ಆರುಷಿ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಳು. ಮನಸ್ಸಿನಲ್ಲಿ ಬೇಡಿಕೊಳ್ಳುವುದೇನೋ ಬೇಡಿಕೊಂಡು ಬಿಟ್ಟಿದ್ದಳು. ಆದರೆ ನಂತರ ತಾನು ಹಾಗೆ ಬೇಡಿಕೊಂಡಿದ್ದು ನಿಜವಾಗಿ ಬಿಟ್ಟರೆ ಎಂಬ ಅಳುಕು ಕಾಡತೊಡಗಿ ಒಳಗೊಳಗೆ ಭಯದಲ್ಲಿ ನವೆಯತೊಡಗಿದಳು.
ಆರುಷಿ ಚಿಕ್ಕವಳಿದ್ದಾಗಿನಿಂದಲೂ ಅಷ್ಟೇ. ಏನನ್ನಾದರೂ ಬೇಡಿಕೊಳ್ಳುವುದು ಮತ್ತು ಹಾಗೆ ಬೇಡಿಕೊಂಡಿದ್ದಕ್ಕಾಗಿ ಪರಿತಪಿಸುವುದು ನಡೆಯುತ್ತಲೇ ಇತ್ತು. ಅವಳು ಏನನ್ನಾದರೂ ಮನಸ್ಸಿಟ್ಟು ಬೇಡಿಕೊಂಡರೆ ಈಡೇರಿಬಿಡುತ್ತಿತ್ತು. ಹದಿನೈದು ಕಿಲೊಮೀಟರ್ ದೂರದ ಹೈಸ್ಕೂಲಿಗೆ ಹೋಗುವಾಗ ಅವಳಿಗೆ ಮೊಟ್ಟಮೊದಲು ಈ ವಿಷಯ ಅರಿವಾಗಿತ್ತು. ಅಂದು ಅವಳಿಗೆ ತಿಂಗಳ ಮಾಮೂಲು. ಆ ದಿನವೇ ಬಸ್ ಸಿಕ್ಕಾಪಟ್ಟೆ ರಷ್. ಶಾಲೆಯಲ್ಲಿ ಇಂಗ್ಲೀಷ್ ಟೀಚರ್ ಪೋಯೆಮ್ ಬಾಯಿಪಾಠ ಮಾಡಿರಲಿಲ್ಲ ಎಂದು ಎದ್ದುನಿಲ್ಲಿಸಿದ್ದರು. ಯಾರಿಗೆ ಆರಾಂ ಇರುವುದಿಲ್ಲವೋ ಅಂತಹ ಹುಡುಗಿಯರು ಕುಳಿತುಕೊಳ್ಳಬಹುದು ಎಂದು ಮೊದಲೇ ಹೇಳಿರುತ್ತಾರಾದರೂ ತನಗೆ ಎದ್ದು ನಿಲ್ಲಲು ಆಗುವುದಿಲ್ಲವೆಂದರೆ ಎಲ್ಲರಿಗೂ ಡಂಗುರ ಸಾರಿದಂತೆಯೇ. ಗಂಡುಮಕ್ಕಳಂತೂ ಥೇಟ್ ಕಪಿಗಳು. ಗುಟ್ಟು ತಿಳಿದವರಂತೆ ಮುಸುಮುಸು ನಗುವುದು ಹುಡುಗಿಯರಿಗೆ ಗೊತ್ತಾಗಿಬಿಡುತ್ತಿತ್ತು. ಹೀಗಾಗಿ ಏನನ್ನೂ ಹೇಳದೆ ಬಹುಳಷ್ಟು ಹುಡುಗಿಯರು ನಿಂತುಬಿಡುವಂತೆ ಆರುಷಿಯೂ ನಿಂತುಬಿಟ್ಟಿದ್ದಳು. ಆದರೆ ಬಸ್‌ನಲ್ಲಿ ಸೀಟ್ ಇಲ್ಲವೆಂದು ಅರಿವಾದಾಗ ಪೂರ್ತಿ ಬಸವಳಿದಿದ್ದಳು. ತನಗೆ ನಿಲ್ಲಲು ಸಾಧ್ಯವೇ ಇಲ್ಲವೆನ್ನಿಸಿ ಅಲ್ಲಿಯೆ ಕುಳಿತವನೊಬ್ಬ ಜಾಗ ಬಿಟ್ಟುಕೊಡಬಾರದೇ ಎಂದು ಬೇಡಿಕೊಂಡಿದ್ದಳು. ಅವಳ ಆಶ್ಚರ್ಯಕ್ಕೆಂಬಂತೆ ಆತ ಎದ್ದು ಅವಳಿಗೆ ಕುಳಿತುಕೊಳ್ಳಲು ಹೇಳಿದ್ದ. ಅರೆ, ನಾನು ಬೇಡಿಕೊಂಡಿದ್ದು ಇಷ್ಟು ಬೇಗ ಈಡೇರಿತಲ್ಲ ಎಂದು ನಿಶ್ಚಿಂತೆಯಿಂದ ಕುಳಿತವಳು ಮಾರನೆಯ ದಿನ ಗೆಳತಿಯರಿಗೆ ಹೇಳಿದ್ದಳು. ಅವರು ಹೋಗೇ, ನಿನ್ನ ಮುಖ ನೋಡಿದ್ರೆ ಈಗ್ಲೋ ಆಗ್ಲೋ ಬಿದ್ದುಬಿಡ್ತೀಯಾ ಅನ್ನೋ ಹಾಗೆ ಕಾಣ್ತಿತ್ತು. ಅದಕ್ಕೇ ಅವನು ಸೀಟ್ ಬಿಟ್ಟುಕೊಟ್ಟಿದ್ದಾನೆ ಎಂದುಬಿಟ್ಟಿದ್ದರೂ ಆರುಷಿಗೆ ಮಾತ್ರ ತನ್ನೊಳಗೊಂದು ಅವ್ಯಕ್ತ ಶಕ್ತಿಯಿದೆಯೆಂಬುದು ದೃಢವಾಗಿಹೋಗಿತ್ತು. ಸುಸ್ತಾಗಿದೆಯೆಂದು ಮನೆಗೆ ಹೋಗಿ ಮಲಗಿದವಳಿಗೆ ಇಂಗ್ಲೀಷ್ ಪೋಯೆಮ್ ಬಾಯಿಪಾಠ ಮಾಡಲು ಮರೆತುಹೋಗಿ, ಇಂಗ್ಲೀಷ್ ಟೀಚರ್ ಇಂದು ಶಾಲೆಗೆ ಬರದಂತೆ ಮಾಡಪ್ಪ ಎಂದು ಬೆಳಿಗ್ಗೆನೇ ಮನಸ್ಸಿನಲ್ಲಿ ಶಿವನನ್ನು ಬೇಡಿಕೊಂಡಿದ್ದಳು. ಶಾಲೆಯಲ್ಲಿ ಆ ದಿನ ಟೀಚರ್ ಬಂದಿಲ್ಲದೇ ಇರುವುದು ತನ್ನ ಪ್ರಾರ್ಥನೆಗೆ ಅಂತಹುದ್ದೊಂದು ಶಕ್ತಿಯಿದೆಯೆಂದು ನಂಬಲು ಅವಳಿಗೆ ಸಾಕಾಗಿತ್ತು. ಗೆಳತಿ ಸನ್ಮಿತಾ ಟೀಚರ್‌ಗೆ ಮೂರು ದಿನ ಟ್ರೈನಿಂಗ್ ಅಂತೆ. ನಿನ್ನ ಪ್ರಾರ್ಥನೆ ಏನಲ್ಲಾ ಬಿಡು ಎಂದು ಇವಳ ಹೆಮ್ಮೆಗೆ ಮುಳ್ಳು ಚುಚ್ಚುವ ಪ್ರಯತ್ನಮಾಡಿದರೂ ತಾನು ಬೇಡಿಕೊಂಡಿದ್ದಕ್ಕೇ ಅವರಿಗೆ ಟ್ರೈನಿಂಗ್ ಬಂದಿದೆ. ಇಲ್ಲದಿದ್ದರೆ ಈಗಲೇ ಯಾಕೆ ಬರಬೇಕಿತ್ತು. ಏನಾದರಾಗಲಿ, ಅವರು ಬರುವುದರೊಳಗೆ ಪೋಯೆಮ್ ಬಾಯ್‌ಹಾರ್ಟ್ ಮಾಡಿಬಿಡಬೇಕು ಎಂದು ತನ್ನ ಮೂಗಿಗೆ ತಾನೇ ತುಪ್ಪ ಸುರಿದುಕೊಂಡಿದ್ದಳು.
