ಹೊರಗೆ ಮಧ್ಯಾಹ್ನ ಹೊತ್ತಿಯುರಿಯತೊಡಗಿತ್ತು. ಕಾಲೊಳಗೆ ಹೂತ ಒಂದೊಂದೇ ಮುಳ್ಳನ್ನು ಮೆಲ್ಲಗೆ ತೆಗೆಯುವಂತೆ, ಅವಳು ಕೈಯಿಂದ ಒಂದೊಂದೇ ಬಟ್ಟೆ ಕಳಚಲಾರಂಭಿಸಿದಳು. ಕಳಚಿದ ಪ್ರತಿಯೊಂದು ಬಟ್ಟೆಯನ್ನು ಅವಳು ಶಾಂತವಾಗಿ ಮಡಚಿದಳು. ಅದನ್ನು ಬಚ್ಚಲ ಸನಿಹದಲ್ಲಿರುವ ಕಟ್ಟಿಗೆಯ ಪೆಟ್ಟಿಗೆಯ ಮೇಲಿಟ್ಟಳು. ಬಚ್ಚಲ ಹೊರಗೆ ತುಂಬಿಟ್ಟ ತಣ್ಣೀರಿನ ಬಕೆಟನ್ನು ಎತ್ತಿ ಒಳಗಿಟ್ಟುಕೊಂಡಳು. ಬದಿಗೇ ಮಣೆಯಿಟ್ಟಳು. ಸಾಬೂನು ಹಿಡಿದುಕೊಂಡು ಜಾರುವ ಫರ್ಶಿ ನೆಲದ ಮೇಲೆ ಮೆಲ್ಲಗೆ ಕಾಲಿಡುತ್ತ ಒಳಗೆ ಬಂದಳು. ಬಾಗಿಲನ್ನು ಮುಂದೂಡಿ ಆರಾಮಾಗಿ ಮಣೆಯ ಮೇಲೆ ಕುಳಿತಳು. ತಂಬಿಗೆಯನ್ನು ತಣ್ಣೀರಿನಲ್ಲಿ ಮುಳುಗಿಸುವ ಒಂದೆರಡು ಕ್ಷಣ ನಿಂತಳು. ಮೈಯೆಲ್ಲ ಶೆಕೆಯಿಂದ ಉರಿಉರಿಯಾಗುತ್ತಿದ್ದರೂ, ತಣ್ಣೀರಿನ ಮೊದಲ ತಂಬಿಗೆ ಮೈಮೇಲೆ ಎರಚಿಕೊಳ್ಳುವ ಮೊದಲು ಅವಳಿಗೆ ಕಚಗುಳಿಯಿಟ್ಟಂತಾಯಿತು. ಹೀಗಾಗಿ ಕಾಲಹರಣ ಮಾಡುತ್ತ ಅವಳು ನೀರಿನೊಂದಿಗೆ ಆಟವಾಡಲಾರಂಭಿಸಿದಳು. ಒಂದೂ ತರಂಗ ಏಳದ ನೀರಲ್ಲಿ ತನ್ನ ಸ್ವಂತ ಮುಖ ನೋಡಿಕೊಂಡಳು. ಬಳಿಕ ನಗುತ್ತ ಬೆರಳಿನ ಚಿಟಿಕೆ ಹೊಡೆದು ತರಂಗ ಏಳುವಂತೆ ಮಾಡಿದಳು. ಅದರಲ್ಲಿ ಚೆದರಿದ ರೂಪವನ್ನು ಕಂಡು ಕ್ಷಣಕಾಲ ಬೆದರಿದಳು. ಅನಂತರ ಮತ್ತದೇ ಆಟವಾಡಲಾರಂಭಿಸಿದಳು. ಮೊದಲಿಗೆ ಬೊಗಸೆಯಲ್ಲಿ ನೀರು ತಗೊಂಡು ತೊಡೆಯ ಮೇಲೆ ಸಿಂಪಡಿಸಿದಳು. ಅನಂತರ ಕೈಮೇಲೆ, ಕಾಲಿನ ಮೇಲೆ, ಹೊಟ್ಟೆಯ ಮೇಲೆ, ಮತ್ತು ಕ್ರಮೇಣ ಸಂಪೂರ್ಣ ಮೈಮೇಲೆ. ಬಳಿಕ ಆಕಸ್ಮಿಕವಾಗಿ ನೀರಲ್ಲಿ ತಂಬಿಗೆಯನ್ನು ಮುಳುಗಿಸಿದಳು. ನೀರಲ್ಲಿ ಎದ್ದ ಗುಳ್ಳೆಗಳ ಸದ್ದು ಕಿವಿಯೊಳಗೆ ತುಂಬಿಕೊಳ್ಳುತ್ತ ಕಣ್ಣುಮುಚ್ಚಿದಳು, ಮತ್ತು ನೀರನ್ನು ತಲೆಯ ಮೇಲೆ ಸುರಿದಳು. ಇಡೀ ದೇಹದ ಮೇಲಿಂದ ಹಾವು ಹರಿದು ಹೊರಟಂತೆ ನೀರಿನ ತಣ್ಣಗಿನ ಸ್ಪರ್ಶ ವಿಹ್ವಲಗೊಳ್ಳುತ್ತ ಸಾಗಿತು. ಅನಂತರ ಅದರ ರೂಢಿಯಾದ ದೇಹಕ್ಕೆ ಬಕೆಟ್ ನೀರು ಮುಗಿಯುವವರೆಗೆ ವಿರಮಿಸಲು ಅವಕಾಶ ನೀಡಲಿಲ್ಲ. ಒಂದರ ಬಳಿಕ ಒಂದರಂತೆ ತಂಬಿಗೆಯನ್ನು ಸುರಿಯುವಾಗ ಅವಳಿಗೆ ಗಮ್ಮತ್ತು ಎನಿಸುತ್ತಿತ್ತು. ಪ್ರತಿಯೊಂದು ತಂಬಿಗೆಯ ಜೊತೆಗೆ ಹೊರಹೊಮ್ಮುವ ಅವಳ ನಗು ಸಹ ಬಚ್ಚಲಿನಲ್ಲಿ ಒಡೆದು ಇಡೀ ಮನೆಯ ತುಂಬೆಲ್ಲ ಸಿಂಪಡಿಸಿದಂತೆ ಚೆದುರಲಾರಂಭಿಸಿತು.
ಅವಳ ಈ ನಗೆಯನ್ನು ಕೇಳಿ ಸದೂ ಅಸ್ವಸ್ಥಗೊಂಡ. ಮಗ್ಗಲು ಹೊರಳಿಸಿ ಅವನು ಅವಳತ್ತ ಸಿಟ್ಟಿನ ನೋಟ ಬೀರಿದ. ಆದರೆ ಈ ಅದ್ಭುತ ಆಟದಲ್ಲಿ ತನ್ಮಯಳಾದ ಅವಳಿಗೆ ಸದೂನ ರಾಗಲೋಭದ ಅರಿವೇ ಇರಲಿಲ್ಲ.
ಊಟಕ್ಕಿಂತ ಮೊದಲು ಸ್ವಲ್ಪ ಉರುಳಿಕೊಂಡ ಸದೂ ಎದ್ದು ಕೂತ. ಬೀಡಿ ಹೊತ್ತಿಸಿ ಮುಚ್ಚಿದ ಕಿಟಕಿಯ ಬಳಿಗೆ ಹೋದ. ಬಚ್ಚಲಿನತ್ತ ಬೆನ್ನು ಮಾಡಿ, ಅವಳಿಗೆ ಮರೆ ಸಿಗುವಂತೆ ನಿಂತು ಅವನು ಮೆಲ್ಲಗೆ ಕಿಟಕಿಯನ್ನು ತೆರೆದ. ಬಾಗಿಲು ಸ್ವಲ್ಪ ತೆರೆದು ಹೊರಗೆ ನೋಡಿದ.
ಹೊರಗೆ ಹುಡುಗರು ಆಟವಾಡುತ್ತಿದ್ದರು. ರಮೇಶ, ಪಾಂಡೂ, ಸುಭಾಷ, ರಾಜಾ ಮತ್ತು ಅವನ ಬೆನ್ನಿಗೆ ಪುಟ್ಟ ಚಿಂಗಿ. ರಾಜನ - ಅಂದರೆ ಅವಳ ಅಣ್ಣನ ಬಿಲ್ಲೆಗಳನ್ನು ಸಂಗ್ರಹಿಸಲು ಓಡಾಡುತ್ತಿದ್ದಳು. ಸದೂನಿಗೆ ತನ್ನ ಬೆನ್ನು ಹತ್ತಿ ಹೀಗೇ ಬರುವ ರಮಾ ನೆನಪಾದಳು. ಸತ್ಯವೆಂದರೆ, ಆಡವಾಡಲು ಅವಳನ್ನು ಜೊತೆಗೆ ಕರೆದೊಯ್ಯಲು ಅವನಿಗೆ ಮನಸ್ಸಿರುತ್ತಿರಲಿಲ್ಲ. ಹುಡುಗರು ಹಂಗಿಸಿದಾಗ ಅವನು ಕೆರಳಿ, ಬಯ್ದು ಅವಳನ್ನು ತಿರುಗಿ ಮನೆಗೆ ಅಟ್ಟುತ್ತಿದ್ದ. ಆದರೆ ರಮಾ ಜೊಲ್ಲು ಸುರಿಸುತ್ತ, ಜಡವಾದ ಮೋರೆ ಹೊತ್ತು, ಅವನ ಬೆನ್ನಿಗೇ ಬರುತ್ತಿದ್ದಳು. ಅವನ ಬಿಲ್ಲೆ, ಸಿಗರೇಟು ಪ್ಯಾಕು; ಗೋಲಿಗಳನ್ನು ಫ್ರಾಕ್‌ನಲ್ಲಿ ಸಂಭಾಳಿಸುತ್ತ ಅವನು ಹೋದಕಡೆಗಳೆಲ್ಲ ಹೋಗುತ್ತಿದ್ದಳು. ಕ್ರಮೇಣ ಸದೂನಿಗೂ ಆಟವಾಡುವಾಗ ಸಹಾಯವಾಯಿತು. ಹಕ್ಕಿನ ಮನುಷ್ಯ ಸಹಾಯಕ್ಕೆ ಸಿಕ್ಕಾಗ ವ್ಯವಸ್ಥಿತವಾಗಿ ಆಡುವುದು ಸಾಧ್ಯವಾಗುತ್ತಿತ್ತು.
ಪಾಂಡೂ ಹೊಡೆದ ಚಿನ್ನಿಯು ಎದುರಿನ ತಗಡಿಗೆ ಅಪ್ಪಳಿಸಿತು. ಆಗ ಒಳಗಿನಿಂದ ಬನಿಯ ಕಿರುಚಾಡುವ ಧ್ವನಿ ಕೇಳಿ ಬಂತು. ಹುಡುಗರು ಬಾಯಿ ಮುಚ್ಚಿಕೊಂಡು ಓಡಿದರು. ಅವರ ಮೊಗದಲ್ಲಿರುವ ತುಂಟ ನಗೆಯನ್ನು ಕಂಡು ಸದೂನ ಮೊಗದಲ್ಲೂ ನಗೆ ಅರಳಿತು.
ಮೆಲ್ಲಗೆ ಎಲ್ಲ ಶಾಂತವಾಯಿತು. ಆ ಕಾದ ತಗಡಿನಿಂದ ಬರಲಾರಂಭಿಸಿತು ಬರೇ ಬಿಸಿ ಉಸಿರು. ಬಾಗಿಲು-ಕಿಟಕಿಗಳನ್ನೆಲ್ಲ ಮುಚ್ಚಿ ಒಳಗೆ ಬನಿ ಏನು ಮಾಡುತ್ತಿದ್ದಳು ಎನ್ನುವುದು ಕೇವಲ ಸದೂನಿಗಷ್ಟೇ ಅಲ್ಲ, ಆ ವಸತಿಯ ಪೋರ-ಪೋರಿಯರಿಗೂ ಗೊತ್ತಿತ್ತು. ಒಂದಕ್ಕೊಂದು ಅಂಟಿಕೊಂಡಿರುವ ಆ ತಗಡಿನ ಮನೆಗಳು, ತೀರ ಇಕ್ಕಟ್ಟಾದ ಓಣಿಯಿದ್ದಾಗ ಯಾವುದೇ ಸಂಗತಿಯನ್ನು ಬೇರೆಯವರಿಗೆ ಬಚ್ಚಿಡುವುದು ಸಾಧ್ಯವಿರಲಿಲ್ಲ.
ರಂಗೂ ರಜೆಗೆ ಬಂದಾಗಿಂದ ಪ್ರತಿದಿನ ಮಧ್ಯಾಹ್ನ ತಪ್ಪದೇ ಬರುತ್ತಿದ್ದ. ಮುಚ್ಚಿದ ಬಾಗಿಲೊಳಗೆ ಬನಿಯು ರಂಗೂನ ವಿಪುಲವಾಗಿ ಬೆಳೆದ ಕೂದಲಲ್ಲಿ ಕೈಯಾಡಿಸುತ್ತ ಗಂಡ ಪರಶೂನ ಎಣ್ಣೆಗಮಟು ಮುಖ ಸಿಟ್ಟಿನಿಂದ ಉರಿಯುವಂತೆ ಮಾಡುತ್ತಿರಬೇಕು ಮತ್ತು ಅವಳ ರವಿಕೆಯೊಳಗೆ ಹೊಕ್ಕು, ಮುಂದಿನ ಸಲ ಬರುವಾಗ ಹೊಚ್ಚ ಹೊಸ ಸ್ಯಾಟಿನ್ ಬಟ್ಟೆ ತರುವ ಆಶ್ವಾಸನೆಯನ್ನು ರಂಗೂ ನೀಡುತ್ತಿರುತ್ತಾನೆ ಎಂಬುದೂ ಸದೂನಿಗೆ ಗೊತ್ತಿತ್ತು. ಅವನು ಆ ಯೋಚನೆಯಿಂದ ಉಲ್ಲಸಿತನಾದ.
