ADVERTISEMENT

‘ಆದದ್ದೆಲ್ಲ ಒಳಿತೇ ಆಯಿತು!’

ನೀತಿಕಥೆ

ಭಾನುಶ್ರೀ
Published 14 ಜೂನ್ 2019, 19:30 IST
Last Updated 14 ಜೂನ್ 2019, 19:30 IST
   

ಅದೊಂದು ರಾಜ್ಯ. ಅದಕ್ಕೊಬ್ಬ ರಾಜ; ಅವನಿಗೊಬ್ಬ ಮಂತ್ರಿ.

ಅದೊಂದು ದಿನ ರಾಜ ಮತ್ತು ಮಂತ್ರಿ – ಇಬ್ಬರೂ ಕಾಡಿನಲ್ಲಿ ಸಂಚಾರ ಮಾಡುತ್ತಿದ್ದರು. ಆಗ ಕಲ್ಲೊಂದು ತಾಕಿ, ರಾಜನ ಕೈ ಬೆರಳಿಗೆ ಗಾಯವಾಯಿತು. ‘ಛೇ! ಹೀಗೇಕಾಯಿತು??’ ಎಂದು ರಾಜ ಉದ್ಗರಿಸಿದ. ಕೂಡಲೇ ಮಂತ್ರಿ ‘ಒಳ್ಳೆಯದಕ್ಕೇ’ ಎಂದುಬಿಟ್ಟ! ರಾಜನಿಗೆ ತುಂಬ ಸಿಟ್ಟು ಬಂತು. ರಾಜನಿಗಾದ ಗಾಯವನ್ನು ಕಂಡು ಸಂತೋಷಪಡುವಷ್ಟು ಸೊಕ್ಕೇ ಈ ಮಂತ್ರಿಗೆ ಎಂದು ರೋಷಗೊಂಡ. ‘ನನಗೆ ನೋವಾದರೆ ನಿನಗೆ ಒಳ್ಳೆಯದು ಅಲ್ಲವೆ?’ ಎಂದು ಅರಚಿ, ಪಕ್ಕದಲ್ಲಿಯೇ ಇದ್ದ ಹಾಳುಬಾವಿಯೊಂದಕ್ಕೆ ಮಂತ್ರಿಯನ್ನು ತಳ್ಳಿದ ರಾಜ.

ಅದೇ ವೇಳೆಗೆ ರಾಜನಲ್ಲಿಗೆ ಹತ್ತಾರು ಜನರಿದ್ದ ಗುಂಪೊಂದು ಓಡಿಬಂತು. ಅವರೆಲ್ಲರೂ ಠಕ್ಕರು. ಬಂದವರೇ ರಾಜನನ್ನು ಹಿಡಿದುಕೊಂಡರು. ಅವರ ದೇವತೆಗೆ ಬಲಿ ಕೊಡಲು ಮನುಷ್ಯನೊಬ್ಬನನ್ನು ಅವರು ಹುಡುಕುತ್ತಿದ್ದರು. ರಾಜ ಈಗ ಅವರ ಕೈಗೆ ಸಿಕ್ಕಿದ್ದ. ಬಲಿಗೆ ಈ ವ್ಯಕ್ತಿಗೆ ಅರ್ಹನೋ ಇಲ್ಲವೋ – ಎಂದು ರಾಜನನ್ನು ಅವರ ನಾಯಕ ಪರೀಕ್ಷಿಸತೊಡಗಿದ. ರಾಜನ ಕೈ ಬೆರಳಿಗೆ ಪೆಟ್ಟಾಗಿದೆ. ಹೀಗೆ ದೇಹ ಊನವಾದರು ಬಲಿಗೆ ಅರ್ಹರಲ್ಲ. ಸಿಕ್ಕಿದ ಬಲಿ ತಪ್ಪಿತು – ಎಂದು ಹೇಳಿಕೊಳ್ಳುತ್ತ ಠಕ್ಕರ ಗುಂಪು ರಾಜನನ್ನು ಬಿಟ್ಟು ಮುಂದಕ್ಕೆ ನಡೆದರು.

ADVERTISEMENT

ರಾಜನು ನಡೆದ ಪ್ರಸಂಗದಿಂದ ಒಂದು ಕ್ಷಣ ತಬ್ಬಿಬ್ಬಾಗಿದ್ದ. ಈಗ ನಿಟ್ಟುಸಿರು ಬಿಟ್ಟ. ಕೋಪವೂ ಕಡಿಮೆಯಾಗಿತ್ತು. ಮಂತ್ರಿಯನ್ನು ಬಾವಿಯಿಂದ ಮೇಲಕ್ಕೆತ್ತಿದ. ಮಂತ್ರಿಯ ಮಾತಿನ ಬಗ್ಗೆ ಅವನಿಗ ಈಗ ಕುತೂಹಲ ಹುಟ್ಟಿತು. ‘ನನ್ನ ಕೈಗೆ ಪೆಟ್ಟಾಗಿದ್ದು ನನಗೆ ಒಳ್ಳೆಯದಾಯಿತು; ನನ್ನ ಪ್ರಾಣ ಉಳಿಯಿತು, ನಿಜ. ಆದರೆ ನೀನು ಬಾವಿಯಲ್ಲಿ ಬಿದ್ದದ್ದು ನಿನಗೆ ಹೇಗೆ ಒಳ್ಳೆಯದು?’ ಎಂದು ಪ್ರಶ್ನಿಸಿದ.