ಕಥೆ ಅಲ್ಲಿಗೇ ಮುಗಿದಿರಲಿಲ್ಲ. ಕೊಕೋ ಎಂದರೆ ಆರುಷಿಗೆ ಪಂಚಪ್ರಾಣ. ಎಂದೂ ಶಾರ್ಟ್ಸ್ ಹಾಕಿ ಹೊರಹೋಗಲು ಬಿಡದ ಅಮ್ಮ ಕೊಕೋ ಆಡುವಾಗ ಸುಮ್ಮನಿರುತ್ತಿದ್ದಳು. ಅದಲ್ಲದೆ ಬೇರೆ ಯಾವ ಆಟವಾದರೂ ಇಷ್ಟಪಡದ ಅಮ್ಮನಿಗೆ ಆ ಆಟ ಇಷ್ಟ ಎನ್ನುವುದೂ ಮುಖ್ಯ ಕಾರಣವಾಗಿತ್ತು. ಅಂದು ಶಾಲೆಯ ಟೀಮ್ ಸೆಲೆಕ್ಷನ್. ಆರುಷಿಗೆ ಭಯ. ಅವಳಿಗೆಷ್ಟು ಆಟ ಇಷ್ಟವೆಂದರೂ ಅವಳಿಗಿಂತ ಚಂದ ಆಡುವ ಬಹಳಷ್ಟು ಹುಡುಗಿಯರಿದ್ದುದು ಅವಳಿಗೆ ತಿಳಿಯದ ವಿಷಯವೇನಾಗಿರಲಿಲ್ಲ. ಹೀಗಾಗಿ ಟೀಂನಲ್ಲಿ ಅವಳು ಇರಬೇಕೆಂದರೆ ಆ ದಿನ ಕೌಸ್ತುಭ ಹಾಗೂ ಗೌತಮಿ ಆಟವಾಡಬಾರದಿತ್ತು. ಅವರಿಬ್ಬರು ಆಡದಿದ್ದರೆ ನನಗೆ ಛಾನ್ಸ್ ಸಿಗುತ್ತದೆ ಎಂದು ಬೇಡಿಕೊಂಡವಳಿಗೆ ಒಂದಿಷ್ಟು ನಿರಾಸೆ ಹಾಗೂ ಖುಷಿ ಎರಡೂ ಆಗಿತ್ತು. ಕೌಸ್ತುಭ ಜ್ವರ ಎಂದು ಅಂದು ಶಾಲೆಗೆ ಬಂದಿರಲಿಲ್ಲ. ಆದರೆ ಗೌತಮಿ ಶಾಲೆಗೆ ಬಂದಿದ್ದಳು. ಅವಳೇ ಆಯ್ಕೆಯಾಗುವುದು ತಾನಲ್ಲ ಎಂದು ನಿರಾಸೆಯಾಗುವ ಹೊತ್ತಿನಲ್ಲಿ ಗೌತಮಿ ಮನೆಯಲ್ಲಿ ಆಟಕ್ಕೆ ಹೋಗುವುದು ಬೇಡ ಅಂದಿದ್ದಾರೆ ಎಂದುಬಿಟ್ಟಿದ್ದಳು. ಆರುಷಿಗೆ ತನ್ನನ್ನು ತಾನೇ ನಂಬಲಾಗಿರಲಿಲ್ಲ. ಈಗಂತೂ ಖಂಡಿತವಾಗಿ ತನ್ನ ಪ್ರಾರ್ಥನೆಗೆ ಅಂತಹುದ್ದೊಂದು ಶಕ್ತಿಯಿದೆಯೆಂದು ಬಲವಾಗಿ ನಂಬಿಬಿಟ್ಟಿದ್ದಳು.