ಠಣ್ಽಽ
ಅವನು ಬೆಚ್ಚಿ ತಲೆ ಎತ್ತಿದ. ಕೊನೆಯ ತಂಬಿಗೆ ನೀರು ಸುರಿದುಕೊಂಡು ಅವಳು ಎದ್ದು ನಿಂತಿದ್ದಳು, ಒಂದು ಬೆತ್ತಲೆ ಜ್ಯೋತಿಯಂತೆ. ಮೇಲಿನಿಂದ ಜೋರಾಗಿ ತಂಬಿಗೆಯನ್ನು ಅಪ್ಪಳಿಸಿದ್ದರಿಂದ ಆದ ಸದ್ದಿನಿಂದ ಅವಳೂ ಕಕ್ಕಾವಿಕ್ಕಿಯಾದಳು. ಆದರೆ ಅದೂ ಕ್ಷಣಕಾಲ ಮಾತ್ರ. ಫಡಫಡಿಸುವ ಜ್ಯೋತಿಯು ಕ್ಷಣಾರ್ಧದೊಳಗೆ ಸ್ತಬ್ಧಗೊಂಡಿತು. ಮತ್ತು ಒಂದು ಹುಚ್ಚು ನಗೆಯನ್ನು ಮೊಗದಲ್ಲಿ ಹೊದ್ದು ಎದ್ದು ಅವಳು ಹೊರಬಂದಳು.
ಒಂದೊಂದೇ ಹೆಜ್ಜೆಯನ್ನು ನೆಲದ ಮೇಲೆ ಮೂಡಿಸುತ್ತ ಅವಳು ಕ್ಷಣಕಾಲ ಮನೆಯೊಳಗೆಲ್ಲ ಸುತ್ತಾಡುವುದು ಕಂಡು ಸದೂ ಅವಸರದಿಂದ ಕಿಟಕಿ ಮುಚ್ಚಿದ. ತನ್ನ ಮನೆಯೊಳಗಿನ ಈ ಸಂಗತಿಯು ಬಹಳ ಕಾಲ ಮುಚ್ಚಿಡುವುದೂ ಸಾಧ್ಯವಿಲ್ಲ ಎಂಬ ಅರಿವಿನಿಂದ ಅವನು ಚಡಪಡಿಸಿದ. ಮರಳಿ ಮತ್ತೆ ಅವನು ಮಂಚದ ಮೇಲೆ ಉರುಳಿ ಕಣ್ಮುಚ್ಚಿದ. ಆದರೂ ಕಣ್ಣುಮುಂದೆ ಮೂಡುತ್ತಲೇ ಇತ್ತು ಆ ಕಂಪಿಸುವ ಜ್ಯೋತಿ.
ಅವನು ತನ್ನನ್ನೇ ಸಮಾಧಾನಪಡಿಸಿಕೊಂಡ. ಅವನು ಎರಡನೇ ಪಾಳಿಯ ಕೆಲಸಕ್ಕೆ ಹೋಗಬೇಕಿತ್ತು. ಊಟ ಮಾಡಿ ಮುಗಿಸಬೇಕಿತ್ತು. ಅವಳ ಕೆಲಸ ಮುಗಿಯದ ಹೊರತು ಊಟ ಮಾಡುವುದೂ ಸಾಧ್ಯವಿರಲಿಲ್ಲ.
ಅವನು ಕಣ್ಣು ತೆರೆದಾಗ ತನ್ನ ಮೆಲ್ಲಗೆ ಒಣಗುತ್ತಿರುವ ಹೆಜ್ಜೆಯನ್ನು ಅವಳು ಬೆರಗಿನಿಂದ ನೋಡುತ್ತಿದ್ದಳು. ಅನಂತರ ನಗು-ನಗುತ್ತ ಅವಳು ಒಡಕು ಕನ್ನಡಿಯ ಮುಂದೆ ನಿಂತಳು. ಅಲ್ಲಿ ಚೆದುರಿದ ತನ್ನ ರೂಪವನ್ನು ಜೋಡಿಸುವ ಪ್ರಯತ್ನ ಮಾಡಿದಳು. ಆ ವಿವಸ್ತ್ರ ದೇಹವನ್ನು ನೋಡಿದಾಗ ಈವರೆಗೆ ಒತ್ತಾಯದಿಂದ ಹತ್ತಿಕ್ಕಿದ ಸಹಸ್ರ ಸರ್ಪವು ಹೆಡೆ ಎತ್ತಿ ಇಡೀ ದೇಹದೊಳಗೆ ಪೂತ್ಕರಿಸಲಾರಂಭಿಸಿತು. ಮೆಲ್ಲಗೆ ಅವಳ ನೋಟವು ತನ್ನ ಸ್ಥೂಲವಾಗಿದ್ದರೂ ಎಳೆಯ ಕೇದಿಗೆಯಂಥ ದೇಹದ ಮೇಲೆ ಪಸರಿಸಿತು.
ಅವನಿಗೆ ಅರಿವಿಲ್ಲದೆ ಈ ದೇಹದ ಮೋಹಿನಿಯು ಅವನನ್ನು ಆವರಿಸಿಕೊಂಡಿತ್ತು. ತಾಯಿಯ ಶ್ರಾದ್ಧ ಮುಗಿಸಿ ಅವನು ಅವಳನ್ನು ಇಲ್ಲಿಗೆ ಕರೆದುಕೊಂಡು ಬಂದ ಮತ್ತು ಕೆಲವೇ ದಿನಗಳಲ್ಲಿ ಅವನ ಇಡೀ ದೇಹದೊಳಗೆ ಅಡರಿದ್ದ ಆ ಕಾಮವಾಸನೆಯು ಹೆಡೆಯೆತ್ತಲಾರಂಭಿಸಿತು.
ಖರೆಯೆಂದರೆ ತೀರ ಬಾಲ್ಯದಿಂದಲೂ ಅವನ ಮನದೊಳಗೆ ಅವಳಿಗಾಗಿ ಯಾವುದೇ ಬಗೆಯ ಆರ್ದ್ರತೆಯಿರಲಿಲ್ಲ. ಇದ್ದರೆ ಅದು ನಾಚಿಗೆಯ ಭಾವನೆ. ಅವಳ ಮನದೊಳಗೆ ಏನಿತ್ತೋ ದೇವರೆ ಬಲ್ಲ! ತಾಯಿ ಸಾಯುವ ಮೊದಲು ಕೇವಲ ಕರ್ತವ್ಯಬುದ್ಧಿಯಿಂದ ಅವನು ತಿಂಗಳು, ಎರಡು ತಿಂಗಳಿಗೋ ಒಮ್ಮೆ ಬಂದು ಹೋಗುತ್ತಿದ್ದ. ತಾಯಿ ಬೇಡಿದ ವಸ್ತುವನ್ನು ಒಯ್ದು ಕೊಡುತ್ತಿದ್ದ. ಆಗ ಅವಳ ಕಣ್ಣೊಳಗೆ ಮೂಡಿದ ಬೆರಗನ್ನು ನೋಡಲು ಸ್ವಲ್ಪ ಹೊತ್ತು ಮನೆಯೊಳಗಿದ್ದು, ನಂತರ ಊರೊಳಗೆಲ್ಲ ಸುತ್ತಾಡುತ್ತಿದ್ದ. ಗೆಳೆಯರೊಂದಿಗೆ ಹರಟೆ ಹೊಡೆದು ಎರಡು ದಿನ ಕಳೆದ ಬಳಿಕ ಮತ್ತೆ ಮುಂದಿನ ಭೇಟಿಯ ಭರವಸೆ ನೀಡಿ ಹೊರಟುಬಿಡುತ್ತಿದ್ದ.
ತಾಯಿ ತೀರಿಕೊಂಡ ಬಳಿಕ ಮಾತ್ರ ಇವಳನ್ನು ಒಂಟಿಯಾಗಿ ಊರಲ್ಲಿ ಇಡಬಾರದೆಂಬ ಗೆಳೆಯರ ಸಲಹೆಯ ಮೇರೆಗೆ ಇವಳನ್ನು ಇಲ್ಲಿಗೆ ಕರೆತಂದಿದ್ದ. ನೆರೆಹೊರೆಯವರು ಜಾತ್ರೆಯ ಹಗಲು ವೇಷಧಾರಿಯನ್ನು ತಂದವರಂತೆ ನೋಡಲು ಬಂದಾಗ ಮಾತ್ರ ಸದೂನಿಗೆ ನಾಚಿಕೆಯಿಂದ ಸತ್ತಂತೆ ಆಯಿತು. ಈ ವೇಷ ಮತ್ತೆ ಅವರ ಕಣ್ಣಿಗೆ ಬೀಳದಂತೆ ಅವನು ವರ್ತಿಸಲಾರಂಭಿಸಿದ. ಕೆಲಸಕ್ಕೆ ಹೋಗುವಾಗ ಬರೇ ಕಿಟಕಿ ಮಾತ್ರೆ ತೆಗೆದಿಟ್ಟು ಬಾಗಿಲಿಗೆ ಕೀಲಿ ಹಾಕುತ್ತಿದ್ದ.
ಖರೆಯೆಂದರೆ ಅವಳನ್ನು ಸಂಭಾಳಿಸುವುದರಲ್ಲಿ ಅವನು ಹೈರಾಣಾಗಿಬಿಡುತ್ತಿದ್ದ. ಶುರುವಾತಿಗೆ ಎಷ್ಟೆಲ್ಲ ರಂಪಾಟ ಮಾಡಿದಳು! ತಾಯಿಯ ನೆನಪು ತಂದು ಬೇಕು-ಬೇಕಾದಾಗ ಅಳುತ್ತಿದ್ದಳು, ಕೆರಳುತ್ತಿದ್ದಳು. ಪಾತ್ರೆಗಳನ್ನು ಬಡಿದು ಕುಕ್ಕುತ್ತಿದ್ದಳು. ಅವಳಿಗೆ ಅದರ ರೂಢಿಯಾಗಲು ಸಾಕಷ್ಟು ಸಮಯ ಬೇಕಾಯಿತು. ಆನಂತರ ಮಾತ್ರ ಅವನಿಂದಲೇ ಎಲ್ಲ ಮಾಡಿಸಿಕೊಳ್ಳಲಾರಂಭಿಸಿದಳು. ತುತ್ತು ತಿನಿಸುವುದರಿಂದ ಹಿಡಿದು, ಬಟ್ಟೆ ಬದಲಾಯಿಸುವವರೆಗೆ-ಎಲ್ಲವೂ. ಆರಂಭಕ್ಕೆ ಅವನಿಗೆ ತೀರಾ ಸಂಕೋಚಗೊಂಡಂತಾಗುತ್ತಿತ್ತು. ಸ್ನಾನದಿಂದ ಹಿಡಿದು ಎಲ್ಲ ಮಾಡುವುದು ಸಾಧ್ಯವೂ ಇರಲಿಲ್ಲ. ವಿಚಿತ್ರವೆನಿಸುತ್ತಿತ್ತು. ಅನಂತರ ಚಿಕ್ಕಮಕ್ಕಳಿಗಿಂತಲೂ ಈ ಕೆಲಸ ದೊಡ್ಡದು ಎಂದೆನಿಸಿತು. ಕೆಲವೊಮ್ಮೆ ಒದ್ದೆ ಮಾಡಿದ ಹಾಸಿಗೆಯನ್ನು ತೊಳೆಯುತ್ತಿದ್ದ ಅವನು. ಅಷ್ಟೇ ಅಲ್ಲ, ಮುಟ್ಟಾದ ಬಟ್ಟೆಯನ್ನೂ ಒಗೆದು ಹಾಕುತ್ತಿದ್ದ ಶುರುವಾತಿಗೆ. ಈಗ ಬಹಳ ದಿನಗಳಿಂದ ಒಗೆದಿರಲಿಲ್ಲ. ಸದೂ ಬೆಚ್ಚಿದ. ಅವನಿಗೆ ಆ ರಾತ್ರಿ ನೆನಪಾಯಿತು. ಅವಳು ಅವನನ್ನು ಬೇರೊಂದು ಬೆಟ್ಟದ ಅಂಚಿಗೆ ತಂದು ನಿಲ್ಲಿಸಿದ್ದಳು. ಬೇರೊಂದು ತಿರುವಿಗೆ ಕರೆತಂದಿದ್ದಳು.
