ADVERTISEMENT

ಸುಳ್ಳು ಎಂದಿಗೂ ಸುಳ್ಳೇ

ನೀತಿಕಥೆ

ಛಾಯಾಪತಿ
Published 7 ಜೂನ್ 2019, 19:30 IST
Last Updated 7 ಜೂನ್ 2019, 19:30 IST
ಚಿತ್ರ: ವಿಜಯಶ್ರೀ
ಚಿತ್ರ: ವಿಜಯಶ್ರೀ    

ಒಬ್ಬ ಬ್ರಾಹ್ಮಣ ಒಮ್ಮೆ ಮೇಕೆಯೊಂದನ್ನು ಖರೀದಿಸಿ, ಅದನ್ನು ಹೆಗಲಮೇಲೆ ಹೊತ್ತುಕೊಂಡು ತನ್ನ ಊರಿಗೆ ನಡೆದಿದ್ದ. ಇದನ್ನು ನಾಲ್ಕು ಜನರು ಧೂರ್ತರು ನೋಡಿದರು. ಹೇಗಾದರೂ ಸರಿ ಅವನಿಂದ ಆ ಮೇಕೆಯನ್ನು ಲಪಟಾಯಿಸಬೇಕೆಂದು ಸಂಚು ಹೂಡಿದರು.

ಬ್ರಾಹ್ಮಣ ನಡೆದು ಬರುತ್ತಿದ್ದಾನೆ. ಅವನಿಗೆ ಅಡ್ಡಬಂದ ಮೊದಲನೆಯ ಧೂರ್ತ ‘ಏನು ಸ್ವಾಮಿ, ಬ್ರಾಹ್ಮಣರಾದ ನೀವು ನಾಯಿಯನ್ನು ಏಕೆ ಹೊತ್ತುಕೊಂಡು ಹೋಗುತ್ತಿದ್ದೀರಿ’ ಎಂದು ಪ್ರಶ್ನಿಸಿ, ಆಶ್ಚರ್ಯದಿಂದ ನೋಡಿ, ಮುಂದಕ್ಕೆ ಹೋದ.

ಬ್ರಾಹ್ಮಣ ಏನೂ ಉತ್ತರಿಸದೆ ಮುಂದೆ ನಡೆದ.

ADVERTISEMENT

ಇನ್ನಷ್ಟು ದೂರ ಹೋದ ಮೇಲೆ, ಎರಡನೆಯ ಧೂರ್ತ ಎದುರಾದ: ‘ಬ್ರಾಹ್ಮಣರಾದ ನೀವು ಹೀಗೆ ನಾಯಿಯನ್ನು ಹೊತ್ತಿಕೊಂಡು ಹೋಗುವುದು ಸರಿಯೆ’ – ಎಂದು ಪ್ರಶ್ನಿಸಿ, ನಗುತ್ತ ಮುಂದೆ ನಡೆದ.

ಬ್ರಾಹ್ಮಣನಿಗೆ ಈಗ ಸ್ವಲ್ಪ ಸಂಶಯ ಬಂತು. ಹೆಗಲ ಮೇಲಿದ್ದ ಮೇಕೆಯನ್ನು ಇಳಿಸಿದ. ಅದು ಮೇಕೆಯೇ, ನಾಯಿಯಲ್ಲ – ಎಂದು ಖಾತರಿ ಮಾಡಿಕೊಂಡ. ಮತ್ತೆ ಅದನ್ನು ಹೊತ್ತು ನಡೆದ.

ಈಗ ಮೂರನೆಯ ಧೂರ್ತ ಎದುರಾದ. ‘ಅಯ್ಯಾ ಬ್ರಾಹ್ಮಣ, ದೇವರು, ಪೂಜೆ, ಯಾಗ ಮಾಡುವ ಬ್ರಾಹ್ಮಣ ಹೀಗೆ ನಾಯಿಯನ್ನು ಹೊತ್ತುಕೊಂಡು ತಿರುಗಬಹುದೆ? ನಿಮಗೂ ಬೇಟೆಯ ರುಚಿ ಬಂದಿತೆ?’ – ಹೀಗೆಂದು ಹಂಗಿಸುತ್ತ ಸರಸರನೆ ಹೊರಟ.

ಈಗ ಬ್ರಾಹ್ಮಣನಿಗೆ ನಿಜವಾಗಿಯೂ ಸಂಶಯ ಬಲವಾಯಿತು. ಮೇಕೆಯ ಮೈಯನ್ನು ತಡವಿದ. ‘ಅರೇ! ಇದು ಮೇಕೆಯೇ!!’ ಎಂದುಕೊಳ್ಳುತ್ತ ಇನ್ನಷ್ಟು ದೂರ ಬಂದ.