ತಾನು ಅಂದುಕೊಂಡಿದ್ದು ಆಗುತ್ತದೆಯೆಂದು ಅವಳೆಂದೂ ಬೇರೆಯವರಿಗೆ ತೀರಾ ಕೆಟ್ಟದಾಗಲಿ ಎಂದು ಬಯಸಿದವಳಲ್ಲ. ಎಲ್ಲೋ ತನ್ನ ಅನುಕೂಲಕ್ಕೆ ಯಾರನ್ನಾದರೂ ಬೈಯ್ದು ಶಿವನೇ ಎಂದಿರಬಹುದು. ಆದರೆ ಅವಳಿಗೇ ಅಚ್ಚರಿಯಾಗುವಂತೆ ಬಹಳಷ್ಟು ಸಲ ಬೈಯ್ದಿದ್ದೂ ನಾಟಿಬಿಟ್ಟಿತ್ತು. ಕಾಲೇಜಿಗೆ ಹೋಗುವಾಗಿನ ಕಥೆಯಿದು. ಸಾಂಪ್ರದಾಯಿಕ ಉಡುಗೆ ಧರಿಸಿ ಬರಬೇಕೆಂದು ಸೆಕೆಂಡ್ ಪಿಯುಸಿಯವರು ಹೇಳಿದ್ದರು. ಹೇಳಿದ್ದರು ಎನ್ನುವುದಕ್ಕಿಂತ ಆರ್ಡರ್ ಮಾಡಿದ್ದರೆಂದೇ ಹೇಳಬಹುದು. ಮನೆಗೆ ಬಂದು ಹೇಳಿದಾಗ ಅಮ್ಮನಿಗೆ ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟಿತ್ತು. ಈಗ್ಲೂ ಇದನ್ನೆಲ್ಲ ಮಾಡ್ತಾರೇನೇ? ಎನ್ನುತ್ತ ತನ್ನದೇ ಒಂದು ಹಗೂರದ ಝರಿಯಂಚಿನ ಸೀರೆಯನ್ನು ಹಿಡಿದು ಪೇಟೆಗೆ ಹೋದವಳೇ ಅದಕ್ಕೆ ಮ್ಯಾಚ್ ಆಗುವಂತಹ ಬ್ಲೌಸ್ ಪೀಸ್ ತಂದು, ಅವಳ ಗೆಳತಿಯೊಬ್ಬಳ ಬಳಿ ಕುಳಿತು ಹೊಲಿಸಿಕೊಂಡೂ ಬಂದಿದ್ದಳು. ಮಾರನೆ ದಿನ ಸೀರೆಯುಟ್ಟು ಕನ್ನಡಿ ಮುಂದೆ ನಿಂತ ಆರುಷಿಗೆ ಒಂದು ಕ್ಷಣ ತನ್ನ ಕಣ್ಣನ್ನು ತಾನೇ ನಂಬಲಾಗಿರಲಿಲ್ಲ. ಸೀರೆಯುಡಿಸಿದ ಅಮ್ಮ ಯಾವತ್ತೂ ಮೇಕಪ್ ಬೇಡ ಅನ್ನುವವಳು ತಾನೇ ಖುದ್ದಾಗಿ ಲೈಟ್ ಆಗಿ ಮೇಕಪ್ ಮಾಡಿಬಿಟ್ಟಿದ್ದಳು. ಆರುಷಿಯ ಅರಳುಗಣ್ಣಿಗೆ ತೀಡಿದ ಕಾಡಿಗೆ, ಕಂಡೂ ಕಾಣದಂತೆ ಹಚ್ಚಿದ ಲಿಪ್‌ಸ್ಟಿಕ್‌ನ ನಸುಗೆಂಪು ಅದೆಷ್ಟು ಚೆನ್ನಾಗಿ ಒಪ್ಪುತ್ತಿತ್ತೆಂದರೆ ಅವಳ ತುಸು ಎಣ್ಣೆಗಪ್ಪಿನ ಬಣ್ಣ ಮರೆಯಾಗಿಬಿಟ್ಟಿತ್ತು. ಆದರೂ ಹಾಗೆ ಸೀರೆಯುಟ್ಟು ನಡೆಯಲು ಬರದವಳನ್ನು ಅಮ್ಮನೆ ಕಾಲೇಜಿಗೆ ಒಯ್ದುಬಿಟ್ಟಿದ್ದಳು. ಫಸ್ಟ್ ಪ್ಲೋರ್‌ನಲ್ಲಿರುವ ತನ್ನ ಕ್ಲಾಸ್ ರೂಂಗೆ ಹೋಗಲು ಮೂರನೆ ಮೆಟ್ಟಿಲು ಹತ್ತಿ ನಾಲ್ಕನೆಯದ್ದಕ್ಕೆ ಕಾಲಿಟ್ಟಿದ್ದಳೋ ಇಲ್ಲವೋ, ಅದೆಲ್ಲಿಂದಲೋ ಸೀರೆಲಿ ಹುಡುಗೀರ ನೋಡಲೆ ಬಾರದು, ಏರುತ್ತೆ ಟೆಂಪ್ರೇಚರ್ರು, ಶಾಲೆಲಿ ಹೇಳಿ ಕೊಡಬಹುದಿತ್ತು ಹೇಳ್ಲಿಲ್ಲ ನಮ್ ಟೀಚರ್ರು... ಎನ್ನುತ್ತ ಆತ ಗಕ್ಕನೆ ಎದುರಿಗೆ ಬಂದಿದ್ದ. ಕಾಲೇಜಿನ ಅತಿ ತುಂಟ ಎನ್ನಿಸಿಕೊಂಡ ಪ್ರಭವ. ಎತ್ತಿಟ್ಟ ಹೆಜ್ಜೆಯನ್ನು ಮತ್ತೆ ಹಿಂದಿಟ್ಟು ನಿಂತುಬಿಟ್ಟಿದ್ದಳು. ಅಯ್ಯೋ ಅಯ್ಯೋ... ಹಾಗೆಲ್ಲ ಇಟ್ಟ ಹೆಜ್ಜೆನಾ ಹಿದಿಡಬಾರದು, ನನ್ನ ಕೈ ಮೇಲಾದರೂ ಇಡಿ ಮೇಡಂ... ಎಂದು ನಾಟಕೀಯವಾಗಿ ಹೇಳುತ್ತ ಅವಳ ಕಾಲ ಬಳಿ ತನ್ನ ಅಂಗೈ ಇಟ್ಟಿದ್ದ. ಅವನ ಜೊತೆಗಿದ್ದ ಮೂರ‍್ನಾಲ್ಕು ಹುಡುಗರು ಗೊಳ್ ಎಂದು ನಕ್ಕಿದ್ದರು. ಲೆಕ್ಚರರ್ ಹತ್ತಿರ ಇವನ ಬಗ್ಗೆ ಕಂಪ್ಲೇಂಟ್ ಮಾಡಿದರೆ ಏನೂ ಪ್ರಯೋಜನ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಟಾಪ್ ಸ್ಟುಡೆಂಟ್ ಕೂಡ ಆಗಿರುವ ಅವನ ಬಗ್ಗೆ ಎಲ್ಲರಿಗೂ ಹೆಮ್ಮೆ. ಅವನೊಬ್ಬನಿದ್ದರೆ ಸಾಕು, ಇಡೀ ಕ್ಲಾಸ್‌ನ್ನು ಜೀವಂತವಾಗಿಡುತ್ತಾನೆ ಎಂಬ ಅಭಿಮಾನ ಬೇರೆ. ಈ ವರ್ಷ ಅವನಿಂದಾಗಿ ಕಾಲೇಜಿಗೆ ರ‍್ಯಾಂಕ್ ಬಂದರೂ ಬರಬಹುದು ಎಂಬ ಆಶಾಭಾವ ಪ್ರಿನ್ಸಿಪಾಲರಿಗೆ. ಕಂಪ್ಲೇಂಟ್ ಮಾಡಿದರೂ ಅವನು ಸ್ವಲ್ಪ ತುಂಟ ಅಷ್ಟೇ. ಕೆಟ್ಟವನಲ್ಲ ಎಂದು ಎಲ್ಲರೂ ಸಮರ್ಥಿಸಿಕೊಂಡು ಬಿಡುತ್ತಾರೆನ್ನುವುದು ಅರೂಷಿಗೂ ಗೊತ್ತು. ಹೀಗಾಗಿ ಕೋಪದಲ್ಲಿ ಶಿವನೇ ಇವನನ್ನು ಏನಾದರೂ ಮಾಡು ಎಂದು ಬೇಡಿಕೊಂಡುಬಿಟ್ಟಿದ್ದಳು.