ಅವಳು ಸಂಪೂರ್ಣ ಮೈಮರೆತಿದ್ದಳು. ಅವನು ಎಚ್ಚರಗೊಂಡಾಗ ಅವನ ಮೈಚರ್ಮ ಸುಲಿದು ತೆಗೆಯುವಂತೆ ಅವಳು ಧರಿಸಿದ ಬಟ್ಟೆಯನ್ನು ಒಂದೊಂದಾಗಿ ಕಳಚಲಾರಂಭಿಸಿದ್ದಳು. ಸದೂ ಹತ್ತಿರ ಹೋಗಿ ಏನಾಯಿತು ಎಂದು ಕೇಳಿದ. ಆದರೆ ಏನೂ ಹೇಳಲಿಲ್ಲ. ಅವನು ಗಲಿಬಿಲಿಗೊಂಡ. ಊರಿನಿಂದ ಕರೆತಂದ ಬಳಿಕ ಮೊದಲ ಬಾರಿಗೆ ಅವಳ ಈ ಕಂಗಾಲಾದ ರೂಪವನ್ನು ಕಾಣುತ್ತಿದ್ದ. ಕ್ಷಣಕಾಲ ನೆರೆಮನೆಯ ಯಾರಿಗಾದರೂ ಈ ವಿಷಯ ಹೇಳಬೇಕೆಂದೆನಿಸಿತು. ಆದರೆ ಅವಳೋ ಅಂಥ ಅವಸ್ಥೆಯಲ್ಲಿ. ಹೊರಗಿನಿಂದ ಬರುವ ಬೆಳ್ದಿಂಗಳ ಬೆಳಕಿನಲ್ಲಿ ಅವನಿಗೆ ಕಾಣಿಸುತ್ತಿತ್ತು ಆ ರೂಪ! ಹೀಗಿರುವಾಗ ಅವಳು ಸರ‍್ರನೆ ಅವನನ್ನು ಅಪ್ಪಿಕೊಂಡಳು. ಅವಳು ಅವನೊಳಗೆ ನುಗ್ಗ ಬಯಸಿದ್ದಳು. ಏನಾಗುತ್ತಿದೆ ಎಂಬುದು ಅವನಿಗೇ ಗೊತ್ತಾಗಲಿಲ್ಲ. ಅವನು ದೀಪ ಹಚ್ಚಿದ ಮತ್ತು ಬೆಳ್ದಿಂಗಳಲ್ಲಿ ನಿಂತಿದ್ದ ಅವಳ ಅಸ್ಪಷ್ಟ ಆಕೃತಿಯು ಗೋಚರಿಸಿತು. ಒಂದು ಸುಂದರವಾದ, ಮೋಹಕವಾದ ಕಟೆದ ಶಿಲ್ಪದಂತೆ. ಚಿನ್ನದ ಮೀನಿನ ಚಡಪಡಿಕೆಯನ್ನು ಅವನು ಕೈಯಲ್ಲಿ ಹಿಡಿದಿಡುವುದು ಸಾಧ್ಯವಿರಲಿಲ್ಲ. ಆಗವನು ಅವಳ ಸುತ್ತಲೂ ಬಲೆಯ ಪಾಶವನ್ನು ಬಿಗಿದ. ಬಳಿಕ ಅವನ ಅರಿವಿಲ್ಲದೆ ಅವನ ಕೈ ಅಜ್ಞಾತದ ಶೋಧವನ್ನು ಮಾಡಲಾರಂಭಿಸಿತು. ಮನೆಯ ತಗಡಿನ ಮೇಲೆ ಕುಸಿಯುವ ಮಳೆಯಂತೆ ಸದೂ ಕುಸಿಯುತ್ತಿದ್ದ ಅವಳ ಮೇಲೆ. ಮತ್ತು ಅವಳು? ಅವಳಿಗೆ ಸುರಕ್ಷಿತವೆನಿಸುತ್ತಿತ್ತೋ ಇಲ್ಲವೋ ಯಾರಿಗ್ಗೊತ್ತು. ಆದರೆ ಸದೂ ಹೀಗೆ ನುಗ್ಗಿ ಗುದಮರಿಕೆ ಹಾಕುವುದು ಅವಳಿಗೆ ಸುಖವನ್ನು ನೀಡುತ್ತಿತ್ತು. ಮೈಯೊಳಗೆ ಹೊತ್ತಿ ಉರಿವ ಆ ಬೆಂಕಿಯು ಮೊದಲ ಸಲ ಶಾಂತವಾಗಲಾರಂಭಿಸಿತು. ಈ ಶ್ರಾವಣ ಹನಿಗಳ ಮಳೆಗಾಲ ಅವಳಿಗೆ ಗೊತ್ತಿಲ್ಲದೆ ಇಷ್ಟವಾಗಿತ್ತು.
ಸದೂ ಎಚ್ಚರಗೊಂಡಾಗ ಅವನ ಕೈಕಾಲು ಸೋರಿ ಹೋಗಿತ್ತು. ತನ್ನ ಬಗೆಗೆ, ತನ್ನ ದೇಹದ ಬಗೆಗೆ ನಾಚಿಕೆಯೆನಿಸುತ್ತಿತ್ತು. ಆದರೆ ಅನಂತರ ಮಾತ್ರ ಅವನು ಆ ರಾಡಿಯಲ್ಲಿ ಹೂತು ಹೋಗಲಾರಂಭಿಸಿದ. ದೇಹದ ಹಸಿವೆ ನಿವಾರಣೆಯಾದ ಬಳಿಕ ನಾಚಿಕೆಯಿಂದ ಅರೆಸತ್ತಂತಾದ ಸದೂ ಅವಳ ಬೆತ್ತಲೆ ದೇಹ ಕಂಡು ಹೊತ್ತಿಯುರಿಯುತ್ತಿದ್ದ. ಬಳಿಕ ಒಂದು ಸುಖದ ನಿಗೂಢ ರೀತಿಯಲ್ಲಿ ತೇಲುತ್ತ ಹೋಗುತ್ತಿದ್ದ.
ಅವನ ನೋಟ ಅವಳ ಸ್ತನದ ಮೇಲಿಂದ, ಹೊಟ್ಟೆಯ ಕಡೆಗೆ ಹೋಯಿತು. ದೇಹದೊಳಗೆ ಹರಿದಾಡುವ ಸರ್ಪ ಕ್ಷಣದೊಳಗೆ ಪರೆಗಳಚಿದಂತೆ ನಿಶ್ಚೇಷ್ಟಿತಗೊಂಡಿತು. ದಿನೇ ಅವಳ ಬೆಳೆಯುತ್ತಿರುವ ಹೊಟ್ಟೆ ಗೋಲಾಕಾರ, ಕಾದ ಕೆಂಪು ಸಲಾಕೆಯಂತೆ ಅವನ ಕಣ್ಣೊಳಗೆ ನುಗ್ಗಿತು. ಅವನು ತನ್ನ ನೋಟ ಹೊರಳಿಸಿದ. ಹೌದು ಅದೇ ಖಂಡಿತವಿರಬೇಕು. ಕಳೆದ ಮರ‍್ನಾಲ್ಕು ತಿಂಗಳಲ್ಲಿ ತಾನೆಲ್ಲಿ ಒಗೆದಿದ್ದೇನೆ ಮುಟ್ಟಿನ ಮೈಲಿಗೆಯ ಬಟ್ಟೆ? ಹಾಗೇ ಒಂದು ವೇಳೆ ಆಗಿದ್ದರೆ? ಅವನಿಗೆ ಹೊಟ್ಟೆ ತೊಳೆಸಿದಂತಾಯಿತು. ದೇಹ ಜಡಗೊಂಡಂತೆ ಅವನು ಹಾಗೇ ಬಿದ್ದುಕೊಂಡ. ಅವಳ ಬಗೆಗೆ ಅವನಿಗೆ ಸಿಟ್ಟು ಬಂತು. ಇವಳು ಹೀಗೇಕೆ ತನ್ನ ಎದುರಿಗೆ ಬರುತ್ತಾಳೆ? ಇವಳೇಕೆ ಜೀವನವನ್ನು ಮಣ್ಣುಗೂಡಿಸಲು ಬಂದಳು? ಅಮ್ಮನನ್ನು ನುಂಗಿದಳು, ಈಗ ನನ್ನದೂ ಸರ್ವನಾಶ ಮಾಡಬಹುದು. ಆಗ ನಾನು ಯಾರಿಗೂ ಮುಖ ತೋರಿಸುವಂತಿಲ್ಲ.
ಸದೂ ಒಮ್ಮೆಲೆ ಸಿಡಿದೆದ್ದ. ಅವಳು ಮಡಚಿ ಇಟ್ಟಿದ್ದ ಅವಳ ಬಟ್ಟೆಯನ್ನು ಅವಳ ಮೈಮೇಲೆ ಎಸೆದ. “ವೈಯಾರ ತೋರಿಸಿದ್ದು ಸಾಕು. ಬಟ್ಟೆ ಹಾಕಿಕೋ. ನಾನು ಊಟ ಮಾಡಿ ಕೆಲಸಕ್ಕೆ ಹೋಗಬೇಕು.”
ಅವನೊಳಗೆ ಹೀಗೆ ಆಕಸ್ಮಿಕವಾಗಿ ಆದ ಬದಲಾವಣೆಯನ್ನು ಕಂಡು ಅವಳು ಹಿಮ್ಮೆಟ್ಟಿದಳು. ಅವಳಿಗೆ ಕ್ಷಣಕಾಲ ಏನೂ ಗೊತ್ತಾಗಲಿಲ್ಲ. ಖರೆ ಎಂದರೆ ಸದೂ ಅವಳನ್ನು ತಬ್ಬಿಕೊಳ್ಳಬೇಕಾಗಿತ್ತು. ಅದರ ಬದಲು ಇವತ್ತು ಬಟ್ಟೆ ತೊಡಲು ಹೇಳುತ್ತಿದ್ದಾನೆ. ಅವಳಿಗೆ ಅವನ ಮೇಲೆ ಸಿಟ್ಟು ಬಂತು. ತಣ್ಣೀರಿನಿಂದ ಸ್ನಾನ ಮಾಡಿದರೂ ಶಾಂತವಾಗದ ಉರಿ ಉರಿ ಬೆಂಕಿ ಮತ್ತೆ ಕೆರಳಿತು. ಅವಳು ಸಿಟ್ಟಿನಿಂದ ಹಾಗೇ ಕೂತು ಉಳಿದಳು. ಗಲ್ಲ ಉಬ್ಬಿಸಿ ಅವನನ್ನು ನೋಡಲಾರಂಭಿಸಿದಳು.
ಸದೂ ತಟ್ಟೆ ತಂದ. “ಊಟ ಮಾಡ್ತೀಯಾ?”
ಕಾಲು ಅಪ್ಪಳಿಸಿ ಅವಳು ಜೋರು-ಜೋರಾಗಿ ಗೋಣು ಅಲುಗಿಸಿದಳು. ಅದನ್ನು ಕಂಡು ಸದೂನಿಗೆ ನಗು ಬಂತು. ಆದರದು ಕ್ಷಣಮಾತ್ರ. ಅವಳತ್ತ ನಿರ್ಲಕ್ಷ್ಯ ಮಾಡಿ ಅವನು ಊಟ ಮಾಡಲಾರಂಭಿಸಿದ. ಅವಳಿಗೆ ಬುದ್ಧಿಮಾತು ಹೇಳಲು ಅವನಿಗೆ ಸಮಯವಿರಲಿಲ್ಲ ಮತ್ತು ಇಚ್ಛೆಯೂ ಇರಲಿಲ್ಲ. ಒಂದು ಅನಾಮಿಕ ಭೀತಿಯು ಮುತ್ತಿಕೊಂಡಿತು. ಗಂಟಲಲ್ಲಿ ತುತ್ತೂ ಇಳಿಯುತ್ತಿರಲಿಲ್ಲ. ಒಂದಿಷ್ಟು ತಿಂದು ಅವನು ಊಟದ ಡಬ್ಬಿ ರೆಡಿಮಾಡಿಕೊಂಡ.
ಅವನು ಗಮನಿಸದೇ ಇರುವುದು ಕಂಡು ಅವಳು ಒಂದೊಂದೇ ಬಟ್ಟೆ ಧರಿಸಲಾರಂಭಿಸಿದಳು. ಕಳೆದ ಕೆಲವು ದಿನಗಳಿಂದ ಅವನಲ್ಲಾದ ಬದಲಾವಣೆಯು ಅವಳ ಮನಕ್ಕಲ್ಲದಿದ್ದರೂ ದೇಹಕ್ಕೆ ಅರಿವಾಗಲಾರಂಭಿಸಿತು. ಆ ದಿನವಂತೂ ಅವಳೇ ಸ್ವತಃ ಅವನ ಮೇಲೆ ಎರಗಿದ್ದಳು. ಅವನು ಬಳಿಗೂ ಕರೆದುಕೊಂಡಿದ್ದ. ಆದರೆ ಅನಂತರ ಮಾತ್ರ ಒಮ್ಮೆಲೆ ದೂರ ತಳ್ಳಿ, ಅವನು ಶಾಂತವಾಗಿ ಬೀಡಿ ಸೇದಲಾರಂಭಿಸಿದ್ದ. ಅವಳು ಮಳೆಯು ಅರೆಬರೆಯಾಗಿ ಪ್ರಹಾರ ಮಾಡಿದ ಬಳ್ಳಿಯಂತೆ ಥರಥರ ನಡುಗಲಾರಂಭಿಸಿದ್ದಳು. “ಇವನು ಹೀಗೇಕೆ ವರ್ತಿಸುತ್ತಾನೆ. ಇವನಿಗೇನಾಗಿದೆ?” ಎಂಬ ಪ್ರಶ್ನೆಯು ಅವಳ ಮನದೊಳಗೆ ಮೂಡುತ್ತಿರಲಿಲ್ಲ. ಆದರೆ ಅವಳ ನಿರಾಕರಿಸಲಾಗುತ್ತಿರುವ ಸುಖಕ್ಕಾಗಿ ಸದೂನ ಮೇಲೆ ಸಿಟ್ಟು ಬರುತ್ತಿತ್ತು.
