿಷಯ ತಿಳಿದಮೇಲೆ ಹೋಗುವಿಯಂತೆ. ನಾವು ಯಾರಿಗಾದರೂ ಹೇಳಿ ಹುಡುಕಿಸುತ್ತೇವೆ’ ಎಂದು ಹೇಳಿದ್ದರು. ಆದರೂ ಮುರಳಿಯ ಇದ್ದ ಜಾಗ ಹೆಚ್ಚು ಸುಖ ಕೊಡತೊಡಗಿತು.
"ಅಮ್ಮ, ಅಪ್ಪನಿಗೆ ನಿನ್ನೆಂದರೆ ತುಂಬಾ ಇಷ್ಟ, ನನ್ನ ಹತ್ತಿರ ಹೇಳಿದ್ದರು" ಮಗಳು ಒಂದು ದಿನ ಹೇಳಿದ್ದಳು. ತಾನು ವ್ಯಂಗ್ಯವಾಗಿ ನಕ್ಕಿದ್ದೆ. ಈಗ ಅದು ನಿಜ ಅನಿಸತೊಡಗಿತು. ಅವನ ಒಂದೊಂದೇ ಚರ್ಯೆಗಳನ್ನು ನೆನಪಿಸಿಕೊಳ್ಳತೊಡಗಿದಳು. ಅವನ ಯಾವುದನ್ನೂ ಬೇಸರಿಸಿಕೊಳ್ಳದೆ ಎಲ್ಲವನ್ನೂ ತನ್ನ ಇಷ್ಟದಂತೆ ಮಾಡುತ್ತಿದ್ದ ಎನ್ನುವುದು ಅವಳಿಗೆ ಅರಿವಾಗತೊಡಗಿತು. ಅಂದರೆ ತನ್ನನ್ನು ಕಂಡರೆ ಅವನಿಗೆ ಇಷ್ಟವೇ ಇತ್ತು. ನನ್ನ ಎದೆಯ ಮೂಲೆಯಲ್ಲಿ ಅವನೆಂದರೆ ತನಗೂ ಇಷ್ಟವೇ ಅನಿಸತೊಡಗಿತು. ಅಂತಹ ಅತೀ ಪ್ರೀತಿಯೇ ಅವನಿಂದ ಇನ್ನೂ ಹೆಚ್ಚಿನದನ್ನು ನೀರೀಕ್ಷಿಸುತ್ತಿತ್ತು. ತನ್ನ ಅತೀ ನಿರೀಕ್ಷೆಯ ಪರೀಕ್ಷೆಯಲ್ಲಿ ಅವನು ಸೋಲುತ್ತಿದ್ದ. ಅಂದರೆ ತನ್ನದೇ ತಪ್ಪು ಅನಿಸತೊಡಗಿತು. ಮಾತನಾಡುವವರನ್ನು ಮೌನವಾಗಿಸಬಹುದೇನೋ, ಆದರೆ ಮೌನಿಗಳನ್ನು ಮಾತನಾಡುವಂತೆ ಮಾಡುವುದು ಕಷ್ಟ ಅನಿಸಿತು. ಮೌನಿಗಳಿಗೆ ವಿಷಯವಿದ್ದರೆ ಮಾತ್ರ ಮಾತನಾಡಬಲ್ಲರು, ಅದೂ ಅವರಿಗೆ ತಿಳಿದಿರುವ ವಿಷಯ, ಇಲ್ಲದಿದ್ದರೆ ಅವರು ಮಾತನಾಡಬಯಸುವುದಿಲ್ಲ ಎಂದುಕೊಂಡಳು.
ಇದ್ದಕಿದ್ದ ಹಾಗೆ ಗಂಡನ ಮೇಲೆ ಪ್ರೀತಿಯುಕ್ಕತೊಡಗಿತು. ತನಗೆ ಗಂಡ ಬೇಕು, ಅವನು ಈಗ ಇಲ್ಲಿರಬಹುದು ಎಂದು ತೀವ್ರವಾಗಿ ಕಾಡತೊಡಗಿತು. ದಿನಾ ಪೊಲೀಸ್ ಠಾಣೆಗೆ ಎಡತಾಕಿದಳು. ಯಾವುದೇ ವಸ್ತು ಕಳೆದುಕೊಂಡಾಗಲೇ ಅದರ ಬೆಲೆ ತಿಳಿಯುವುದು ಎನ್ನುವುದು ಎಷ್ಟು ನಿಜ ಅನಿಸಿತು. ತಾನೇ ಕಾರಿನಲ್ಲಿ ಊರಿನ ಎಲ್ಲಕಡೆ ಹುಡುಕಿದಳು.
ಒಂದು ವಾರದ ನಂತರ, ಒಂದು ಸಂಜೆ, ಬಾಗಿಲಿನ ಬೆಲ್ ಬಾರಿಸಿತು. ಗಾಯತ್ರಿ ಓಡಿಹೋಗಿ ಬಾಗಿಲು ತೆಗೆದಳು. ಬಾಗಿಲು ತೆಗೆದಾಗ ಮುರಳಿ ಬಾಗಿಲಿನಲ್ಲಿ ನಿಂತಿದ್ದ. ಮುನ್ನುಗ್ಗಿ ಬಿಗಿಯಾಗಿ ಅಪ್ಪಿ ಜೋರಾಗಿ ಅಳತೊಡಗಿದಳು. ಅವಳನ್ನು ಹಾಗೇ ಹಿಡಿದು ಒಳಗಡೆ ಕರೆತಂದು ಕೂರಿಸಿದ. ಗಾಯತ್ರಿ ‘ನಿಮ್ಮನ್ನು ಏನೂ ಕೇಳುವುದಿಲ್ಲ, ನೀವು ಮನೆಗೆ ಬಂದಿರುವುದೇ ಸಾಕು’ ಎನ್ನುವಂತೆ ಅವನನ್ನು ಅಪ್ಪಿಕುಳಿತಿದ್ದಳು.
ಮಗಳು ತನ್ನ ರೂಮಿನಿಂದ ಹೊರಬಂದಾಗ, ಮುರಳಿ ಅವಳನ್ನು ನೋಡಿ ಮುಗುಳ್ನಕ್ಕು ಅಮ್ಮನಿಗೆ ಏನೂ ಹೇಳಬೇಡ ಎಂಬಂತೆ ಸನ್ನೆ ಮಾಡಿದ. ತನಗೆ ಗೊತ್ತಿದೆ ಎಂದು ಹತ್ತಿರ ಬಂದು ಅಪ್ಪನನ್ನು ಈಗಷ್ಟೇ ನೋಡಿದವಳಂತೆ ಬಿಗಿದಪ್ಪಿದಳು. ಮುರಳಿ ಸಮಸ್ಯೆಗೆ ಪರಿಹಾರ ದೊರೆಯಿತು ಎಂದು ಹೆಂಡತಿ, ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.