ಕ್ಲಾಸ್‌ಗೆ ಹೋದರೆ ಎಲ್ಲ ಹುಡುಗಿಯರೂ ಒಂದೊಂದು ಎಥ್ನಿಕ್ ಉಡುಪು ತೊಟ್ಟಿದ್ದರು. ಎಲ್ಲರ ಡ್ರೆಸ್ ನೋಡುತ್ತ ಮಾತಾಡುತ್ತ ಬೆಳಿಗ್ಗೆ ಆಗಿದ್ದ ಕಿರಿಕಿರಿಯನ್ನು ಮರೆತು ಬಿಟ್ಟವಳಿಗೆ ಅವನ ನೆನಪಾಗಿದ್ದು ಮಾರನೆಯ ದಿನ ಕಾಲೇಜಿಗೆ ಬಂದ ತಕ್ಷಣ ಕಾಲೇಜಿನ ಪ್ಯೂನ್ ಪ್ರಭವನಿಗೆ ಆಕ್ಸಿಡೆಂಟ್ ಆಗಿದೆಯಂತೆ ನಿನ್ನೆ. ಹಾಸ್ಪಿಟಲ್‌ನಲ್ಲಿ ಅಡ್ಮಿಟ್ ಮಾಡಿದ್ದಾರಂತೆ. ಫಿಸಿಕ್ಸ್ ಸರ್ ಆಸ್ಪತ್ರೆಗೆ ಹೋಗಿರೋದ್ರಿಂದ ಇವತ್ತು ಮೊದಲ ಪಿರಿಯಡ್ ಇಲ್ಲ ಎಂದು ಹೇಳಿದಾಗಲೇ. ಆ ಕ್ಷಣಕ್ಕೆ ನಿನ್ನೆ ತಾನು ಅವನಿಗೆ ಏನಾದರೂ ಆಗಲಿ ಎಂದು ಬೇಡಿಕೊಂಡಿದ್ದು ನೆನಪಾಗಿ ನಡುಗಿಹೋದಳು ಆರುಷಿ. ಅಯ್ಯೋ ಆಗ ನನಗೆ ಅವನ ಮೇಲೆ ಕೋಪ ಬಂದಿತ್ತೇ ಹೊರತು ಖಂಡಿತವಾಗಿ ಅವನಿಗೆ ಏನಾದರೂ ಆಗೇ ಬಿಡಲಿ ಎಂದು ಬಯಸಿರಲಿಲ್ಲ ಎಂದು ಅಲವತ್ತುಕೊಳ್ಳುತ್ತಲೆ ಹೇಗಿದ್ದಾನೆ ಈಗ? ಎಂದು ಕೇಳಿದ್ದಳು. ಅಂತಹ ಅಪಾಯವೇನೂ ಇಲ್ಲ. ಒಂದಿಷ್ಟು ತರಚಿದ ಗಾಯ, ಎಡಗೈಗೆ ಒಂದಿಷ್ಟು ಹೆಚ್ಚು ಏಟಾಗಿದೆಯಂತೆ. ಪ್ಯೂನ್ ಮಾತು ಮುಗಿಸಿ ಮುಂದೆ ಹೋದಾಗ ಎದೆಯ ಮೇಲೆ ಕೈಯಿಟ್ಟು ನಿಟ್ಟುಸಿರು ಬಿಟ್ಟಿದ್ದಳು. ಈ ಘಟನೆ ಆದ ನಂತರ ಆದಷ್ಟು ಯಾರಿಗಾದರೂ ಕೆಡಕು ಮಾತು ಹೇಳಲು ಸಾವಿರ ಸಲ ಯೋಚಿಸುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಕೆಡುಕಾಗಲಿ ಎಂದು ಬಯಸುವುದನ್ನೇ ನಿಲ್ಲಿಸಿಬಿಟ್ಟಿದ್ದಳೆಂದರೂ ಸರಿಯೇ. ಕೊನೆಯ ಸಲ ಅವಳು ಯಾರಿಗಾದರೂ ಕೆಟ್ಟದಾಗಲಿ ಎಂದು ಬಯಸಿದ್ದರೆ ಅದು ಕಸಬ್‌ಗೆ.
ಮುಂಬೈನ ತಾಜ್ ಹೊಟೇಲ್‌ನಲ್ಲಿ ಬಾಂಬ್ ಸ್ಪೋಟವಾದಾಗ ಅದರ ರೂವಾರಿ ಕಸಬ್ ಸಿಕ್ಕಿಬಿದ್ದು ಕಠಿಣ ಶಿಕ್ಷೆಯಾಗಲಿ ಎಂದು ಮತ್ತೆ ಮತ್ತೆ ಕೇಳಿಕೊಂಡಿದ್ದಳು. ಅವಳೇ ಹೇಳುವಂತೆ ಅವಳು ಹಾಗೆ ಕೇಳಿಕೊಂಡಿದ್ದರಿಂದಲೇ ಕಸಬ್ ಫೋಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮತ್ತು ಆತನಿಗೆ ಗಲ್ಲು ಶಿಕ್ಷೆಯಾಗಿದ್ದು. ಈ ಘಟನೆಯಾದ ನಂತರ ಆರುಷಿ ಎಂದಿಗೂ ಅಪ್ಪಿತಪ್ಪಿಯೂ ಬೇರೆಯವರಿಗೆ ಕೆಟ್ಟದಾಗಲಿ ಎಂದು ಮನಸ್ಸಿನಲ್ಲೂ ಊಹಿಸಿಕೊಳ್ಳುವುದನ್ನೂ ಬಿಟ್ಟುಬಿಟ್ಟಿದ್ದಳು.