ಆಗ ಮಂತ್ರಿ ಹೇಳಿದ: ‘ಮಹಾಪ್ರಭು, ನೀವು ನನ್ನನ್ನು ಬಾವಿಗೆ ತಳ್ಳದೇ ಇರುತ್ತಿದ್ದರೆ, ನಾನು ಕೂಡ ನಿಮ್ಮೊಂದಿಗೆ ಮೇಲೆಯೇ ಇರುತ್ತಿದ್ದೆ. ಆಗ ಆ ಠಕ್ಕರು ನನ್ನನ್ನು ಬಲಿಗೆಂದು ಒಯ್ಯುತ್ತಿದ್ದರಲ್ಲವೆ? ಹೀಗಾಗಿ ಬಾವಿಗೆ ಬಿದ್ದದ್ದು ನನಗೂ ಒಳ್ಳೆಯದೇ ಆಯಿತು! ಅಷ್ಟೆ ಅಲ್ಲ, ಅವರನ್ನು ಕಂಡ ಕೂಡಲೇ ನನ್ನನ್ನು ನೀವು ಮೇಲಕ್ಕೆ ಎತ್ತಿದ್ದರೂ ನಾನು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ. ಹೀಗಾಗಿ ಆದದ್ದೆಲ್ಲ ಒಳ್ಳೆಯದೇ ಆಯಿತು!!’

***

ನಮಗೂ ಹೀಗೇ ಆಗುತ್ತಿರುತ್ತದೆ – ನಮಗೆ ಪ್ರಿಯವಲ್ಲದ ಯಾವುದೋ ಒಂದು ಘಟನೆ ನಡೆದುಬಿಡುತ್ತದೆ; ಆ ಕ್ಷಣ ಬೇಸರಿಸಿಕೊಳ್ಳುತ್ತೇವೆ, ಅಥವಾ ಕೋಪಿಸಿಕೊಳ್ಳುತ್ತೇವೆ. ಆದರೆ ಸ್ವಲ್ಪ ಸಮಯ ಕಳೆದ ಬಳಿಕ ಆ ಘಟನೆ ನಡೆದದ್ದೇ ಒಳ್ಳೆಯದು ಆಯಿತು ಎನಿಸುತ್ತದೆ. ಅದಕ್ಕೆ ಕಾರಣ ಮುಂದೆ ಒದಗಬಹುದಾಗಿದ್ದ ದೊಡ್ಡದಾದ ಅನಾಹುತವನ್ನು ಅದು ತಪ್ಪಿಸಿರುತ್ತದೆ.

ಒಳ್ಳೆಯದನ್ನೇ ಬೇಕು ಎಂದು ಬಯಸುವುದು ನಮ್ಮ ಸಹಜ ಗುಣ. ಹೀಗಾಗಿ ಏನು ನಡೆದರೂ ಅದು ನಮ್ಮ ಪಾಲಿಗೆ ಒಳ್ಳೆಯದೇ ಆಗಿರಬೇಕು ಎಂದೂ ಆಶಿಸುತ್ತೇವೆ. ಆದುದರಿಂದಲೇ ಅಹಿತವಾದುದು ಸಣ್ಣ ಸಂಗತಿ ಎದುರಾದರೂ ನಾವು ಸಂಕಟಪಡುತ್ತೇವೆ; ಕೊರಗುತ್ತೇವೆ. ಆದರೆ ಘಟನಾವಳಿಗಳು ನಮ್ಮ ವಶದಲ್ಲಿ ಇರುವುದಿಲ್ಲ. ಮಾತ್ರವಲ್ಲ, ನಮ್ಮ ದೃಷ್ಟಿ ಕೂಡ ತುಂಬ ದೂರಕ್ಕೆ ಹೋಗಲಾರದು. ಹೀಗಾಗಿ ನಡೆದ ಘಟನೆಯನ್ನು ಮೊದಲು ಒಪ್ಪಿಕೊಳ್ಳಬೇಕು; ಅದು ನಡೆದಿರುವುದು ನಮ್ಮ ಒಳಿತಿಗಾಗಿಯೇ ಎಂಬ ವಿಶ್ವಾಸದಿಂದ ಮುಂದೆ ನಡೆಯಬೇಕು. ಇದೇ ನಿಜವಾದ ಜೀವನಯಾನ. ಇಂದು ಕಹಿಯಾಗಿರುವುದು ನಾಳೆಗೆ ಸಿಹಿಯಾಗಬಹುದು. ಈ ವಿಶ್ವಾಸವೇ ಜೀವನವನ್ನು ಸುಂದರವಾಗಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.