ಮರುದಿನ ಅವಳಿಗೆ ಏನು ಅನಿಸಿತೋ ಯಾರಿಗ್ಗೊತ್ತು. ಮುಖಕ್ಕೆಲ್ಲ ಪೌಡರ್ ಮೆತ್ತಿಕೊಂಡು ಅವನ ಬಳಿಗೆ ಬಂದಳು. ಆಗವನು ಮತ್ತಷ್ಟು ಸಿಟ್ಟಿಗೆದ್ದ. ಬಚ್ಚಲಿಗೆ ಎಳೆದೊಯ್ದು ಅವಳ ಮುಖವನ್ನು ಗಸಗಸನೇ ತಿಕ್ಕಿ ತೊಳೆದಿದ್ದ.
ಸದೂ ಹೊತ್ತಿಸಿದ ಈ ರುಚಿ ಇಡೀ ದೇಹವನ್ನು ದಹಿಸುವಂತೆ ಮಾಡಿತ್ತು. ಅವನನ್ನು ಬಿಟ್ಟು ಅವಳಿಗೆ ಇರುವುದೇ ಸಾಧ್ಯವಿರಲಿಲ್ಲ. ಸದೂ ಕೀಲಿ ಹಾಕಿ ಹೊರಗೆ ಹೋದ ಬಳಿಕ, ಅವಳು ಕಿಟಕಿಯ ಬಳಿ ನಿಂತು ಹೋಗಿ-ಬರುವ ಗಂಡಸರತ್ತ ಆಸೆಗಣ್ಣು ಬೀರುತ್ತಿದ್ದಳು. ಆ ದಿನ ರಂಗೂ ಬನಿಯ ಮನೆಯಿಂದ ಹೊರಬಿದ್ದಾಗ, ಅವನತ್ತ ನೋಡಿ ಅವಳು ನಕ್ಕಳು. ಹೊಸ ಹಕ್ಕಿ ನೋಡಿ ರಂಗೂ ಸನಿಹ ಬಂದಾಗ ಅವಳಿಗೆ ಖುಷಿಯಾಯಿತು. ಆದರೆ ಅವಳ ನೋಟದಿಂದ ಸೋರುವ ಕಾಮವಾಸನೆ ಮತ್ತು ಬಾಯಿಂದ ಸುರಿಯುವ ಜೊಲ್ಲು ಕಂಡು ಪರಾರಿಯಾಗಿದ್ದ.
ಸದೂ ಹೊರಟಾಗ ಅವಳು ತಗಡಿನ ಡಬ್ಬಿಯನ್ನು ಹೊರಗೆಳೆದಳು.
“ಈಗ ಅದೆಲ್ಲ ಹೊರಗೆ ಹಾಕಬೇಡ. ಯಾರದನ್ನು ಜೋಡಿಸಿಡುವವರು? ನಾನು ಕೆಲಸಕ್ಕೆ ಹೊರಟೆ.”
ಆಗವಳು ಸಿಟ್ಟಿನಿಂದ ಟ್ರಂಕ್‌ನ್ನು ಮಂಚದ ಕೆಳಗೆ ದೂಡಿದಳು. ಮುಖ ಉಬ್ಬಿಸಿ ಅವನನ್ನು ನೋಡಲಾರಂಭಿಸಿದಳು.
ಸದೂ ಹೊರಗೆ ಹೋಗಿ ಕೀಲಿ ಹಾಕಿದ ಸುಳಿವು ಸಿಕ್ಕಾಗ ಅವಳು ಮತ್ತೆ ಟ್ರಂಕ್ ಎಳೆದಳು. ಒಂದೊಂದೇ ವಸ್ತುವನ್ನು ಹೊರಗೆ ತೆಗೆದಳು. ಅದರಲ್ಲಿ ಎಷ್ಟೋ ತುಂಡಾದ ಸರಗಳಿದ್ದವು, ಮಣಿಗಳಿದ್ದವು. ಬಳೆ, ಪಿನ್ನು, ಟಿಕಿಟ್, ರಿಬ್ಬನ್, ಹುಂಚಿಪಕ್ಕಾ, ನುಣುಪು ಕಲ್ಲುಗಳ ಸಂಸಾರವನ್ನು ಒಟ್ಟು ಮಾಡಿದ್ದಳು - ಅವಳು. ಅವುಗಳಲ್ಲಿ ಹಲವು ವಸ್ತುಗಳನ್ನು ಸದೂ ಅವಳಿಗಾಗಿ ತಂದಿದ್ದ. ಇಂಥ ರಂಗುರಂಗಿನ ಕನಸನ್ನು ತರುವ ಸದೂನ ಹಾದಿಯನ್ನು ಅವಳು ಅದೆಷ್ಟು ಆತುರತೆಯಿಂದ ಹಾದಿಕಾಯುತ್ತಿದ್ದಳು! ಆಗವಳಿಗೆ ಅವನು ಇಷ್ಟವಾಗುತ್ತಿದ್ದ. ಈಗಂತೂ ಅದಕ್ಕಿಂತ ಹೆಚ್ಚು ಇಷ್ಟವಾಗಲಾರಂಭಿಸಿದ. ಅವಳು ಖುಷಿಯಿಂದ ನಕ್ಕಳು. ಹರಿದು ತುಂಡಾದ ಮಣಿಸರವನ್ನು ಅವಳು ಜೋಡಿಸುವ ಪ್ರಯತ್ನ ಮಾಡಲಾರಂಭಿಸಿದಳು.
* * *
ಸದೂ ಕೆಲಸಕ್ಕೆ ಬಂದ. ಆದರೆ ಅವನ ಲಕ್ಷ್ಯ ಕೆಲಸದ ಮೇಲಿರಲಿಲ್ಲ. ಯಂತ್ರದ ಗರಗರ ಸದ್ದಿನಿಂದ ಅವನ ತಲೆ ಮತ್ತಷ್ಟು ಸಿಡಿಯತೊಡಗಿತು. ಆಗಾಗ ನಡು-ನಡುವೆ ರಮೆಯ ನೆನಪಾಗುತ್ತಿತ್ತು. ಗರಗರ ಎನ್ನುವ ಯಂತ್ರದಿಂದ ಅವಳು ಅವನ ಸುತ್ತಲೂ ಗಿರಕಿ ಹೊಡೆಯುತ್ತಿದ್ದಳು. ರಮೆ... ರಮೆ.... ರಮೆ ನಾಲ್ಕು ದಿಕ್ಕಿನಿಂದಲೂ ರಮಾಳ ಪ್ರತಿಮೆಯು ಸುತ್ತುಹಾಕುತ್ತಿತ್ತು. ಅವನ ಬದಿಗೆ-ಬದಿಗೆ ಸರಿಯುತ್ತಿತ್ತು. ಅದರ ಕೈಗಳ ನೇಣು ಅವನ ಕುತ್ತಿಗೆಯ ಸುತ್ತಲೂ ಬಿಗಿಯಲಾರಂಭಿಸಿತ್ತು.
ತನ್ನ ಯಂತ್ರದ ಕೆಲಸ ನೋಡಿಕೊಳ್ಳುವಂತೆ ಅವನು ಗಣಪತಿಗೆ ಹೇಳಿ ಹೊರಬಂದ. ಕ್ಯಾಂಟೀನ್‌ಗೆ ಹೋಗಿ ಒಂದು ಮೂಲೆಯ ಟೇಬಲ್ ಮೇಲೆ ಕೂತು ಉಳಿದ. ಕಣ್ಣುಬಿಗಿಯಾಗಿ ಮುಚ್ಚಿ ರಮಾಳನ್ನು ಕಣ್ಣಿಂದ ದೂರ ಸರಿಸುವ ಪ್ರಯತ್ನ ಮಾಡಿದ. ತಲೆ ಸಿಡಿತ ಹೆಚ್ಚಾದಾಗ, ಅವನು ಒಂದು ಗ್ಲಾಸು ನೀರು ಕುಡಿದ. ಆದರೆ ಮತ್ತಷ್ಟು ಹೊಟ್ಟೆ ತೊಳೆಸಿದಂತಾಯಿತು. ಬೆರಳು ಹಾಕಿ ವಾಂತಿ ಮಾಡಬೇಕೆಂದೆನಿಸಿತು. ಅದು ಮತ್ತಷ್ಟು ಜಡವಾಗಲಾರಂಭಿಸಿತು. ಹೊರಬೀಳಲು ದಾರಿ ಸಿಗದಂತಾಯಿತು.
ಊಟದ ಸಮಯವಾದಾಗ, ಕ್ಯಾಂಟೀನ್‌ನಲ್ಲಿ ಸಂದಣಿ ಹೆಚ್ಚಾಯಿತು. ಗಣಪತಿ ಎದುರಿಗೆ ಬಂದು ಕೂತ. ಸದೂ ಕೆಲಸವನ್ನು ಅರ್ಧಕ್ಕೇ ಬಿಟ್ಟುಬಂದಾಗಲೇ ಗಣಪತಿಯ ಕಂಗಳಲ್ಲಿ ಪ್ರಶ್ನೆ ಮೂಡಿತು. ಆದರೆ ಅವನ ಬಳಿ ಉತ್ತರವಿರಲಿಲ್ಲ. ಅವನೇನು ಹೇಳಬಹುದು?
“ಊಟ ಮಾಡೋದಿಲ್ವೇ?”
“ಹಸಿವೆಯೇ ಇಲ್ಲ. ಹೊಟ್ಟೆ ತೊಳೆಸಿದಂತಾಗುತ್ತಿದೆ.”
“ಹಾಗಾದರೆ ಕೆಲಸಕ್ಕೆ ಏಕೆ ಬಂದೆ? ರಜೆ ಹಾಕಬಹುದಾಗಿತ್ತಲ್ಲ?”
ಅವನು ಕೇವಲ ನಸುನಕ್ಕ. ಅವನು ಮನೆಯಲ್ಲಿ ಕೂತು ಮಾಡುವದಾದರೂ ಏನು? ರಮೆಯ ಹುಚ್ಚು ಕಾಮುಕ ಲಂಪಟತನದಲ್ಲಿ ತನ್ನನ್ನು ಸಿಕ್ಕಿಸಿಕೊಳ್ಳುವುದೇ ಅಥವಾ ಆ ನರಕದಿಂದ ಹೊರಬೀಳಲೆಂದು ಚಡಪಡಿಸಲಿದ್ದನೇ? ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತಾಗಿತ್ತು ಅವನಿಗೆ. ಅದರಿಂದ ಹೊರಬರುವ ಮಾರ್ಗ ಸಿಗುತ್ತಿರಲಿಲ್ಲ. ಹೇಗೆ-ಹೇಗೆ ಹೆಚ್ಚು ಅವನು ಯೋಚಿಸುತ್ತಿದ್ದನೋ ಅಷ್ಟೇ ಹೆಚ್ಚು ಅವನು ಸಿಕ್ಕಿಬೀಳಲಾರಂಭಿಸಿದ, ಈ ಕಪ್ಪು ವರ್ತುಲದೊಳಗೆ. ಒಂದೆಡೆ ರಮೆಯ ಉನ್ಮಾದದಿಂದ ಕೂಡಿದ ದೇಹ ಮತ್ತು ಬೇರೊಂದೆಡೆ ಈಗ ಮತ್ತೆ ಹೊಸದಾಗಿ ಬಿದ್ದ ಒಗಟು. ಇದಿರಂದ ಅವನು ಹೇಗೆ ಹೊರಬೀಳುವುದು ಸಾಧ್ಯ?
“ಹೊಟ್ಟೆ ತೊಳೆಸಿದರೆ ಬೆರಳು ಹಾಕಿ ಬಾಯಿಂದ ಹೊರಹಾಕು. ಆಗ ಸಮಾಧಾನವಾಗಬಹುದು.”
ಸದಾ ಎದ್ದು ಹೊರಗೆ ಹೋದ. ವಾಂತಿ ಮಾಡಿ ಹೊಟ್ಟೆ ಖಾಲಿಯಾಗಿದ್ದರೂ, ಮನಸ್ಸು ಮಾತ್ರ ರಿಕ್ತಗೊಂಡಿರಲಿಲ್ಲ. ಮುಕ್ತವಾಗದೆ ಹೋದರೆ ತಲೆ ಗಿರಗಿರ ಸುತ್ತುವುದು ನಿಲ್ಲುವುದು ಸಾಧ್ಯವಿರಲಿಲ್ಲ. ಆದರೆ ಗಣಪತಿಯ ಮುಂದೆ ಹೇಳಿ ಮುಕ್ತಗೊಳ್ಳಬೇಕೆಂದು ಅನಿಸುತ್ತಿರಲಿಲ್ಲ. ಗಣಪತಿಯಷ್ಟೇ ಅಲ್ಲ, ಬೇರೆ ಯಾರೂ ಆತ್ಮೀಯರಿರಲಿಲ್ಲ ಇಂಥ ದೊಡ್ಡ ನಗರದಲ್ಲಿ. ಇದ್ದರೂ ಇದನ್ನು ಬೇರೆಯವರ ಮುಂದೆ ಹೇಳುವುದಾದರೂ ಹೇಗೆ?
ಅರ್ಧ ದಿನದ ರಜೆ ಹಾಕಿ ಸದೂ ಹೊರಬಿದ್ದ. ಇಷ್ಟು ಬೇಗ ಮನೆಗೆ ಹೋಗುವ ಇಚ್ಛೆ ಅವನಿಗಿರಲಿಲ್ಲ. ಅವನು ನಿತ್ಯದ ಬಸ್‌ಸ್ಟಾಪಿಗೆ ಹೋಗದೇ ಅವನು ತಿರುಗಾಡುತ್ತ, ತಿರುಗಾಡುತ್ತ ಒಂದು ಗಾರ್ಡನ್ ಬಳಿಗೆ ಬಂದ. ಹಾಗೆ ಸಂಜೆ ಮುಸುಕಿರಲಿಲ್ಲ. ಆದರ ಗಾರ್ಡನ್‌ನಲ್ಲಿ ಜನಸಂಚಾರವಿರಲಿಲ್ಲ. ಆಟವಾಡುತ್ತಿರುವ ಮಕ್ಕಳನ್ನು ಕರಕೊಂಡು ಅವರ ತಾಯಿ-ತಂದೆಯರು ಯಾವಾಗಲೋ ಹೋಗಿದ್ದರು. ಈಗ ಉಳಿದವರೆಂದರೆ ಈ ನಗರದಲ್ಲಿ ಏಕಾಂತ ಹುಡುಕುವ ಜೋಡಿಗಳು. ಅವರೂ ಸಹ ಮುಂದಿನ ಭೇಟಿಯ ಭರವಸೆ ನೀಡುತ್ತ, ಕೈಯನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತ ಹೊರಬೀಳುತ್ತಿದ್ದರು.
ಒಂದು ಖಾಲಿ ಬೆಂಚು ನೋಡಿ ಸದೂ ತಳವೂರಿದ. ಬೀಡಿ ಹೊತ್ತಿಸಿ ಆ ಅಧೀರ-ಕುತೂಹಲಕಾರಿ ಮುಖವನ್ನು ದಿಟ್ಟಿಸಿದ. ಹಾಗೆ ನೋಡಿದರೆ ಕೈ-ಕೈ ಹಿಡಿದು ತಿರುಗಾಡುವ ನನ್ನ ದಿನಗಳು ಹೆಚ್ಚು ಅಲ್ಲದಿದ್ದರೂ ನಾಲ್ಕು ಜನರಂತೆ ಕನಸನ್ನು ನಾವೂ ಕಾಣಬಹುದಾಗಿತ್ತು. ಪ್ರಾಯಃ ಮದುವೆಯಾಗಿ ಸಂಸಾರವನ್ನೂ ಆರಂಭಿಸಬಹುದಾಗಿತ್ತು. ಆದರೆ ಅಮ್ಮ ರಮೆಯ ಮದುವೆಯ ಕನಸು ಕಾಣಲಾರಂಭಿಸಿದ್ದಳು. ಅವಳ ಮದುವೆ ಆದ ಹೊರತು ತನ್ನ ಮದುವೆಯನ್ನು ಮಾಡುವಂತಿರಲಿಲ್ಲ ಅವಳಿಗೆ. ಹುಚ್ಚಿ ರಮೆಗಾಗಿ ವರನನ್ನು ಹುಡುಕಲು ಇಡೀ ಆಯುಷ್ಯವನ್ನೇ ಕಳೆಯಬೇಕಾಯಿತು. ಊರ ಜನರು ಚೇಷ್ಟೆ ಮಾಡಿದರು. ತಾನೂ ಔಡಲಗಿಡದಂತೆ ಬೆಳೆದೆ. ಅವಳೇನೋ ಹೋದಳು. ಆದರೆ ಕೊರಳಿಗೆ ಈ ಹುಚ್ಚಿಯನ್ನು ಕಟ್ಟಿಹೋದಳು. ಈಗ ಈ ಲೊಡ್ನಿಯ ಜೊತೆಗೆ ಯಾವ ಹೆಣ್ಣು ತನ್ನನ್ನು ಮದುವೆಯಾಗುತ್ತಾಳೆ? ಈಗೀಗ ನೆಂಟರಿಷ್ಟರೂ ಯಾವ ಹುಡುಗಿಯನ್ನೂ ಸೂಚಿಸುತ್ತಿಲ್ಲ. ರಮೆಯಿರದೇ ಹೋಗಿದ್ದರೆ ತಾನು ಇಷ್ಟರೊಳಗೆ ಒಬ್ಬ ಮಗುವಿನ ತಂದೆಯಾಗಿಬಿಡುತ್ತಿದ್ದೆ. ನಿಟ್ಟುಸಿರುಬಿಡುತ್ತ ಅವನು ಬೀಡಿ ಆರಿಸಿದ. ಒಂದು ಮಗುವಿನ ತಂದೆ! ಅವಳಿಲ್ಲದಿದ್ದರೆ ಏಕೆ! ಅವಳಿದ್ದಾಗಲೇ ಆಗಲಿ ಈಗ!
ಅವನು ನಡುಗಿದ. ಮೈ ಕೊಡವಿ ಅವನು ಮತ್ತೊಂದು ಬೀಡಿ ಹೊತ್ತಿಸಿದ. ಮೈಮೇಲೆ ಹರಿದಾಡುವ ಹುಳ ಕೊಡಹುವಂತೆ ಅವನು ಯೋಚನೆಯನ್ನು ಕೊಡಹಿ ಅವಸರದಿಂದ ಬೀಡಿಯ ಝಾರ್ಕಿ ಎಳೆಯಲಾರಂಭಿಸಿದ.
ಸುತ್ತಮುತ್ತ ಶಾಂತವಾದಾಗ, ಏಕೋ ಭೀತಿ ಎನ್ನಿಸತೊಡಗಿತು. ಈಗ ಅವನ ಬಳಿಯಿರುವ ಬೀಡಿಯ ಬಂಡಲ್ ಮುಗಿದಿತ್ತು. ಸದೂ ಎದ್ದ. ಎಲ್ಲೇ ಹೋದರೂ ಎಲ್ಲೇ ನಿಂತರೂ ಕೊನೆಗೆ ಮನೆಗಂತೂ ಹೋಗಲೇಬೇಕಿತ್ತು.
ಅವನು ಮನೆಗೆ ಬಂದಾಗ ಹತ್ತು ಹೊಡೆದು ಹೋಗಿತ್ತು. ಕೀಲಿಯನ್ನು ತೆರೆಯುವಾಗ ತಾನು ಕೆಲಸಕ್ಕೆ ಹೋಗುವಾಗ ದೀಪ ಹಚ್ಚದೇ ಹೋಗಿರುವುದು ಗಮನಕ್ಕೆ ಬಂತು. ಈ ಕತ್ತಲೆಯಲ್ಲಿ ರಮಾ ಹೇಗೆ ಸುಮ್ಮನೆ ಕೂತಿರಬಹುದು?
ಅವನು ಲೈಟ್ ಹಚ್ಚಿ ಸರಸರ ಮನೆಯೊಳಗೆಲ್ಲ ನೋಟ ಹರಿಯಿಸಿದ. ಒಂದು ಮೂಲೆಯಲ್ಲಿ ಮುದುಡಿ ಕೂತ ರಮಾಳ ಕಣ್ಣು ಬೆದರಿದ ಹರಿಣದಂತೆ ಫಡಫಡಿಸಿತು. ಎಷ್ಟೋ ಹೊತ್ತಿನ ಬಳಿಕ ಉರಿವ ಈ ಬೆಳಕನ್ನು ಅವಳು ರೂಢಿ ಮಾಡಿಕೊಂಡಳು. ಬಳಿಕ ಆಕ್ರಾಂತ ಮಾಡುತ್ತ ಅವಳು ಸದೂನನ್ನು ತಬ್ಬಿಕೊಂಡಳು. ಅವನಿಗೆ ಕ್ಷಣಕಾಲ ಕೆಡುಕೆನಿಸಿತು. ಬೆನ್ನು ನೇವರಿಸುತ್ತ ಹೇಳಿದ, “ಇಂದು ಮರೆತೆಬಿಟ್ಟೆ. ಹೆದರಿದೆಯಾ?”
ಗೋಣು ಹಾಕುತ್ತ ಅವಳು ಅವನ ಎದೆಯೊಳಗೆ ಹುದುಗಿದಳು. ಆಗ ಸದೂ ಅವಳನ್ನು ಬಿಗಿಯಾಗಿ ತಬ್ಬಿಕೊಂಡ. ಅವಳು ಒಳಗೆ-ಒಳಗೆ ನುಗ್ಗುತ್ತ ಸುರಕ್ಷಿತ ಜಾಗವನ್ನು ಹುಡುಕುತ್ತಿದ್ದಳು. ಅವಳನ್ನು ಆವೇಗದಿಂದ ಬಳಿಗೆಳೆದುಕೊಂಡು ಸದೂ ಮಂಚದ ಮೇಲೆ ಉರುಳಿಕೊಂಡ. ಆಗವಳು ಗೊಕ್ಕನೆ ನಕ್ಕಳು. ಇಡೀ ದೇಹದ ಮೇಲೆಲ್ಲ ಅವನ ಬೆರಳು ಓಡಾಡುತ್ತಿತ್ತು. ಅವಳು ಸುಖದಿಂದ ನರಳಿದಳು. ಆಗ ಗಕ್ಕನೆ ಸದೂ ನಿಂತ. ಅವಳ ಹೊಟ್ಟೆಯ ಗೋಲಾಕಾರ ಸದೂನ ಬೆರಳ ಮೇಲೆ ಮೂಡಲಾರಂಭಿಸಿತು. ವಿದ್ಯುತ್ತಿನ ಆಘಾತವಾದವನಂತೆ ಸದೂ ಎದ್ದು ಗಕ್ಕನೆ ಕುಳಿತ. ಅವಳನ್ನು ತಳ್ಳಿ ಅವನು ಬಚ್ಚಲಿಗೆ ಹೋದ. ಎಂಥದೋ ಹೊಲಸು ಅಂಟಿಕೊಂಡವನಂತೆ ಅವನು ಕೈಯನ್ನು ದಿಟ್ಟಿಸಿದ. ಬಳಿಕ ಸಾಬೂನಿನಿಂದ ತಿಕ್ಕಿ ಕೈಕಾಲು ತೊಳೆದುಕೊಂಡ.
ಅವಳ ಅಚ್ಚರಿಯ, ಆದರೆ ಮುದುಡಿದ ಕಣ್ಣುಗಳನ್ನು ನಿರ್ಲಕ್ಷಿಸಿ ಅವನು ಸ್ವೌ ಹೊತ್ತಿಸಿದ. ಊಟ ಬಿಸಿ ಮಾಡಿ ಅವಳ ಮುಂದೆ ತಟ್ಟೆಯಿರಿಸಿದ. ಆಗ ರಮಾ ಚಡಪಡಿಸಿ ಎದ್ದಳು. ದಿನವಿಡೀ ಹಸಿದ ಹೊಟ್ಟೆಯ ಬೆಂಕಿ ತಣ್ಣಗಾದರೂ, ದೇಹ ಶಾಂತವಾಗಿರಲಿಲ್ಲ.
ಎಲ್ಲ ಕೆಲಸ ಮುಗಿಸಿ, ಸದೂ ಅವಳ ಹಾಸಿಗೆ ಹಾಸಿದ. ಮುನಿದ ರಮೆಯನ್ನು ಮಲಗಿಸಿ ದೀಪ ಆರಿಸಿದ. ಕಿಟಕಿ ತೆರೆದು ಅವನು ಅಲ್ಲೇ ನಿಂತ. ಬೆಳ್ಳಗಿನ ಬೆಳ್ದಿಂಗಳಲ್ಲಿ ಇಡೀ ವಸತಿ ತೊಯ್ದಿತ್ತು. ಆ ಬೆಳ್ದಿಂಗಳಿನ ಒಂದು ಬೆಳಕು ಅವನ ಮನೆಯವರೆಗೂ ಚಾಚಿಕೊಂಡಿತ್ತು. ರಮೆಯ ಶುಭ್ರಮುಖ ಮತ್ತಷ್ಟು ಮೋಹಕವಾಗಿ ಕಾಣಿಸುತ್ತಿತ್ತು.