ಹಾಗೆಂದು ಅವಳು ತನ್ನ ಕುರಿತಾಗಿಯೂ ಅತಿಯಾಗಿ ಬೇಡಿಕೊಳ್ಳುವ ಹುಡುಗಿಯಲ್ಲ. ಎಂದೋ ಮನೆಬಿಟ್ಟು ಹೋದ ಅಪ್ಪ ಹಿಂತಿರುಗಿ ಬರಲಿ ಎಂದು ಒಮ್ಮೆಯೂ ಕೇಳಿಕೊಂಡವಳಲ್ಲ. ತಾನು ಹತ್ತನೆ ತರಗತಿಯಲ್ಲಾಗಲಿ, ಪಿಯುಸಿಯಲ್ಲಾಗಲಿ ರ‍್ಯಾಂಕ್ ಬರಲಿ ಎಂದು ಎಂದಿಗೂ ಪ್ರಾರ್ಥಿಸಿದವಳಲ್ಲ. ತಾನು ರ‍್ಯಾಂಕ್ ಬರಲಿ ಎಂದು ಅಪ್ಪಿತಪ್ಪಿ ಬೇಡಿಕೊಂಡರೂ ಶಿವ ಅದನ್ನು ಖಂಡಿತಾ ಈಡೇರಿಸುತ್ತಾನೆ ಎಂಬ ಅಚಲ ನಂಬಿಕೆ ಅವಳದ್ದು. ಆದರೆ ತನಗೆ ರ‍್ಯಾಂಕ್ ಕೊಡಿಸಲು ಹೋಗಿ ಉಳಿದ ಮಕ್ಕಳು ನಿರಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟರೆ ಎಂಬ ಅಂಜಿಕೆಯೂ ಅವಳ ಮನಸ್ಸಿನ ಆಳದಲ್ಲಿತ್ತು. ಹೀಗಾಗಿ ಒಳ್ಳೆಯ ಅಂಕ ಪಡೆದು ತಾನು ಬಯಸಿದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಟ್ ವಿಭಾಗದಲ್ಲಿ ಸೀಟು ಸಿಕ್ಕರೆ ಸಾಕು ಎನ್ನುವುದಷ್ಟೇ ಅವಳ ಬೇಡಿಕೆಯಾಗಿತ್ತು. ತನ್ನ ಬೇಡಿಕೆ ತೀರಾ ನಿರಪಾಯಕರ ಎಂದು ನಿರ್ಧರಿಸಿಯೇ ಹೀಗೆ ಕೇಳಿಕೊಂಡಿದ್ದು. ಆದರೆ ಹಾಗೆ ಕೇಳಿಕೊಳ್ಳುವಾಗಲೆಲ್ಲ ತನ್ನ ಹೈಸ್ಕೂಲು ಹಾಗೂ ಕಾಲೇಜಿನ ಒಬ್ಬ ಗೆಳತಿಗೂ ತಾನು ಹೋಗುವ ಕಾಲೇಜಿನಲ್ಲಿ ಯಾವ ವಿಭಾಗಕ್ಕೂ ಸೀಟು ಸಿಕ್ಕದಿರಲಿ ಎಂಬ ಮಾತನ್ನು ಕಡ್ಡಾಯವಾಗಿ ಸೇರಿಸಿಕೊಳ್ಳುತ್ತಿದ್ದಳು. ಸಿ.ಇ.ಟಿ ಫಲಿತಾಂಶ ಬಂದಾಗ ಅಷ್ಟೇನೂ ಒಳ್ಳೆಯ ರ‍್ಯಾಂಕಿಂಗ್ ಬರದೆ ಹೋದರೂ ಅವಳು ಬಯಸಿದ ಕಾಲೇಜು ಸಿಕ್ಕಾಗ ಒಳಗೊಳಗೆ ಮತ್ತಿಷ್ಟು ಖಚಿತಪಡಿಸಿಕೊಂಡಿದ್ದಳು. ಮತ್ತೂ ಅಚ್ಚರಿಯೆಂಬಂತೆ ಆ ಕಾಲೇಜಿನ ಯಾವ ವಿಭಾಗಕ್ಕೂ ಅವಳ ಕಾಲೇಜಿನ ಯಾವೊಬ್ಬ ಹುಡುಗನಾಗಲಿ ಹುಡುಗಿಯಾಗಲಿ ಆಯ್ಕೆಯಾಗದಿರುವುದು ಅವಳ ನಂಬಿಕೆ ಬಲಪಡಿಸುವಂತಾಗಿತ್ತು.
ನೀನು ನಿನ್ನ ಶಿವನ ಬಳಿ ಸರಿಯಾಗಿ ಬೇಡಿಕೊಳ್ಳಲಿಲ್ಲ ಕಣೆ. ನೀನು ಬೇಡಿಕೊಂಡಿದ್ದೆಲ್ಲ ಆಗುತ್ತೆ ಅಂತ ಹೇಳ್ತೀಯಾ. ಉಳಿದವರನ್ನು ಬಿಡು, ಕೊನೇಪಕ್ಷ ನಾನು ನೀನಾದರೂ ಒಂದೇ ಕಾಲೇಜಿಗೆ ಸೇರಬಹುದಿತ್ತು. ಸನ್ಮಿತಾ ಅರ್ಧ ಬೇಸರದ ಧ್ವನಿಯಲ್ಲಿ ಇನ್ನರ್ಧ ಕಿಚಾಯಿಸುವ ಧ್ವನಿಯಲ್ಲಿ ಹೇಳಿದ್ದಳು. ಯಾರ‍್ಯಾರು ಹೇಗೇಗೆ ಎಲ್ಲೆಲ್ಲಿ ಇರಬೇಕು ಎಂಬುದನ್ನು ನಿರ್ಧರಿಸುವವನು ಆ ಶಿವ. ಅವನು ಹೇಳಿದಂತೆ ನಡೆಯುವವರು ನಾವು ಎಂದು ಆಧ್ಯಾತ್ಮಿಕ ಸಾಧನೆ ಮಾಡುತ್ತಿರುವವರ ಫೋಸು ಕೊಟ್ಟಿದ್ದಳು. ಆದರೆ ನಿಜಕ್ಕೂ ಆರುಷಿಗೆ ಸನ್ಮಿತಾ ತನ್ನೊಡನೆ ಇರುವುದಿಲ್ಲ ಎಂಬುದೇ ಸಮಾಧಾನದ ವಿಷಯವಾಗಿತ್ತು. ತನಗೆ ಮುಂದಾಗುವುದರ ಸೂಚನೆ ಸಿಗುತ್ತದೆ. ಅದ್ಯಾವುದೋ ಸಿಕ್ಸ್ತ್ ಸೆನ್ಸ್ ಈ ಸೂಚನೆ ನೀಡುತ್ತದೆ ಎಂದು ಸೀರಿಯಸ್ ಆಗಿ ಹೇಳಿದಾಗಲೆಲ್ಲ ಅದೇನೋ ದೊಡ್ಡ ಜೋಕ್ ಕೇಳಿದಂತೆ ನಕ್ಕುಬಿಡುತ್ತಿದ್ದಳು ಸನ್ಮಿತಾ. ಬೇಕಾದರೆ ಅದೆಲ್ಲ ಸುಳ್ಳು ಎಂದು ಹೇಳಲಿ. ಹಾಗೆಲ್ಲ ಆಗುವುದಿಲ್ಲ ಎಂದು ಜಗಳವಾಡಲಿ ಪರವಾಗಿಲ್ಲ. ಆದರೆ ಅದೇನನ್ನೂ ಮಾಡದೆ ಇವಳಿಗೆ ನೀನು ಹಾಗೆ ಕೇಳಿಕೊ ಎಂದು ಹೇಳಿ, ಆರುಷಿ ಹಾಗೆ ಕೇಳಿಕೊಂಡು ಆರುಷಿ ಖುಷಿಯಿಂದ ಹೆಮ್ಮೆಯಿಂದ ನೋಡಿದಾಗಲೆಲ್ಲ ಒಂದು ರೀತಿಯಾಗಿ ನಕ್ಕು ಆರುಷಿಗೆ ಗೊಂದಲ ಹುಟ್ಟಿಸಿ ಅವಳ ಖುಷಿಯನ್ನೆಲ್ಲ ಕಳೆದುಬಿಡುತ್ತಿದ್ದಳು. ಏನನ್ನಾದರೂ ಸಹಿಸಿಕೊಳ್ಳಬಲ್ಲೆ. ಇವಳ ನಗೆಯನ್ನಲ್ಲ ಎನ್ನುವ ಮಟ್ಟಕ್ಕೆ ಆರುಷಿ ರೋಸಿಹೋಗಿದ್ದಳು. ಎಲ್ಲ ಗೆಳತಿಯರ ಬಳಿಯೂ ನಮ್ ಆರುಷಿಗೆ ಸಿಕ್ಸ್ತ್ ಸೆನ್ಸ್ ಇದೆ ಗೊತ್ತಾ? ಅವಳು ಪ್ರಾರ್ಥನೆ ಮಾಡಿದರೆ ಕೇಳಿಕೊಂಡಂತೆ ಆಗುತ್ತದೆ ಎಂದು ಸೀರಿಯಸ್ ಆಗಿ ಹೇಳುವಂತೆ ಹೇಳಿ ಎಲ್ಲರೂ ಆರುಷಿಯನ್ನು ಅನುಮಾನ ಹಾಗೂ ಕುಚೋದ್ಯದಿಂದ ನೋಡುವಂತೆ ಮಾಡಿಬಿಟ್ಟಿದ್ದಳು. ಹಾಗೆಂದು ಅವಳ ಸ್ನೇಹ ಬಿಡುವಂತೆಯೂ ಇರಲಿಲ್ಲ. ಹದಿನೈದು ಕಿ.ಮೀ ದೂರದ ಕಾಲೇಜಿಗೆ ಹೋಗಲು ಬರಲು ಅವಳನ್ನು ಬಿಟ್ಟು ಬೇರಾರೂ ಇರಲಿಲ್ಲ. ಬಸ್‌ನಲ್ಲಿ ಆರುಷಿಗೆ ಸೀಟ್ ಸಿಕ್ಕು ಅವಳ ಬಳಿಬಾರೆ ಸನ್ನೂ ಇಬ್ರೂ ಇಲ್ಲೇ ಅಡ್ಜೆಸ್ಟ್ ಮಾಡೋಣ ಎಂದರೆ ನೀನು ಪ್ರಾರ್ಥನೆ ಮಾಡಿಕೊಂಡಿದ್ದಕ್ಕಾಗಿ ಸಿಕ್ಕ ಸೀಟು ಅದು. ನೀನು ಹಾಯಾಗಿ ಕೂತ್ಕೋ. ನನಗೆ ಅದರಲ್ಲಿ ಪಾಲು ಬೇಡ ಎಂದು ದೊಡ್ಡದಾಗಿ ಹೇಳಿ ಇಡೀ ಬಸ್‌ನವರೂ ತಿರುಗಿ ಆರುಷಿಯನ್ನು ನೋಡುವಂತೆ ಮಾಡಿ ಒಳಗೊಳಗೆ ನಗುತ್ತಿದ್ದಳು. ಅಂತಹ ಮತಿಯೇ ಇಲ್ಲದ ಸನ್ಮತಿಯೊಂದಿಗೆ ಮತ್ತೂ ನಾಲ್ಕು ವರ್ಷ ಏಗುವುದು ತನ್ನಿಂದ ಸಾಧ್ಯವೇ ಇಲ್ಲ ಎಂದುಕೊಂಡೇ ಆರುಷಿ ಏನಾದರಾಗಲಿ, ನನ್ನ ಜೊತೆ ನನ್ನ ಈಗಿನ ಗೆಳತಿಯರಾರೂ ಇರುವುದೇ ಬೇಡ. ಹೊಸದಾಗಿ ಅಲ್ಲಿ ಫ್ರೆಂಡ್ ಮಾಡಿಕೊಂಡರಾಯಿತು ಎಂದು ನಿರ್ಧರಿಸಿಬಿಟ್ಟಿದ್ದಳು.
ಇಂಜಿನಿಯರಿಂಗ್‌ನ ನಾಲ್ಕು ವರ್ಷದವರೆಗೂ ತನ್ನ ರೂಂಮೇಟ್‌ಗೂ ತನ್ನೊಳಗೊಂದು ಶಕ್ತಿ ಇದೆ ಎಂದು ತೋರಿಸಿಕೊಳ್ಳಲಿಲ್ಲ ಆರುಷಿ. ಆದಷ್ಟು ತನ್ನ ಪ್ರಾರ್ಥನೆ ಅವಳಿಗೆ ಕಾಣಿಸದಂತೆ ಗುಟ್ಟಾಗಿಟ್ಟಿದ್ದರೂ ಆಗೊಮ್ಮೆ ಈಗೊಮ್ಮೆ ಎಕ್ಸಾಂ ಸಮಯದಲ್ಲಿ ತಾನು ಸರಿಯಾಗಿ ಓದಿಕೊಂಡ ಪ್ರಶ್ನೆಗಳು ಬರಲಿ ಎಂದು ಪ್ರಾರ್ಥಿಸಿ, ಅವೇ ಪ್ರಶ್ನೆಗಳು ಬಂದಾಗ ತನ್ನ ಶಕ್ತಿಗೆ ಹೆಮ್ಮೆಪಟ್ಟುಕೊಂಡಿದ್ದರೂ ಪಕ್ಕದಲ್ಲೇ ಇರುವವಳಿಗೆ ಅದರ ಸುಳಿವೂ ಸಿಗದಂತೆ ಇರುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಳು. ಇವಳೂ ಸನ್ಮತಿಯ ಹಾಗೆ ಆಡಿಕೊಂಡು ನಕ್ಕರೇನು ಮಾಡುವುದು ಎಂಬ ಚಿಂತೆ. ಅಂತೂ ಇಂಜಿನಿಯರಿಂಗ್ ಮುಗಿಸಿ ಇಂಟರ್ನ್‌ಶಿಪ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತಾನು ಬಯಸಿದ್ದು ಇದಿಷ್ಟೇ ಎಂದು ಹಾಯಾಗಿದ್ದು ಬಿಟ್ಟಿದ್ದಳು.