ಇದೀಗ ನಾಲ್ಕನೆಯ ಧೂರ್ತನ ಸರದಿ. ಅವನು ಬ್ರಾಹ್ಮಣನನ್ನು ಎದುರುಗೊಂಡ. ‘ಅಯ್ಯೋ, ವಿಪ್ರೋತ್ತಮ! ಇದೇನು ಹುಚ್ಚು ನಿನಗೆ, ನಾಯಿಯನ್ನು ಹೊತ್ತುಕೊಂಡು ಹೋಗುತ್ತಿರುವೆ? ಯಾರಾದರೂ ಇದನ್ನು ಕಂಡರೆ ನಗುವುದಿಲ್ಲವೆ? ಇನ್ನು ಮುಂದೆ ನಿನ್ನನ್ನು ಪೌರೋಹಿತ್ಯಕ್ಕೆ ಯಾರಾದರೂ ಕರೆಯುತ್ತಾರೆಯೆ? ಮೊದಲು ಆ ನಾಯಿಯನ್ನು ಬಿಸಾಡು, ಪ್ರಾಯಶ್ಚಿತ್ತ ಮಾಡಿಕೋ!’ ಎಂದು ಒಂದೇ ಉಸಿರಿನಲ್ಲಿ ಹೇಳಿದ.

ಈ ಮಾತುಗಳನ್ನು ಕೇಳಿದ ಬ್ರಾಹ್ಮಣನಿಗೆ ಈಗ ಭಯವೇ ಆಯಿತು. ‘ಎಲ್ಲರೂ ಇದನ್ನು ನಾಯಿ ಎಂದೇ ಹೇಳುತ್ತಿದ್ದಾರೆ; ನನಗೆ ಮಾತ್ರ ಮೇಕೆಯಾಗಿ ಕಾಣುತ್ತಿದೆ! ಇದ್ಯಾವುದೋ ಭೂತಚೇಷ್ಟೆ ಇರಬೇಕು’ ಎಂದು ಭಾವಿಸಿದ; ದಿಗಿಲಿನಿಂದ, ಹೆಗಲಮೇಲಿದ್ದ ಮೇಕೆಯನ್ನು ಕೆಳಕ್ಕೆ ಹಾಕಿ ಓಡತೊಡಗಿದ.

ಅದಕ್ಕಾಗಿಯೇ ಕಾಯುತ್ತಿದ್ದ ಆ ನಾಲ್ವರು ಧೂರ್ತರು ಆ ಮೇಕೆಯನ್ನು ಹಿಡಿದರು. ಕೊಂದು ತಿಂದರು.

***

ಇದು ಪಂಚತಂತ್ರದಲ್ಲಿಯ ಒಂದು ಕಥೆ.

ಒಂದೇ ಸುಳ್ಳನ್ನು ನೂರು ಸಲ ಹೇಳಿದರೆ, ಕೇಳುವ ಜನರು ಕೊನೆಗೆ ಅದನ್ನು ಸತ್ಯ ಎಂದುಕೊಂಡುಬಿಡುತ್ತಾರೆ – ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಂತಿದೆ ಮೇಲಣ ಕಥೆ.

ನಮ್ಮದು ಮಾಹಿತಿಪ್ರಧಾನ ಯುಗ. ಮಾಹಿತಿಯ ಪ್ರವಾಹದಲ್ಲಿ ‘ಯಾವುದು ಸುಳ್ಳು’, ‘ಯಾವುದು ಸತ್ಯ’ – ಎಂದು ನಿರ್ಧರಿಸುವುದು ಸುಲಭವಲ್ಲ. ವಾಟ್ಸ್ಯಾಪ್‌, ಫೇಸ್‌ ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಿದ್ದರೆ ಈ ಮಾತಿನ ಮರ್ಮ ಗೊತ್ತಾಗುತ್ತದೆ. ಸುಳ್ಳಾಗಿರುವ ಒಂದೇ ಮೆಸೇಜನ್ನು ನಾಲ್ಕಾರು ಜನರು ಶೇರ್‌ ಮಾಡಿದ್ದರೆ ಎಂದಾದಲ್ಲಿ, ಬಹುಶಃ ಅದು ಸರಿಯಾದ ಮಾಹಿತಿಯೇ ಇರಬೇಕು ಎಂದು ನಾವೂ ನಂಬುವಂತಾಗುತ್ತದೆ, ಆ ಬ್ರಾಹ್ಮಣನಿಗೆ ಆದಂತೆ.

ಸುಳ್ಳು ನಿರಂತರ ನಮ್ಮ ಮೇಲೆ ಬೇರೆ ಬೇರೆ ರೂಪಗಳಲ್ಲಿ, ಮಾತುಗಳಲ್ಲಿ ದಾಳಿಯನ್ನು ಮಾಡುತ್ತಲೇ ಇರುತ್ತದೆ. ಆದರೆ ಅದಕ್ಕೆ ಹೆದರಿಕೊಂಡು ನಾವು ಸುಳ್ಳಿನ ಎದುರು ಸೋಲಬಾರದು. ಯಾವ ಮಾತನ್ನೂ ಯಾರ ಮಾತನ್ನೂ ಪರೀಕ್ಷಿಸದೆಯೇ ಒಪ್ಪಿಕೊಳ್ಳಬಾರದು. ಸುಳ್ಳಿನ ಪರವಾಗಿ ನಿಲ್ಲುವವರ ಸಂಖ್ಯೆಯೂ ಹೆಚ್ಚಿರಬಹುದು. ಆದರೆ ಹತ್ತು ಜನರು ‘ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ’ ಎಂದ ಮಾತ್ರಕ್ಕೆ, ಅದು ಹಾಗೆಯೇ ಆಗದು, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.