ಅವನು ಅರಿವಿಲ್ಲದೆ ರಮೆಯ ಬಳಿಗೆ ಬಂದ. ಅವಳ ಗಲ್ಲವನ್ನು ನೇವರಿಸಿದ. ಕಣ್ಣು ಮುಚ್ಚಿದ ರಮೆ ಅವನ ಕೈಯನ್ನು ಗಟ್ಟಿಯಾಗಿ ಹಿಡಿದಳು. ಅದನ್ನು ಮೈಮೇಲೆ ಸುತ್ತಾಡಿಸಿದಳು. ಸದೂ ಕ್ಷಣಕಾಲ ನಡುಗಿದ. ಬಳಿಕ ಕೈಬಿಡಿಸಿಕೊಂಡು ಅಲ್ಲಿಂದೆದ್ದ. ದೇಹದಲ್ಲೆದ್ದ ವೇದನೆಯನ್ನು ತುಟಿಯಿಂದ ಹತ್ತಿಕ್ಕಿ ಅವನು ಮತ್ತೆ ಕಿಟಕಿಯ ಬಳಿಗೆ ಹೋದ. ಬಿರುಗಾಳಿಯನ್ನು ಬೆನ್ನಿಗೆ ನಿಲ್ಲಿಸಿ ಅವನು ನಿಂತಿರುವುದೇನೋ ನಿಜ. ಆದರೆ ಬಿರುಗಾಳಿ ಭೋರ್ಗರೆಯುತ್ತ ಮುಂದಕ್ಕೆ ಎರಗಿತು ಮತ್ತು ಅಸ್ತವ್ಯಸ್ತ ದೇಹದ ಸಮತೋಲ ತಪ್ಪಿತು. ಈ ಬಿರುಗಾಳಿಯಲ್ಲಿ ದಾರಿ ತಪ್ಪಿದ ಹಡಗಿಗೆ ಮಾರ್ಗ ತೋರಿಸುವ ದೀಪಸ್ತಂಭವಾಗಿರಲಿಲ್ಲ ಅವನು. ಹೀಗಾಗಿ ಪ್ರಾಯಶಃ ಆ ಅಲೆಯ ಮೇಲಿಂದ ತೇಲುತ್ತ ಹೋದ. ಬಳಿಕ ಕಣ್ಣು ಮುಚ್ಚಿದ. ರಮೆಯ ಮುಖದ ಮೇಲೆ ಮೂಡಿದ ಸುಖಕರವಾದ ವೇದನೆಯು ಬಿರುಗಾಳಿಯ ಮಳೆಯ ಜೊತೆಗೆ ಯಾವಾಗ ಹರಿದುಹೋಯಿತು ಎಂಬುದು ಅವನ ಅರಿವಿಗೆ ಬರಲೇ ಇಲ್ಲ.
ಸದೂ ಮತ್ತೊಮ್ಮೆ ಆ ಗಲಿತಗಾತ್ರ ದೇಹದ ಬಗೆಗೆ ಹೇಸಿಗೆಪಡುತ್ತ ಹಾಸಿಗೆಯ ಮೇಲೆ ಉರುಳಿದ. ಛಾವಣಿಯ ಮೇಲೆ ವಿಲವಿಲ ಚಲಿಸುವ ಹಲ್ಲಿಯ ಬಾಲವನ್ನು ಕಣ್ಣುಮುಚ್ಚಿ ಕಣ್ಣಿಂದ ಮರೆ ಮಾಡಿದ. ಆದರೆ ಮನದ ಕನ್ನಡಿ ಮಾತ್ರ ಹೇಸಿಗೆ ಎನಿಸುವ ಆ ಸಂಭೋಗ ಮಾಡುತ್ತಲೇ ಇತ್ತು. ನಾಚಿಕೆಯಿಂದ ಅವನು ತಲೆದಿಂಬಿನಲ್ಲಿ ತನ್ನ ಮುಖ ಹುದುಗಿಸಿದ. ಆಗ ರಾತ್ರಿ ಏರುತ್ತಲೇ ಸಾಗಿತ್ತು.
* * *
ಒಂದು ಅಪರಿಚಿತ ಊರಿನ ಬಳಿ ಬಸ್ ನಿಂತಿತು. ಅವನು ಶಾಶ್ವತವಾಗಿ ರಮೆಯನ್ನು ಊರಿಗೆ ಕರೆದುಕೊಂಡು ಹೊರಟಿದ್ದ. ಆದರೆ ಈ ಊರು ದಾರಿಯಲ್ಲಿರುವುದು ಅವನಿಗೆ ಗೊತ್ತಿಲ್ಲ. ಅವನು ಕೆಳಗಿಳಿದು ಮೂತ್ರಾಲಯ ಹುಡುಕಲಾರಂಭಿಸಿದ. ಸನಿಹದ ನಾಲ್ಕಾರು ಮನೆಗಳ ಆಚೆಗೆ ಬಟಾಬಯಲು ಪಸರಿಸಿತ್ತು. ಡ್ರೈವರ್‌ನಿಗೆ ಹೇಳಿ ಅವನು ಸ್ವಲ್ಪ ಮುಂದೆ ಹೋದ. ಬೆಳೆದ ಗಿಡಮರಗಳ ಆಚೆ ಒಂದು ಹೊಂಡದ ಬಳಿಗೆ ನಿಂತ. ಹೊಂಡದಲ್ಲಿ ಮಲಗಿದ್ದ ನಾಯಿಗಳು ನೀರು ಬಿದ್ದಾಕ್ಷಣ ಎಚ್ಚೆತ್ತವು. ಎದ್ದು ನಿಂತುಕೊಂಡವು. ಆಗ ಸದೂನಿಗೆ ನಂಬಿಕೆಯಾಗಲಿಲ್ಲ.
“ರಮಾ, ನೀನು ಇಲ್ಲಿ? ಈ ಹೊಂಡದಲ್ಲಿ ಏನು ಮಾಡುತ್ತಿದ್ದೀಯಾ? ನೀನು ಬಸ್‌ನಲ್ಲಿ ಕೂತಿದ್ದೆಯಲ್ಲವೇ?”
“ನಾನು ಬಸ್‌ನಲ್ಲಿ ಕೂತು ಎಲ್ಲಿಗೂ ಬರೋದಿಲ್ಲ! ಇದೇ ಮನೆ ನನಗೆ ಇಷ್ಟವಾಗಿದೆ. ನೀನೇ ಅಲ್ಲವೇ ನನ್ನನ್ನು ಇಲ್ಲಿಗೆ ತಂದಿದ್ದು. ನಾನು ಅದೆಷ್ಟು ಶಾಂತವಾಗಿ ಮಲಗಿದ್ದೆ ಗೊತ್ತೇ. ನೀನೇ ಬಂದು ಮೈಮೇಲೆ ಹೊಲಸು ಚೆಲ್ಲಿದೆ. ಹೀಗೇಕೆ ಮಾಡಿದೆ ಸದೂ ನೀನು? ಬೇರೆ ಜಾಗವಿರಲಿಲ್ಲವೇ ನಿನಗೆ? ಇಲ್ಲೇ, ನಮ್ಮ ಮನೆಯಲ್ಲೇ.... ತಂಗಿಯ ಮೈಮೇಲೆ.... ಮೈಲಿಗೆಯಾಯಿತೋ ಮೈಲಿಗೆ...”
ಸದೂನಿಗೆ ಎಚ್ಚರವಾದಾಗ ಮೈ ಬೆವರಿತ್ತು. ಹೊರಗೆ ಬೆಳಕು ಹರಿದಿತ್ತು. ಮತ್ತು ರಮಾ? ಅವಳು ಹಾಯಾಗಿ ಮಲಗಿದ್ದಳು. ಈ ಎಲ್ಲ ಅರಿವಿನಿಂದ ದೂರ, ಶಾಂತ.
* * *
ಹೊರಗೆ ಆಗಸ ತುಂಬಿಕೊಂಡಿತ್ತು. ಆದರೂ ಮಳೆ ಸುರಿಯುವ ಹಾಗೆ ಕಾಣಿಸುತ್ತಿರಲಿಲ್ಲ. ಮೈಯೆಲ್ಲ ಉರಿ-ಉರಿ ಬೆಂಕಿ. ಬೆವರಿನಿಂದ ಜೀವ ಕಸಿವಿಸಿಗೊಳ್ಳಲಾರಂಭಿಸಿತ್ತು. ಪತ್ರಿಕೆಯಿಂದ ಗಾಳಿ ಹಾಕಿಕೊಳ್ಳುತ್ತ ಸದೂ ಮಂಚದ ಮೇಲೆ ಉರುಳಿಕೊಂಡಿದ್ದ. ಕಳೆದ ಎರಡು ತಿಂಗಳಿಂದ ನಿತ್ಯನೇಮದಿಂದ ನಡೆದ ರಮೆಯ ಸ್ನಾನದ ಆಟ ಇಂದಿಗೂ ಶುರುವಿತ್ತು. ನೀರಿನೊಂದಿಗೆ ಚೆದುರಿದ ಅವಳ ನಗೆಯನ್ನು ನಿರ್ಲಕ್ಷಿಸಿ ಅವನು ಕಣ್ಣುಮುಚ್ಚಿದ್ದ. ಮಲಗಿದರೂ ನಿದ್ದೆ ಬರುತ್ತಿರಲಿಲ್ಲ. ದಿನೇ-ದಿನೇ ಬೆಳೆಯುತ್ತ ಹೊರಟ ರಮೆಯ ದೇಹದ ಗೋಲಾಕಾರ ಅವನ ಕಣ್ಣನ್ನು ಕಾದ ಸಲಾಕೆಯಿಂದ ಚುಚ್ಚಿದಂತೆನಿಸುತ್ತಿತ್ತು.
ಇಲ್ಲಿ ವಾಸಿಸಲು ಬಂದಾಗಿನಿಂದ ಅವನು ನೆರೆಯವರೊಂದಿಗೆ ಹೆಚ್ಚು ಸಂಬಂಧ ಬೆಳೆಸಿರಲಿಲ್ಲ. ಅವನು ಬೇರೆಯವರ ಮನೆಗೂ ಹೋಗುತ್ತಿರಲಿಲ್ಲ. ಕೇವಲ ಹೋಗಿ-ಬರುವಾಗ ಮಾಡುವ ನಮಸ್ಕಾರದಿಂದಲೇ ಅವನು ಸಂತೃಪ್ತನಾಗಿದ್ದ. ಆದರೆ ಈಗ ಚಾಳಿನಲ್ಲಿ ಹಿಗ್ಗಿದ ಕುತೂಹಲದ ಕಣ್ಣುಗಳಿಂದ ಕಿಟಕಿಯಲ್ಲಿ ನಿಲ್ಲುವ ರಮೆ ಹಾಗೂ ಅವಳ ಹೊಟ್ಟೆಯನ್ನು ಮುಚ್ಚಿಡುವುದು ಸಾಧ್ಯವಿರಲಿಲ್ಲ, ವಿಶೇಷವಾಗಿ ಅವನು ಕೆಲಸಕ್ಕೆ ಹೋದ ಬಳಿಕ. ಹೀಗಾಗಿ ಕಳೆದ ಎರಡು ವಾರಗಳಿಂದ ಅವನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ. ಹೊರಗೂ ಹೋಗುತ್ತಿರಲಿಲ್ಲ. ಹೋದರೆ ಉಪ್ಪು-ಮೆಣಸು ತರಲು, ಅದೂ ರಮೆ ಮಲಗಿದಾಗ. ರಮೆಯ ಜೊತೆಗೆ ಅವನು ತನ್ನನ್ನು ಬಂಧಿಸಿಕೊಂಡಿದ್ದ. ಅವಳಿಗಂತೂ ತಪ್ಪಿಯೂ ಕಿಟಕಿಯ ಬಳಿಗೆ ಹೋಗಲು ಅವಕಾಶ ಕೊಡುತ್ತಿರಲಿಲ್ಲ. ಈಗ ಅವನು ಕಿಟಕಿಗೆ ದಪ್ಪ ಪರದೆಯನ್ನು ತಂದು ತೂಗು ಹಾಕಿದ್ದ. ಕೇವಲ ಮೇಲುಭಾಗವನ್ನು ಮಾತ್ರ ಖಾಲಿಬಿಟ್ಟಿದ್ದ. ಅಲ್ಲಿಂದ ಆಗಸದ ತುಣುಕು ಮಾತ್ರ ಕಾಣಿಸುತ್ತಿತ್ತು. ಕೆಲವು ನೀಲಿ, ಕೆಲವು ಸಹ ಮೋಡ ಕವಿದದ್ದು, ಮತ್ತೆ ಕೆಲವು ಹೊಂಬಣ್ಣದ ಅಸ್ತ, ಮತ್ತೆ ಕೆಲವು ಮಳೆಯ ಮೋಡ ಮುಸುಕಿದ್ದು, ಮಳೆಯ ಸುಳಿವು ನೀಡುವ ಆ ಆಗಸದ ತುಣುಕು ಮಳೆಯನ್ನು ಮಾತ್ರ ತರುತ್ತಿರಲಿಲ್ಲ. ಅವನಿಗೆ ಆ ಆಗಸದ ತುಣುಕಿನಲ್ಲೇ ಅವನ ವಿಶ್ವ ವ್ಯಾಪಿಸಿಕೊಂಡಿತ್ತು. ಅದೂ ಸಹ ಹೀಗೆ ನಿರ್ದಯದಂತೆ ವರ್ತಿಸುತ್ತಿತ್ತು.