ಕೆಲಸಕ್ಕೆ ಸೇರಿ ನಾಲ್ಕುವರ್ಷ ಆಗಿತ್ತು ಅಷ್ಟೇ. ಆ ಸಲ ಟೀಂ ಲೀಡರ್‌ಶಿಪ್ ಆರುಷಿಯದ್ದೇ. ಅವರ ಟೀಂನಲ್ಲಿದ್ದ ಸುಧಾ ಡಿಲೆವರಿಗೆಂದು ಹೋಗಿದ್ದರಿಂದ ಹಾಗೂ ಬೇರೆ ಟೀಂಗಳಲ್ಲೂ ಪೋಸ್ಟಿಂಗ್ ಖಾಲಿ ಇದ್ದುದರಿಂದ ಹೊಸದಾಗಿ ಕೆಲವರನ್ನು ನೇಮಿಸಿಕೊಳ್ಳಲು ಕಂಪನಿ ಕೆಲವರ ರೆಸ್ಯೂಮ್ ನೋಡಿ ಸಂದರ್ಶನಕ್ಕೆ ಕರೆದಿತ್ತು. ಹಾಗೆ ಇಂಟರ್‌ವ್ಯೂಗೆ ಬಂದವನನ್ನು ನೋಡಿ ಆರುಷಿ ತಲ್ಲಣಿಸಿ ಹೋಗಿದ್ದಳು. ಎಂದೂ ಯಾರಿಗೂ ಸೋಲದ ಮನಸ್ಸು ಆತನೆಡೆಗೆ ವಾಲಿಬಿಟ್ಟಿತ್ತು. ಆದರೆ ಇಂಟರ್‌ವ್ಯೂ ಮುಗಿಸಿ ಹೋಗುವಾಗ ಅವನೊಂದಿಗೆ ಒಬ್ಬಳು ಹುಡುಗಿ ಇರುವುದನ್ನು ನೋಡಿಬಿಟ್ಟಳು. ಅಯ್ಯೋ ದೇವರೆ, ಇವನಿಗೆ ಗರ್ಲ್‌ಫ್ರೆಂಡ್ ಬೇರೆ ಇದ್ದಾಳಾ? ದೇವರೆ ಇಬ್ಬರದ್ದೂ ಬ್ರೆಕ್‌ಅಪ್ ಆಗಿಬಿಡಲಿ. ಆತ ಈ ಕಂಪನಿಗೆ ಜಾಯಿನ್ ಆಗಲಿ ಎಂದು ಬೇಡಿಕೊಂಡುಬಿಟ್ಟಿದ್ದಳು.
ಅದಾದ ವಾರದೊಳಗೆ ಆತ ಕೆಲಸಕ್ಕೆ ಬರತೊಡಗಿದ್ದ. ತನ್ನಾಸೆಯಂತೆ ಆತ ತಮ್ಮದೆ ಕಂಪನಿಗೆ ಜಾಯಿನ್ ಆಗಿದ್ದು ಅದೆಷ್ಟು ಸಮಾಧಾನ ತಂದಿತ್ತೆಂದರೆ ಹೇಗಾದರೂ ಪಕ್ಕದ ಟೀಂಗೆ ಜಾಯಿನ್ ಆದವನ ಪರಿಚಯ ಮಾಡಿಕೊಳ್ಳಬೇಕೆಂಬ ಹುಕಿಗೆ ಬಿದ್ದು ತೇಜಸ್ವಿ ಎನ್ನುವ ಉತ್ಸವಮೂರ್ತಿಯಂತೆ ಮಾತನಾಡುವ ಅವನನ್ನು ಪರಿಚಯಿಸಿಕೊಂಡಿದ್ದಳು. ಆದರೆ ಅವನೊಟ್ಟಿಗೆ ಬಂದಿದ್ದ ಹುಡುಗಿಯೂ ಅದೇ ಕಂಪನಿಗೆ ಜಾಯಿನ್ ಆಗಿರುವುದನ್ನು ಗಮನಿಸಿ ಒಂದಿಷ್ಟು ನಿರಾಶೆಯೂ ಆಗಿತ್ತು. ಆದರೆ ವಾರವಾದರೂ ಇಬ್ಬರೂ ಒಬ್ಬರಿಗೊಬ್ಬರು ಮಾತನಾಡದೆ ಮುಖ ತಿರುಗಿಸಿಕೊಂಡು ಹೋಗುವುದನ್ನು ಕಂಡು ತಾನು ಬೇಡಿಕೊಂಡಂತೆ ಇಬ್ಬರದ್ದೂ ಬ್ರೆಕ್‌ಅಪ್ ಆಗಿದೆ ಎಂದು ದೇವರಿಗೆ ಅದೆಷ್ಟು ಧನ್ಯವಾದ ಹೇಳಿದ್ದಳೋ.
ಒಂದುದಿನ ತಡೆಯಲಾಗದೆ, ತೇಜಸ್ವಿ, ಆದಿನ ನಿಮ್ಮ ಜೊತೆ ಬಂದಿದ್ರಲ್ಲ, ಅವರೂ ನಮ್ಮ ಕಂಪನಿಗೇ ಜಾಯಿನ್ ಆಗಿದ್ದಾರೆ ಅಲ್ವಾ? ಎಂದಿದ್ದಳು. ಯಾರು? ಯಶಸ್ವಿನಾ? ಅವಳ ಹೆಸರು ಹೇಳಬೇಡಿ ಮೇಡಂ ನನ್ನ ಬಳಿ. ಮುಖ ಉಬ್ಬಿಸಿಕೊಂಡು ಹೋದಾಗಲಂತೂ ಹಾಲುಜೇನು ಕುಡಿದಷ್ಟು ಸಮಾಧಾನಪಟ್ಟಿದ್ದರೂ ಇವನು ತನಗೇ ಇರಲಿ ಎಂದು ಕೇಳಿಕೊಂಡು ತಪ್ಪು ಮಾಡಿದೆನಾ? ಇಬ್ಬರು ಪ್ರೇಮಿಗಳನ್ನು ದೂರಮಾಡಿದ ಪಾಪ ಹೊತ್ತುಕೊಳ್ಳಬೇಕಲ್ಲ ಎಂಬ ನೋವು ಅವಳನ್ನು ಸದಾ ಕಾಡುವಂತಾಗಿತ್ತು.