ದೇಹವು ಕಾದ ಕುಲುಮೆಯಾಗಲಾರಂಭಿಸಿದಾಗ ಅವನಿಗೆ ಆ ಬಾಗಿದ ಆಗಸವನ್ನು ಭೇದಿಸಬೇಕೆಂದೆನಿಸುತ್ತಿತ್ತು. ಕತ್ತರಿ ತಗೊಂಡು ನಡುನಡುವೆ ಕತ್ತರಿಸಿಬಿಡಬೇಕು ಮತ್ತು ಒಳಗೆ ತುಂಬಿಕೊಂಡಿರುವ ನೀರಿನ ಅಲೆ ಮೈಮೇಲೆ ಸುರಿದುಕೊಂಡು ಜೀವವನ್ನು ಶಾಂತಗೊಳಿಸಬೇಕು ಎಂದೆನಿಸುತ್ತಿತ್ತು. ನಿಜವಾಗಿಯೂ ಮತ್ತೊಮ್ಮೆ ಆಗಸದ ಹೊಟ್ಟೆಗೆ ಗುದ್ದು ಹಾಕಲೇ ಆ ದಿನ ಹೊಡೆದಂತೆ. ಎಂಟು ದಿನಗಳ ಹಿಂದೆ ಸದೂನಿಗೆ ಹೀಗೇ ಅನಿಸಿತ್ತು. ಮೊದಲ ಬಾರಿಗೆ ಮನೆಯಲ್ಲಿ ಮಲಗಿ-ಮಲಗಿ ಅವನಿಗೆ ಬೇಸರ ಬಂದಿತು. ಹೊರಗೆ ಹೋಗಬೇಕೆಂದರೆ ನಾಲ್ಕು ಜನರ ಕಣ್ಣುಗಳ ಪ್ರಶ್ನೆಯು ದೇಹವನ್ನು ಇರಿಯುತ್ತಿತ್ತು. ಕಂಪನಿಯವರಿಗೆ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿದ್ದ. ಯಾರಾದರೂ ಭೇಟಿಯಾಗಲು ಬಂದರೆ, ರಮಾಳನ್ನು ಒಳಗೆ ಕೂಡಿಹಾಕಿ, ಇರಾನಿಯ ಹೋಟೆಲಿಗೆ ಹೋಗುತ್ತಿದ್ದ. ಇದಿಷ್ಟೇ ಬದಲಾವಣೆ ಆ ರೋಸಿದ ದಿನಗಳದ್ದು. ಆದರೆ ಇಂಥ ಪ್ರಸಂಗ ಅಪರೂಪಕ್ಕೆ ಬರುತ್ತಿತ್ತು. ಕಳೆದ ಎರಡು-ಮೂರು ದಿನಗಳಿಂದಂತೂ ಸ್ವತಃ ತನ್ನನ್ನೇ ಕತ್ತಲೆಯಲ್ಲಿ ಕೂಡಿ ಹಾಕಿದ್ದ. ಮನಸ್ಸು ಕಕ್ಕಾವಿಕ್ಕಿಯಾಗಿತ್ತು. ಆಗಲೇ ಅವನಿಗೆ ಕಾರ್ಮೋಡದ ಬಗೆಗೆ ಸಿಟ್ಟು ಬಂತು ಅವನಿಗೆ. ಆ ಮೋಡಗಳನ್ನು ಚಿಂದಿ ಚಿಂದಿ ಮಾಡಬೇಕೆಂದೆನಿಸಿತು. ಆ ನಂತರವಾದರೂ ಸುರಿದು ಈ ಬೆವರು ಬಿಟ್ಟ ಅಂಟು ಆಯುಷ್ಯದ ಮೇಲೇರಿದ ಈ ಕತ್ತಲೆಯ ಹಕ್ಕಳೆಯನ್ನಾದರೂ ಆಕಾಶ ತೊಳೆದುಬಿಡಬಹುದು. ಒಂದೋ ಅದರ ಒಂದೊಂದೇ ಪದರವನ್ನು ಹರಿಯಬೇಕು, ಇಲ್ಲದಿದ್ದರೆ ಬಿರುಸಾಗಿ ಅದರ ಹೊಟ್ಟೆಗೆ ಗುದ್ದು ಹಾಕಬೇಕು.
ಅದೇ ಕಾಲಕ್ಕೆ ಅವನ ಗಮನವು ಸ್ನಾನ ಮುಗಿಸಿ ಕನ್ನಡಿಯಲ್ಲಿ ತನ್ನ ಬೆತ್ತಲೆ ದೇಹವನ್ನು ನೋಡುವ ರಮೆಯತ್ತ ಹೋಯಿತು. ಮುಂದೆ ಬಂದ ಹೊಟ್ಟೆಯಿಂದಾಗಿ ರಮೆಯು ವಿಕಾರವಾಗಿ ಕಾಣಿಸಲಾರಂಭಿಸಿದಳು. ಆ ಹೊಟ್ಟೆಗೂ ಆಕಾರ ನೀಡಬೇಕಾಗಿತ್ತು. ಆಕರ್ಷಕ, ಸುಂದರ. ಪುನಃ ಮತ್ತೊಮ್ಮೆ ಇದು ಒಳಗೆ ಹೋಯಿತೆಂದರೆ ರಮೆಯು ಮತ್ತೇ ಮೊದಲಿನಂತೆ ಮೋಹಕವಾಗಿ ಕಾಣಬಹುದು. ಈ ಪರಿಶುದ್ಧ ಭೂಮಿಯ ಮೇಲೆ ಅವನು ಧಬೆಧಬೆಯಂತೆ ಕುಸಿಯುತ್ತಿದ್ದ. ಆದರೆ ಕುಸಿಯುವಾಗ ಪ್ರವಾಹದೊಳಗೆ ಸಿಕ್ಕಿಬೀಳುತ್ತಿದ್ದ, ಒದ್ದಾಡುತ್ತಿದ್ದ. ಇದೇ... ಇದೇ ಪ್ರಚಂಡ ಬಂಡೆಗಲ್ಲಿನ ಬಳಿ, ತನ್ನ ಹಾದಿಯಿಂದ ಈ ಬಂಡೆಯನ್ನು ಬದಿಗೆ ಸರಿಸಲೇಬೇಕು. ಮತ್ತೊಮ್ಮೆ ಮೊದಲಿನಂತೆ ಮುಕ್ತ-ಮುಕ್ತವೆನಿಸಬೇಕು. ಮತ್ತದೇ ಹಳೆಯ ಸಪಾಟ ಹೊಟ್ಟೆ. ಈ ಹೊಟ್ಟೆಯಲ್ಲಿ ಸಂಗ್ರಹಗೊಂಡ ನೀರು ಸುರಿಯಲೇ ಬೇಕು. ಕತ್ತರಿಯಿಂದ ಇದನ್ನು ಪರಪರ ಹರಿಯಲೇಬೇಕು. ಇಲ್ಲದೇ ಹೋದರೆ ಈ ಮಣಭಾರದ ಹೊರೆ ತನ್ನ ಜೀವನದ ಮೇಲಿಂದ ಕೆಳಗಿಳಿಯಲಾರದು. ಒಮ್ಮೆ ಅವಳು ಮತ್ತೆ ಮೊದಲಿನಂತಾದರೆ, ಅವಳನ್ನು ಕಣ್ಣಿಗೆ ಚುಚ್ಚದಂತೆ ರೆಪ್ಪೆಯೊಳಗೆ ಮುಚ್ಚಿಕೊಳ್ಳಬಹುದು.
ಈ ಯೋಚನೆಯಿಂದ ಸದೂ ಅಸ್ವಸ್ಥನಾಗುತ್ತಲೇ ಹೋದ. ಅವನಿಗೆ ಅರಿವಿಲ್ಲದೇ ಅವನು ದಿಗ್ಗನೆ ಎದ್ದು ಕೂತಿದ್ದ. ಕನ್ನಡಿಯ ಮುಂದೆ ವೈಯಾರ ಮಾಡುವ ರಮೆಯನ್ನು ಸರ‍್ರನೆ ಎಳೆದು ಕೆಳಗೆ ಬೀಳಿಸಿದ. ಗುದ್ದು ಹೊಡೆದು-ಹೊಡೆದು ಅವನು ದಣಿದರೂ ಮೋಡ ಮಾತ್ರ ಹರಿದಿರಲಿಲ್ಲ. ದೇಹ ದಣಿದಾಗ ಮಾತ್ರ ರಮೆಯ ನರಳಿಕೆ ಅವನ ಕಿವಿಗೆ ತಲುಪಿತು. ಅವಳ ಕಂಗಳಲ್ಲಿ ಹರಿಯುವ ವೇದನೆಯನ್ನು ನೋಡಿ ಅವನು ಚಡಪಡಿಸಿದ. ತದನಂತರ ಅದೆಷ್ಟೋ ಹೊತ್ತು ಅವಳ ಹೊಟ್ಟೆಯ ಮೇಲೆ ಕೈಯಾಡಿಸುತ್ತಲೇ ಇದ್ದ. ಅವಳನ್ನು ತಬ್ಬಿ ಹಿಡಿದು ತಟ್ಟುತ್ತಲೇ ಉಳಿದ. ಬಳಿಕ ದಣಿದ ದೇಹದಿಂದ ಮೋಡದ ಬದಲು ಅವನೇ ಅವಳ ಗದ್ಗದದಿಂದ ನಡುಗುವ ದೇಹದ ಬಳ್ಳಿಯ ಮೇಲೆ ಕುಸಿದಿದ್ದ.
ಈಗಲೂ ಆ ಮೋಡದ ಹೊಟ್ಟೆಗೆ ಗುದ್ದು ಹಾಕಬೇಕೆಂದೆನಿಸಿತು. ಆದರೆ ಬರೇ ಗುದ್ದು ಹೊಡೆತದಿಂದ ಈ ಆಕಾಶ ಕುಸಿಯುವಂತಹದಲ್ಲ. ಇದರ ಎದೆಯ ಮೇಲೆ ಕೂತು ಕತ್ತರಿಸಿ ಸೀಳಬೇಕು ಆರುಪಾರು. ಅಂದಾಗಲೇ ಅವನಿಗೆ ಬೇಕಾದ ಮಳೆಯ ರಕ್ತಕಾರಂಜಿ ಚಿಮ್ಮಲಿತ್ತು.
ಸದೂ ಚಡಪಡಿಸಿ ಎದ್ದ. ಒದ್ದೆ ಹೆಜ್ಜೆಯನ್ನು ಮೂಡಿಸುತ್ತ ಸುತ್ತು ಹೊಡೆಯುವ ರಮೆಯನ್ನು ಅವನು ಬಳಿಗೆ ಎಳೆದ. ಸದೂನ ಕ್ರೂರ ಮುಖ ನೋಡಿ ರಮೆ ಕಿರುಚಿದಳು. ಆದರೆ ಅವಳ ಧ್ವನಿಯು ಹೊರಬೀಳುವ ಮೊದಲೇ ಸದೂ ಅವಳ ಬಾಯಿಯನ್ನು ಕೈಯಿಂದ ಮುಚ್ಚಿದ.
“ಸ್ವಲ್ಪ ಹೊತ್ತು ಸಹಿಸಿಕೋ ರಮಾ. ಒಮ್ಮೆ ನೀನು ಮೊದಲಿನಂತೆ ಆದೆ ಎಂದರೆ, ಆಗ ನೋಡು ಹೇಗೆ ಧಾರಾಕಾರ ಮಳೆ ಸುರಿಯುತ್ತದೆ ಎಂದು. ಆಗ ಪ್ರತಿದಿನ ಮಧ್ಯಾಹ್ನ ಮೈಮೇಲೆ ತಣ್ಣೀರು ಸುರಿದುಕೊಳ್ಳಬೇಕಾದ ಪ್ರಸಂಗವೇ ಬರಲಾರದು. ನಿನ್ನ ಹೊತ್ತಿಯುರಿವ ಮೈಮೇಲೆ ಮಳೆಯೇ ಮಳೆ ಬೀಳಲಿದೆ ನಮ್ಮ ಮನೆಯೊಳಗೆ.... ತಂಪಾದ ಮಳೆ.... ತಂಪು ತಂಪಾದ ಮಳೆ...” ಸದೂ ನಗುತ್ತಲಿದ್ದ. ಹೊಟ್ಟೆಗೆ ಗುದ್ದು ಹೊಡೆದರೂ ಅದು ಮೊದಲಿನಂತೆ ಆಗಲಿಲ್ಲ. ಆಗವನು ಅವಳ ಹೊಟ್ಟೆಯ ಮೇಲೆ ಕೂತ. ರಮೆ ಕಿರುಚಿದಳು. ಆಗವನು ಹೇಳಿದ. “ಬರೇ ಸ್ವಲ್ಪ ಹೊತ್ತು. ಮತ್ತೆ ಮೊದಲಿನಂತೆ ಸಪಾಟು ಮಾಡಿಬಿಡುತ್ತೇನೆ ನೋಡು.”
ಆದರೆ ಅದು ಸಪಾಟಾಗುವ ಬದಲು, ಅವನೇ ಅತಿ ದೊಡ್ಡ ಅಲೆಯ ಮೇಲಿಂದ ಜಾರಿ ಬೀಳುವಂತೆ ಹೊಯ್ದಾಡಲಾರಂಭಿಸಿದ. ಅಲೆಗಳು ದೊಡ್ಡದಾದಂತೆ ಅವನು ಸಂಪೂರ್ಣ ಒದ್ದೆಯಾಗಿಬಿಟ್ಟ. ಕೊನೆಗೆ ಗಲಿತಗಾತ್ರಗೊಂಡು ಅವಳ ಪಕ್ಕದಲ್ಲಿ ಉರುಳಿಕೊಂಡ.