ಮಾರನೆಯ ದಿನ ಹೊಸದಾಗಿ ಕೆಲಸಕ್ಕೆ ಸೇರಿದ ಎಲ್ಲರ ಬಯೋ ಚೆಕ್ ಮಾಡಲು ರೆಸ್ಯೂಮ್‌ಗಳನ್ನು ಬಾಸ್ ಇವಳಿಗೇ ಕಳಿಸಿಕೊಟ್ಟಿದ್ದರು. ಅದರಲ್ಲಿ ಅವಳು ಹುಡುಕಿದ್ದು ಮೊದಲಿಗೆ ತೇಜಸ್ವಿಯ ಬಯೋ. ಅಯ್ಯೋ ದೇವರೆ, ಇವನು ನನಗಿಂತ ಐದು ವರ್ಷ ಚಿಕ್ಕವನು, ಚಿಕ್ಕವನನ್ನು ಮದುವೆ ಆಗುವುದರ ಕುರಿತು ಆರುಷಿಗೇನೂ ಆಕ್ಷೇಪ ಇರಲಿಲ್ಲ. ಆದರೆ ತಾನಲ್ಲ, ಬೇರೆಯವರು ಆಗಲು ಮಾತ್ರ. ಗಂಡನಾದವನು ತನಗಿಂತ ಒಂದು ವರ್ಷಕ್ಕಾದರೂ ದೊಡ್ಡವನಿರಲಿ. ಅವನಿಂದ ಮಗುವಂತೆ ಮುದ್ದಿಸಿಕೊಳ್ಳಬಹುದು ಎಂದು ಸದಾ ಬಯಸುತ್ತಿದ್ದ ಆರುಷಿ ಒಂದು ಕ್ಷಣ ಪೆಚ್ಚಾಗಿದ್ದಳು. ದೇವರೆ ಹೀಗೇಕೆ ಮೋಸ ಮಾಡಿದೆ? ಮೊದಲಬಾರಿಗೆ ದೇವರನ್ನು ಆಕ್ಷೇಪಿಸಿದ್ದಳು.
ಯಾಕೋ ಅನುಮಾನವೆನಿಸಿ ಯಶಸ್ವಿಯ ಬಯೋ ಹುಡುಕಿದ್ದಳು. ಹೆಸರು, ಇನಿಶಿಯಲ್ ಎಲ್ಲ ಗೊಂದಲ ಮೂಡಿಸಿ ಎದ್ದು ಹೋಗಿ ತೇಜಸ್ವಿ ಇದೇಕೆ ನಿಮ್ಮ ಹಾಗೂ ಯಶಸ್ವಿಯ ಇನಿಶಿಯಲ್ಸ್ ಒಂದೇ ಇದೆಯಲ್ಲ? ಏನಾದರೂ ಮಿಸ್‌ಪ್ರಿಂಟ್ ಆಗಿದೆಯಾ? ಎಂದು ವಿಚಾರಿಸುವಷ್ಟರಲ್ಲಿ ಥೋ.. ಅವಳೊಂದು ನನ್ನ ಬೆನ್ನು ಬಿಡದ ಭೂತ. ಹೊಟ್ಟೆಯಲ್ಲಿರುವಾಗಲೂ ನನ್ನ ಪಾಲನ್ನು ಅರ್ಧ ಕಬಳಿಸಿದಳು. ಬೆಳೆದಂತೆಲ್ಲ ಎಲ್ಲದರಲ್ಲೂ ಪಾಲು ಕೇಳಿದಳು... “ ಅವರಿಬ್ಬರ ಕೋಪ ಸಿಟ್ಟು ಇನ್ನೂ ಮುಗಿದಿರಲಿಲ್ಲ ಎಂಬುದಕ್ಕೆ ಸಾಕ್ಷಿಯೆನ್ನುವಂತೆ ಹೇಳತೊಡಗಿದ. “ಅರ್ಥ ಆಗಲಿಲ್ಲ.” ಆರುಷಿ ತನ್ನೆಲ್ಲ ಗೊಂದಲಗಳನ್ನು ಅಡಗಿಸಿಕೊಂಡು ಕಾಮ್ ಆಗಿ ಕೇಳಿದಳು. “ಅವಳು ನನ್ನ ಟ್ವಿನ್ ಮೇಡಂ...” ಆತ ಮತ್ತೂ ಕೋಪದ ಧ್ವನಿಯಲ್ಲಿ ಹೇಳುತ್ತಿದ್ದ. “ಅಪ್ಪ ಅಮ್ಮ ಎಲ್ಲದಕ್ಕೂ ಅವಳಿಗೇ ಸಪೋರ್ಟ್ ಮಾಡೋದು. ಮೊನ್ನೆಯೂ ಅಷ್ಟೆ. ನನಗೆ ಬುಲೆಟ್ ಕೊಡಿಸಿ, ಅವಳನ್ನೂ ಕರ್ಕೊಂಡು ಹೋಗ್ತೀನಿ ಅಂದ್ರೆ ಅವಳಿಗೂ ಆಗುತ್ತೆ ಅಂತ ಆಕ್ಟೀವಾ ಕೊಡ್ಸಿದ್ದಾರೆ. ಅವಳೊಬ್ಬಳೇ ಅದರಲ್ಲಿ ಓಡಾಡಲಿ. ನಾನು ಬೇಗ ನನ್ನ ಸಂಬಳದಲ್ಲಿ ಒಂದು ಬುಲೆಟ್ ತಗೋಬೇಕು...’’ ಆತ ಹೇಳುತ್ತಲೇ ಇದ್ದ. ತನ್ನ ಸಿಕ್ತ್‌ಸೆನ್ಸ್, ತಾನು ಅಂದುಕೊಂಡಿದ್ದೆಲ್ಲ ನಿಜವಾಗುತ್ತದೆ ಎನ್ನುವುದೆಲ್ಲ ನನ್ನ ಭ್ರಮೆಯೆ? ಯೋಚಿಸುತ್ತಿದ್ದ ಆರುಷಿಗೆ ಅವನ ಮುಂದಿನ ಯಾವ ಮಾತೂ ಕಿವಿಗೆ ಬೀಳಲೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.