ರಮೆಯ ಚಲನೆಯಿಲ್ಲದಿರುವುದು ಕಂಡು ಅವನು ಹೆದರಿದ. ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ತಾನು ಇದೇನು ಮಾಡಿದೆ? ಯಾರನ್ನು ಕರೆಯಲಿ? ಏನು ಮಾಡಲಿ? ಅವನು ಬಕೆಟ್ ತುಂಬ ನೀರು ತಂದು ಸುರಿದ-ಅವಳ ತಲೆಯ ಮೇಲೆ. ಮೂಗಿಗೆ ಜಜ್ಜಿದ ಉಳ್ಳಾಗಡ್ಡೆಯ ವಾಸನೆ ಕೊಟ್ಟು ನೋಡಿದ. ಆಗ ರಮೆಯ ಬಾಯಿಂದ ನೊರೆ ಹೊರಬಂದು ಅವಳು ನರಳಲಾರಂಭಿಸಿದಳು. ಆಗವನು ಸುಧಾರಿಸಿಕೊಂಡ. ಅವಳನ್ನು ಹಾಗೆ ಬಿಟ್ಟು ಅವನು ಮಂಚದ ಮೇಲೆ ಉರುಳಿಕೊಂಡ. ಆದರೆ ದಣಿದ ದೇಹಕ್ಕೆ ನೆಮ್ಮದಿಯಿರಲಿಲ್ಲ. ಕಸಿವಿಸಿ ಹೆಚ್ಚಾಗಿ ಅವನು ನೇರವಾಗಿ ಬಚ್ಚಲಿಗೆ ನುಗ್ಗಿದ. ಅವನು ನೀರಿನ ಬಕೆಟ್ಟನ್ನು ತಲೆಗೆ ಸುರಿದುಕೊಂಡ. ಒದ್ದೆ ಹೆಜ್ಜೆಯನ್ನಿಡುತ್ತ ಅವನು ಹೊರಗೆ ಬಂದ. ಆಗ ಅವನ ನೋಟಕ್ಕೆ ಮ್ಲಾನಳಾದ, ಬೆತ್ತಲೆಯಾದ ರಮೆ ಬಿದ್ದಳು. ಬಳಿಕ ದಡಪಡಿಸುತ್ತಲೇ ಹರಿದುಹೋದ ಮತ್ತೊಮ್ಮೆ ಆ ಪ್ರವಾಹದೊಳಗೆ.
* * *
ಇನ್ನೂ ಮಳೆಯ ಸುಳಿವಿರಲಿಲ್ಲ. ಸದೂ ಈ ಮನೆಗೆ ಬಂದು ಇಂದಿಗೆ ಮೂರು ವಾರಗಳು ಕಳೆದಿದ್ದವು. ರಮೆ ಸ್ನಾನ ಮುಗಿಸಿ ಬಂದರೆ ಸಾಕು ಸದೂನಿಗೆ ಮೋಡದ ನೆನಪಾಗುತ್ತಿತ್ತು. ಮತ್ತು ಧೋ-ಧೋ ಎಂದು ಸುರಿದು ಮುಕ್ತಗೊಳಿಸುವ ಮಳೆಯದು. ಆದರೆ ಮೋಡ ಮಾತ್ರ ನಿರ್ವಿಕಾರವಾಗಿತ್ತು.
ಇಂದೂ ಸದೂ ತೀರ ಅಸ್ವಸ್ಥಗೊಂಡಿದ್ದ. ಕಳೆದ ಎರಡು ದಿನಗಳಿಂದ ರಮೆ ಸ್ನಾನ ಮಾಡಿರಲಿಲ್ಲ. ಇವಳು ಸ್ನಾನಕ್ಕೆ ಹೆದರಿದಳೋ ಹೇಗೆ? ಕಳೆದ ಎರಡು ದಿನಗಳಿಂದ ಅವನ ಎದುರಿಗೂ ಬಂದಿರಲಿಲ್ಲ. ಬೆದರಿದ ಕಂಗಳಿಂದ, ಅವನ ಚಹರೆಯಲ್ಲಾಗುವ ಕ್ಷಣಕ್ಷಣದ ಬದಲಾವಣೆಯನ್ನು ನೋಡುತ್ತ ಒಂದು ಮೂಲೆಯಲ್ಲಿ ಕೂತಿದ್ದಳು. ಅವಳ ಊಟ-ತಿಂಡಿಯ ಮೇಲಿನ ಇಚ್ಛೆ ಸಹ ಸತ್ತಿತ್ತು, ವಿರಕ್ತಿಯಿಂದಲೋ ಅಥವಾ ಭಯದಿಂದಲೋ, ದೇವರಿಗೇ ಗೊತ್ತು. ಆದರೆ ಸದೂನ ತಾಳ್ಮೆ ಮಾತ್ರ ಈಗ ಸಡಿಲಾಗಿತ್ತು. ರಮೆಯ ಹೊಟ್ಟೆ ಮೊದಲಿನಂತೆ ಆದರೆ, ಅವನು ಮತ್ತೆ ಮೊದಲಿನಂತೆ, ಮುಕ್ತ ಮನದಿಂದ, ನಿರಾಳವಾಗಿ ಕಂಪನಿಯ ಕೆಲಸಕ್ಕೆ ಹೋಗಲಿದ್ದ. ಮತ್ತೊಮ್ಮೆ ಅನುಭವಿಸಲಿದ್ದ ಆ ಹಳೆಯ ಸ್ವಚ್ಛಂದ ಜೀವನ. ಈ ಕೊಂಡವಾಡೆಯಲ್ಲಿದ್ದು ಆ ಕತ್ತಲೆಯ ಬಾವಿಯ ತಳಕ್ಕೆ ಹೋಗುವ ಮನಸ್ಸಿರಲಿಲ್ಲ. ಎಂಥದೇ ಪರಿಸ್ಥಿತಿಯಲ್ಲಿ ಅವನು ಈ ಬಾವಿಯಿಂದ ಹೊರಬೀಳಲಿದ್ದ.
ಇಂದವನು ರಮೆಯು ಸ್ನಾನ ಮಾಡುವಂತೆ ಮಾಡಲು ಬಯಸಿದ್ದ. ಅವನು ಬಕೇಟ್ ತುಂಬ ನೀರು ತುಂಬಿಟ್ಟ. ಮಣೆಯನ್ನಿರಿಸಿದ. ರಮೆಯ ಬಳಿಗೆ ಹೋದ. ಅವನ ಕಣ್ಣೊಳಗಿನ ಆ ವಿಚಿತ್ರ ಹೊಳಪು ಕಂಡು ರಮೆ ಮೈಮುದುಡಿಕೊಂಡಳು. ಆಗ ಅವನು ನಕ್ಕ. “ಸ್ನಾನ ಮಾಡೋದಿಲ್ಲವೇ ರಮಾ? ಹೊರಗೆ ಬಿಸಿಲೇರಿದೆ, ಬಾ” ರಮೆ ಗೋಣಿನಿಂದಲೇ ಇಲ್ಲವೆಂದು ಹೇಳಿ ಮೂಲೆಗೆ ಸರಿದಳು. ಆಗವನು ಸಿಟ್ಟಿಗೆದ್ದ. ಅವನ ಹುಚ್ಚುನಗೆ ಮರೆಯಾಗಿ ಕಣ್ಣು ಕ್ರೂರವಾದವು. ರಮೆಯ ಒಂದೊಂದೇ ಬಟ್ಟೆಯನ್ನು ಮೈಮೇಲಿಂದ ಕಿತ್ತೆಸೆದು ಅವನು ಅವಳನ್ನು ಬಚ್ಚಲಿಗೆ ತಳ್ಳಿದ. ಅವಳ ಕೈಗೆ ನೀರು ತುಂಬಿದ ತಂಬಿಗೆಯನ್ನು ನೀಡಿದ. ಆದರೆ ರಮಾ ಹೊಟ್ಟೆಯ ಮೇಲಿನ ಗಾಯದ ಮೇಲೆ ಕೈಯಾಡಿಸುತ್ತಾ ಹಾಗೇ ಕೂತುಳಿದಳು.
ಸದೂ ಸಿಟ್ಟಿನಿಂದ ಒಂದೊಂದೇ ತಂಬಿಗೆ ನೀರು ಅವಳ ತಲೆಯ ಮೇಲೆ ಸುರಿದ. ಆಗ ರಮೆ ನಡುಗಿದಳು. ಅವಳ ಮೈ ಕಂಪಿಸಿದ್ದು ಕಂಡು ಸದೂನಿಗೆ ನಗೆಯುಕ್ಕಿತು. ಅದು ಮನೆ ತುಂಬೆಲ್ಲ ಚೆಲ್ಲಾಡಿತು.
ಭೀತಿಯಿಂದಾಗಿ ರಮೆಯ ಬಾಯಿಯಿಂದ ನೊರೆ ಹೊರ ಬಂದಿತು. ಆದರೆ ಸದೂ ಇಂದು ಆ ಮೋಡದ ಪರದೆಯನ್ನು ಛೇದಿಸಲು ಬಯಸಿದ್ದ. ಗುದ್ದಿನ ಮೇಲೆ ಗುದ್ದು, ಬಳಿಕ ಅವಳ ಮೇಲೆ ಕುಸಿಯುವ ಸದೂ. ರಮೆ ವೇದನೆಯಿಂದ ಗಡಗಡ ಉರುಳಾಡಲಾರಂಭಿಸಿದಳು. ಆಗ ಸದೂನ ಕೈಗೆ ಹತ್ತಿತು ಮಳೆಯ ತಂಪು ನೀರು. ಸದೂ ಕಣ್ಣರಳಿಸಿ ತನ್ನ ಒದ್ದೆಯಾದ ಕೈಯನ್ನು ನೋಡಿದ. ಬಳಿಕ ಮೋಡದ ಕಡೆಗೆ. ಕಡುಕಪ್ಪು ಮೋಡದಿಂದ ಸುರಿದ ಈ ಕಡುಕೆಂಪಾದ ಮಳೆಯನ್ನು ಕಂಡು ಅವನು ಕ್ಷಣ ಹೊತ್ತು ಗಲಿಬಿಲಿಗೊಂಡ. ಬಳಿಕ ಒಗಟು ಬಿಡಿಸಿದಂತೆ ಎಲ್ಲವೂ ಅವನಿಗೆ ಅರ್ಥವಾಯಿತು. ಈ ಮಳೆಯು ಅವನಿಗೆ ಬೇಕಾಗಿತ್ತು. ಪುನಃ ಮತ್ತೊಮ್ಮೆ ರಮೆಯ ಮುಟ್ಟು ಶುರುವಾಗಿತ್ತು.
ಅವನ ಅರಳಿದ ಕಂಗಳಲ್ಲಿ ಒಂದು ನಿಗೂಢ ಆನಂದದ ಕಾರಂಜಿಯು ಮೂಡಿತು. ರಕ್ತಸಿಕ್ತಗೊಂಡ ಎರಡೂ ಕೈಗಳನ್ನು ರಮೆಯ ಮುಂದೆ ಚಾಚಿ ಅವನು ಹೇಳಿದ,
“ರಮಾ, ಮಳೆ ಬಂತು ನೋಡು. ಮೋಡ ಮುಕ್ತಗೊಂಡಿತು. ಈಗ ನಿನ್ನ ಹೊಟ್ಟೆಯೂ ಸಹ ಪುನಃ ಮತ್ತೊಮ್ಮೆ ಹಗುರವಾಗುತ್ತದೆ. ತೀರ ಮೆತ್ತಗೆ, ಮೊದಲಿನಂತೆ.” ಅವನು ನಕ್ಕ. ಆದರೆ ಈ ನಗು ಪರಿಶುದ್ಧವಾದ ಮುಕ್ತ ನೀರಿನಂತಿರಲಿಲ್ಲ. ಅದು ಕದಡಿ ಕೆಸರುಮಯವಾಗಿತ್ತು, ಅವನ ಮನೆಯೊಳಗೆ ಹರಿವ ನೀರಿನ ಅಲೆಯಂತೆ.
ಸದೂ ರಮೆಯ ನರಳುವ ನಿಸ್ತೇಜ ಚಹರೆಯ ಮುಂದೆ ಕೈಒಡ್ಡಿ ಕುಣಿಯುತ್ತಿದ್ದ. ಒಂದು ಅಘೋರಿ ಸಮಾಧಾನದಲ್ಲಿ ಅವನು ಮೈಮರೆತಿದ್ದ.
ಹೊರಗೆ ನರಳುತ್ತ ಖೇದಪಡುತ್ತ ಸುರಿಯುವ ಮಳೆಯ ಆಗಮನದಿಂದ ಸಂತೋಷಗೊಂಡ ಹುಡುಗರು ಕೂಗಿ-ಕೂಗಿ ಹರ್ಷವನ್ನು ವ್ಯಕ್ತಮಾಡಿದರು. ಆಗ ಸದೂವಿನ ಬಾಯಿಂದ ಸಿಡಿದ ನಗು ಮನೆತುಂಬ ಸಿಂಪಡಿಸಿದಂತೆ ಚೆಲ್ಲಿ, ಅದರಲ್ಲಿ ರಮೆಯ ತೇಕುವ ದೇಹ ಒದ್ದೆಮುದ್ದೆಯಾಯಿತು.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.